HomeKarnatakaಮುಖ್ಯ ಚುನಾವಣಾ ಆಯುಕ್ತರ ಹುದ್ದೆಯಿಂದ ಜ್ಞಾನೇಶ್ ಕುಮಾರ್ ವಜಾಗೊಳಿಸಿ: ಡಿಸಿಎಂ ಪರಮೇಶ್ವರ್ ಒತ್ತಾಯ

ಮುಖ್ಯ ಚುನಾವಣಾ ಆಯುಕ್ತರ ಹುದ್ದೆಯಿಂದ ಜ್ಞಾನೇಶ್ ಕುಮಾರ್ ವಜಾಗೊಳಿಸಿ: ಡಿಸಿಎಂ ಪರಮೇಶ್ವರ್ ಒತ್ತಾಯ

ಬೆಂಗಳೂರು: ಜ್ಞಾನೇಶ್ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಭಾರತೀಯ ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ಅದು ತೆಗೆದುಕೊಂಡಿರುವ ಕೆಲವು ನಿರ್ಧಾರಗಳ ಕುರಿತು ಇಬ್ಬರು ಚುನಾವಣಾ ಆಯುಕ್ತರು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಪ್ರಕಟಗೊಂಡಿರುವ ವರದಿಗಳು ಇಡೀ ದೇಶವಾಸಿಗಳಲ್ಲಿ ಆತಂಕ ಮೂಡಿಸುವಂತಿದೆ. ಮೂವರು ಸದಸ್ಯರಿರುವ ಸಂವಿಧಾನಾತ್ಮಕ ಸಂಸ್ಥೆಯು ಏಕವ್ಯಕ್ತಿಯ ಪಾರುಪತ್ಯಕ್ಕೆ ಸೀಮಿತವಾಗಿದೆಯೇ ಎಂಬ ಗಂಭೀರ ಪ್ರಶ್ನೆಯನ್ನು ಇದು ಹುಟ್ಟುಹಾಕಿದೆ. ಭಾರತೀಯ ಚುನಾವಣಾ ಆಯೋಗವು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರೊಬ್ಬರದ್ದೇ ಸಂಸ್ಥೆಯಾಗಿ ಮಾರ್ಪಟ್ಟಿದೆಯೇ ಎಂಬ ಅನುಮಾನ ಸಹ ಕಾಡುತ್ತಿದೆ ಎಂದು ಹೇಳಿದ್ದಾರೆ.

ಭಾರತೀಯ ಚುನಾವಣಾ ಆಯೋಗದಲ್ಲಿ ಮೂವರು ಆಯುಕ್ತರಿದ್ದಾರೆ. ಕಾನೂನಿನ ಪ್ರಕಾರ, ಸಾಧ್ಯವಾದಷ್ಟು ನಿರ್ಧಾರಗಳು ಸರ್ವಾನುಮತದಿಂದ ತೆಗೆದುಕೊಳ್ಳಬೇಕು. ಭಿನ್ನಾಭಿಪ್ರಾಯ ಉಂಟಾದಲ್ಲಿ, ಬಹುಮತದ ನಿರ್ಧಾರವೇ ಅಂತಿಮವಾಗಬೇಕು. ಆದರೆ, ಇಬ್ಬರು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಲಿಖಿತವಾಗಿ ಆಕ್ಷೇಪ ದಾಖಲು ಮಾಡಿರುವುದಾಗಿ ಹಾಗೂ ಈ ಇಬ್ಬರ ವಿರೋಧದ ಹೊರತಾಗಿಯೂ ಕೆಲವು ಪ್ರಮುಖ ವಿಚಾರಗಳಲ್ಲಿ ಮುಖ್ಯ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿರುವುದಾಗಿ ಪತ್ರಿಕೆಯೊಂದರ ತನಿಖಾ ವರದಿ ಮೂಲಕ ಬಹಿರಂಗಗೊಂಡಿದೆ. ಚುನಾವಣಾ ಆಯೋಗದ ಅನುಮೋದನೆ ಇಲ್ಲದೆಯೇ ಆಯೋಗದ ಹೆಸರಿನಲ್ಲಿ ಪತ್ರಗಳು, ಆದೇಶಗಳನ್ನು ಪ್ರಕಟಿಸಿರುವ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅವರ ಆಕ್ಷೇಪಣೆಗಳು ಸಾಮಾನ್ಯ ಆಡಳಿತಾತ್ಮಕ ವಿಷಯಗಳಿಗೆ ಸೀಮಿತವಾಗಿಲ್ಲ. ಹೊಸ ಮತದಾರರ ಸೇರ್ಪಡೆ, ಮತದಾರರ ಪಟ್ಟಿಯಲ್ಲಿನ ಹೆಸರುಗಳ ಅಳಿಸುವಿಕೆ ಮತ್ತು ಮರುಸೇರ್ಪಡೆ, ಎಸ್‌ಐಆರ್‌ ಪ್ರಕ್ರಿಯೆಗಳ ಕುರಿತಾದ ಗಂಭೀರ ವಿಚಾರಗಳಾಗಿವೆ. ಅರ್ಜಿ ನಮೂನೆ-6ರ ಬದಲಾವಣೆ ಅನಧಿಕೃತ ಮತ್ತು ಕಾನೂನು ಬಾಹಿರ. ರಾಜ್ಯ ಮಟ್ಟದಲ್ಲಿನ ಶಾಸನಬದ್ಧ ಅಧಿಕಾರಿಗಳ ಅಧಿಕಾರವನ್ನು ಬದಿಗೊತ್ತಿ ಮತದಾರರ ಪಟ್ಟಿಯ ದತ್ತಾಂಶಗಳನ್ನು (ಡೇಟಾಬೇಸ್‌) ಕೇಂದ್ರೀಕರಣ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಸಹ ಇದರಲ್ಲಿ ಸೇರಿವೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಮತ್ತು ವಿಶೇಷವಾಗಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನಮ್ಮ ಚುನಾವಣಾ ಪ್ರಕ್ರಿಯೆಯ ಸಮಗ್ರತೆ ಕುರಿತು ನಿರಂತರವಾಗಿ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಮಹಾರಾಷ್ಟ್ರದ ಮತದಾರರ ಪಟ್ಟಿಗಳಲ್ಲಿನ ಅಸಾಮಾನ್ಯ ಬದಲಾವಣೆಗಳು ಮತ್ತು ಮತದಾನದ ಪ್ರಮಾಣದ ಅಂಕಿಅಂಶಗಳ ಕುರಿತಾದ ಪ್ರಶ್ನೆಗಳಿಂದ ಹಿಡಿದು, ಕರ್ನಾಟಕದ ಮಹದೇವಪುರ ಮತ್ತು ಆಳಂದ ಹಾಗೂ ಹರಿಯಾಣದಲ್ಲಿನ ನಕಲಿ ಮತದಾನದ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಮತದಾನ ಪ್ರಕ್ರಿಯೆಯನ್ನು ಪಾರದರ್ಶಕತೆ ಮತ್ತು ಹೊಣೆಗಾರಿಕೆಯಿಂದ ನಡೆಸಬೇಕು ಎಂದು ಚುನಾವಣಾ ಆಯೋಗವನ್ನು ಅವರು ನಿರಂತರವಾಗಿ ಒತ್ತಾಯಿಸುತ್ತಾ ಬಂದಿದ್ದಾರೆ ಎಂದು ಹೇಳಿದ್ದಾರೆ.

ಈಗ ಚುನಾವಣಾ ಆಯೋಗದೊಳಗಿನಿಂದಲೇ ಹೊರಬರುತ್ತಿರುವ ವಿಚಾರಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿವೆ. ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ಹೊರಗಿನ ವ್ಯಕ್ತಿಗಳು ಈ ವರೆಗೆ ಎತ್ತುತ್ತಿದ್ದ ಪ್ರಶ್ನೆಗಳು ಈಗ ಆಯೋಗದೊಳಗೇ ದಾಖಲಾಗಿರುವ ಆಕ್ಷೇಪಣೆಗಳ ರೂಪದಲ್ಲಿ ಪ್ರತಿಧ್ವನಿಸುತ್ತಿವೆ.

ಈ ಹಿನ್ನೆಲೆಯಲ್ಲಿ, ಕರ್ನಾಟಕ ಸೇರಿದಂತೆ ದೇಶಾದ್ಯಂತ SIR ಅನ್ನು ನಡೆಸುತ್ತಿರುವ ವಿಧಾನವೂ ಈ ಆತಂಕಕ್ಕೆ ಇನ್ನಷ್ಟು ಇಂಬು ನೀಡಿದೆ. ಕರ್ನಾಟಕದಲ್ಲಿ, ASDDO ವರ್ಗಗಳ ಅಡಿಯಲ್ಲಿ ಸುಮಾರು 1.08 ಕೋಟಿ ಮತದಾರರನ್ನು ಕರಡು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. ಇದರಲ್ಲಿ ಬೆಂಗಳೂರಿನಲ್ಲೇ 46.88 ಲಕ್ಷ ಮತದಾರರು ಸೇರಿದ್ದಾರೆ. ಇದಲ್ಲದೆ, “ತಾರ್ಕಿಕ ವ್ಯತ್ಯಾಸಗಳು” (logical discrepancies) ಅಥವಾ “ಮ್ಯಾಪಿಂಗ್” ಕೊರತೆಯ ಕಾರಣದಿಂದ 43.8 ಲಕ್ಷ ಮತದಾರರಿಗೆ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತರು ಸಮಾನರಲ್ಲಿ ಮೊದಲಿಗರು (first among equals), ಆದರೆ ಚುನಾವಣಾ ಆಯೋಗಕ್ಕಿಂತ ಮೇಲಿನವರಲ್ಲ. ಚುನಾವಣಾ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವಂತಹ ನಿರ್ಧಾರಗಳನ್ನು ಇತರ ಇಬ್ಬರು ಆಯುಕ್ತರ ಅಭಿಪ್ರಾಯವನ್ನು (ಬಹುಮತದ ನಿರ್ಧಾರವನ್ನು) ಬದಿಗೊತ್ತಿ ತೆಗೆದುಕೊಳ್ಳಲಾಗಿದ್ದರೆ, ಅದು ಕಾನೂನಿನಲ್ಲಿ ಹೇಳಲಾಗಿರುವ ಸಾಮೂಹಿಕ ನಿರ್ಧಾರ ಕೈಗೊಳ್ಳುವಿಕೆಯ ಮೂಲ ತತ್ವಕ್ಕೆ ವಿರುದ್ಧವಾದುದ್ದು. ಹಾಗೆಯೇ ಈ ಕುರಿತು ಸ್ವತಂತ್ರ ಪರಿಶೀಲನೆ ನಡೆಯಬೇಕೆಂಬ ಅಗತ್ಯವನ್ನು ಸಹ ಒತ್ತಿಹೇಳುತ್ತದೆ ಎಂದು ತಿಳಿಸಿದ್ದಾರೆ.

ಇದರಿಂದ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮತ್ತು ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆಯ ಮೇಲೆ ಜನರು ಇಟ್ಟಿರುವ ನಂಬಿಕೆಗೆ ಅಪಾರ ಹಾನಿಯಾಗಿದೆ. ಆ ನಂಬಿಕೆಯನ್ನು ಪುನರ್‌ ಸ್ಥಾಪಿಸುವ ಕಾರ್ಯ ಈಗಲೇ ಆರಂಭವಾಗಬೇಕು.

ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ಕಾರ್ಯವೈಖರಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಅವರ ನೇತೃತ್ವದಲ್ಲಿ ತೆಗೆದುಕೊಳ್ಳಲಾದ ನಿರ್ಧಾರಗಳ ಕುರಿತು ಇಂತಹ ಗಂಭೀರ ಪ್ರಶ್ನೆಗಳು ಉದ್ಭವವಾಗಿರುವ ಸಂದರ್ಭದಲ್ಲಿ, ಅವರು ತಮ್ಮ ಹುದ್ದೆಯಲ್ಲಿ ಮುಂದುವರಿಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎನ್ನುವುದು ನನ್ನ ಭಾವನೆ.

ಈ ಕೂಡಲೇ ಜ್ಞಾನೇಶ್ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರ ಹುದ್ದೆಯಿಂದ ವಜಾಗೊಳಿಸಬೇಕು ಮತ್ತು ಈ ವಿಚಾರವನ್ನು ಸ್ವತಂತ್ರ ಹಾಗೂ ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ದೇಶದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತು ನಮ್ಮ ಪ್ರಜಾಪ್ರಭುತ್ವದ ಮೇಲಿರುವ ನಂಬಿಕೆಯ ವಿಚಾರಗಳಲ್ಲಿ ರಾಜಿಯಾಗಬಾರದು ಎಂದು ಡಿಸಿಎಂ ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular