ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮಳೆಯಾಗಿದ್ದು, ಸಿಡಿಲಿನ ಆರ್ಭಟಕ್ಕೆ ಮೂವರು ಬಲಿಯಾಗಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ರಾಯಚೂರು, ಕೊಪ್ಪಳ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಸಿಡಿಲು ಬಡಿದು ಮೂವರು ಮೃತಪಟ್ಟಿದ್ದು, ಏಳು ಜನ ಗಾಯಗೊಂಡಿದ್ದಾರೆ.
ಮುಂಗಾರು ಅಂತ್ಯದಲ್ಲಿ ರಾಜ್ಯದ ಕೆಲವು ಕಡೆ ಮಳೆ ಆಗುತ್ತಿದ್ದು, ಗುರುವಾರ ಸಿಡಿಲಬ್ಬರದ ಮಳೆಯಾಗಿ ಮೂವರು ಮೃತಪಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಐಹೊಳೆಯಲ್ಲಿ ಹೊಲದಲ್ಲಿ ಸೂರ್ಯಕಾಂತಿ ರಾಶಿ ಮಾಡಲು ಹೋಗಿದ್ದ ವೇಳೆ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಆರು ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಾಟಾಪುರದ ಭರಮಪ್ಪ ಯಲ್ಲಪ್ಪ ಖಂಡೇಕರ(25), ಐಹೊಳೆಯ ರಾಮವ್ವ ದ್ಯಾಮಪ್ಪ ಹೊಳಗಿ(65) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಸುಲ್ತಾನಪುರ ಗ್ರಾಮದ ತೆಗ್ಗಿನ ಕ್ಯಾಂಪ್ ನಲ್ಲಿ ಜಮೀನಿನಲ್ಲಿ ಜೋಳ ಬಿತ್ತನೆ ಮಾಡುವಾಗ ಸಿಡಿಲು ಬಡಿದು 35 ವರ್ಷದ ದ್ಯಾವಣ್ಣ ಮೃತಪಟ್ಟಿದ್ದಾರೆ. ಅಯ್ಯಪ್ಪ ಯಮನಪ್ಪ ಭೋವಿ(50) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 31 ಆಧಾರ್ ಕೇಂದ್ರಗಳು ಕಾರ್ಯಾರಂಭ: ಸೇವೆ ಪಡೆದುಕೊಳ್ಳಲು ಜಿಲ್ಲಾಧಿಕಾರಿಗಳ ಮನವಿ
ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಪಡಿತರ ಚೀಟಿಯ ಇ-ಕೆವೈಸಿ ಪ್ರಕ್ರಿಯೆಗಾಗಿ ಆಧಾರ್ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸಿಕೊಳ್ಳಲು ಸಾರ್ವಜನಿಕರು ಪರದಾಡುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲಾಡಳಿತವು ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಒಟ್ಟು 31 ಅಧಿಕೃತ ಆಧಾರ್ ಕೇಂದ್ರಗಳ ಪಟ್ಟಿಯನ್ನು ಪ್ರಕಟಿಸಿದೆ.
ಸಾರ್ವಜನಿಕರು ಕೇವಲ ಜಿಲ್ಲಾಧಿಕಾರಿಗಳ ಕಚೇರಿ ಅಥವಾ ತಹಶೀಲ್ದಾರ್ ಕಚೇರಿಗಳಿಗೆ ಬಂದು ಅಲೆಯುವುದನ್ನು ತಪ್ಪಿಸಿ, ತಮಗೆ ಸಮೀಪವಿರುವ ಕೇಂದ್ರಗಳಲ್ಲೇ ಸೇವೆ ಪಡೆದುಕೊಳ್ಳುವಂತೆ ಕೊಪ್ಪಳ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ತಿಳಿಸಿದ್ದಾರೆ.
ಕೊಪ್ಪಳ ತಾಲೂಕಿನಲ್ಲಿ ಒಟ್ಟು 7 ಕೇಂದ್ರಗಳು: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 2 ಕೇಂದ್ರಗಳು, ಕೊಪ್ಪಳ ತಹಶೀಲ್ದಾರ್ ಕಾರ್ಯಾಲಯ, ಕೇಂದ್ರ ಬಸ್ ನಿಲ್ದಾಣದ ಹತ್ತಿರವಿರುವ ಮಾಲತೇಶ ಹೊಟೇಲ್ ಹಿಂಭಾಗದ ಕಾಮನ್ ಸರ್ವಿಸ್ ಸೆಂಟರ್, ಹೆಡ್ ಪೋಸ್ಟ್ ಆಫೀಸ್, ಬಿ.ಎಸ್.ಎನ್.ಎಲ್. ಕಚೇರಿ ಮತ್ತು ಬ್ಯಾಂಕ್ ಆಫ್ ಬರೋಡಾ ಶಾಖೆ ಹಾಗೂ ಅಳವಂಡಿ ಹೋಬಳಿಯ ನಾಡ ಕಚೇರಿ ಸೇರಿದಂತೆ ಕೊಪ್ಪಳ ತಾಲೂಕಿನಲ್ಲಿ ಒಟ್ಟು 7 ಕೇಂದ್ರಗಳಲ್ಲಿ ಆಧಾರ್ ಸೇವೆ ಲಭ್ಯವಿದೆ.
ಕುಷ್ಟಗಿ ತಾಲೂಕು ಒಟ್ಟು 8 ಕೇಂದ್ರಗಳು: ಕುಷ್ಟಗಿ ತಹಶೀಲ್ದಾರ್ ಕಾರ್ಯಾಲಯ, ಹೆಡ್ ಪೋಸ್ಟ್ ಆಫೀಸ್, ಬಸ್ ನಿಲ್ದಾಣದ ಎದುರಿನ ಬಸವ ಕಾಂಪ್ಲೆಕ್ಸ್ನಲ್ಲಿರುವ ಕರ್ನಾಟಕ ಒನ್ ಕೇಂದ್ರ, ಹನುಮಸಾಗರ ನಾಡಕಚೇರಿ ಹಾಗೂ ಎಸ್.ಬಿ.ಐ ಬ್ಯಾಂಕ್ (2 ಕೇಂದ್ರಗಳು), ತಾವರಗೇರಾ ನಾಡಕಚೇರಿ, ತಾವರಗೇರಾ ಪಟ್ಟಣದ ಅಂಬೇಡ್ಕರ್ ವೃತ್ತದ ಸಮೀಪದ ಕರ್ನಾಟಕ ಒನ್ ಕೇಂದ್ರ ಮತ್ತು ಹನುಮನಾಳ ನಾಡ ಕಚೇರಿ ಒಳಗೊಂಡಂತೆ ಕುಷ್ಟಗಿ ತಾಲೂಕಿನಲ್ಲಿ ಒಟ್ಟು 8 ಕೇಂದ್ರಗಳಿವೆ.
ಕಾರಟಗಿ ತಾಲೂಕು ಒಟ್ಟು 4 ಕೇಂದ್ರಗಳು: ಕಾರಟಗಿ ಪಟ್ಟಣದ ನಾಡಕಚೇರಿ, ಪೋಸ್ಟ್ ಆಫೀಸ್, ನವಲಿ ರಸ್ತೆಯಲ್ಲಿರುವ ವೆಂಕಣ್ಣ ಶೆಟ್ಟಿ ಪ್ಲಾಜಾದ ಕರ್ನಾಟಕ ಒನ್ ಕೇಂದ್ರ ಹಾಗೂ ಸಿದ್ದಾಪೂರ ಗ್ರಾಮದ ನಾಡಕಚೇರಿ ಎದುರಿನ ಕರ್ನಾಟಕ ಒನ್ ಕೇಂದ್ರ ಸೇರಿ ಕಾರಟಗಿ ತಾಲೂಕು ಒಟ್ಟು 4 ಕೇಂದ್ರಗಳಿವೆ.
ಗಂಗಾವತಿ ತಾಲೂಕಿನಲ್ಲಿ 4 ಕೇಂದ್ರಗಳು: ಗಂಗಾವತಿ ತಹಶೀಲ್ದಾರ್ ಕಚೇರಿ, ನಗರದ ಹೆಡ್ ಪೋಸ್ಟ್ ಆಫೀಸ್, ಎಪಿಎಂಸಿ ಪೋಸ್ಟ್ ಆಫೀಸ್ ಹಾಗೂ ಮರಳಿ ನಾಡ ಕಚೇರಿ.
ಯಲಬುರ್ಗಾ ತಾಲೂಕು ಒಟ್ಟು 3 ಕೇಂದ್ರಗಳು: ಯಲಬುರ್ಗಾ ತಹಶೀಲ್ದಾರ್ ಕಾರ್ಯಾಲಯ, ಪೋಸ್ಟ್ ಆಫೀಸ್ ಎದುರಿನ ಕರ್ನಾಟಕ ಒನ್ ಕೇಂದ್ರ ಹಾಗೂ ಪೋಸ್ಟ್ ಆಫೀಸ್ ಒಳಗೊಂಡಂತೆ ಗಂಗಾವತಿ ತಾಲೂಕು ಒಟ್ಟು 4 ಕೇಂದ್ರಗಳಿವೆ.
ಕುಕನೂರು ತಾಲೂಕಿನಲ್ಲಿ 3 ಕೇಂದ್ರಗಳು: ಕುಕನೂರು ತಹಶೀಲ್ದಾರ್ ಕಾರ್ಯಾಲಯ, ಪಟ್ಟಣದ ಎಸ್.ಬಿ.ಐ ಬ್ಯಾಂಕ್ ಹಾಗೂ ಪಟ್ಟಣದ ಪೋಸ್ಟ್ ಆಫೀಸ್ ಸೇರಿ ಕುಕನೂರು ತಾಲೂಕು ಒಟ್ಟು 3 ಕೇಂದ್ರಗಳಿವೆ.
ಕನಕಗಿರಿ ತಾಲೂಕಿನಲ್ಲಿ 2 ಕೇಂದ್ರಗಳು: ನಾಡ ಕಾರ್ಯಾಲಯ ಹಾಗೂ ಪಟ್ಟಣದ ಪೋಸ್ಟ್ ಆಫೀಸ್.
ಗ್ರಾಮ ಒನ್ ಕೇಂದ್ರಗಳು: ಪಡಿತರ ಚೀಟಿ ಇ-ಕೆವೈಸಿ ಹೊರತುಪಡಿಸಿ, ಮೊಬೈಲ್ ಸಂಖ್ಯೆ ಹಾಗೂ ವಿಳಾಸ ತಿದ್ದುಪಡಿಯಂತಹ ಸೇವೆಗಳನ್ನು ಜಿಲ್ಲೆಯಾದ್ಯಂತ ಇರುವ 55 ಗ್ರಾಮ ಒನ್ ಕೇಂದ್ರಗಳಲ್ಲಿ ಪಡೆದುಕೊಳ್ಳಬಹುದು.
ಮಕ್ಕಳ ನೋಂದಣಿ ಮತ್ತು ಮನೆ ಬಾಗಿಲಿಗೆ ಸೇವೆ: 0-5 ವರ್ಷದೊಳಗಿನ ಮಕ್ಕಳ ಆಧಾರ್ ನೋಂದಣಿ ಹಾಗೂ ಮೊಬೈಲ್ ನಂಬರ್ ಲಿಂಕ್/ತಿದ್ದುಪಡಿಗಾಗಿ ಅಂಚೆ ಇಲಾಖೆಯ (ಐಪಿಪಿಬಿ) ಪೋಸ್ಟ್ಮ್ಯಾನ್ ಅಥವಾ ಡಾಕ್ ಸೇವಕರ ಬಳಿ ಇರುವ 101 ಮೊಬೈಲ್ ಕಿಟ್ಗಳ ಮೂಲಕ ಸುಲಭವಾಗಿ ಸೇವೆ ಪಡೆಯಬಹುದಾಗಿದೆ.
ಆದ್ದರಿಂದ ಕೊಪ್ಪಳ ಜಿಲ್ಲೆಯ ಸಮಸ್ತ ನಾಗರಿಕರು ದೂರದ ತಾಲೂಕು ಕೇಂದ್ರಗಳಿಗೆ ಅಲೆದಾಡದೆ, ಸ್ಥಳೀಯವಾಗಿ ಲಭ್ಯವಿರುವ ಈ ಕೇಂದ್ರಗಳಿಗೆ ತೆರಳಿ ತಮ್ಮ ಆಧಾರ್ ತಿದ್ದುಪಡಿ ಹಾಗೂ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

