ಬಾಲಿವುಡ್ ನಟ ಶಾರುಖ್ ಖಾನ್ ಗಣೇಶೋತ್ಸವದ ಸಂಭ್ರಮದಲ್ಲಿದ್ದು, ಮುಂಬೈನ ಪ್ರಸಿದ್ಧ ಲಾಲ್‌ಬಾಗ್‌ಚಾ ರಾಜನ ಪಂಡಾಲ್‌ಗೆ ಭೇಟಿ ನೀಡಿ ಗಣಪತಿಯ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಅವರೊಂದಿಗೆ ಪತ್ನಿ ಗೌರಿ ಖಾನ್, ಮಗಳು ಸುಹಾನಾ ಖಾನ್ ಹಾಗೂ ಸುದೀರ್ಘ ಕಾಲದಿಂದ ಅವರ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪೂಜಾ ದದ್ಲಾನಿ ಸಾಥ್ ನೀಡಿದ್ದರು.
ನೀಲಿ ಬಣ್ಣದ ಕುರ್ತಾ ಧರಿಸಿದ್ದ ಶಾರುಖ್ ಖಾನ್, ಭಾರೀ ಜನಸ್ತೋಮದ ನಡುವೆ ಕುಟುಂಬ ಸಮೇತರಾಗಿ ತೆರಳಿ ಸಂಜೆಯ ಮಹಾ ಆರತಿಯಲ್ಲಿ ಭಾಗಿಯಾದರು. ಶಾರುಖ್ ಭೇಟಿಯ ಫೋಟೋ ಹಾಗೂ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿವೆ.
ನೆಟ್ಟಿಗರ ಚರ್ಚೆಗೆ ಗ್ರಾಸವಾದ ಆ ಒಂದು ಕ್ಷಣ
ಪಂಡಾಲ್‌ನಲ್ಲಿ ನಡೆದ ಒಂದು ಸಣ್ಣ ಘಟನೆ ಇದೀಗ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ವೀಡಿಯೋ ಒಂದರಲ್ಲಿ ಶಾರುಖ್ ಖಾನ್ ತಮ್ಮ ಮುಖದ ಬೆವರನ್ನು ಒರೆಸಿಕೊಳ್ಳಲು ಪಕ್ಕದಲ್ಲೇ ಇದ್ದ ಮ್ಯಾನೇಜರ್ ಪೂಜಾ ಅವರ ದುಪಟ್ಟಾವನ್ನು ಬಳಸಿದ್ದಾರೆ. ಆದರೆ ಅದೇ ಸಮಯದಲ್ಲಿ ಪತ್ನಿ ಗೌರಿ ಖಾನ್ ಹಾಗೂ ಮಗಳು ಸುಹಾನಾ ಕೂಡ ಶಾರುಖ್ ಅವರ ಪಕ್ಕದಲ್ಲೇ ನಿಂತಿದ್ದರು.
ಇದನ್ನು ಗಮನಿಸಿದ ನೆಟ್ಟಿಗರು, ಪತ್ನಿ ಮತ್ತು ಮಗಳನ್ನು ಬಿಟ್ಟು ಮ್ಯಾನೇಜರ್ ದುಪಟ್ಟಾ ಬಳಸಿರುವುದೇಕೆ ಎಂದು ಪ್ರಶ್ನೆ ಎತ್ತಿದ್ದಾರೆ. “ಹೆಂಡತಿಯ ಶಾಲ್ ಬಿಟ್ಟು ಮ್ಯಾನೇಜರ್ ದುಪಟ್ಟಾ ಯಾಕೆ ಬಳಸಿದ್ರಿ?”, “ಪಕ್ಕದಲ್ಲೇ ಪತ್ನಿ ಇದ್ದರೂ ಮ್ಯಾನೇಜರ್ ಶಾಲಿನಲ್ಲಿ ಮುಖ ಒರೆಸಿಕೊಂಡಿದ್ದು ಸರಿಯೇ?” ಎಂದೆಲ್ಲಾ ಕಾಮೆಂಟ್ ಮಾಡುವ ಮೂಲಕ ಟ್ರೋಲ್ ಮಾಡಲು ಶುರು ಮಾಡಿದ್ದಾರೆ.
ಆದರೆ ಶಾರುಖ್ ಖಾನ್ ಅಭಿಮಾನಿಗಳು ಅವರ ಬೆಂಬಲಕ್ಕೆ ನಿಂತಿದ್ದಾರೆ. ಪೂಜಾ ದದ್ಲಾನಿ ಅವರು ಶಾರುಖ್ ಕುಟುಂಬಕ್ಕೆ ಹಲವು ವರ್ಷಗಳಿಂದ ಅತ್ಯಂತ ಆತ್ಮೀಯರಾಗಿದ್ದಾರೆ. ಆ ಕ್ಷಣದಲ್ಲಿ ಸಹಜವಾಗಿ ನಡೆದ ಘಟನೆಯನ್ನು ಇಲ್ಲಸಲ್ಲದ ರೀತಿಯಲ್ಲಿ ವಿಶ್ಲೇಷಣೆ ಮಾಡುವುದು ಬೇಡ ಎಂದು ಅಭಿಮಾನಿಗಳು ತಿರುಗೇಟು ನೀಡಿದ್ದಾರೆ.
ಕಿಂಗ್ ಸಿನಿಮಾ ಸಿದ್ಧತೆ
ಶಾರುಖ್ ಖಾನ್ ಪ್ರಸ್ತುತ ತಮ್ಮ ಬಹುನಿರೀಕ್ಷಿತ ‘ಕಿಂಗ್’ ಸಿನಿಮಾದ ಕೆಲಸಗಳಲ್ಲಿ ನಿರತರಾಗಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶಿಸುತ್ತಿರುವ ಈ ಬಿಗ್ ಬಜೆಟ್ ಚಿತ್ರದಲ್ಲಿ ಸುಹಾನಾ ಖಾನ್, ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್, ಅನಿಲ್ ಕಪೂರ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಈ ಸಿನಿಮಾ ಡಿಸೆಂಬರ್ 24, 2026 ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ.

