ನವದೆಹಲಿ: ದೇಶಾದ್ಯಂತ ಬ್ಯಾಂಕ್ಗಳಿಗೆ ಸತತ ರಜೆ ಹಾಗೂ ಬ್ಯಾಂಕ್ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಸೆಪ್ಟೆಂಬರ್ ತಿಂಗಳ ವೇತನ ಹಾಗೂ ಪಿಂಚಣಿಯನ್ನು ಸಾಮಾನ್ಯ ದಿನಾಂಕಕ್ಕಿಂತ ಮುಂಚಿತವಾಗಿ, ಸೆಪ್ಟೆಂಬರ್ 25ರಂದೇ ಖಾತೆಗೆ ಜಮಾ ಮಾಡಲು ನಿರ್ಧರಿಸಲಾಗಿದೆ.
ಸೆಪ್ಟೆಂಬರ್ ಅಂತ್ಯದಲ್ಲಿ ಬ್ಯಾಂಕಿಂಗ್ ಸೇವೆಗಳಿಗೆ ಸತತವಾಗಿ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್ 26ರಂದು ನಾಲ್ಕನೇ ಶನಿವಾರ, 27ರಂದು ಭಾನುವಾರ ರಜೆ ಇದೆ. ಇದಾದ ಬಳಿಕ ಸೆಪ್ಟೆಂಬರ್ 28ರಿಂದ 30ರವರೆಗೆ ಬ್ಯಾಂಕ್ ನೌಕರರು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಹೀಗಾಗಿ ತಿಂಗಳ ಕೊನೆಯಲ್ಲಿ ಸತತ ಐದು ದಿನಗಳ ಕಾಲ ಬ್ಯಾಂಕಿಂಗ್ ಚಟುವಟಿಕೆಗಳು ಪರಿಣಾಮಕ್ಕೊಳಗಾಗುವ ಸಾಧ್ಯತೆಯಿದೆ.
ಈ ಹಿನ್ನೆಲೆಯಲ್ಲಿ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಹಣಕಾಸಿನ ತೊಂದರೆ ಉಂಟಾಗದಂತೆ ಸರ್ಕಾರ ವೇತನ ಮತ್ತು ಪಿಂಚಣಿಯನ್ನು ಮುಂಗಡವಾಗಿ ಪಾವತಿಸಲು ನಿರ್ಧರಿಸಿದೆ. ಇದೇ ವೇಳೆ ಭಾನುವಾರ ಬ್ಯಾಂಕ್ಗಳನ್ನು ಕಾರ್ಯನಿರ್ವಹಿಸುವಂತೆ ಮಾಡುವ ನಿರ್ಧಾರವನ್ನೂ ಕೇಂದ್ರ ಸರ್ಕಾರ ಕೈಗೊಂಡಿದೆ.
ಯಾರಿಗೆ ಅನ್ವಯ?
ಕೇಂದ್ರ ಸರ್ಕಾರದ ಎಲ್ಲಾ ನಿಯಮಿತ ಉದ್ಯೋಗಿಗಳ ಜೊತೆಗೆ ರಕ್ಷಣಾ, ಅಂಚೆ ಮತ್ತು ದೂರಸಂಪರ್ಕ ಇಲಾಖೆಯ ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಈ ಮುಂಗಡ ಪಾವತಿ ಅನ್ವಯವಾಗಲಿದೆ.
ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಕೈಗಾರಿಕಾ ಉದ್ಯೋಗಿಗಳ ವೇತನವನ್ನೂ ಸೆಪ್ಟೆಂಬರ್ 25ರಂದೇ ಪಾವತಿಸುವಂತೆ ಸೂಚಿಸಲಾಗಿದೆ. ಕೇಂದ್ರ ಸರ್ಕಾರಿ ಪಿಂಚಣಿದಾರರಿಗೂ ಅದೇ ದಿನ ಪಿಂಚಣಿ ತಲುಪುವಂತೆ ಬ್ಯಾಂಕ್ಗಳು ಮತ್ತು ಪೇ ಅಂಡ್ ಅಕೌಂಟ್ಸ್ ಕಚೇರಿಗಳಿಗೆ ನಿರ್ದೇಶನ ನೀಡಲಾಗಿದೆ.
ಮುಂದಿನ ತಿಂಗಳ ವೇತನದಲ್ಲಿ ಹೊಂದಾಣಿಕೆ
ಹಣಕಾಸು ಸಚಿವಾಲಯದ ಸೂಚನೆಯಂತೆ ಸೆಪ್ಟೆಂಬರ್ 25ರಂದು ಪಾವತಿಸುವ ವೇತನ ಮತ್ತು ಪಿಂಚಣಿಯನ್ನು ತಾಂತ್ರಿಕವಾಗಿ ‘ಮುಂಗಡ ಪಾವತಿ’ ಎಂದು ಪರಿಗಣಿಸಲಾಗುತ್ತದೆ.
ತಿಂಗಳ ಅಂತ್ಯದ ವೇಳೆಗೆ ವೇತನ, ಭತ್ಯೆಗಳ ಅಂತಿಮ ಲೆಕ್ಕಾಚಾರ ಪೂರ್ಣಗೊಂಡ ನಂತರ ಯಾವುದಾದರೂ ವ್ಯತ್ಯಾಸ ಕಂಡುಬಂದರೆ, ಅದನ್ನು ಮುಂದಿನ ತಿಂಗಳ ವೇತನದಲ್ಲಿ ಹೊಂದಾಣಿಕೆ ಮಾಡಲಾಗುತ್ತದೆ. ಹೀಗಾಗಿ ಮುಂಗಡವಾಗಿ ಹಣ ಪಾವತಿಸುವುದರಿಂದ ಉದ್ಯೋಗಿಗಳ ಒಟ್ಟು ವೇತನ ಲೆಕ್ಕಾಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಹಣಕಾಸು ವಹಿವಾಟುಗಳಿಗೆ ಮುನ್ನೆಚ್ಚರಿಕೆ
ಸೆಪ್ಟೆಂಬರ್ ಕೊನೆಯ ವಾರವು ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ಅಂತ್ಯದ ಅವಧಿಯೂ ಆಗಿರುವುದರಿಂದ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಬ್ಯಾಂಕ್ ಮುಷ್ಕರದಿಂದ ಸರ್ಕಾರದ ಆದಾಯ, ತೆರಿಗೆ ಪಾವತಿ, ಖಜಾನೆ ವಹಿವಾಟು ಹಾಗೂ ಇತರ ಪ್ರಮುಖ ಹಣಕಾಸು ಚಟುವಟಿಕೆಗಳಿಗೆ ಅಡಚಣೆಯಾಗದಂತೆ ಅಗತ್ಯ ಪ್ರಕ್ರಿಯೆಗಳನ್ನು ಸೆಪ್ಟೆಂಬರ್ 25ರೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ (CGA) ಅನುಮತಿ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ದೇಶಾದ್ಯಂತ ಹಣ ಜಮಾ ಮಾಡುವ ಬ್ಯಾಂಕ್ ಶಾಖೆಗಳಿಗೆ ಮುಂಚಿತವಾಗಿ ಮಾಹಿತಿ ನೀಡುವಂತೆಯೂ ತಿಳಿಸಲಾಗಿದೆ.
ಸೆಪ್ಟೆಂಬರ್ 25ರ ಶುಕ್ರವಾರ ಸಂಜೆ ವೇಳೆಗೆ ಅರ್ಹ ಕೇಂದ್ರ ಸರ್ಕಾರಿ ಉದ್ಯೋಗಿಗಳು ಮತ್ತು ಪಿಂಚಣಿದಾರರ ಖಾತೆಗಳಿಗೆ ವೇತನ ಹಾಗೂ ಪಿಂಚಣಿ ಜಮೆಯಾಗುವಂತೆ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಇದರಿಂದ ಬ್ಯಾಂಕ್ ಮುಷ್ಕರದ ಅವಧಿಯಲ್ಲಿ ಹಣದ ಅಗತ್ಯ ಎದುರಾದಾಗ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ತೊಂದರೆಯಾಗದಂತೆ ಮುಂಗಡ ಪಾವತಿ ನೆರವಾಗಲಿದೆ.

