ಬೆಂಗಳೂರು: ಕರ್ನಾಟಕ ವಿಧಾನಪರಿಷತ್ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ.
ಆಗ್ನೇಯ ಪದವೀಧರ ಕ್ಷೇತ್ರ, ಪಶ್ಚಿಮ ಪದವೀಧರ ಕ್ಷೇತ್ರ ಈಶಾನ್ಯ ಶಿಕ್ಷಕರ ಕ್ಷೇತ್ರ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಅಕ್ಟೋಬರ್ 23ರಂದು ಮತದಾನ ನಡೆಯಲಿದೆ. ಅಕ್ಟೋಬರ್ 27ಕ್ಕೆ ಫಲಿತಾಂಶ ಪ್ರಕಟವಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಕರ್ನಾಟಕದ ಜೊತೆಗೆ ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರದಲ್ಲಿಯೂ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಕರ್ನಾಟಕದಲ್ಲಿ ನಡೆಯಲಿರುವ ಎರಡು ಪದವೀಧರರ ಹಾಗೂ 2 ಶಿಕ್ಷಕರ ಕ್ಷೇತ್ರಗಳಿಗೆ ಹಾಗೂ ಉತ್ತರ ಪ್ರದೇಶದಲ್ಲಿ 11, ಬಿಹಾರದಲ್ಲಿ 8, ಮಹಾರಾಷ್ಟ್ರದಲ್ಲಿ 5 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಎಲ್ಲ ಕ್ಷೇತ್ರಗಳಿಗೆ ಅಕ್ಟೋಬರ್ 23ರಂದು ಮತದಾನ ನಡೆಯಲಿದೆ.
ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಸೆ.29ರಂದು ಅಧಿಸೂಚನೆ ಹೊರಬೀಳಲಿದೆ. ನಾಮಪತ್ರ ಸಲ್ಲಿಸಲು ಅ.6 ಕೊನೆಯ ದಿನವಾಗಿದ್ದು, ಅ.7ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅಭ್ಯರ್ಥಿಗಳು ಅ.9ರವರೆಗೆ ನಾಮಪತ್ರ ಹಿಂಪಡೆಯಬಹುದು.
ಬಳಿಕ ಅ.23ರಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಅ.27ರಂದು ಮತ ಎಣಿಕೆ ನಡೆಯಲಿದೆ. ಸಂಬಂಧಿತ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಲ್ಲಿ ಮಾದರಿ ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಗೆ ಬಂದಿದೆ ಎಂದು ಆಯೋಗ ತಿಳಿಸಿದೆ.
ಇದೇ ವೇಳೆ ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಒಟ್ಟು 11 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಿಸಲಾಗಿದೆ. ಉತ್ತರ ಪ್ರದೇಶದ 10 ಹಾಗೂ ಉತ್ತರಾಖಂಡದ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಇದರ ಜೊತೆಗೆ ಪಶ್ಚಿಮ ಬಂಗಾಳದಲ್ಲಿ ತೆರವಾಗಿರುವ ಒಂದು ರಾಜ್ಯಸಭಾ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ. ರಾಜ್ಯಸಭೆಗೆ ಸಂಬಂಧಿಸಿದಂತೆ ಒಟ್ಟು 12 ಸ್ಥಾನಗಳಿಗೆ ಅ.16ರಂದು ಮತದಾನ ನಡೆಯಲಿದೆ.

