HomeKarnatakaಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಸಾಲ ಮರು ಪಾವತಿಗೆ ಕಿರುಕುಳ ನೀಡಿದರೆ ಕಾನೂನು ಕ್ರಮ: ಸರ್ಕಾರ ಎಚ್ಚರಿಕೆ

ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಸಾಲ ಮರು ಪಾವತಿಗೆ ಕಿರುಕುಳ ನೀಡಿದರೆ ಕಾನೂನು ಕ್ರಮ: ಸರ್ಕಾರ ಎಚ್ಚರಿಕೆ

ಬೆಂಗಳೂರು: ರೈತರ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಮೊರಟೋರಿಯಂ ಅವಧಿಯನ್ನು 12 ತಿಂಗಳಿಗೆ ಹಾಗೂ ಸಾಲ ಮರುಪಾವತಿ ಅವಧಿಯನ್ನು 36 ತಿಂಗಳಿಂದ 60 ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಬರ ಪರಿಸ್ಥಿತಿ ಕುರಿತ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರ ನೀಡಿದ ಅವರು, ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಯಾರಾದರೂ ರೈತರಿಗೆ ಕಿರುಕುಳ ನೀಡಿದರೆ ಅಥವಾ ತೊಂದರೆ ಮಾಡಿದರೆ ಅವರ ವಿರುದ್ಧ ಈಗಾಗಲೇ ಇರುವ ಕಠಿಣ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಕೆಲವು ಕಡೆ ರೈತರಿಗೆ ತೊಂದರೆ ಮಾಡಲಾಗುತ್ತಿದೆ ಎಂಬ ವರದಿಗಳು ಈಗಾಗಲೇ ಬರುತ್ತಿವೆ. ಹೀಗಾಗಿ ಯಾರಾದರೂ ರೈತರಿಗೆ ಕಿರುಕುಳ ನೀಡಿದರೆ ಅವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣ ನೆರವು ತಲುಪಿಸುವ ಉದ್ದೇಶದಿಂದ NDRF ಅನುದಾನವನ್ನು ನಿರೀಕ್ಷಿಸಿಕೊಂಡು, ರಾಜ್ಯ ಸರ್ಕಾರದಿಂದ ಪ್ರತಿ ರೈತನಿಗೆ ₹2,500 ಇನ್‌ಪುಟ್ ಸಬ್ಸಿಡಿ ನೀಡಲು ತೀರ್ಮಾನಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರತಿ ರೈತನಿಗೆ ₹2,500 ಇನ್‌ಪುಟ್ ಸಬ್ಸಿಡಿ ನೀಡುವುದರಿಂದ ರಾಜ್ಯದ ಬೊಕ್ಕಸಕ್ಕೆ ಸುಮಾರು ₹1,250 ಕೋಟಿ ವೆಚ್ಚವಾಗಲಿದೆ. ಮೊದಲ ಹಂತದಲ್ಲಿಯೇ ಈ ಮೊತ್ತವನ್ನು ರೈತರಿಗೆ ನೀಡಲಾಗುವುದು. ಅಂದಾಜು 45ರಿಂದ 50 ಲಕ್ಷ ರೈತರಿಗೆ ಇದರ ಪ್ರಯೋಜನ ದೊರೆಯಲಿದ್ದು, ಇದನ್ನು ತಕ್ಷಣ ಜಾರಿಗೆ ತರಲಾಗುವುದು ಎಂದರು.

ಇಂದು ರೈತ ಕಷ್ಟದಲ್ಲಿದ್ದಾನೆ. ಹೀಗಾಗಿ NDRF ಅನುದಾನವನ್ನು ನಿರೀಕ್ಷಿಸಿಕೊಂಡು ರಾಜ್ಯ ಸರ್ಕಾರದಿಂದ ಪ್ರತಿ ರೈತನಿಗೆ ₹2,500 ಇನ್‌ಪುಟ್ ಸಬ್ಸಿಡಿ ನೀಡಲು ತೀರ್ಮಾನಿಸಿದ್ದೇವೆ. ₹1,250 ಕೋಟಿ ಮೊತ್ತವನ್ನು ಮೊದಲ ಹಂತದಲ್ಲಿಯೇ ನಮ್ಮ ರೈತರಿಗೆ ನೀಡಲಿದ್ದೇವೆ. ಇದು ಸಣ್ಣ ಮೊತ್ತವಲ್ಲ. ಅಂದಾಜು 45ರಿಂದ 50 ಲಕ್ಷ ರೈತರಿಗೆ ಇದರ ಪ್ರಯೋಜನ ದೊರೆಯಲಿದೆ. ಈ ನೆರವನ್ನು ನೀಡಲಾಗುವುದು. ಇದರ ಜೊತೆಗೆ ಬೇರೆ ಎಲ್ಲ ರೀತಿಯಲ್ಲಿಯೂ ರೈತರಿಗೆ ಸರ್ಕಾರ ಸಹಾಯಹಸ್ತ ನೀಡಲಿದ್ದೇವೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ತಕ್ಷಣ ರಾಜ್ಯದ ನೆರವಿಗೆ ಧಾವಿಸಲಿ:

 ಕರ್ನಾಟಕ ಮಾತ್ರವಲ್ಲದೆ ಸುಮಾರು 17–18 ರಾಜ್ಯಗಳು ಇಂದು ಬರ ಪರಿಸ್ಥಿತಿಯಲ್ಲಿವೆ ಎಂಬುದನ್ನು ಅಂಕಿ-ಅಂಶಗಳ ಸಹಿತ ವಿವರಿಸಿದ್ದೇನೆ. ಬೇರೆ ರಾಜ್ಯಗಳಲ್ಲಿ ಎಷ್ಟು ಪ್ರಮಾಣದ ಬರ ಪರಿಸ್ಥಿತಿ ಇದೆ ಎಂಬುದನ್ನೂ ಸುಮಾರು 17 ರಾಜ್ಯಗಳ ಅಂಕಿ-ಅಂಶಗಳ ಮೂಲಕ ತಿಳಿಸಿದ್ದೇನೆ. ಹೀಗಾಗಿ, ಈ ಸದನ ಕೂಡ ಒಪ್ಪಿದರೆ, ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಮಾನ್ಯ ಪ್ರಧಾನಮಂತ್ರಿಗಳಿಗೆ ಮನವಿ ಮಾಡಬೇಕು. ಈವರೆಗೆ ಕೇಂದ್ರ ಸರ್ಕಾರದಿಂದ ಯಾವುದೇ ಪ್ರಕ್ರಿಯೆ ನಡೆದಿಲ್ಲ. ನಮ್ಮ ಪತ್ರಗಳಿಗೂ ಉತ್ತರ ಬಂದಿಲ್ಲ. ಕೇಂದ್ರ ಸರ್ಕಾರದ ತಂಡವನ್ನು ತಕ್ಷಣ ರಾಜ್ಯಕ್ಕೆ ಕಳುಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ನಾವು ಈಗ 100–101 ತಾಲೂಕುಗಳಿಗೆ ಸಂಬಂಧಿಸಿದಂತೆ ₹18,000 ಕೋಟಿ ನಷ್ಟವನ್ನು ಅಂದಾಜಿಸಿದ್ದೇವೆ. ₹3,800 ಕೋಟಿ ಪರಿಹಾರವನ್ನು ಕೇಳಿದ್ದೇವೆ. ಇನ್ನೂ ಸುಮಾರು 120 ತಾಲೂಕುಗಳು ಬರಪೀಡಿತ ಪ್ರದೇಶಗಳೆಂದು ಘೋಷಣೆಯಾಗಲಿವೆ. ಅವುಗಳನ್ನೂ ಸೇರಿಸಿ ಮತ್ತೊಂದು ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.

ಇವೆಲ್ಲವನ್ನೂ ಒಟ್ಟುಗೂಡಿಸಿದರೆ ಸುಮಾರು ₹40,000 ಕೋಟಿ ನಷ್ಟವಾಗುವ ಸಾಧ್ಯತೆ ಇದೆ ಎಂದು ನನಗೆ ಅನಿಸುತ್ತದೆ. NDRF ಮಾರ್ಗಸೂಚಿಗಳ ಪ್ರಕಾರ ಇದರಲ್ಲಿ ಎಷ್ಟು ಪರಿಹಾರಕ್ಕೆ ಅರ್ಹವಾಗುತ್ತದೆ ಎಂಬುದನ್ನು ಲೆಕ್ಕ ಹಾಕಬೇಕು. ಅದು ₹15,000 ಕೋಟಿ ಆಗುತ್ತದೆಯೇ ಎಂಬುದನ್ನು ನೋಡಬೇಕು. ಕಳೆದ ಬಾರಿ ₹18,000 ಕೋಟಿ ಆಗಿತ್ತು. ಈ ವರ್ಷವೂ ಎಷ್ಟು ಸಾವಿರ ಕೋಟಿ ಆಗುತ್ತದೆ ಎಂಬುದನ್ನು ಲೆಕ್ಕ ಹಾಕಿ ಆ ಮೊತ್ತವನ್ನು ಕೇಳುತ್ತೇವೆ. ಆ ಹಣವನ್ನು ಆದಷ್ಟು ಶೀಘ್ರವಾಗಿ ನಮಗೆ ನೀಡಬೇಕು ಎಂದರು.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರಿಗೆ ದೊರೆತಿರುವ ಬೆಳೆ ವಿಮೆ ಪರಿಹಾರವನ್ನು ಗಮನಿಸಿದರೆ, 2020-21ರಲ್ಲಿ ₹700 ಕೋಟಿ, 2021-22ರಲ್ಲಿ ₹881 ಕೋಟಿ, 2022-23ರಲ್ಲಿ ₹1,090 ರಿಂದ ₹1,092 ಕೋಟಿ ಹಾಗೂ 2023-24ರಲ್ಲಿ ₹1,600 ಕೋಟಿ ಬಂದಿದೆ ಎಂದರು.

2023-24ರಲ್ಲಿ ಬೆಳೆ ವಿಮೆಯಡಿ ₹1,600 ಕೋಟಿ ಈಗಾಗಲೇ ನಮ್ಮ ರೈತರಿಗೆ ವಿತರಣೆಯಾಗಿದೆ. ಇದು ದಾಖಲೆ ಪ್ರಮಾಣ. ಇಲ್ಲಿಯವರೆಗೆ ಈ ಪ್ರಮಾಣದಲ್ಲಿ ನಮ್ಮ ರೈತರಿಗೆ ಬೆಳೆ ವಿಮೆ ಪರಿಹಾರ ಸಿಕ್ಕಿರಲಿಲ್ಲ. ನಮ್ಮ ಕೃಷಿ ಸಚಿವರು ಬಹಳ ಮುತುವರ್ಜಿಯಿಂದ ಈ ಬೆಳೆ ವಿಮೆಯನ್ನು ರೈತರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇನ್ನು SDRFನಿಂದಲೂ ನಮಗೆ ಎಷ್ಟು ಬಂದಿದೆ, ಏನು ಬಂದಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.

ಕುಡಿಯುವ ನೀರಿಗೆ ಎಲ್ಲಿಯಾದರೂ ತೊಂದರೆಯಾದರೆ ಖಾಸಗಿ ಕೊಳವೆಬಾವಿಗಳನ್ನು ವಶಕ್ಕೆ ಪಡೆದುಕೊಳ್ಳಿ, ಅದಕ್ಕೆ ಬಾಡಿಗೆ ಪಾವತಿಸಿ ನೀರು ಸರಬರಾಜು ಮಾಡಿ ಎಂದು ಸ್ಪಷ್ಟ ನಿರ್ದೇಶನ ನೀಡಿದ್ದೇವೆ. ಟ್ಯಾಂಕರ್‌ಗಳ ಮೂಲಕವೂ ನೀರು ಸರಬರಾಜು ಮಾಡುವಂತೆ ತಿಳಿಸಿದ್ದೇವೆ. ಮೇವಿನ ಅಭಾವ ಎದುರಾದಾಗ ಮೇವಿನ ಕಿಟ್‌ಗಳನ್ನು ನೀಡಿ ಮೇವು ಬೆಳೆಯಲು ಪ್ರೋತ್ಸಾಹಿಸಿದ್ದೇವೆ. ಇಂದು ಗೋಶಾಲೆಗಳನ್ನು ತೆರೆದು ಜಾನುವಾರುಗಳಿಗೆ ರಕ್ಷಣೆ ನೀಡುವ ಕೆಲಸವನ್ನೂ ನಮ್ಮ ಸರ್ಕಾರ ಮಾಡಿದೆ. ಆದ್ದರಿಂದ ಈ ಬರಗಾಲದ ಸಂದರ್ಭದಲ್ಲಿ ನಮ್ಮ ಸರ್ಕಾರ ರೈತರ ಜೊತೆ, ಬಡವರ ಜೊತೆ ಮತ್ತು ಗ್ರಾಮೀಣ ಜನರ ಜೊತೆ ಭದ್ರವಾಗಿ ನಿಂತಿದೆ ಎಂದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular