HomeEntertainment“ಒಂದು ತೊಟ್ಟು ವಿಷ ಕೊಡಿ ಅಂತಾರೆ”; ಜೈಲಿನಲ್ಲಿನ ಪವಿತ್ರಾಗೌಡ ಪರಿಸ್ಥಿತಿ ಬಗ್ಗೆ ಕೋರ್ಟ್‌ನಲ್ಲಿ ವಕೀಲರ ವಾದ

“ಒಂದು ತೊಟ್ಟು ವಿಷ ಕೊಡಿ ಅಂತಾರೆ”; ಜೈಲಿನಲ್ಲಿನ ಪವಿತ್ರಾಗೌಡ ಪರಿಸ್ಥಿತಿ ಬಗ್ಗೆ ಕೋರ್ಟ್‌ನಲ್ಲಿ ವಕೀಲರ ವಾದ

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಬೆಂಗಳೂರಿನ 59ನೇ ಸಿಸಿಹೆಚ್‌ (CCH) ಕೋರ್ಟ್‌ನಲ್ಲಿ ನಡೆಯಿತು. ಪವಿತ್ರಾ ಗೌಡ ಪರ ಹಿರಿಯ ವಕೀಲ ಬಾಲನ್ ವಾದ ಮಂಡಿಸಿದರೆ, ವಿಶೇಷ ಸರ್ಕಾರಿ ಅಭಿಯೋಜಕ (SPP) ಪ್ರಸನ್ನಕುಮಾರ್ ಸರ್ಕಾರದ ಪರ ವಾದ ಆರಂಭಿಸಿದರು.

ಮಗಳ ಆರೈಕೆ ಹಿನ್ನೆಲೆ ಜಾಮೀನು ಕೋರಿಕೆ

ಪವಿತ್ರಾ ಗೌಡ ಮಹಿಳೆಯಾಗಿದ್ದು, ಮಗಳ ಆರೈಕೆ ಮಾಡಬೇಕಿರುವ ಹಿನ್ನೆಲೆಯಲ್ಲಿ ಜಾಮೀನು ನೀಡಬೇಕು ಎಂದು ಅವರ ಪರ ವಕೀಲ ಬಾಲನ್ ವಾದಿಸಿದರು. ಪ್ರಕರಣದ ವಿಚಾರಣೆ ವಿಳಂಬವಾಗುತ್ತಿದ್ದು, ಪವಿತ್ರಾ ಗೌಡ ಈಗಾಗಲೇ ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕರಣದಲ್ಲಿ ಬಹುತೇಕ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದೆ. ಕೆಲವು ಸಾಕ್ಷಿಗಳು ಸರ್ಕಾರಿ ಸಾಕ್ಷಿಗಳಾಗಿದ್ದಾರೆ. ಹೀಗಾಗಿ ಜಾಮೀನು ನೀಡಿದರೂ ಸಾಕ್ಷಿಗಳಿಗೆ ತೊಂದರೆ ಉಂಟುಮಾಡುವ ಅಥವಾ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇಲ್ಲ ಎಂದು ವಕೀಲರು ವಾದಿಸಿದರು.

ಸುಪ್ರೀಂ ಕೋರ್ಟ್‌ ಈ ಹಿಂದೆ ನೀಡಿರುವ ಆದೇಶದಲ್ಲಿರುವ ಒಂದು ವರ್ಷದ ಜಾಮೀನು ನಿರ್ಬಂಧ ಪವಿತ್ರಾ ಗೌಡ ಅವರಿಗೆ ಅನ್ವಯಿಸುವುದಿಲ್ಲ ಎಂದೂ ಬಾಲನ್ ವಾದಿಸಿದರು.

ಇದಕ್ಕೆ ಪ್ರತಿಯಾಗಿ SPP ಪ್ರಸನ್ನಕುಮಾರ್ ವಾದ ಮಂಡಿಸಿದರು. ವಿಚಾರಣೆ ವಿಳಂಬವಾಗುತ್ತಿದೆ ಎಂಬ ಕಾರಣಕ್ಕೆ ಜಾಮೀನು ನೀಡಬೇಕು ಎಂಬ ವಾದವನ್ನು ಅವರು ಪ್ರಶ್ನಿಸಿದರು.

ಸುಪ್ರೀಂ ಕೋರ್ಟ್‌ ಸೂಚನೆಯಂತೆ ಒಂದು ವರ್ಷದ ಅವಧಿಯಲ್ಲಿ 60 ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸಬೇಕಿದೆ. 60 ಸಾಕ್ಷಿಗಳ ವಿಚಾರಣೆ ಪೂರ್ಣಗೊಳ್ಳುವವರೆಗೆ ಜಾಮೀನು ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಒಂದು ವರ್ಷದೊಳಗೆ 60 ಸಾಕ್ಷಿಗಳ ವಿಚಾರಣೆ ಪೂರ್ಣಗೊಳ್ಳದಿದ್ದರೆ ಮಾತ್ರ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು ಎಂದು SPP ವಾದಿಸಿದರು.

ಈ ನಿರ್ಬಂಧ ಪವಿತ್ರಾ ಗೌಡ ಅವರಿಗೆ ಮಾತ್ರವಲ್ಲದೆ ಪ್ರಕರಣದ ಎಲ್ಲಾ ಆರೋಪಿಗಳಿಗೂ ಅನ್ವಯಿಸುತ್ತದೆ ಎಂದು ಪ್ರಸನ್ನಕುಮಾರ್ ನ್ಯಾಯಾಲಯಕ್ಕೆ ತಿಳಿಸಿದರು.

ಜೈಲಿನಲ್ಲಿನ ಸಮಸ್ಯೆಗಳ ಬಗ್ಗೆ ಪವಿತ್ರಾ ಪರ ವಕೀಲರ ವಾದ

ಇದೇ ವೇಳೆ ಪವಿತ್ರಾ ಗೌಡ ಪರ ಮತ್ತೋರ್ವ ವಕೀಲ ನಾರಾಯಣಸ್ವಾಮಿ, ಜೈಲಿನಲ್ಲಿ ಅವರಿಗೆ ತೊಂದರೆ ನೀಡಲಾಗುತ್ತಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಪವಿತ್ರಾ ಗೌಡ ಅವರನ್ನು ಭೇಟಿಯಾಗಲು ಹೋದಾಗ, ತಾವು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಅವರು ಹೇಳಿಕೊಳ್ಳುತ್ತಾರೆ. “ಈ ಹಿಂಸೆ ತಡೆಯಲು ಆಗುತ್ತಿಲ್ಲ. ಒಂದು ತೊಟ್ಟು ವಿಷ ಕೊಡಿಸಿ” ಎಂದು ಅವರು ಹೇಳುತ್ತಿದ್ದಾರೆ ಎಂದು ವಕೀಲರು ನ್ಯಾಯಾಲಯದಲ್ಲಿ ತಿಳಿಸಿದರು.

ಜೈಲಾಧಿಕಾರಿಗಳು ತಮ್ಮೊಂದಿಗೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಎಂದೂ ಪವಿತ್ರಾ ಗೌಡ ಹೇಳಿರುವುದಾಗಿ ವಕೀಲರು ತಿಳಿಸಿದರು. ಇದೇ ಪ್ರಕರಣದ ಆರೋಪಿಗಳಿಗೆ ಮಾತ್ರ ಸಮಸ್ಯೆ ಎದುರಾಗುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದರು.

ಪ್ರತ್ಯೇಕ ಬ್ಯಾರಕ್‌ಗಾಗಿ ಕಣ್ಣೀರಿಟ್ಟ ಪವಿತ್ರಾ

ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಯಲ್ಲಿ ಭಾಗವಹಿಸಿದ್ದ ಪವಿತ್ರಾ ಗೌಡ, ಜೈಲಿನಲ್ಲಿರುವ ಪರಿಸ್ಥಿತಿ ಬಗ್ಗೆ ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ನೈಜೀರಿಯಾ ಮೂಲದ ಆರೋಪಿಗಳೊಂದಿಗೆ ಒಂದೇ ಬ್ಯಾರಕ್‌ನಲ್ಲಿ ಇರುವುದರಿಂದ ಸಮಸ್ಯೆಯಾಗುತ್ತಿದೆ. ಸುಮಾರು 35 ಜನರಿರುವ ಬ್ಯಾರಕ್‌ನಲ್ಲಿಯೇ ತಮ್ಮನ್ನು ಇರಿಸಲಾಗಿದೆ. ಹೀಗಾಗಿ ಪ್ರತ್ಯೇಕ ಬ್ಯಾರಕ್‌ ನೀಡುವಂತೆ ಮತ್ತೊಮ್ಮೆ ಮನವಿ ಮಾಡಿದ್ದಾರೆ ಎಂದು ಅವರ ಪರ ವಕೀಲರು ತಿಳಿಸಿದರು.

ಈ ಮನವಿಗೆ ಸಂಬಂಧಿಸಿದಂತೆ ಜೈಲಾಧಿಕಾರಿಗಳಿಂದ ವರದಿ ಪಡೆಯುವಂತೆ ಕೋರ್ಟ್ ಸೂಚಿಸಿದೆ. ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ನ್ಯಾಯಾಲಯ ತಿಳಿಸಿದೆ.

ಪತ್ರ ನೀಡಲು ಅವಕಾಶ ಕೋರಿದ ವಕೀಲರು

ಜೈಲಿನಲ್ಲಿನ ಪರಿಸ್ಥಿತಿಯಿಂದ ಪವಿತ್ರಾ ಗೌಡ ಮಾನಸಿಕವಾಗಿ ಹಾಗೂ ದೈಹಿಕವಾಗಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ವಕೀಲರು ವಾದಿಸಿದರು. ಇದೇ ಪರಿಸ್ಥಿತಿ ಮುಂದುವರಿದರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದೂ ಅವರು ನ್ಯಾಯಾಲಯದ ಗಮನಕ್ಕೆ ತಂದರು.

ಈ ಹಿನ್ನೆಲೆಯಲ್ಲಿ ಪವಿತ್ರಾ ಗೌಡ ಅವರಿಂದ ನ್ಯಾಯಾಲಯಕ್ಕೆ ಪತ್ರ ನೀಡಲು ಅವಕಾಶ ಮಾಡಿಕೊಡಬೇಕು ಎಂದು ವಕೀಲ ನಾರಾಯಣಸ್ವಾಮಿ ಮನವಿ ಮಾಡಿದರು.ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಿಚಾರಣೆ ಮುಂದುವರಿದಿದ್ದು, ಮುಂದಿನ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular