ಬಾಲಿವುಡ್ ಪ್ರಸಿದ್ಧ ನಟಿ ರಾಣಿ ಮುಖರ್ಜಿ ಅವರ ತಾಯಿ ಕೃಷ್ಣಾ ಮುಖರ್ಜಿ (75) ಸೆಪ್ಟೆಂಬರ್ 22 ರಂದು ನಿಧನರಾಗಿದ್ದು, ಅವರ ಅಗಲಿಕೆಯಿಂದ ಮುಖರ್ಜಿ ಕುಟುಂಬ ಹಾಗೂ ಬಾಲಿವುಡ್ ಚಿತ್ರರಂಗ ತೀವ್ರ ಶೋಕದಲ್ಲಿ ಮುಳುಗಿದೆ. ಈ ದುಃಖದ ಸಂದರ್ಭದಲ್ಲಿ ಕೃಷ್ಣಾ ಮುಖರ್ಜಿ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.
ಕಳೆದ ವರ್ಷ ‘ಮಿಷಸ್ ಚಟರ್ಜಿ ವರ್ಸಸ್ ನಾರ್ವೇ’ ಸಿನಿಮಾದ ಅತ್ಯುತ್ತಮ ನಟನೆಗಾಗಿ ರಾಣಿ ಮುಖರ್ಜಿ ಅವರಿಗೆ ಚೊಚ್ಚಲ ರಾಷ್ಟ್ರ ಪ್ರಶಸ್ತಿ ಲಭಿಸಿದಾಗ ಕೃಷ್ಣಾ ಮುಖರ್ಜಿ ಸಂತಸ ವ್ಯಕ್ತಪಡಿಸಿದ್ದರು. ಆದರೆ, ದುರ್ಗಾ ಪೂಜೆ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, “ಮಗಳಿಗೆ ಮೊದಲ ರಾಷ್ಟ್ರ ಪ್ರಶಸ್ತಿ ಸಿಕ್ಕಿದ್ದು ಸಂತೋಷ ತಂದಿದೆ. ಆದರೆ ಇದು ತುಂಬಾ ತಡವಾಯಿತು. ಅವರಿಗೆ 2005 ರಲ್ಲೇ ‘ಬ್ಲ್ಯಾಕ್’ ಸಿನಿಮಾಗೆ ಈ ಪ್ರಶಸ್ತಿ ಸಿಗಬೇಕಿತ್ತು” ಎಂದು ತಮ್ಮ ಮನದಾಳದ ಇಷ್ಟವನ್ನು ಹಂಚಿಕೊಂಡಿದ್ದರು.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಬ್ಲ್ಯಾಕ್’ ಚಿತ್ರದಲ್ಲಿ ಅಂಧ ಹಾಗೂ ಕಿವಿ ಕೇಳಿಸದ ಯುವತಿ ಮಿಚೆಲ್ ಪಾತ್ರದಲ್ಲಿ ರಾಣಿ ಮುಖರ್ಜಿ ಜೀವಿಸಿದ್ದರು. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಜೊತೆಗಿನ ಅವರ ಅಭಿನಯ ಅಪಾರ ಮೆಚ್ಚುಗೆ ಗಳಿಸಿತ್ತು.
ರಾಣಿ ಮುಖರ್ಜಿ ಅವರ ಚಿತ್ರರಂಗದ ಯಶಸ್ಸಿನ ಹಿಂದೆ ತಾಯಿಯ ಪಾತ್ರ ಬಹುಮುಖ್ಯವಾಗಿತ್ತು. ಆರಂಭದಲ್ಲಿ ತಂದೆಗೆ ಮಗಳು ನಟಿಯಾಗುವುದು ಇಷ್ಟವಿರಲಿಲ್ಲ, ಆದರೆ ತಾಯಿಯೇ ರಾಣಿಯವರನ್ನು ಚಿತ್ರರಂಗಕ್ಕೆ ತಂದಿದ್ದರು. ಕುಟುಂಬದ ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ತಾಯಿ ಈ ನಿರ್ಧಾರ ತೆಗೆದುಕೊಂಡಿದ್ದರು ಎಂಬುದನ್ನು ರಾಣಿ ಮುಖರ್ಜಿ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದರು.
ಕೃಷ್ಣಾ ಮುಖರ್ಜಿ ಅವರ ನಿಧನಕ್ಕೆ ಶಾರುಖ್ ಖಾನ್, ಗೌರಿ ಖಾನ್, ಕರಣ್ ಜೋಹರ್, ಆಲಿಯಾ ಭಟ್ ಸೇರಿದಂತೆ ಹಲವು ಗಣ್ಯರು ಮುಖರ್ಜಿ ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ್ದಾರೆ.

