HomeKarnatakaBREAKING : ಬರಪೀಡಿತ ತಾಲೂಕಿನ ಪ್ರತಿ ರೈತನ ಖಾತೆಗೆ ₹2,500 ಜಮಾ.! ರಾಜ್ಯ ಸರ್ಕಾರದಿಂದ ಮಹತ್ವದ...

BREAKING : ಬರಪೀಡಿತ ತಾಲೂಕಿನ ಪ್ರತಿ ರೈತನ ಖಾತೆಗೆ ₹2,500 ಜಮಾ.! ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ

ಬೆಂಗಳೂರು: ಕರ್ನಾಟಕದಲ್ಲಿ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಕ್ಷಣದ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಬರಪೀಡಿತ ತಾಲೂಕುಗಳ ಪ್ರತಿ ರೈತನ ಖಾತೆಗೆ ತಲಾ ₹2,500 ನೆರವು ಜಮಾ ಮಾಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ.

ಕೇಂದ್ರ ಸರ್ಕಾರದಿಂದ ಬರ ಪರಿಹಾರದ ಹಣ ಬಿಡುಗಡೆಯಾಗುವುದನ್ನು ಕಾಯದೆ, ರಾಜ್ಯ ಸರ್ಕಾರವೇ ತನ್ನ ಸಂಪನ್ಮೂಲಗಳಿಂದ ರೈತರಿಗೆ ತಾತ್ಕಾಲಿಕ ನೆರವು ನೀಡಲು ಮುಂದಾಗಿದೆ ಎನ್ನಲಾಗಿದೆ. ಈ ಕುರಿತು ಶೀಘ್ರದಲ್ಲೇ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.ಇದು ರೈತರಿಗೆ ಒಂದೇ ಬಾರಿಗೆ ನೀಡುವ ₹2,500 ಆರ್ಥಿಕ ನೆರವಾಗಿದ್ದು, ಬರ ಹಾಗೂ ಸಂಕಷ್ಟದಿಂದ ತೊಂದರೆಗೊಳಗಾಗಿರುವ ರೈತರಿಗೆ ಸರ್ಕಾರದ ಕಡೆಯಿಂದ ತಾತ್ಕಾಲಿಕ ಸಾಂತ್ವನದ ನೆರವಾಗಲಿದೆ.ಸದ್ಯ, 40 ಲಕ್ಷ ರೈತರಿಗೆ ಹಣ ಜಮೆಯಾಗಲಿದ್ದು, ಆರಂಭಿಕ ಹಂತದಲ್ಲಿ ಸರ್ಕಾರ 2500 ರೂ ಜಮೆ ಮಾಡಲಿದೆ. ಕೇಂದ್ರದಿಂದ ಹಣಕಾಸಿನ ನೆರವು ಬಂದ ಬಳಿಕ ಮತ್ತೆ ಸರ್ಕಾರ ಹಣ ಹಾಕಲಿದೆ.

 ಕೇಂದ್ರದ ಹಣ ಬಂದ ಬಳಿಕವೂ ನೆರವು?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯ ಸರ್ಕಾರದಿಂದ ₹2,500 ನೆರವು ನೀಡಿದ ಬಳಿಕ ಕೇಂದ್ರ ಸರ್ಕಾರದಿಂದ ಬರ ಪರಿಹಾರದ ಹಣ ಬಿಡುಗಡೆಯಾದರೆ, ನಿಯಮಾನುಸಾರ ರೈತರಿಗೆ ಮತ್ತಷ್ಟು ಪರಿಹಾರ ನೀಡುವ ಸಾಧ್ಯತೆಯ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.

ಈ ಪ್ರಸ್ತಾವನೆಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಸಂಪುಟದ ಒಪ್ಪಿಗೆ ದೊರೆತ ಬಳಿಕ ಅರ್ಹ ರೈತರ ಸಂಖ್ಯೆ, ಹಣಕಾಸಿನ ಒಟ್ಟು ಹೊರೆ ಹಾಗೂ ಹಣ ಜಮಾ ಮಾಡುವ ಪ್ರಕ್ರಿಯೆ ಸೇರಿದಂತೆ ವಿವರಗಳನ್ನು ಸರ್ಕಾರ ಪ್ರಕಟಿಸುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ಹೊಡೆತ ಬಿದ್ದಿರುವ ಸಂದರ್ಭದಲ್ಲಿ ಸರ್ಕಾರದ ಈ ನಿರ್ಧಾರ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡುವ ಉದ್ದೇಶ ಹೊಂದಿದೆ.

*ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಲ್ಲಿ 1 ಗಂಟೆ ಕಡಿತ

ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರಗೊಂಡಿರುವ ಬೆನ್ನಲ್ಲೇ ವಿದ್ಯುತ್ ಕೊರತೆಯೂ ಎದುರಾಗಿದ್ದು, ಕೃಷಿ ಪಂಪ್‌ಸೆಟ್‌ಗಳಿಗೆ ನೀಡಲಾಗುತ್ತಿದ್ದ ವಿದ್ಯುತ್ ಪೂರೈಕೆಯಲ್ಲಿ ಒಂದು ಗಂಟೆ ಕಡಿತಗೊಳಿಸಲು ಸರ್ಕಾರ ನಿರ್ಧರಿಸಿದೆ. ಈ ಹಿಂದೆ 7 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದ್ದು, ಇನ್ನು ಮುಂದೆ 6 ಗಂಟೆ ಮಾತ್ರ ವಿದ್ಯುತ್ ನೀಡಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಬುಧವಾರ ನಡೆದ ಬರದ ಮೇಲಿನ ಚರ್ಚೆ ವೇಳೆ ಮಾತನಾಡಿದ ಸಚಿವರು, ರಾಜ್ಯದ ವಿದ್ಯುತ್ ಬೇಡಿಕೆ ಸದ್ಯ 20,000 ಮೆಗಾವ್ಯಾಟ್‌ಗಿಂತ ಹೆಚ್ಚಾಗಿದೆ. ಆದರೆ ಅದಕ್ಕೆ ಅನುಗುಣವಾಗಿ ಹೆಚ್ಚುವರಿ ವಿದ್ಯುತ್ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ಪೂರೈಕೆಯಲ್ಲಿ ಒಂದು ಗಂಟೆ ಕಡಿತ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ಹೊರರಾಜ್ಯಗಳಿಂದ ವಿದ್ಯುತ್ ಖರೀದಿ

ವಿದ್ಯುತ್ ಕೊರತೆ ನೀಗಿಸಲು ಹೊರರಾಜ್ಯಗಳಿಂದ ವಿನಿಮಯ ಆಧಾರದ ಮೇಲೆ ವಿದ್ಯುತ್ ಖರೀದಿಸಲಾಗುತ್ತಿದೆ. ಒಪ್ಪಂದದ ಪ್ರಕಾರ ಈ ತಿಂಗಳ ಅಂತ್ಯದವರೆಗೆ ಹರಿಯಾಣ, ಪಂಜಾಬ್, ಛತ್ತೀಸ್‌ಗಢ ಹಾಗೂ ಉತ್ತರ ಪ್ರದೇಶಕ್ಕೆ ವಿದ್ಯುತ್ ಹಿಂತಿರುಗಿಸಬೇಕಿದೆ. ಬಳಿಕ ರಾಜ್ಯದ ವಿದ್ಯುತ್ ಪೂರೈಕೆ ಪರಿಸ್ಥಿತಿ ಸ್ವಲ್ಪ ಸುಧಾರಿಸುವ ನಿರೀಕ್ಷೆಯಿದೆ ಎಂದು ಸಚಿವರು ತಿಳಿಸಿದರು.

ಬರದ ಪರಿಣಾಮ ಜಲವಿದ್ಯುತ್ ಉತ್ಪಾದನೆಯೂ ಕುಸಿದಿದೆ. ಆದರೆ ಸೌರ ಮತ್ತು ಪವನ ವಿದ್ಯುತ್‌ನಿಂದ ಹಗಲಿನ ವೇಳೆಯಲ್ಲಿ ಹೆಚ್ಚಿನ ಸಮಸ್ಯೆಯಾಗುತ್ತಿಲ್ಲ ಎಂದು ಸಚಿವರು ಹೇಳಿದರು.

ಠೇವಣಿ ಕಟ್ಟದ ಐಪಿ ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಡಿತ

ಅಕ್ರಮ ಸಕ್ರಮ ಯೋಜನೆಯಡಿ ಒಟ್ಟು 4.5 ಲಕ್ಷ ಕೃಷಿ ಪಂಪ್‌ಸೆಟ್‌ಗಳ ಪೈಕಿ 3.50 ಲಕ್ಷ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲಾಗಿದೆ. ನಿಗದಿತ ಠೇವಣಿ ಪಾವತಿಸದ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು. ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೆ.ಜೆ. ಜಾರ್ಜ್ ಎಚ್ಚರಿಕೆ ನೀಡಿದ್ದಾರೆ.

ರೈತರಿಗೆ ತೊಂದರೆ: ಬಿಜೆಪಿ ಸದಸ್ಯರ ಆಕ್ಷೇಪ

ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿದಿನ ಕೇವಲ 3ರಿಂದ 4 ಗಂಟೆ ಮಾತ್ರ ವಿದ್ಯುತ್ ಸಿಗುತ್ತಿರುವುದರಿಂದ ರೈತರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಬಿಜೆಪಿ ಸದಸ್ಯ ಪಿ.ಹೆಚ್. ಪೂಜಾರ್ ವಿಧಾನ ಪರಿಷತ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.

ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಬರದ ತೀವ್ರತೆ ಹೆಚ್ಚಿದ್ದು, ವಿದ್ಯುತ್ ಪರಿವರ್ತಕ (ಟಿಸಿ) ದುರಸ್ತಿಗಾಗಿ ರೈತರು ತಿಂಗಳುಗಟ್ಟಲೆ ಅಲೆದಾಡುವ ಪರಿಸ್ಥಿತಿ ಇದೆ ಎಂದು ಬಿಜೆಪಿ ಸದಸ್ಯ ಚಿದಾನಂದ ಗೌಡ ಹೇಳಿದರು. ಸಂಜೆ 4ರಿಂದ ರಾತ್ರಿ 9ರವರೆಗೆ ವಿದ್ಯುತ್ ಪೂರೈಕೆ ಕಡಿತಗೊಳಿಸಬಾರದು ಎಂದು ಅವರು ಮನವಿ ಮಾಡಿದರು.

ಟಿಸಿ ಬದಲಾವಣೆಗೆ ವ್ಯವಸ್ಥೆ

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜಾರ್ಜ್, ರಾಜ್ಯದಲ್ಲಿ ವಿದ್ಯುತ್ ಪರಿವರ್ತಕಗಳ ಬ್ಯಾಂಕ್ ಸ್ಥಾಪಿಸಲಾಗಿದೆ. ನಗರ ಪ್ರದೇಶಗಳಲ್ಲಿ 24 ಗಂಟೆಯೊಳಗೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 72 ಗಂಟೆಯೊಳಗೆ ದೋಷಗೊಂಡ ಟ್ರಾನ್ಸ್‌ಫಾರ್ಮರ್‌ಗಳನ್ನು ಬದಲಾಯಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.ಕೃಷಿ ಪಂಪ್‌ಸೆಟ್‌ಗಳಿಗೆ ನೀಡಲಾಗುತ್ತಿರುವ ಉಚಿತ ವಿದ್ಯುತ್ ಸಬ್ಸಿಡಿಗೆ ಸರ್ಕಾರ ವಾರ್ಷಿಕ ಸುಮಾರು ₹24,000 ಕೋಟಿ ವೆಚ್ಚ ಮಾಡುತ್ತಿದೆ ಎಂದು ಸಚಿವರು ಹೇಳಿದರು.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular