ಶಿವಮೊಗ್ಗ: ಶಿವಮೊಗ್ಗ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧವೇ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ಮಧು ಬಂಗಾರಪ್ಪ ಪಿಎ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ 25 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಸುಂದರೇಶ್ ಆರೋಪಿಸಿದ್ದಾರೆ. ಮಧು ಬಂಗಾರಪ್ಪ ಪಿಎ ಜಿ.ಡಿ. ಮಂಜುನಾಥ್ ವಿರುದ್ಧ ಆರೋಪ ಮಾಡಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿಯೂ ಭಿನ್ನಮತ ಸ್ಪೋಟಗೊಂಡಿದೆ. ಏಕವಚನದಲ್ಲಿ ವಾಗ್ದಾಳಿ ನಡೆಸಿದ ಸುಂದರೇಶ್ ಈಡಿಯಟ್ ಗಳು, ದಡ್ಡರ ಸಂತೆಯಿಂದ ಪಕ್ಷ ತಳಮಟ್ಟಕ್ಕೆ ಬಂದಿದೆ. ಇಂಥವರಿಂದ ಕಾಂಗ್ರೆಸ್ ಪಕ್ಷ ತಳಮಟ್ಟಕ್ಕೆ ಹೋಗುತ್ತಿದೆ. ಇಲ್ಲಿ ಪಕ್ಷಕ್ಕೋಸ್ಕರ ದುಡಿದವರಿಗೆ ಅವಕಾಶ ಸಿಗುವುದಿಲ್ಲ. ಕಾಂಗ್ರೆಸ್ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿದವರನ್ನು ಮಂತ್ರಿ ಮಾಡಿದ್ದಾರೆ. ಜೆಡಿಎಸ್ ನಿಂದ ಬಂದ ಮಧು ಬಂಗಾರಪ್ಪ ಪಕ್ಷ ಆಳುತ್ತಿದ್ದಾರೆ. ಸಚಿವ ಮಧು ಬಂಗಾರಪ್ಪ ಅವರಿಗೆ ಗಂಧ ಗಾಳಿ ಗೊತ್ತಿಲ್ಲ. ಸಚಿವರ ಆಪ್ತ ಸಹಾಯಕರು ಕಚೇರಿಗಳಿಗೆ ತೆರಳಿ ಅಧಿಕಾರಿಗಳನ್ನು ಬೆದರಿಸಿ 25 ಲಕ್ಷ, 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಧಿಕಾರಿಗಳನ್ನು ಬೆದರಿಸಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಸಚಿವ ಮಧು ಬಂಗಾರಪ್ಪ ಪಕ್ಷ ನಾಶ ಮಾಡಲು ಹೊರಟಿದ್ದಾರೆ ಎಂದು ಮಧು ಬಂಗಾರಪ್ಪ ವಿರುದ್ಧ ಹೆಚ್.ಎಸ್. ಸುಂದರೇಶ್ ವಾಗ್ದಾಳಿ ನಡೆಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಮಧುಬಂಗಾರಪ್ಪ ಬೆಂಬಲಿಗರಾದ ಜಿ.ಡಿ ಮಂಜುನಾಥ್ ಮತ್ತು ಕಲಗೋಡು ರತ್ನಾಕರ್ ಅವರು ಸರ್ಕಾರಿ ಅಧಿಕಾರಿಗಳಿಂದ ಲಕ್ಷಾಂತರ ರೂ ಹಣ ವಸೂಲಿ ಮಾಡುತ್ತಿದ್ದಾರೆ. ಪಕ್ಷದ ಹೆಸರು ಕೆಡಿಸುತ್ತಿದ್ದಾರೆ ಎಂದು ಸ್ಪೋಟಕ ಆರೋಪ ಮಾಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಸೇರಿದಂತೆ ಸ್ವಪಕ್ಷೀಯರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಹೆಚ್ ಸಿ ಯೋಗೀಶ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಲು ಅರ್ಹರಲ್ಲ ಎಂದು ದೂರಿದ್ದಾರೆ.
ಜಿಲ್ಲಾ ಮಂತ್ರಿ ಮಧುಬಂಗಾರಪ್ಪ ಪಕ್ಷದ ವಿಚಾರದಲ್ಲಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದು, ಅವರಿಗೆ ಕಾಂಗ್ರೆಸ್ ನ ಗಂಧಗಾಳಿ ಗೊತ್ತಿಲ್ಲ. ಅವರ ಜೊತೆಯಲ್ಲಿರುವ ಎರಡು ಮೂರು ಜನ ಅವರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಪಕ್ಷ ಬಹಳ ಕೆಳಮಟ್ಟಕ್ಕೆ ಹೋಗುತ್ತಿದೆ. ಕಲಗೋಡು ರತ್ನಾಕರ್ ಜಿ.ಡಿ. ಮಂಜುನಾಥ್ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಸೂಡಾ ಕಚೇರಿಗೆ ಬಂದು 25 ಲಕ್ಷ ರೂ. ಕೊಡುವಂತೆ ಆಯುಕ್ತರನ್ನು ಕೇಳಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಬಂದು ಸಚಿವರಾಗಿರುವ ಮಧು ಬಂಗಾರಪ್ಪ ನಮ್ಮನ್ನು ಟಾರ್ಗೇಟ್ ಮಾಡಿದರೆ ನಾವ್ಯಾಕೆ ಪಕ್ಷದಲ್ಲಿರಬೇಕು? ಎರಡೂ ಮೂರು ಜನರು ಹೇಳಿದಂತೆ ಮಧುಬಂಗಾರಪ್ಪ ಕೇಳುತ್ತಿದ್ದಾರೆ. ಇದರಿಂದ ಪಕ್ಷ ಕೆಳಮಟ್ಟಕ್ಕೆ ಹೋಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಸೊರಬ ಕ್ಷೇತ್ರಕ್ಕೂ ಕ್ಯಾಂಡಿಡೇಟ್ ನ್ನು ರೆಡಿ ಮಾಡಿದ್ದೇವೆ. ಎಂಪಿ ಎಲೆಕ್ಷನ್ ಗೂ ಅಭ್ಯರ್ಥಿ ರೆಡಿ ಆಗಿದ್ದಾರೆ ಎಂದು ಹೇಳಿದ್ದಾರೆ.
ತೀರ್ಥಹಳ್ಳಿ ಕ್ಷೇತ್ರಕ್ಕೆ ಮಂಜುನಾಥ ಗೌಡರಿಗೆ, ಸಾಗರದಲ್ಲಿ ಬೇಳೂರು ಗೋಪಾಲಕೃಷ್ಣ ಅವರಿಗೆ ಮತ್ತು ಶಿವಮೊಗ್ಗದಲ್ಲಿ ತಮಗೆ ಟಿಕೆಟ್ ನೀಡಬೇಕು ಎಂದ ಸುಂದರೇಶ್ ಪಕ್ಷದಲ್ಲಿ ನಾಯಕರಿಗೆ ಕೂಲಿ ಬೇಕು. ಹಂಚಿಕೆಯಲ್ಲಿ ಕಾರ್ಯಕರ್ತರಿಗೆ ಅನ್ಯಾಯವಾಗಿದೆ. ನನಗೆ 18 ತಿಂಗಳ ಕಾಡಾ ಮತ್ತು ಕಿತ್ತೋದ ಸೂಡಾ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತ. ಜಿಲ್ಲೆಯ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಸೇವಾದಳ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಅವರನ್ನು ಜಿಲ್ಲೆಯಿಂದ ಓಡಿಸುತ್ತೇವೆ ಎಂದು ಹೇಳಿದ್ದಾರೆ.
ಬೇಳೂರು ಗೋಪಾಲಕೃಷ್ಣ ಮತ್ತು ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಅವರನ್ನು ಸಚಿವರನ್ನಾಗಿ ಮಾಡಬೇಕು. ಅದೇ ರೀತಿ ಪಕ್ಷಕ್ಕಾಗಿ ದುಡಿದ ದಿನೇಶ್ ಗುಂಡೂರಾವ್ ಅವರನ್ನು ಸಚಿವರನ್ನಾಗಿ ಮಾಡಬೇಕು. ಇದರಿಂದ ಪಕ್ಷಕ್ಕೆ ಬಲ ಬರುತ್ತದೆ. ಜಿಲ್ಲೆಯಲ್ಲಿ ಪಕ್ಷದ ಬೆಳವಣಿಗೆ ಕುರಿತು ಎಲ್ಲಾ ಕಾರ್ಯಕ್ರಮಗಳನ್ನು ಸಿದ್ಧಪಡಿಸಲಾಗುತ್ತಿದೆ. ಜಿಲ್ಲೆಯ ವಿದ್ಯಮಾನಗಳನ್ನು ಮುಖ್ಯಮಂತ್ರಿಗಳಿಗೆ, ರಾಜ್ಯಾಧ್ಯಕ್ಷರ ಗಮನಕ್ಕೆ ತರಲಾಗುವುದು ಎಂದು ಹೇಳಿದ್ದಾರೆ.
ಸುಂದರೇಶ್ ಮಾಡಿರುವ ಗಂಭೀರ ಆರೋಪಗಳು ಜಿಲ್ಲಾ ಕಾಂಗ್ರೆಸ್ ನಲ್ಲಿ ಸಂಚಲನ ಉಂಟು ಮಾಡಿದೆ.

