ದಾವಣಗೆರೆ: ಜಿಲ್ಲೆಯಲ್ಲಿ ಕುಡಿಯುವ ನೀರು, ಮೇವಿನ ಅಭಾವ ಎದುರಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಿದ್ಯುತ್ ಹಾಗೂ ನೀರಿನ ಪೋಲು ತಡೆಯಲು ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ. ಎಂ. ಅವರು ಮನವಿ ಮಾಡಿದರು.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯ ಸುಮಾರು 18 ಹಳ್ಳಿಗಳಲ್ಲಿ ಮಾತ್ರ ಪ್ರಸ್ತುತ ನೀರಿನ ಅಭಾವ ಕಂಡುಬಂದಿದೆ. ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಖಾಸಗಿ ಬೋರ್ವೆಲ್ಗಳನ್ನು ವಶಕ್ಕೆ ಪಡೆದು ನೀರು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬರಬಹುದಾದ ಬರ ಎದುರಿಸಲು ತುರ್ತು ಸಂದರ್ಭಗಳಿಗಾಗಿ ಟ್ಯಾಂಕರ್ ದರಗಳನ್ನು ನಿಗದಿಪಡಿಸಲು ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಅಲ್ಲದೆ, ಟ್ಯಾಂಕರ್ ಪೂರೖಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಇಲಾಖೆ ಅಭಿವೃದ್ಧಿಪಡಿಸಿದ ‘ಭೂಮಿ’ ಆ್ಯಪ್ ಮೂಲಕ ಟ್ಯಾಂಕರ್ ನಿರ್ವಹಣೆ ಮಾಡಲಾಗುತ್ತದೆ ಎಂದರು.
ಚನ್ನಗಿರಿ, ಹೊನ್ನಾಳಿ ಭಾಗದ ಕೆರೆಗಳಿಗೆ ಈಗಾಗಲೇ ನೀರು ತುಂಬಿಸಲಾಗಿದ್ದು, ದಾವಣಗೆರೆ ನಗರಕ್ಕೆ ರಾಜನಹಳ್ಳಿ ಬ್ಯಾರೇಜ್ ಮೂಲಕ ಮುಂದಿನ 90 ರಿಂದ 120 ದಿನಗಳಿಗೆ ಸಾಕಾಗುವಷ್ಟು ಕುಡಿಯುವ ನೀರು ಲಭ್ಯವಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ 28 ವಾರಗಳಿಗೆ ಸಾಕಾಗುವಷ್ಟು ಮೇವಿನ ಸಂಗ್ರಹವಿದೆ. ಜಗಳೂರು ಸೇರಿದಂತೆ ಅಗತ್ಯವಿರುವ ಕಡೆಗಳಲ್ಲಿ ತಕ್ಷಣವೇ ‘ಮೇವು ಬ್ಯಾಂಕ್’ ತೆರೆಯಲು ತಹಶೀಲ್ದಾರ್ ನೇತೃತ್ವದಲ್ಲಿ ಕಾರ್ಯಪಡೆಗೆ ರಚಿಸಲಾಗಿದೆ ಎಂದರು.
ಭದ್ರಾದಿಂದ ಕೆರೆಗಳ ಭರ್ತಿಗೆ ಮತ್ತು ಜಾನುವಾರುಗಳ ಕುಡಿಯುವ ನೀರಿಗೆ ಮಾತ್ರ ಆದ್ಯತೆ ನೀಡಲಾಗಿದೆ. ಆದರೆ ಹೆಚ್ಚು ನೀರು ಬೇಡುವ ಭತ್ತದ ಬೆಳೆಗೆ ನೀರು ಬಿಡಲು ತೀರ್ಮಾನವಾಗಿಲ್ಲ ಎಂದರು.
ಭತ್ತ ಬದಲಾಗಿ ರೈತರಿಗೆ ರಾಗಿ ಬಿತ್ತನೆಗೆ ಉತ್ತೇಜನ ನೀಡಿದ ಪರಿಣಾಮವಾಗಿ ಸಾಮಾನ್ಯವಾಗಿ ಬೆಳೆಯುತ್ತಿದ್ದ 10-12 ಸಾವಿರ ಹೆಕ್ಟೇರ್ ಬದಲಿಗೆ ಈ ಬಾರಿ 37,000 ಹೆಕ್ಟೇರ್ ಗಿಂತ ಹೆಚ್ಚು ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ. ಜೊತೆಗೆ, ರೈತರು ಸ್ವಂತ ಜಲಮೂಲಗಳ ಮೂಲಕ 15,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆದಿದ್ದಾರೆ ಎಂದರು.
ಜಿಲ್ಲೆಯ 4 ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿವೆ. ಹರಿಹರ ತಾಲ್ಲೂಕು ಸೇರ್ಪಡೆ ವರದಿ ಸಲ್ಲಿಸಲಾಗಿದೆ. ಜಗಳೂರು ತಾಲೂಕಿನಲ್ಲಿ ತಾಂತ್ರಿಕ ಕಾರಣಗಳಿಂದ (ಸೆಪ್ಟೆಂಬರ್ 2 ರಂದು ಹೆಚ್ಚು ಮಳೆಯಾಗಿದ್ದರಿಂದ ಡ್ರೈ ಸ್ಪೆಲ್ ನಿಯಮದಡಿ) ಶೇ. 4 ರಷ್ಟು ವ್ಯತ್ಯಾಸ ಬಂದಿದ್ದು, ಈ ವಾರದಲ್ಲಿ ಸೂಕ್ತ ನಿರ್ಧಾರ ಬರುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಬೇಸಿಗೆಯ ವಿದ್ಯುತ್ ಅಭಾವ ನಿಭಾಯಿಸಲು ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಸೌರಶಕ್ತಿ ಅಳವಡಿಕೆಗೆ ಟೆಂಡರ್ ಕರೆಯಲಾಗಿದೆ. ಜಿಲ್ಲಾಧಿಕಾರಿ ಕಚೇರಿಗೆ 176 ಕಿಲೋವ್ಯಾಟ್ ಅಗತ್ಯವಿದ್ದು, ಈಗಾಗಲೇ 80 ಕಿಲೋವ್ಯಾಟ್ ಸೋಲಾರ್ ಅಳವಡಿಸಲಾಗಿದೆ ಹಾಗೂ ಉಳಿದ 90 ಕಿಲೋವ್ಯಾಟ್ಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.
ವಿದ್ಯುತ್ ಹಾಗೂ ನೀರಿನ ಬಳಕೆ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ನೀರು ಮತ್ತು ವಿದ್ಯುತ್ ಅನ್ನು ಅತ್ಯಂತ ಜಾಗರೂಕತೆಯಿಂದ ಮತ್ತು ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಸಬೇಕೆಂದು ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ವಿನಂತಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಮತ ಹೊಸಗೌಡರ್, ದುಡಾ ಆಯುಕ್ತೆ ರೇಣುಕಾ ಹಾಗೂ ಇತರರು ಉಪಸ್ಥಿತರಿದ್ದರು.
ಸೆಪ್ಟೆಂಬರ್ 22 ರಂದು ನಗರದಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ
ದಾವಣಗೆರೆ: ನಗರದ ವಿನೋಬನಗರ 2ನೇ ಮುಖ್ಯರಸ್ತೆಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಮತ್ತು ಕಾನೂನು-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸೆಪ್ಟೆಂಬರ್ 22 ರಂದು ಬೆಳಿಗ್ಗೆ 11.00 ಗಂಟೆಯಿಂದ ರಾತ್ರಿ 11.00 ಗಂಟೆಯವರೆಗೆ ನಗರದಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ ಕರ್ನಾಟಕ ಪೊಲೀಸ್ ಕಾಯ್ದೆ, 1963 ರ ಕಲಂ 31 ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಆದೇಶಿಸಿದ್ದಾರೆ.
ಸಂಚಾರ ಮಾರ್ಗಗಳ ವಿವರ:
ಹರಿಹರ ಕಡೆಯಿಂದ ಬರುವ ವಾಹನಗಳು:
ಸರಕು ಲಾರಿಗಳು: ಹರಿಹರದಿಂದ ದಾವಣಗೆರೆಗೆ ಹಳೆ ಪಿ.ಬಿ. ರಸ್ತೆ ಮುಖಾಂತರ ಬರುವ ಲಾರಿಗಳು ಹರಿಹರ ನಗರದಿಂದಲೇ ನೇರವಾಗಿ ಶಿವಮೊಗ್ಗ ಬೈಪಾಸ್ ಮುಖಾಂತರ ಹೊಸ ಎನ್.ಹೆಚ್-48 ರಸ್ತೆ ಮೂಲಕ ಆವರಗೆರೆ ಹತ್ತಿರದ ಬಾಡಾ ಕ್ರಾಸ್, ಡಿಸಿಎಂ ಅಂಡರ್ ಪಾಸ್ ಹಾಗೂ ಧನದ ಮಾರ್ಕೆಟ್ ಕ್ರಾಸ್ ಮುಖಾಂತರ ಎಪಿಎಂಸಿಗೆ ತೆರಳುವುದು.
ಕೆ.ಎಸ್.ಆರ್.ಟಿ.ಸಿ ಬಸ್ಗಳು: ಮೇಲ್ಕಂಡ ಮಾರ್ಗದಲ್ಲೇ ಬಾಡಾ ಕ್ರಾಸ್ ಹಾಗೂ ಆವರಗೆರೆ ಕಡೆಯಿಂದ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು, ನಂತರ ಅದೇ ಮಾರ್ಗವಾಗಿ ಬೆಂಗಳೂರು ಮತ್ತು ಬೆಳಗಾವಿ ಕಡೆಗೆ ನಿರ್ಗಮಿಸುವುದು.
ಖಾಸಗಿ ಬಸ್ಗಳು: ಮೇಲ್ಕಂಡ ಮಾರ್ಗವಾಗಿ ನೂತನ ಖಾಸಗಿ ಬಸ್ ನಿಲ್ದಾಣ ಮತ್ತು ಎಂ.ಜಿ. ಸರ್ಕಲ್ ಮುಖಾಂತರ ಪ್ರಯಾಣಿಕರನ್ನು ಇಳಿಸಿ/ಹತ್ತಿಸಿಕೊಂಡು, ಹರಿಹರದ ಕಡೆಗೆ ಚಲಿಸದೆ ಪುನಃ ಅದೇ ಮಾರ್ಗದಲ್ಲಿ ಹೋಗುವುದು.
ಚಿತ್ರದುರ್ಗದ ಕಡೆಯಿಂದ ಬರುವ ವಾಹನಗಳು:
ಸರಕು ಲಾರಿಗಳು: ಡಿಸಿಎಂ ಅಂಡರ್ ಪಾಸ್ ಹತ್ತಿರದ ಧನದ ಮಾರ್ಕೆಟ್ ಕ್ರಾಸ್ ಮುಖಾಂತರ ಎಪಿಎಂಸಿಗೆ ತೆರಳುವುದು.
ಕೆ.ಎಸ್.ಆರ್.ಟಿ.ಸಿ ಬಸ್ಗಳು: ಬಾಡಾ ಕ್ರಾಸ್ ಮತ್ತು ಆವರಗೆರೆ ಕಡೆಯಿಂದ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು, ನಂತರ ಅದೇ ಮಾರ್ಗವಾಗಿ ಬೆಂಗಳೂರು ಮತ್ತು ಬೆಳಗಾವಿ ಕಡೆಗೆ ನಿರ್ಗಮಿಸುವುದು.
ಖಾಸಗಿ ಬಸ್ಗಳು: ನೂತನ ಖಾಸಗಿ ಬಸ್ ನಿಲ್ದಾಣ ಮತ್ತು ಎಂ.ಜಿ. ಸರ್ಕಲ್ ಮುಖಾಂತರ ಪ್ರಯಾಣಿಕರನ್ನು ಇಳಿಸಿ/ಹತ್ತಿಸಿಕೊಂಡು, ಹರಿಹರದ ಕಡೆಗೆ ಚಲಿಸದೆ ಮೇಲ್ಕಂಡ ಮಾರ್ಗದಲ್ಲಿಯೇ ವಾಪಸ್ ಹೋಗುವುದು.
ಲಾರಿಗಳ ಪಾರ್ಕಿಂಗ್ ವ್ಯವಸ್ಥೆ:
ಜಿ.ಎಂ.ಐ.ಟಿ ಕಾಲೇಜ್ ಹತ್ತಿರ ತಾತ್ಕಾಲಿಕ ರಸ್ತೆ ಬದಿಯಲ್ಲಿ ನಿಲ್ಲಿಸುವಂತಹ ಗೂಡ್ಸ್ ಲಾರಿಗಳನ್ನು ಹಳೆ ಪಿ.ಬಿ. ರಸ್ತೆಯ ಎರಡೂ ಬದಿಗಳಲ್ಲಿ ನಿಲ್ಲಿಸಬಾರದು. ಅವುಗಳನ್ನು ದೂರದಲ್ಲಿ ನಿಲ್ಲಿಸಲು ಖಾಸಗಿ ಪಾರ್ಕಿಂಗ್ ವ್ಯವಸ್ಥೆಯನ್ನು ಖಾಸಗಿ ಲಾರಿ ಮಾಲೀಕರ ಸಂಘ ಹಾಗೂ ಆರ್.ಟಿ.ಒ ಅಧಿಕಾರಿಗಳು ಮಾಡಿಕೊಳ್ಳತಕ್ಕದ್ದು.
ಖಾಸಗಿ ಬಸ್ಗಳ ನಿರ್ಗಮನ:
ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಖಾಸಗಿ ಬಸ್ ನಿಲ್ದಾಣದಿಂದ ಕಾರ್ಯಾಚರಣೆಗೊಳ್ಳುವ ಬಸ್ಗಳು ಎ.ಸಿ. ಕಚೇರಿ ಸರ್ಕಲ್, ಅರುಣ ಸರ್ಕಲ್ ಮುಖಾಂತರ ಹರಿಹರದ ಕಡೆಗೆ ಹಳೆ ಪಿ.ಬಿ. ರಸ್ತೆಗೆ ಬಾರದೇ ಗಾಂಧಿ ಸರ್ಕಲ್ ಮೂಲಕ ಹಡಡಿ ರಸ್ತೆ/ಆವರಗೆರೆ ಕಡೆಗೆ ಹೋಗುವುದು.
ನಗರದೊಳಗಿನ ಸಂಚಾರ ನಿಷೇಧ:
ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯ ಬಂದೋಬಸ್ತ್ ಇರುವುದರಿಂದ ಬೆಳಿಗ್ಗೆ 11.00 ರಿಂದ ರಾತ್ರಿ 11.00 ಗಂಟೆಯವರೆಗೆ ಖಾಸಗಿ ಸಿಟಿ ಬಸ್ಗಳು, ಕೆ.ಎಸ್.ಆರ್.ಟಿ.ಸಿ. ಬಸ್ಗಳು ಹಾಗೂ ಸರಕು ಲಾರಿಗಳು ಮೆರವಣಿಗೆ ಸಾಗುವ ಹಳೆ ಪಿ.ಬಿ. ರಸ್ತೆಯಲ್ಲಿ (ಅಂದರೆ ಎಂ.ಜಿ. ಸರ್ಕಲ್ನಿಂದ ಭಾತಿ ಕೆರೆಯವರೆಗೆ) ಸಂಚರಿಸದಂತೆ ನಿಷೇಧಿಸಲಾಗಿದೆ.
ಈ ವಾಹನ ಸಂಚಾರ ಮಾರ್ಗ ಬದಲಾವಣೆ ಕುರಿತು ಸಾರ್ವಜನಿಕರ ಮಾಹಿತಿಗಾಗಿ ಅಗತ್ಯವಾದ ಸೂಚನಾ ಫಲಕಗಳನ್ನು ಮೇಲ್ಕಂಡ ಸ್ಥಳಗಳಲ್ಲಿ ಅಳವಡಿಸಲು ಪೊಲೀಸ್ ಇಲಾಖೆಗೆ ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಆದೇಶಿಸಿದ್ದಾರೆ.

