HomeKarnatakaಪ್ರಧಾನಿ ಮೋದಿ, ಅನಂತ್ ಅಂಬಾನಿ, ಸುಧಾ ಮೂರ್ತಿಯ ಡೀಪ್ ಫೇಕ್ ವಿಡಿಯೋ ನಿಜವೆಂದು ನಂಬಿ ಹೂಡಿಕೆ:...

ಪ್ರಧಾನಿ ಮೋದಿ, ಅನಂತ್ ಅಂಬಾನಿ, ಸುಧಾ ಮೂರ್ತಿಯ ಡೀಪ್ ಫೇಕ್ ವಿಡಿಯೋ ನಿಜವೆಂದು ನಂಬಿ ಹೂಡಿಕೆ: 7.66 ಲಕ್ಷ ಹಣ ಕಳೆದುಕೊಂಡ ವ್ಯಕ್ತಿ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ವಂಚನೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲಿಯೂ ಸೈಬರ್ ವಂಚಕರು ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ವಂಚಿಸುವುದರಲ್ಲಿಯೂ ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಂಡು ತಮ್ಮ ಕೈಚಳಕ ತೋರುತ್ತಿದ್ದಾರೆ. ಡೀಪ್ ಫೇಕ್ ಮೂಲಕ ವಂಚಿಸುವ ಸೈಬರ್ ವಂಚಕರ ಜಾಲ ಆಕ್ಟೀವ್ ಆಗಿದೆ.

ಡೀಪ್‌ಫೇಕ್ ವಿಡಿಯೋಗಳ ಮೂಲಕ ಜನರನ್ನು ನಂಬಿಸಿ ಹಣ ದೋಚುವ ಕೆಲಸಕ್ಕೆ ಕೈ ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸುಧಾ ಮೂರ್ತಿ ಹಾಗೂ ಅನಂತ್ ಅಂಬಾನಿ ಅವರ ಡೀಪ್‌ ಫೇಕ್ ವಿಡಿಯೋಗಳನ್ನು ನಿಜವೆಂದು ನಂಬಿದ ಬೆಂಗಳೂರಿನ ನಿವಾಸಿಯೊಬ್ಬರು ಹೂಡಿಕೆ ವಂಚನೆಗೆ ಬಲಿಯಾಗಿ ಬರೋಬ್ಬರಿ 7.66 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಹಾಲಕ್ಷ್ಮಿ ಲೇಔಟ್‌ನ 39 ವರ್ಷದ ವ್ಯಕ್ತಿಗೆ ಜುಲೈ 10ರಂದು ಫೇಸ್‌ಬುಕ್‌ನಲ್ಲಿ ಇಂತದ್ದೊಂದು ವಿಡಿಯೋಗಳು ಕಾಣಿಸಿಕೊಂಡಿದ್ದವು. ಮೋದಿ ಸೇರಿದಂತೆ ಇತರರು ಆನ್‌ಲೈನ್ ಹೂಡಿಕೆಯನ್ನು ಪ್ರಚಾರ ಮಾಡುತ್ತಿರುವಂತೆ ವಿಡಿಯೋಗಳಲ್ಲಿ ತೋರಿಸಲಾಗಿತ್ತು. ವಿಡಿಯೋದಲ್ಲಿದ್ದ ಲಿಂಕ್‌ ಕ್ಲಿಕ್ ಮಾಡಿದ ವ್ಯಕ್ತಿ ಹೂಡಿಕೆ ಆರಂಭಿಸಲು 22,000 ರೂಪಾಯಿ ವರ್ಗಾಯಿಸಿದ್ದರು. ಬಳಿಕ ಯುನೈಟೆಡ್ ಕಿಂಗ್‌ಡಂನ +44 ಕಂಟ್ರಿ ಕೋಡ್ ಹೊಂದಿದ್ದ ಐದು ಅಪರಿಚಿತ ಮೊಬೈಲ್ ಸಂಖ್ಯೆಗಳ ಮೂಲಕ ಅವರಿಗೆ ಕರೆಗಳು ಬಂದಿದ್ದವು.

ಕರೆ ಮಾಡಿದವರು ತಮ್ಮನ್ನು ‘ಒನ್​​ ಟು ಮಾರ್ಕೆಟ್ಸ್​​’ ಕಂಪನಿಯ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡು, ಫಾರೆಕ್ಸ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಹೇಳಿದ್ದರು. ಬಳಿಕ ವಂಚಕರು ವ್ಯಕ್ತಿಯ ಹೆಸರಿನಲ್ಲಿ ನಕಲಿ ಫಾರೆಕ್ಸ್ ಖಾತೆಯೊಂದನ್ನು ತೆರೆದಿದ್ದರು.

ಜುಲೈ 10ರಿಂದ ಜುಲೈ 22ರವರೆಗೆ ವಿವಿಧ ವಹಿವಾಟುಗಳ ಮೂಲಕ ಆರೋಪಿಗಳು ನೀಡಿದ ಬ್ಯಾಂಕ್ ಖಾತೆಗಳಿಗೆ ವ್ಯಕ್ತಿ 7.6 ಲಕ್ಷ ರೂಪಾಯಿ ವರ್ಗಾಯಿಸಿದ್ದರು. ತಮ್ಮ ಹೂಡಿಕೆಯಿಂದ ಲಾಭ ಬರುತ್ತಿದೆ ಎಂಬ ನಂಬಿಕೆಯಲ್ಲಿದ್ದ ವ್ಯಕ್ತಿ, ಹಣವನ್ನು ಹಿಂಪಡೆಯಲು ಮುಂದಾದಾಗ ವಂಚಕರು ಮತ್ತಷ್ಟು ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದರು. ಕೆಲ ಸಮಯ ಹಣ ವಾಪಸ್ ಹಾಕಬಹುದೆಂದು ಕಾದಿದ್ದ ವ್ಯಕ್ತಿಗೆ ಅನುಮಾನ ವ್ಯಕ್ತವಾಗಿದೆ. ವ್ಯಕ್ತಿ ಪೊಲೀಸರನ್ನು ಸಂಪರ್ಕಿಸಿದ್ದು, ಸೆಪ್ಟೆಂಬರ್ 19ರಂದು ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular