HomeIndiaಸಹಪಾಠಿಗೆ ಪ್ರೇಮ ಪತ್ರ ಬರೆದ 4 ನೇ ತರಗತಿ ವಿದ್ಯಾರ್ಥಿ ; ಬಾಲಕನನ್ನು ಥಳಿಸಿದ ಶಿಕ್ಷಕಿ...

ಸಹಪಾಠಿಗೆ ಪ್ರೇಮ ಪತ್ರ ಬರೆದ 4 ನೇ ತರಗತಿ ವಿದ್ಯಾರ್ಥಿ ; ಬಾಲಕನನ್ನು ಥಳಿಸಿದ ಶಿಕ್ಷಕಿ ವಿರುದ್ದ ಕೇಸ್‌ !

ನಾಲ್ಕನೇ ತರಗತಿಯ ಇಬ್ಬರು ಮುಗ್ಧ ಪುಟಾಣಿಗಳ ನಡುವೆ ಕಾಗದದ ಚೂರು ವಿನಿಮಯವಾದ ಘಟನೆಗೆ ಸಂಬಂಧಿಸಿದಂತೆ, ಬಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಖಾಸಗಿ ಶಾಲೆಯೊಂದರ ಶಿಕ್ಷಕಿ ಹಾಗೂ ಪ್ರಾಂಶುಪಾಲರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಟಿಎಂ ಪ್ರದೇಶದ ಖಾಸಗಿ ಶಾಲೆಯಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಪೋಷಕರು ನೀಡಿದ ದೂರಿನನ್ವಯ ರಾಮೋಲ್ ಠಾಣೆಯ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಲಭ್ಯವಾಗಿರುವ ದೂರಿನ ವಿವರಗಳ ಪ್ರಕಾರ, ಸೆಪ್ಟೆಂಬರ್ 19 ರಂದು ತರಗತಿಯಲ್ಲಿ ಓದುತ್ತಿದ್ದ ಬಾಲಕನೊಬ್ಬ ತನ್ನದೇ ತರಗತಿಯ ಸಹಪಾಠಿ ಬಾಲಕಿಗೆ ಪ್ರೀತಿಯ ಒಕ್ಕಣೆಯುಳ್ಳ ಕಾಗದದ ಚೂರೊಂದನ್ನು ನೀಡಿದ್ದಾನೆ. ನಂತರ ಈ ಕಾಗದದ ಚೂರು ತರಗತಿಯ ಕೋಣೆಯಲ್ಲಿ ಬಿದ್ದಿರುವುದು ಶಿಕ್ಷಕಿಯ ಕಣ್ಣಿಗೆ ಬಿದ್ದಿದೆ. ಕೂಡಲೇ ತರಗತಿಯಲ್ಲಿದ್ದ ವಿದ್ಯಾರ್ಥಿಗಳನ್ನು ವಿಚಾರಣೆಗೊಳಪಡಿಸಿದ ಶಿಕ್ಷಕಿ, ಆ ಪತ್ರವನ್ನು ಬರೆದು ನೀಡಿದ್ದು ಯಾರು ಎಂಬುದನ್ನು ಪತ್ತೆಹಚ್ಚಿ ಆ ಬಾಲಕನನ್ನು ಮುಖ್ಯೋಪಾಧ್ಯಾಯರ ಬಳಿಗೆ ಕರೆದೊಯ್ದಿದ್ದಾರೆ.

ಶಾಲಾ ಆವರಣದಲ್ಲಿ ಶಿಕ್ಷಕಿ ಮತ್ತು ಪ್ರಾಂಶುಪಾಲರು ಒಟ್ಟಾಗಿ ಆ ಸಣ್ಣ ವಯಸ್ಸಿನ ಮಗುವನ್ನು ತೀವ್ರವಾಗಿ ನಿಂದಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಅಳತೆಯ ಪಟ್ಟಿಯಿಂದ ಬಾಲಕನ ಅಂಗೈ ಮೇಲೆ ಬಲವಾಗಿ ಹೊಡೆದು ದೈಹಿಕವಾಗಿ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಶಾಲೆಯಲ್ಲಿ ನಡೆದ ಈ ಕಹಿ ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ಬಾಲಕ, ಮನೆಗೆ ಮರಳಿದ ನಂತರ ನಡೆದ ಇಡೀ ವಿಚಾರವನ್ನು ತನ್ನ ತಾಯಿಯ ಬಳಿ ವಿವರಿಸಿ ಕಣ್ಣೀರಿಟ್ಟಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಗುವಿನ ಕೈಮೇಲಿನ ಗಾಯದ ಗುರುತುಗಳನ್ನು ಗಮನಿಸಿ ಆಕ್ರೋಶಗೊಂಡ ಪೋಷಕರು, ತಕ್ಷಣವೇ ರಾಮೋಲ್ ಪೊಲೀಸ್ ಠಾಣೆಗೆ ಧಾವಿಸಿ ದೂರು ಸಲ್ಲಿಸಿದ್ದಾರೆ. ಮುಗ್ಧ ವಯಸ್ಸಿನಲ್ಲಿ ಮಕ್ಕಳು ಅರಿಯದೆ ಮಾಡಿದ ಕೆಲಸಕ್ಕೆ ಈ ರೀತಿಯಲ್ಲಿ ಅಮಾನವೀಯವಾಗಿ ದೈಹಿಕ ದಂಡನೆ ನೀಡಿರುವುದು ಕಾನೂನುಬಾಹಿರ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೋಷಕರು ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ ರಾಮೋಲ್ ಠಾಣೆಯ ಪೊಲೀಸರು ಬಾಲಾಪರಾಧ ನ್ಯಾಯ ಕಾಯ್ದೆಯ ಅಡಿಯಲ್ಲಿ ಶಿಕ್ಷಕಿ ಹಾಗೂ ಪ್ರಾಂಶುಪಾಲರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಶಾಲೆಗಳಲ್ಲಿ ಮಕ್ಕಳಿಗೆ ದೈಹಿಕ ಶಿಕ್ಷೆ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದರೂ ಈ ರೀತಿಯ ಕೃತ್ಯ ಎಸಗಿರುವ ಹಿನ್ನೆಲೆಯಲ್ಲಿ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular