HomeKarnatakaBREAKING: ರಾಜ್ಯದ 29 ತಾಲೂಕುಗಳು ಹೊಸದಾಗಿ ಬರಪೀಡಿತ ಪಟ್ಟಿಗೆ ಸೇರ್ಪಡೆ: ಒಟ್ಟು ಸಂಖ್ಯೆ 217ಕ್ಕೆ ಏರಿಕೆ

BREAKING: ರಾಜ್ಯದ 29 ತಾಲೂಕುಗಳು ಹೊಸದಾಗಿ ಬರಪೀಡಿತ ಪಟ್ಟಿಗೆ ಸೇರ್ಪಡೆ: ಒಟ್ಟು ಸಂಖ್ಯೆ 217ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಮುಂದುವರಿದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತೊಂದು ಹಂತದಲ್ಲಿ 29 ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ 217ಕ್ಕೆ ಏರಿಕೆಯಾಗಿದೆ.

ರಾಜ್ಯ ಸರ್ಕಾರವು ಹಂತ ಹಂತವಾಗಿ ಬರಪೀಡಿತ ತಾಲೂಕುಗಳನ್ನು ಗುರುತಿಸಿ ಪಟ್ಟಿಗೆ ಸೇರ್ಪಡೆ ಮಾಡುತ್ತಿದೆ. ಇದುವರೆಗೆ ಐದು ಹಂತಗಳಲ್ಲಿ ತಾಲೂಕುಗಳನ್ನು ಬರಪೀಡಿತ ಎಂದು ಗುರುತಿಸಲಾಗಿದೆ. ರಾಜ್ಯ ಸರ್ಕಾರ ಮತ್ತೊಂದು ಹಂತದಲ್ಲಿ ಇಂಡಿ ಸೇರಿದಂತೆ 29 ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸಿದೆ

ಹಂತವಾರು ಬರಪೀಡಿತ ತಾಲೂಕುಗಳು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • ಮೊದಲ ಹಂತ: 101 ತಾಲೂಕುಗಳು

  • 2ನೇ ಹಂತ: 23 ತಾಲೂಕುಗಳು

  • 3ನೇ ಹಂತ: 53 ತಾಲೂಕುಗಳು

  • 4ನೇ ಹಂತ: 11 ತಾಲೂಕುಗಳು

  • 5ನೇ ಹಂತ: 29 ತಾಲೂಕುಗಳು

ಈ ಐದು ಹಂತಗಳಲ್ಲಿ ಒಟ್ಟು 217 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗಿವೆ.ಮಳೆ ಕೊರತೆ ಹಾಗೂ ಬೆಳೆ ಹಾನಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಬರಪೀಡಿತ ತಾಲೂಕುಗಳ ಘೋಷಣೆಯಿಂದ ಸರ್ಕಾರದ ನಿಯಮಾನುಸಾರ ಬರ ಪರಿಹಾರ ಹಾಗೂ ಕೃಷಿ ಸಂಬಂಧಿತ ನೆರವು ದೊರೆಯುವ ನಿರೀಕ್ಷೆಯಿದೆ.

ತಾಲೂಕುಗಳಲ್ಲಿನ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ, ಅರ್ಹತೆ ಮತ್ತು ಸರ್ಕಾರದ ಮಾರ್ಗಸೂಚಿಗಳ ಅನ್ವಯ ಮುಂದಿನ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

*ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ

ಕರ್ನಾಟಕದಲ್ಲಿ ಉಲ್ಬಣಗೊಳ್ಳುತ್ತಿರುವ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಕೇಂದ್ರ ಸರ್ಕಾರದಿಂದ ತಕ್ಷಣದ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಈಗಾಗಲೇ 177 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಸೆಪ್ಟೆಂಬರ್ 10ರಂದು ಸಲ್ಲಿಸಿದ್ದ ಖಾರಿಫ್‌-2026ರ ಬರ ಜ್ಞಾಪನ ಪತ್ರದಲ್ಲಿ ಆರಂಭದಲ್ಲಿ 101 ಬರಪೀಡಿತ ತಾಲೂಕುಗಳಿಗೆ ₹3,705.30 ಕೋಟಿ ಆರ್ಥಿಕ ನೆರವು ಕೋರಲಾಗಿತ್ತು. ಬಳಿಕ ವೈಜ್ಞಾನಿಕ ಮೌಲ್ಯಮಾಪನದ ಆಧಾರದ ಮೇಲೆ ಹೆಚ್ಚುವರಿಯಾಗಿ 76 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಒಟ್ಟು ಸಂಖ್ಯೆ 177ಕ್ಕೆ ತಲುಪಿದೆ ಎಂದು ಡಿಕೆಶಿ ತಿಳಿಸಿದ್ದಾರೆ.

200ಕ್ಕೂ ಹೆಚ್ಚು ತಾಲೂಕು ಬರಪೀಡಿತವಾಗುವ ಸಾಧ್ಯತೆ

ನೈಋತ್ಯ ಮುಂಗಾರು ಅಂತ್ಯದ ವೇಳೆಗೆ ರಾಜ್ಯದಲ್ಲಿ 200ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಪತ್ರದಲ್ಲಿ ಹೇಳಿದ್ದಾರೆ. ಹೆಚ್ಚುವರಿಯಾಗಿ ಬರಪೀಡಿತ ಎಂದು ಘೋಷಿಸಿರುವ ತಾಲೂಕುಗಳಲ್ಲಿನ ನಷ್ಟ ಮತ್ತು ಹಾನಿಯ ಮೌಲ್ಯಮಾಪನ ಪ್ರಸ್ತುತ ನಡೆಯುತ್ತಿದ್ದು, ಮೌಲ್ಯಮಾಪನ ಪೂರ್ಣಗೊಂಡ ಬಳಿಕ ಎನ್‌ಡಿಆರ್‌ಎಫ್ (NDRF) ಅಡಿಯಲ್ಲಿ ಹೆಚ್ಚುವರಿ ನೆರವು ಕೋರಿ ಮತ್ತೊಂದು ಜ್ಞಾಪನ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಮಳೆ ಕೊರತೆಯಿಂದ ಕೃಷಿ, ನೀರು, ಜಾನುವಾರುಗಳಿಗೆ ಸಂಕಷ್ಟ

ಜೂನ್‌ನಿಂದ ಆಗಸ್ಟ್‌ವರೆಗೆ ಸುರಿಯುವ ಮಳೆ ಖಾರಿಫ್‌ ಕೃಷಿ ಮಾತ್ರವಲ್ಲದೆ ಜಲಾಶಯಗಳ ಮರುಪೂರಣ, ಜಲವಿದ್ಯುತ್ ಉತ್ಪಾದನೆ, ಮೇವಿನ ಲಭ್ಯತೆ ಹಾಗೂ ಅಂತರ್ಜಲ ಮರುಪೂರಣಕ್ಕೂ ಪ್ರಮುಖವಾಗಿದೆ. ಆದರೆ ಪ್ರಸಕ್ತ ಮುಂಗಾರು ಅವಧಿಯಲ್ಲಿನ ಗಣನೀಯ ಮಳೆ ಕೊರತೆಯಿಂದ ಈ ಎಲ್ಲ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದೆ ಎಂದು ಡಿಕೆಶಿ ಹೇಳಿದ್ದಾರೆ.

ವಿಶೇಷವಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿನ ಜಲಾಶಯಗಳ ನೀರಿನ ಸಂಗ್ರಹ ಕಡಿಮೆಯಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದು ಮುಂದಿನ ತಿಂಗಳುಗಳಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಕುಡಿಯುವ ನೀರಿನ ಲಭ್ಯತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಎಚ್ಚರಿಸಿದ್ದಾರೆ.

40 ಲಕ್ಷ ಹೆಕ್ಟೇರ್‌ಗೂ ಅಧಿಕ ಬೆಳೆ ಹಾನಿ ಸಾಧ್ಯತೆ

ಮಳೆ ಮತ್ತು ಮಣ್ಣಿನ ತೇವಾಂಶದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟರೆ 40 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಡಿಕೆಶಿ ಪತ್ರದಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬರ ಪರಿಸ್ಥಿತಿ ಮುಂದಿನ ತಿಂಗಳುಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ಶೇ.50ರಷ್ಟು ಹಣವನ್ನು ಮಧ್ಯಂತರ ನೆರವಾಗಿ ಬಿಡುಗಡೆಗೆ ಮನವಿ

ಬರ ಪರಿಸ್ಥಿತಿಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು, ನಿಗದಿತ ಮೌಲ್ಯಮಾಪನ ಮತ್ತು ಅನುಮೋದನೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಬರ ಜ್ಞಾಪನ ಪತ್ರದಲ್ಲಿ ಕೋರಿರುವ ಮೊತ್ತದ ಶೇ.50ರಷ್ಟನ್ನು ಮಧ್ಯಂತರ ಆರ್ಥಿಕ ನೆರವಿನ ರೂಪದಲ್ಲಿ ಬಿಡುಗಡೆ ಮಾಡುವಂತೆ ಪ್ರಧಾನಿ ಮೋದಿಗೆ ಡಿಕೆಶಿ ಮನವಿ ಮಾಡಿದ್ದಾರೆ.

ಈ ನೆರವಿನಿಂದ ಬೆಳೆ ನಷ್ಟಕ್ಕೆ ಇನ್‌ಪುಟ್ ಸಬ್ಸಿಡಿ, ಕುಡಿಯುವ ನೀರಿನ ಪೂರೈಕೆ, ಜಾನುವಾರುಗಳ ರಕ್ಷಣೆ ಹಾಗೂ ಇತರ ಅಗತ್ಯ ಬರ ಪರಿಹಾರ ಕ್ರಮಗಳನ್ನು ತಕ್ಷಣ ಕೈಗೊಳ್ಳಲು ರಾಜ್ಯಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

SDRF ಎರಡನೇ ಕಂತಿನ ಕೇಂದ್ರದ ಪಾಲು ಮುಂಗಡವಾಗಿ ಬಿಡುಗಡೆಗೆ ಮನವಿ

ಇದರ ಜೊತೆಗೆ ರಾಜ್ಯ ವಿಪತ್ತು ಪ್ರತಿಕ್ರಿಯಾ ನಿಧಿ (SDRF)ಯ ಎರಡನೇ ಕಂತಿನ ಕೇಂದ್ರದ ಪಾಲನ್ನು ಮುಂಗಡವಾಗಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ಇದರಿಂದ ಬರಪೀಡಿತ ಪ್ರದೇಶಗಳಲ್ಲಿ ತ್ವರಿತ ಹಾಗೂ ಪರಿಣಾಮಕಾರಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ರಾಜ್ಯದ ಲಭ್ಯ ಸಂಪನ್ಮೂಲಗಳು ಹೆಚ್ಚಲಿವೆ ಎಂದು ಅವರು ತಿಳಿಸಿದ್ದಾರೆ.

  ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಡಿ ಸೌಲಭ್ಯ ನೀಡಲು ಅರ್ಜಿ ಆಹ್ವಾನ

ಕರ್ನಾಟಕ ಮಹಿರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ವತಿಯಿಂದ 2026-27 ನೇ ಸಾಲಿಗೆ ಅರ್ಹ ಅಭ್ಯರ್ಥಿಗಳಿಂದ ವಿವಿಧ ಯೋಜನೆಗಳಡಿ ಸೌಲಭ್ಯ ನೀಡಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಸ್ವಯಂ ಉದ್ಯೋಗ ಕಾರ್ಯಕ್ರಮಗಳಲ್ಲಿ ನೇರಸಾಲ ಯೋಜನೆ, ಹೈನುಗಾರಿಕೆ, ಸ್ವಾವಲಂಬಿ ಸಾರಥಿ ಯೋಜನೆ, ಫಾಸ್ಟ್ ಫುಡ್ ಟ್ರಕ್ ಟ್ರೈಲರ್/ಮೊಬೈಲ್ ಕಿಚನ್ ಫುಡ್ ಕಿಯೋಸ್ಕ್ ಯೋಜನೆ ಮತ್ತು ಉದ್ಯಮಶೀಲತಾ ಅಭಿವೃದ್ಧಿ ಯೋಜನೆ, ಮಹಿಳಾ ಸ್ವಸಹಾಯ ಸಂಘಗಳಿಗೆ ಮೈಕ್ರೋ ಕ್ರೆಡಿಟ್(ಪ್ರೇರಣಾ) ಯೋಜನೆ, ಗಂಗಾ ಕಲ್ಯಾಣ ಯೋಜನೆ ಹಾಗೂ ಭೂ ಒಡೆತನ ಯೋಜನೆಗಳಡಿಯಲ್ಲಿ ಪರಿಶಿಷ್ಟ ಪಂಗಡದ ಸಮುದಾಯದ ಫಲಾಪೇಕ್ಷಿತರಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿದಾರರು ಪ.ಪಂ.ಕ್ಕೆ ಸೇರಿದವರಾಗಿರಬೇಕು. ವ್ಯವಸಾಯಕ್ಕೆ ಸಂಬಂಧಪಟ್ಟಂತೆ 18 ರಿಂ 60, ವಾಹನ, ಸ್ವಯಂ ಉದ್ಯೋಗ ಉದ್ದೇಶಗಳಿಗೆ ಸಂಬಂಧಪಟ್ಟಂತೆ 18 ರಿಂದ 50 ವಯೋಮಾನದವರಾಗಿರಬೇಕು. ಕೊಳವೆಬಾವಿ ಸೌಲಭ್ಯಕ್ಕೆ ಯಾವುದೇ ವಯೋಮಿತಿ ಇರುವುದಿಲ್ಲ. ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದವರಿಗೆ ರೂ. 1.50 ಲಕ್ಷ ಹಾಗೂ ನಗರ ಪ್ರದೇಶದವರಿಗೆ 2.00 ಲಕ್ಷಗಳ ಮಿತಿಯಲ್ಲಿರಬೇಕು. ಕುಟುಂಬದ ಯಾವುದೇ ಸದಸ್ಯರುವ ಸರ್ಕಾರಿ/ಅರೆ ಸರ್ಕಾರಿ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು ಹಾಗೂ ಅರ್ಜಿದಾರರು ಅಥವಾ ಅವರ ಕುಟುಂಬದ ಯಾವುದೇ ಸದಸ್ಯರು ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು. ಮಹಿಳೆಯರಿಗೆ ಶೇ. 33 ರಷ್ಟು ಮತ್ತು ಅಂಗವಿಕಲರಿಗೆ ಶೇ.5 ರಷ್ಟು ಗುರಿಯಲ್ಲಿ ಮೀಸಲಾತಿ ಕಲ್ಪಿಸಲಾಗುವುದು.

ಆಸಕ್ತ ಅರ್ಜಿದಾರರು ವೆಬ್ ಪೋರ್ಟಲ್https://sevasindhu.karnataka.gov.in ಮೂಲಕ ದಿ:17/10/2026 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಿಗಮದ ದೂ.ಸಂ.: 08182-276776 ಅಥವಾ https://kmvstdcl.karnataka.gov.in ನ್ನು ಸಂಪರ್ಕಿಸಬಹುದೆಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ

📄 Official Documents / Supporting Documents

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular