HomeEntertainmentThe Paradise Review: ನಿರ್ದೇಶಕನ ಹಲವು ಮಿಸ್ಟೇಕ್ಸ್, ಪ್ಯಾರಡೈಸ್ ಪವರ್‌ಲೆಸ್!

The Paradise Review: ನಿರ್ದೇಶಕನ ಹಲವು ಮಿಸ್ಟೇಕ್ಸ್, ಪ್ಯಾರಡೈಸ್ ಪವರ್‌ಲೆಸ್!

ಸತತವಾಗಿ ಆರೇಳು ಯಶಸ್ವಿ ಚಿತ್ರಗಳನ್ನು ನೀಡಿ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದ, ಒಳ್ಳೆಯ ಕಥೆಗಳನ್ನು ಆರಿಸುವುದನ್ನು ಇವರನ್ನು ನೋಡಿ ಕಲಿಯಬೇಕು ಎನಿಸಿಕೊಂಡಿದ್ದ ನಟ ನಾನಿ ನಟನೆಯ ಬಹು ನಿರೀಕ್ಷಿತ ಚಿತ್ರ ‘ದಿ ಪ್ಯಾರಡೈಸ್’ ಇಂದು ( ಸೆಪ್ಟೆಂಬರ್ 24 ) ತೆರೆಗೆ ಬಂದಿದ್ದು, ನಟನ ಸಕ್ಸರ್ ಓಟ ಮುಂದುವರಿಯಲಿದೆಯಾ ಎಂಬ ಸಿನಿ ರಸಿಕರ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಇನ್ನು ಇಂದು ಬಿಡುಗಡೆಯಾಗಿರುವ ಈ ಚಿತ್ರದ ಪ್ರೀಮಿಯರ್ ಶೋಗಳು ನಿನ್ನೆ ರಾತ್ರಿಯೇ ನಡೆದಿದ್ದು, ದೇಶದ ವಿವಿಧ ನಗರಗಳಲ್ಲಿ ಪ್ರೇಕ್ಷಕರು ಹಾಗೂ ಅಭಿಮಾನಿಗಳು ಚಿತ್ರವನ್ನು ವೀಕ್ಷಿಸಿದ್ದಾರೆ. ಪ್ರೀಮಿಯರ್ ಶೋಗಳು ಮುಗಿಯುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2023ರಲ್ಲಿ ನಾನಿಗೆ ದಸರಾ ಎಂಬ ಚಿತ್ರವನ್ನು ನಿರ್ದೇಶಿಸಿ ಪರವಾಗಿಲ್ಲ ಎಂಬ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದ ನಿರ್ದೇಶಕ ಶ್ರೀಕಾಂತ್ ಒಡೆಲಾ ಅವರೇ ಈ ಪ್ಯಾರಡೈಸ್ ಚಿತ್ರಕ್ಕೂ ಸಹ ನಿರ್ದೇಶನ ಮಾಡಿದ್ದು, ಈ ಬಾರಿ ಪರವಾಗಿಲ್ಲ ಅಲ್ಲ ಏನೂ ಇಲ್ಲ ಎಂಬಂತೆ ವಿಫಲರಾಗಿದ್ದಾರೆ. ಚಿತ್ರದಲ್ಲಿನ ನ್ಯೂನತೆಗಳನ್ನು ಪತ್ತೆಹಚ್ಚಿ ಸರಿಪಡಿಸಬೇಕಾದ ನಿರ್ದೇಶಕನೇ ಇಲ್ಲಿ ಹಲವಾರು ತಪ್ಪುಗಳನ್ನು ಮಾಡಿದ್ದಾರೆ. ಮೊದಲಿಗೆ ನಾನಿ ಇಲ್ಲಿ ತುಳಿತಕ್ಕೊಳಗಾದ ಗುಂಪಿನ ನಾಯಕನಾಗಿ ಕಾಣಿಸಿಕೊಂಡಿದ್ದು, ಹಲವು ಕಡೆ ಪಾತ್ರ ನಾಯಕನಿಗೆ ಬೇಕಾದ ಗಟ್ಟಿತನವನ್ನು ಹೊಂದಿಲ್ಲ ಎನಿಸುತ್ತದೆ. ಅಲ್ಲದೇ ತಾಯಿ ಹಾಗೂ ಮಗನ ನಡುವಿನ ಎಮೋಷನಲ್ ಸಂದರ್ಭಗಳು ಸಹ ಎಲ್ಲೂ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವಂತಿಲ್ಲ. ನಾಯಕ ಹಾಗೂ ನಾಯಕಿಯ ಲವ್‌ ಟ್ರ್ಯಾಕ್ ಅಂತೂ ನೀರಸ. ಒಟ್ಟಿನಲ್ಲಿ ಚಿತ್ರದ ಯಾವ ಪಾತ್ರವೂ ಪ್ರಭಾವ ಬೀರುವಂತಿಲ್ಲದೇ ಇರುವುದು ಹಾಗೂ ಚಿತ್ರಕಥೆಯಲ್ಲಿ ಗಟ್ಟಿತನ ಇಲ್ಲದೇ ಇರುವುದು ಪ್ಯಾರಡೈಸ್‌ನ ದೊಡ್ಡ ಮೈನಸ್.

ಮೊದಲಾರ್ಧದಲ್ಲಿ ನಾಯಕನ ಎಂಟ್ರಿ ಅಭಿಮಾನಿಗಳಿಗೆ ಮಾತ್ರ ಕಿಕ್ ಕೊಡುವಂತಿದ್ದು, ಇನ್ನುಳಿದ ದೃಶ್ಯಗಳಲ್ಲಿ ಯಾವುದೂ ಸಹ ವಾವ್ ಎನಿಸುವಂತಿಲ್ಲ. ಚಿತ್ರದ ಮಧ್ಯಂತರ ಬಹುತೇಕ ಎಲ್ಲರಿಗೂ ಮೆಚ್ಚುಗೆಯಾಗಲಿದೆ. ಆದರೆ ನೋಡುಗರಲ್ಲಿ ಮುಂದೇನು ಎಂಬ ಕುತೂಹಲ ಹುಟ್ಟುಹಾಕುವುದೇ ಇಲ್ಲ. ಇನ್ನು ಮೊದಲಾರ್ಧದಲ್ಲಿ ನಾಯಕ ಕೊಟ್ಟ ಉತ್ತರಕ್ಕೆ ಖಳನಾಯಕ ತಿರುಗಿಬಿದ್ದು, ಪ್ರತ್ಯುತ್ತರ ಕೊಡಲು ಮುಂದಾಗಲಿದ್ದು, ಅದು ಯಾವ ಹಂತಕ್ಕೆ ಹೋಗಲಿದೆ ಎಂಬುದೇ ದ್ವಿತೀಯಾರ್ಧ.

ಇನ್ನು ನಾಯಕ ( ಜಡಲ್ ) ಬಾಲ್ಯದಲ್ಲಿ ತನ್ನ ತಾಯಿಯಿಂದಾಗಿ ಖಳನಾಯಕನಿಂದ ತನಗಾದ ಅವಮಾನದಿಂದ ತನ್ನ ಗ್ರಾಮ ಬಿಟ್ಟು ಕಣ್ಮರೆಯಾಗಿ ಪ್ರಕರಣವೊಮದರಲ್ಲಿ ಜೈಲು ಸೇರುತ್ತಾನೆ. ನಾಯಕ ತನ್ನ ಗರ್ಭದಲ್ಲೇ ಇರುವಾಗಲೇ ತನ್ನ ಸಮುದಾಯದವರಿಗೆ ಸರ್ಕಾರದಿಂದ ಗುರುತಿನ ಪತ್ರ ತರಬೇಕು ಎಂದು ಪ್ರತಿಭಟಿಸುತ್ತಾ ಬರುವ ತಾಯಿ ( ಸಮ್ಮಕ್ಕ ) ಮತ್ತೊಂದೆಡೆ. ನಾಯಕ ಮರಳಿ ಬಂದಾಗ ಪ್ರತಿಭಟನೆ ಬಿಟ್ಟು ದನಿ ಎತ್ತಿ ಕೇಳಿ ಗುರುತು ಪಡೆಯೋಣ ಎಂದು ತಾಯಿಯ ಹೊರತು ಪ್ರತ್ಯೇಕ ಹೊಡೆದಾಟದ ಪ್ರತಿಭಟನೆಯನ್ನು ಆರಂಭಿಸುತ್ತಾನೆ. ಮಗ ದೊಡ್ಡವನಾದರೂ ದ್ವೇಷ ಸಾಧಿಸುವ ಮಟ್ಟಕ್ಕೆ ತಾಯಿ ಮಾಡಿದ ತಪ್ಪಾದರೂ ಏನು, ನಾಯಕ ಹಾಗೂ ತಾಯಿ ಪತ್ಯೇಕವಾಗಿ ನಡೆಸುವ ಈ ಗುರುತಿನ ಹೋರಾಟದಲ್ಲಿ ಗೆಲ್ಲುತ್ತಾರಾ ಎಂಬುದೇ ಚಿತ್ರದ ಕಥೆ.

ಚಿತ್ರದಲ್ಲಿ ಮೊದಲೇ ಹೇಳಿದಂತೆ ಹಲವಾರು ನ್ಯೂನತೆಗಳಿದ್ದು, ಎಡಿಟಿಂಗ್‌ನಲ್ಲಿ ಹಲವು ತಪ್ಪುಗಳು ಕಾಣಸಿಗಲಿವೆ. ಎಐ ಯುಗದಲ್ಲೂ ಸಹ ಇಷ್ಟು ಕೆಟ್ಟ ಗ್ರಾಫಿಕ್ಸ್ ಯಾಕೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕುವ ಮಟ್ಟಕ್ಕೆ ಎಡಿಟಿಂಗ್ ಇದೆ. ಚಿತ್ರ ಪರವಾಗಿಲ್ಲ ಆದ್ರೂ ಅನಿರುದ್ಧ್ ಬಿಜಿಎಂ ಮಾತ್ರ ಚಿಂದಿ ಎನ್ನುವ ಹಾಗೆ ಇರುತ್ತಿದ್ದ ಸಂಗೀತ ಈ ಚಿತ್ರದಲ್ಲಿ ಅದೂ ಸಹ ಕೈಕೊಟ್ಟಿದೆ. ಆಯಾ ಶೇರ್ ಹಾಗೂ ಯೇಶನಗುಲ ಹಾಡುಗಳು ಮೊದಲೇ ಹಿಟ್ ಆಗಿದ್ದು, ಚಿತ್ರಮಂದಿರದಲ್ಲಿ ನೀರಸವಾಗಿ ಸಾಗುವ ಕಥೆ ಮಧ್ಯೆ ಅವುಗಳೇ ಮನರಂಜನೆ. ಚಿತ್ರದ ವಸ್ತ್ರ ವಿನ್ಯಾಸ ಸಹ ಕೆಲವೆಡೆ ಕಳಪೆ ಎನಿಸಿದ್ದು, ಅವು ದೃಶ್ಯದ ಗಂಭೀರತೆಯನ್ನೇ ಹಾಳುಮಾಡಿವೆ ಹಾಗೂ ಪಾತ್ರಗಳ ನಟನೆಯ ತೂಕವನ್ನು ತಗ್ಗಿಸಿಬಿಟ್ಟಿವೆ. ಖಳನಾಯಕ ತನ್ನ ಮಗನಿಗೆ ಕತ್ತಿ ಎಸೆಯುವ ದೃಶ್ಯ ಹಾಗೂ ನಾಯಕ ಮಗುವನ್ನು ಕ್ರಿಕೆಟ್ ಚೆಂಡಿನ ಹಾಗೆ ಹಿಡಿಯುವ ದೃಶ್ಯ 2010ರ ಕಾಲಘಟ್ಟದ ಸಿನಿಮಾಗಳನ್ನು ನೆನಪಿಸುವಂತಿದ್ದು, ಇಷ್ಟೆಲ್ಲ ನ್ಯೂನತೆಗಳಿದ್ದರೂ ನಿರ್ದೇಶಕ ಸರಿಪಡಿಸದಿರುವುದು ಚಿತ್ರಕ್ಕೆ ಮಹಾ ಮೈನಸ್ ಆಗಿದೆ. ನಾನಿ ಸಿನಿ ಕೆರಿಯರ್‌ನಲ್ಲಿ ಇಷ್ಟು ನೆಗೆಟಿವ್ ಅಂಶಗಳುಳ್ಳ ಸಿನಿಮಾಗಳ ಪಟ್ಟಿ ಮಾಡಿದರೆ ಪ್ಯಾರಡೈಸ್ ಟಾಪ್ 1 ಸ್ಥಾನ ಗಿಟ್ಟಿಸಿಕೊಳ್ಳುವದರಲ್ಲಿ ಯಾವುದೇ ಅನುಮಾನವಿಲ್ಲ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular