ಬಳ್ಳಾರಿ: ಜಿಲ್ಲೆಯ ಎಲ್ಲಾ 5 ತಾಲೂಕುಗಳನ್ನು ತೀವ್ರ ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದ್ದು, ಸಂಕಷ್ಟದಲ್ಲಿರುವ ಅನ್ನದಾತರ ಕೆಸಿಸಿ ಹಾಗೂ ಅವಧಿ ಸಾಲಗಳನ್ನು ಮರುರಚನೆ ಮಾಡುವಂತೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು ಬ್ಯಾಂಕರ್ ಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ನಡೆದ ಬರಗಾಲ ಕುರಿತ ವಿಶೇಷ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಲ ಮರುಪಾವತಿಗೆ 60 ತಿಂಗಳ ಕಾಲಾವಕಾಶ:
ರೈತರ ಸಾಲಗಳನ್ನು ಮರುರಚಿಸಿ, 12 ತಿಂಗಳ ಮೊರಟೋರಿಯಂ(ಮರುಪಾವತಿ ರಿಯಾಯಿತಿ) ಅವಧಿಯೊಂದಿಗೆ ಒಟ್ಟು 60 ತಿಂಗಳುಗಳಲ್ಲಿ (ಮೊರಟೋರಿಯಂ ಅವಧಿ ಒಳಗೊಂಡಂತೆ) ಮರುಪಾವತಿಸಲು ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದರು.
ಸ್ವಯಂ-ಪ್ರೇರಿತ ಮರುರಚನೆ:
27.08.2026 ರ ವೇಳೆಗೆ 30 ದಿನಗಳಿಗಿಂತ ಕಡಿಮೆ ಅವಧಿಯ ಬಾಕಿ ಹೊಂದಿರುವ ಎಲ್ಲಾ ಸಾಲಗಳಿಗೆ ಸ್ವಯಂ-ಪ್ರೇರಿತವಾಗಿ ಮರುರಚನೆ ಪ್ರಕ್ರಿಯೆ ಕೈಗೊಳ್ಳಬೇಕು ಎಂದರು.
ರೈತರ ಮೇಲೆ ಒತ್ತಡ ಹೇರುವಂತಿಲ್ಲ:
ಸಾಲ ಮರುಪಾವತಿಗಾಗಿ ರೈತರಿಗೆ ಯಾವುದೇ ರೀತಿಯ ಕಿರುಕುಳ ಅಥವಾ ಒತ್ತಡ ಹೇರಬಾರದು. ಬೆಳೆ ವಿಮೆ ಪರಿಹಾರ ಬಿಡುಗಡೆಯಾಗುವವರೆಗೆ ಕಾಯದೆ ಅರ್ಹ ರೈತರಿಗೆ ಹೊಸ ಸಾಲಗಳನ್ನು ವಿತರಿಸಬೇಕು ಎಂದು ಸೂಚಿಸಿದರು.
ಖಾಸಗಿ ಲೇವಾದೇವಿದಾರರ ಹಾವಳಿಗೆ ಕಡಿವಾಣ:
ಬರಗಾಲದ ಸಂದರ್ಭದಲ್ಲಿ ರೈತರು ತಮ್ಮ ಆರ್ಥಿಕ ಅಗತ್ಯಗಳಿಗಾಗಿ ಸೂಕ್ಷ್ಮ ಹಣಕಾಸು ಸಂಸ್ಥೆಗಳು ಅಥವಾ ಖಾಸಗಿ ಲೇವಾದೇವಿಗಾರರ ಬಲೆಗೆ ಬೀಳದಂತೆ ಬ್ಯಾಂಕ್ ಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.
ನ್ಯಾಯಾಲಯದ ಆದೇಶಗಳಿದ್ದರೂ ಮಾಹಿತಿ ಕಡ್ಡಾಯ:
ರೈತರ ವಿರುದ್ಧ ಯಾವುದೇ ನ್ಯಾಯಾಲಯದ ಆದೇಶಗಳಿದ್ದರೂ, ಅವುಗಳನ್ನು ಜಾರಿಗೊಳಿಸುವ ಮುನ್ನ ಜಿಲ್ಲಾ ಸಲಹಾ ಸಮಿತಿ ಮತ್ತು ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದರು.
ಬಲವಂತದ ವಸೂಲಾತಿಗೆ ಸಿಇಒ ಎಚ್ಚರಿಕೆ:
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೇರ್ ಅವರು ಮಾತನಾಡಿ, ಯಾವುದೇ ಬ್ಯಾಂಕ್ ರೈತರ ವಿರುದ್ಧ ಬಲವಂತದ ಸಾಲ ವಸೂಲಾತಿ ಕ್ರಮಗಳನ್ನು ಕೈಗೊಂಡರೆ ಅಂತಹ ಬ್ಯಾಂಕರ್‌ಗಳನ್ನು ವಿಚಾರಣೆಗೆ ಒಳಪಡಿಸಲಾಗುವುದು. ನಿಯಮ ಉಲ್ಲಂಘಿಸುವವರ ವಿರುದ್ಧ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ ಗಮನಕ್ಕೆ ತಂದು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಎಲ್ಲಾ ಪ್ರಕ್ರಿಯೆಗಳ ಪ್ರಗತಿಯನ್ನು ಸಾಪ್ತಾಹಿಕವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್, ಎಲ್‌ಡಿಎಂ ಗಿರೀಶ್ ಕುಲಕರ್ಣಿ, ನಬಾರ್ಡ್ ಡಿಡಿಎಂ ಯುವರಾಜ್, ಎಸ್‌ಬಿಐ ಆರ್‌ಎಂ ರವಿ ಬಿ. ಮೇಶ್ರಾಮ್, ಸಿಬಿಆರ್‌ಸೆಟಿ ನಿರ್ದೇಶಕ ವಿನೋದ್ ಕೊಲ್ಲೂರುಮಠ, ಪಶುಪಾಲನಾ ಹಾಗೂ ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಬ್ಯಾಂಕ್ ಸಂಯೋಜಕರು ಉಪಸ್ಥಿತರಿದ್ದರು.
ಅ. 3ರಿಂದ 21ರವರೆಗೆ ಶಾಲೆಗಳಿಗೆ ದಸರಾ ರಜೆ ಘೋಷಣೆ
ಬೆಂಗಳೂರು: ಅಕ್ಟೋಬರ್ 3 ರಿಂದ 21ರವರೆಗೆ ಶಾಲೆಗಳಿಗೆ ದಸರಾ ರಜೆ ಘೋಷಣೆ ಮಾಡಲಾಗಿದೆ. ಶಿಕ್ಷಣ ಇಲಾಖೆ ಶೈಕ್ಷಣಿಕ ವೇಳಾಪಟ್ಟಿಯ ಮೂಲಕ ದಸರಾ ರಜೆ ಅವಧಿ ಘೋಷಿಸಿದೆ.
ಈ ಬಾರಿ 19 ದಿನ ಶಾಲೆಗಳಿಗೆ ದಸರಾ ರಜೆ ಇರಲಿದೆ. ಅಕ್ಟೋಬರ್ 2ರಂದು ಗಾಂಧಿ ಜಯಂತಿ ಆಚರಣೆ ನಂತರ ದಸರಾ ರಜೆ ಆರಂಭವಾಗಲಿದೆ. ದಸರಾ ರಜೆ ನಂತರ ಎರಡನೇ ಅವಧಿ ತರಗತಿಗಳು ಆರಂಭವಾಗಲಿವೆ. ಶಿಕ್ಷಣ ಇಲಾಖೆ ಘೋಷಣೆ ಮಾಡಿದ ದಸರಾ ರಜೆ ಸರ್ಕಾರಿ ಶಾಲೆಗಳು ಅನುದಾನಿತ ಶಾಲೆಗಳಿಗೆ ಮಾತ್ರ ಅನ್ವಯವಾಗುತ್ತದೆ. ಉಳಿದಂತೆ ಖಾಸಗಿ ಶಾಲೆಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ರಜೆಯನ್ನು ಈಗಾಗಲೇ ಘೋಷಣೆ ಮಾಡಿವೆ. ಕೆಲವು ಶಾಲೆಗಳು 10 ದಿನ ರಜೆ ನೀಡಿದ್ದರೆ, ಮತ್ತೆ ಕೆಲವು ಶಾಲೆಗಳು ಒಂದು ವಾರ ರಜೆ ನೀಡಿವೆ.

