ಬೆಂಗಳೂರು: ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಘಟ್ಟದ ಜನರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ಹಾಗೂ ಸಂಸದರು ಹಿಂದಿನಿಂದಲೂ ಕೇಂದ್ರ ಸಚಿವರನ್ನು ನಿರಂತರವಾಗಿ ಭೇಟಿ ಮಾಡಿ ಪ್ರಯತ್ನ ನಡೆಸುತ್ತಾ ಬಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ಮಾತನಾಡಿದ ವಿಜಯೇಂದ್ರ, ಆಡಳಿತ ಪಕ್ಷದ ಶಾಸಕರು ರಾಜಕೀಯ ಲಾಭಕ್ಕಾಗಿ ಸದನದಲ್ಲಿ ತಪ್ಪು ಮಾಹಿತಿ ನೀಡುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ. ತಾವು ಮಾಡಿರುವ ಆರೋಪಗಳಿಗೆ ದಾಖಲೆಗಳನ್ನು ನೀಡಬೇಕು. ಇಲ್ಲವಾದಲ್ಲಿ ಸುಳ್ಳು ಆರೋಪಗಳನ್ನು ಸದನದ ಕಡತದಿಂದ ತೆಗೆದುಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ನಡೆ ಕುರಿತು ಕಿಡಿಕಾರಿದ ಅವರು, “ಒಂದು ಕಡೆ ಮಗುವನ್ನು ಚಿವುಟುತ್ತಾ, ಇನ್ನೊಂದು ಕಡೆ ತೊಟ್ಟಿಲು ತೂಗುವ ನಾಟಕ ಮಾಡುತ್ತಿದೆ” ಎಂದು ವ್ಯಂಗ್ಯವಾಡಿದ್ದಾರೆ. ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪಕ್ಷಾತೀತವಾಗಿ ಜನರ ಹಿತದ ಬಗ್ಗೆ ಮಾತನಾಡಬೇಕು ಎಂದು ಹೇಳಿದ್ದಾರೆ.
ಸಚಿವರಿಗೆ ರಾಜಕೀಯವಾಗಿ ಪಾದಯಾತ್ರೆ ನಡೆಸುವಂತೆ ಸೂಚಿಸುವ ಮೂಲಕ ಸರ್ಕಾರ ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸುತ್ತಿದೆಯೇ ಹೊರತು, ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಪ್ರಯತ್ನ ಮಾಡುತ್ತಿಲ್ಲ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.
ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ರಾಜ್ಯ ಸರ್ಕಾರದ ರಾಜಕೀಯ ಹಾಗೂ ಬೇಜವಾಬ್ದಾರಿತನದ ನಡೆಗೆ ಅಧಿವೇಶನದಲ್ಲಿ ನೇರವಾಗಿ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಜನಹಿತದ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂಬುದು ಬಿಜೆಪಿ ನಿಲುವು ಎಂದು ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಕಸ್ತೂರಿ ರಂಗನ್ ವರದಿ ವಿಷಯದಲ್ಲಿ, ಮುಖ್ಯಮಂತ್ರಿ ಶ್ರೀ @BSYBJPಅವರ ಸರ್ಕಾರ, ಶ್ರೀ @BSBommai ಸರ್ಕಾರದ ಅವಧಿಯೂ ಸೇರಿದಂತೆ, ಹಿಂದಿನಿಂದಲೂ ನಮ್ಮ ಪಕ್ಷದ ಸಂಸದರು, ನಾಯಕರು, ರಾಜ್ಯದ ಜನರ ಹಿತವನ್ನು ಕಾಯುವ ನಿಟ್ಟಿನಲ್ಲಿ ಕೇಂದ್ರ ಸಚಿವರನ್ನು ನಿರಂತರವಾಗಿ ಭೇಟಿ ಮಾಡಿ ಪಶ್ಚಿಮ ಘಟ್ಟದ ಜನರ ಹಿತಕಾಯುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ. ಆಡಳಿತ ಪಕ್ಷದ ಶಾಸಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸದನಕ್ಕೆ ತಪ್ಪು ಮಾಹಿತಿ ನೀಡುವುದು ಸರಿಯಲ್ಲ. ತಾವು ಹೇಳಿದ್ದಕ್ಕೆ ಅವರು ದಾಖಲೆ ನೀಡಲಿ ಇಲ್ಲವಾದಲ್ಲಿ ಅವರ ಸುಳ್ಳು ಆರೋಪಗಳನ್ನು ಕಡತದಿಂದ ತೆಗೆದುಹಾಕಬೇಕು.
ಒಂದು ಕಡೆ ಮಗುವನ್ನು ಚಿವುಟುತಿರುವ ಕಾಂಗ್ರೆಸ್ ಸರ್ಕಾರ ಇನ್ನೊಂದು ಕಡೆ ತೊಟ್ಟಿಲು ತೂಗುವ ನಾಟಕ ಮಾಡುತ್ತಿದೆ. ಕಸ್ತೂರಿ ರಂಗನ್ ವರದಿ ವಿಷಯದಲ್ಲಿ ಪಕ್ಷಾತೀತವಾಗಿ, ಜನರ ಹಿತರಕ್ಷಣೆ ಮಾತಾಡುವ ಮುಖ್ಯಮಂತ್ರಿ
@DKShivakumar ಅವರು, ತಾವೇ ಸಚಿವರಿಗೆ ರಾಜಕೀಯವಾಗಿ ಪಾದಯಾತ್ರೆ ಮಾಡಲು ಹೇಳಿ ಜನರ ಆತಂಕವನ್ನು ದುಪ್ಪಟ್ಟುಗೊಳಿಸುತ್ತಿದ್ದಾರೆಯೇ ವಿನಃ ಶಾಶ್ವತ ಪರಿಹಾರ ನೀಡುತ್ತಿಲ್ಲ. ಅಧಿವೇಶನದಲ್ಲಿ ಇಂದು ಕಸ್ತೂರಿರಂಗನ್ ವರದಿ ವಿಚಾರವಾಗಿ ರಾಜ್ಯ ಸರ್ಕಾರದ ರಾಜಕೀಯ ಹಾಗೂ ಬೇಜವಾಬ್ದಾರಿತನದ ಬಗ್ಗೆ ನೇರವಾಗಿ ಆಕ್ಷೇಪ ವ್ಯಕ್ತಪಡಿಸಿ, ಜನಹಿತದ ವಿಷಯದಲ್ಲಿ ರಾಜಿಯಿಲ್ಲ ಎನ್ನುವ ನಮ್ಮ ಪಕ್ಷದ ನಿಲುವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲಾಯಿತು ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

