HomeHealthಮನೆಯಲ್ಲಿ ಒಂಟಿಯಾಗಿದ್ದಾಗ ಹೃದಯಾಘಾತವಾದರೆ ಏನು ಮಾಡಬೇಕು ? ನಿಮಗೆ ತಿಳಿದಿರಲಿ ಜೀವ ಉಳಿಸುವ ಮಹತ್ವದ ಸೂತ್ರ...

ಮನೆಯಲ್ಲಿ ಒಂಟಿಯಾಗಿದ್ದಾಗ ಹೃದಯಾಘಾತವಾದರೆ ಏನು ಮಾಡಬೇಕು ? ನಿಮಗೆ ತಿಳಿದಿರಲಿ ಜೀವ ಉಳಿಸುವ ಮಹತ್ವದ ಸೂತ್ರ !

ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಹಾಗೂ ಭಾರತದಲ್ಲಿ ಸಂಭವಿಸುವ ಒಟ್ಟು ಸಾವುಗಳಿಗೆ ಹೃದಯಾಘಾತ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ವಿಶ್ವ ಹಾರ್ಟ್ ಫೆಡರೇಶನ್ ಅಂಕಿಅಂಶಗಳ ಪ್ರಕಾರ, ಜಾಗತಿಕವಾಗಿ ಸಂಭವಿಸುವ ಹೃದಯಾಘಾತದ ಸಾವುಗಳಲ್ಲಿ ಶೇಕಡಾ 20 ರಷ್ಟು ಭಾರತದಲ್ಲೇ ವರದಿಯಾಗುತ್ತಿವೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಥವಾ ಒಂಟಿಯಾಗಿದ್ದ ಸಂದರ್ಭದಲ್ಲಿ ಹೃದಯಾಘಾತದ ಲಕ್ಷಣಗಳು ಕಂಡುಬಂದರೆ ಏನು ಮಾಡಬೇಕು ಎಂಬ ಬಗ್ಗೆ ಅಮೆರಿಕದ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ಜೆರೆಮಿ ಲಂಡನ್ ನೀಡಿರುವ ಸಲಹೆಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಗಮನ ಸೆಳೆದಿವೆ.

ಸುಮಾರು 25 ವರ್ಷಗಳ ಅನುಭವ ಹೊಂದಿರುವ ಡಾ. ಜೆರೆಮಿ, ಒಂಟಿಯಾಗಿದ್ದಾಗ ಹೃದಯಾಘಾತ ಸಂಭವಿಸಿದರೆ ತಕ್ಷಣವೇ ಕೈಗೊಳ್ಳಬೇಕಾದ ನಾಲ್ಕು ಪ್ರಮುಖ ಹಂತಗಳನ್ನು ವಿವರಿಸಿದ್ದಾರೆ:

ತಕ್ಷಣವೇ ತುರ್ತು ಸೇವೆಗೆ ಕರೆ ಮಾಡಿ: ಎದೆನೋವು ಅಥವಾ ಹೃದಯಾಘಾತದ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಯಾವುದೇ ವಿಳಂಬವಿಲ್ಲದೆ ತುರ್ತು ವೈದ್ಯಕೀಯ ಸಹಾಯವಾಣಿಗೆ ಕರೆ ಮಾಡಬೇಕು. ಭಾರತದಲ್ಲಿ ಇಂತಹ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ತಕ್ಷಣವೇ 112 ಅಥವಾ 108 ಸಂಖ್ಯೆಗೆ ಕರೆ ಮಾಡಿ ಆಂಬ್ಯುಲೆನ್ಸ್‌ಗೆ ಮಾಹಿತಿ ನೀಡುವುದು ಮೊದಲ ಆದ್ಯತೆಯಾಗಿರಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮನೆಯ ಮುಖ್ಯ ಬಾಗಿಲನ್ನು ಅನ್‌ಲಾಕ್ ಮಾಡಿ: ತುರ್ತು ಸೇವೆಗೆ ಕರೆ ಮಾಡಿದ ನಂತರ ಮನೆಯ ಮುಂಭಾಗದ ಬಾಗಿಲನ್ನು ಲಾಕ್‌ನಿಂದ ಮುಕ್ತಗೊಳಿಸಬೇಕು (ಅನ್‌ಲಾಕ್ ಮಾಡಿ). ರಾತ್ರಿಯ ವೇಳೆಯಾಗಿದ್ದರೆ ಹೊರಗಿನ ಲೈಟ್‌ಗಳನ್ನು ಆನ್ ಮಾಡಿಡಿ. ಇದರಿಂದ ಆಂಬ್ಯುಲೆನ್ಸ್ ಸಿಬ್ಬಂದಿ ಮನೆ ಹುಡುಕಲು ಸುಲಭವಾಗುತ್ತದೆ. ಒಂದು ವೇಳೆ ಪ್ರಜ್ಞೆ ತಪ್ಪಿ ಬಿದ್ದರೂ ಬಾಗಿಲು ಮುರಿದು ಒಳಬರುವ ಪರಿಸ್ಥಿತಿ ತಪ್ಪಿ, ವೈದ್ಯಕೀಯ ಸಿಬ್ಬಂದಿ ನೇರವಾಗಿ ಒಳಗೆ ಬಂದು ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಆರಾಮವಾಗಿ ಕುಳಿತುಕೊಳ್ಳಿ ಅಥವಾ ಮಲಗಿ: ಬಾಗಿಲು ತೆರೆದ ಬಳಿಕ ಸುಲಭವಾಗಿ ಉಸಿರಾಟ ನಡೆಸಲು ಅನುಕೂಲವಾಗುವಂತೆ ಸೋಫಾ ಮೇಲೆ ಕುಳಿತುಕೊಳ್ಳಿ ಅಥವಾ ನೆಲದ ಮೇಲೆ ಮಲಗಿ. ಸಾಧ್ಯವಾದರೆ ಕಾಲುಗಳನ್ನು ಸ್ವಲ್ಪ ಎತ್ತರದಲ್ಲಿಡುವುದು ರಕ್ತ ಪರಿಚಲನೆಗೆ ನೆರವಾಗುತ್ತದೆ. ಯಾವುದೇ ಕಾರಣಕ್ಕೂ ನಿಂತುಕೊಳ್ಳಬೇಡಿ; ಏಕೆಂದರೆ ತಕ್ಷಣವೇ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದರೆ ತಲೆಗೆ ಪೆಟ್ಟಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಅಪಾಯವಿರುತ್ತದೆ.

ಕುಟುಂಬಸ್ಥರು ಅಥವಾ ಸ್ನೇಹಿತರಿಗೆ ಮಾಹಿತಿ ನೀಡಿ: ವೈದ್ಯಕೀಯ ಸಹಾಯವಾಣಿಗೆ ಕರೆ ಮಾಡಿದ ಬೆನ್ನಲ್ಲೇ ಕುಟುಂಬ ಸದಸ್ಯರು ಅಥವಾ ಆಪ್ತ ಸ್ನೇಹಿತರಿಗೆ ಕರೆ ಮಾಡಿ ಪರಿಸ್ಥಿತಿಯನ್ನು ತಿಳಿಸಿ. ತಾವು ಆಸ್ಪತ್ರೆಗೆ ದಾಖಲಾಗುತ್ತಿರುವ ವಿಚಾರ ಯಾರಿಗಾದರೂ ತಿಳಿದಿರುವುದು ಅಗತ್ಯವಾಗಿರುತ್ತದೆ.

ಇದರ ಜೊತೆಗೆ, ಆಂಬ್ಯುಲೆನ್ಸ್ ಬರುವವರೆಗೆ ಕಾಯುವ ಸಂದರ್ಭದಲ್ಲಿ ಅಲರ್ಜಿ ಅಥವಾ ಆಂತರಿಕ ರಕ್ತಸ್ರಾವದ ಸಮಸ್ಯೆಯಿಲ್ಲದಿದ್ದರೆ, ವೈದ್ಯರ ಸಲಹೆಯಂತೆ ಒಂದು ಆಸ್ಪಿರಿನ್ (162–325 ಮಿಲಿಗ್ರಾಂ) ಮಾತ್ರೆಯನ್ನು ಜಗಿದು ನುಂಗುವುದು ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ನೆರವಾಗುತ್ತದೆ ಎಂದು ಡಾ. ಜೆರೆಮಿ ತಿಳಿಸಿದ್ದಾರೆ. ಈ ತುರ್ತು ಕ್ರಮಗಳು ಆಪತ್ಕಾಲದಲ್ಲಿ ಅಮೂಲ್ಯ ಪ್ರಾಣವನ್ನು ಉಳಿಸಲು ನೆರವಾಗಬಲ್ಲವು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular