ಭಾರತೀಯ ಹಬ್ಬಗಳು, ವಿಶೇಷ ಸಮಾರಂಭಗಳು ಹಾಗೂ ಮನೆಗೆ ಬಂಧು-ಮಿತ್ರರು ಬಂದಾಗ ಪೂರಿ ತಯಾರಿಸುವುದು ಸಾಮಾನ್ಯ. ಸಾಗು, ಚನಾ ಮಸಾಲಾ ಅಥವಾ ಆಲೂಗಡ್ಡೆ ಪಲ್ಯದೊಂದಿಗೆ ಗರಿಗರಿಯಾದ ಬಿಸಿಬಿಸಿ ಪೂರಿ ಸೇವಿಸುವುದು ಎಲ್ಲರಿಗೂ ಇಷ್ಟ. ಆದರೆ, ಹಲವು ಬಾರಿ ಪೂರಿಗಳು ಹೆಚ್ಚು ಎಣ್ಣೆಯನ್ನು ಹೀರಿಕೊಂಡು ಮೆತ್ತಗಾಗುತ್ತವೆ, ಇದರಿಂದ ಆರೋಗ್ಯ ಜಾಗೃತಿ ಇರುವವರು ಪೂರಿ ತಿನ್ನಲು ಹಿಂದೇಟು ಹಾಕುತ್ತಾರೆ. ನಿಮ್ಮ ಮನೆಯಲ್ಲೂ ಪೂರಿ ಅತಿಯಾಗಿ ಎಣ್ಣೆ ಹಿಡಿಯುತ್ತಿದ್ದರೆ, ಈ ಕೆಲವು ಸುಲಭ ಅಡುಗೆ ಸಲಹೆಗಳನ್ನು ಅನುಸರಿಸಿ ಎಣ್ಣೆ ರಹಿತ ಹಾಗೂ ಗರಿಗರಿಯಾದ ಪೂರಿ ತಯಾರಿಸಬಹುದು.
1. ಗಟ್ಟಿಯಾದ ಹಿಟ್ಟು ಕಲಸಿ: ಪೂರಿ ಮಾಡುವಾಗ ಮೊದಲ ನಿಯಮವೆಂದರೆ ಹಿಟ್ಟು ಗಟ್ಟಿಯಾಗಿರಬೇಕು. ಚಪಾತಿ ಹಿಟ್ಟಿನಂತೆ ಪೂರಿ ಹಿಟ್ಟು ತೀರ ಮೃದುವಾಗಿರಬಾರದು. ಕಡಿಮೆ ನೀರು ಬಳಸಿ ಗಟ್ಟಿಯಾಗಿ ಹಿಟ್ಟು ಕಲಸಿದರೆ ಪೂರಿ ಹೆಚ್ಚು ಎಣ್ಣೆ ಹೀರಿಕೊಳ್ಳುವುದಿಲ್ಲ.
2. ಚಿರೋಟಿ ರವೆ ಅಥವಾ ಕಡಲೆ ಹಿಟ್ಟು ಬಳಸಿ: ಗೋಧಿ ಹಿಟ್ಟಿಗೆ ಸ್ವಲ್ಪ ಚಿರೋಟಿ ರವೆ ಅಥವಾ ಕಡಲೆ ಹಿಟ್ಟು ಸೇರಿಸಿ. ಉದಾಹರಣೆಗೆ, ಎರಡು ಕಪ್ ಗೋಧಿ ಹಿಟ್ಟಿಗೆ ಸುಮಾರು ಎರಡು ಚಮಚ ರವೆ ಅಥವಾ ಕಡಲೆ ಹಿಟ್ಟು ಬೆರೆಸಿದರೆ ಪೂರಿ ಗರಿಗರಿಯಾಗುವುದಲ್ಲದೆ ಎಣ್ಣೆ ಹೀರುವುದು ಕಡಿಮೆಯಾಗುತ್ತದೆ.
3. ಲಟ್ಟಿಸುವಾಗ ಒಣ ಹಿಟ್ಟು ಬಳಸಬೇಡಿ: ಪೂರಿ ಲಟ್ಟಿಸುವಾಗ ಒಣ ಗೋಧಿ ಹಿಟ್ಟು ಉದುರಿಸುವುದನ್ನು ತಪ್ಪಿಸಿ. ಒಣ ಹಿಟ್ಟು ಕಾದ ಎಣ್ಣೆಯಲ್ಲಿ ಬಿದ್ದು ಸೀದು ಹೋಗುತ್ತದೆ ಮತ್ತು ಪೂರಿ ಹೆಚ್ಚು ಎಣ್ಣೆ ಹೀರಿಕೊಳ್ಳಲು ಕಾರಣವಾಗುತ್ತದೆ. ಬದಲಾಗಿ, ಹಿಟ್ಟಿನ ಉಂಡೆಗೆ ಸ್ವಲ್ಪ ಎಣ್ಣೆ ಸವರಿ ಲಟ್ಟಿಸಿ.
4. ಹಳೆಯ ಹಿಟ್ಟು ಬಳಸಬೇಡಿ: ಫ್ರಿಡ್ಜ್ನಲ್ಲಿಟ್ಟ ಹಳೆಯ ಹಿಟ್ಟಿನಿಂದ ಪೂರಿ ಮಾಡಬೇಡಿ. ಹಳೆಯ ಹಿಟ್ಟು ಬೇಗನೆ ಎಣ್ಣೆಯನ್ನು ಹೀರಿಕೊಳ್ಳುತ್ತದೆ ಮತ್ತು ಪೂರಿ ಸರಿಯಾಗಿ ಉಬ್ಬುವುದಿಲ್ಲ. ಯಾವಾಗಲೂ ತಕ್ಷಣ ಕಲಸಿದ ತಾಜಾ ಹಿಟ್ಟನ್ನೇ ಬಳಸಿ.
5. ಎಣ್ಣೆಯ ತಾಪಮಾನ ಸರಿಯಾಗಿರಲಿ: ಪೂರಿ ಕರಿಯಲು ಎಣ್ಣೆ ಸರಿಯಾಗಿ ಕಾದಿರಬೇಕು. ಎಣ್ಣೆ ಕಡಿಮೆ ಕಾದಿದ್ದರೆ ಪೂರಿ ಎಣ್ಣೆ ಹೀರಿಕೊಳ್ಳುತ್ತದೆ, ಅತಿಯಾಗಿ ಕಾದಿದ್ದರೆ ಪೂರಿ ಸೀದು ಹೋಗುತ್ತದೆ. ಮಧ್ಯಮದಿಂದ ಹೆಚ್ಚಿನ ಉರಿಯಲ್ಲಿ ಎಣ್ಣೆ ಕಾಯಿಸಿ ಪೂರಿ ಕರಿಯಿರಿ.
6. ಪದೇ ಪದೇ ಮಗುಚಿ ಹಾಕಬೇಡಿ: ಪೂರಿಯನ್ನು ಎಣ್ಣೆಗೆ ಹಾಕಿದ ನಂತರ ಜಾಲರಿ ಸೌಟಿನಿಂದ ಹಗುರವಾಗಿ ಒತ್ತಿ ಉಬ್ಬುವಂತೆ ಮಾಡಿ. ಒಂದು ಬದಿ ಬೆಂದ ನಂತರವೇ ಇನ್ನೊಂದು ಬದಿಗೆ ಮಗುಚಿ ಹಾಕಿ. ಪದೇ ಪದೇ ತಿರುಗಿಸಿ ಹಾಕುವುದರಿಂದ ಪೂರಿ ಎಣ್ಣೆಯನ್ನು ಹೆಚ್ಚು ಹೀರಿಕೊಳ್ಳುತ್ತದೆ.
7. ಟಿಶ್ಯೂ ಪೇಪರ್ ಬಳಸಿ: ಕರೆದ ಪೂರಿಗಳನ್ನು ಎಣ್ಣೆಯಿಂದ ತೆಗೆದ ತಕ್ಷಣ ಕಿಚನ್ ಟವಲ್ ಅಥವಾ ಟಿಶ್ಯೂ ಪೇಪರ್ ಮೇಲೆ ಹಾಕಿ. ಇದು ಪೂರಿಯ ಮೇಲಿರುವ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ.
ಈ ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ನೀವು ಮನೆಯಲ್ಲೇ ರುಚಿಕರವಾದ ಹಾಗೂ ಆರೋಗ್ಯಕರವಾದ ಕ್ರಿಸ್ಪಿ ಪೂರಿಗಳನ್ನು ಸವಿಯಬಹುದು.

