ಬೆಂಗಳೂರು: ಕಸ್ತೂರಿ ರಂಗನ್ ವರದಿ ಹಾಗೂ ರಾಜ್ಯದಲ್ಲಿ ತಲೆದೋರಿರುವ ಭೀಕರ ಬರ ಪರಿಸ್ಥಿತಿಗೆ ಸಂಬಂಧಿಸಿದ ಮಹತ್ವದ ವಿಚಾರಗಳ ಕುರಿತು ವಿಸ್ತೃತವಾಗಿ ಚರ್ಚಿಸಿ, ರಾಜ್ಯದ ಹಿತಾಸಕ್ತಿಗೆ ಪೂರಕವಾದ ನಿರ್ಣಯಗಳಿಗೆ ಬರಬೇಕೆಂಬ ಉದ್ದೇಶದಿಂದ ಈ ಅಧಿವೇಶನವನ್ನು ಕರೆಯಲಾಗಿದೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ವಿಧಾನ ಪರಿಷತ್ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿಯ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿಯನ್ನು ರಾಜ್ಯವು ತಿರಸ್ಕರಿಸಿಕೊಂಡು ಬಂದಿರುವ ನಡುವೆಯೂ ಕೇಂದ್ರವು ಅಧಿಸೂಚನೆಗಳನ್ನು ಹೊರಡಿಸುತ್ತಿರುವುದರಿಂದ ಈ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು ಅಗತ್ಯವಾಗಿದೆ ಎಂದರು.
ನಾವೆಲ್ಲರೂ ಏಕ ಕಾಲಕ್ಕೆ ಪರಿಸರವನ್ನು ಉಳಿಸುವ ಮೂಲಕ ಪಶ್ಚಿಮ ಘಟ್ಟಗಳಲ್ಲಿ ವಾಸಿಸುತ್ತಿರುವ ಜನರು ಹಾಗೂ ಭವಿಷ್ಯದ ಪೀಳಿಗೆಗಳ ಹಿತರಕ್ಷಣೆಯನ್ನೂ ಮಾಡಬೇಕಿದೆ. ಪಶ್ಚಿಮ ಘಟ್ಟಗಳು, ಪೂರ್ವ ಘಟ್ಟಗಳು, ಅರಾವಳಿ, ವಿಂಧ್ಯ ಮತ್ತು ಹಿಮಾಲಯ ಮುಂತಾದ ಪರ್ವತ ಶ್ರೇಣಿಗಳ ಉಳಿವು ನಮ್ಮ ಉಳಿವೂ ಆಗಿದೆ. ಅದರ ಜೊತೆಯಲ್ಲಿಯೇ ಅಲ್ಲಿ ತಲೆ ತಲೆಮಾರುಗಳಿಂದ ವಾಸಿಸುತ್ತಿರುವ ಜನರ ಬದುಕಿನ ರಕ್ಷಣೆಯೂ ಆಗಬೇಕಾಗಿದೆ ಎಂದರು.
ಪರಿಸರ ಉಳಿದರೆ ಮಾತ್ರ ಅಲ್ಲಿನ ಜನರ ಬದುಕೂ ಉಳಿಯುತ್ತದೆ. ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ನಾವು ಮುಂದಕ್ಕೆ ಸಾಗಬೇಕಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಸದನವೂ ಚರ್ಚೆ ನಡೆಸಿ ಸಲಹೆಗಳನ್ನು ನೀಡಿದಲ್ಲಿ ಮುಂದಿನ ನಿರ್ಣಯಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ವಿಧಾನ ಪರಿಷತ್‌ನಲ್ಲಿ ಕಸ್ತೂರಿ ರಂಗನ್ ವರದಿಯ ಸಾಧಕಬಾಧಕಗಳ ಚರ್ಚಿಸಿ, ವಸ್ತುನಿಷ್ಠ ನಿಲುವು ತೆಗೆದುಕೊಳ್ಳಬೇಕಾದ ಅಗತ್ಯವನ್ನು ಸದನಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪರಿಸರ ಮತ್ತು ಅರಣ್ಯ ಇಲಾಖೆಯು ಪರಿಸರ (ರಕ್ಷಣೆ) ಕಾಯ್ದೆ, 1986ರ ಅಡಿಯಲ್ಲಿ ಪಶ್ಚಿಮ ಘಟ್ಟಗಳ ಪ್ರದೇಶದ ಪರಿಸರ ಸೂಕ್ಷ್ಮ ವಲಯಗಳನ್ನು ಗುರುತಿಸಿ, ಅದರ ಸಂರಕ್ಷಣೆ, ರಕ್ಷಣೆ ಮತ್ತು ಪುನರುಜೀವನಕ್ಕಾಗಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸೂಚಿಸಲು 2010 ರಲ್ಲಿ ಪ್ರೊ|| ಮಾಧವ್ ಗಾಡ್ಗೀಳ್ ರವರ ನೇತೃತ್ವದಲ್ಲಿ “ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ” (WGEEP)ಯನ್ನು ರಚಿಸಿತ್ತು. ಸದರಿ ಸಮಿತಿಯು ಅಧ್ಯಯನ ನಡೆಸಿ ದಿನಾಂಕ: 30.08.2011ರಂದು ತನ್ನ ವರದಿಯನ್ನು ಸಲ್ಲಿಸಿದೆ.
ಪ್ರೊ|| ಮಾಧವ್ ಗಾಡ್ಗೀಳ್ ಸಮಿತಿಯ ವರದಿಯಲ್ಲಿ ಒಟ್ಟು 1,29,037 ಚದರ ಕಿ.ಮೀ. ವ್ಯಾಪ್ತಿಯ ಪಶ್ಚಿಮ ಘಟ್ಟಗಳ ಪ್ರದೇಶವನ್ನು ಗುರುತಿಸಿ ಮೂರು ಪರಿಸರ ಸೂಕ್ಷ್ಮ ವಲಯಗಳಾಗಿ (ESZ-1, ESZ – 2, & ESZ-3) ವರ್ಗೀಕರಿಸಿ, ಈ ವಿಶಾಲವಾದ ಪ್ರದೇಶಗಳನ್ನು ಸಂರಕ್ಷಿಸುವ ಕುರಿತು ಹಲವು ಶಿಫಾರಸ್ಸುಗಳನ್ನು ನೀಡಲಾಗಿಗಿದೆ. ಆದರೆ, ಪಶ್ಚಿಮ ಘಟ್ಟಗಳ ವ್ಯಾಪ್ತಿಯ ರಾಜ್ಯ ಸರ್ಕಾರಗಳು ಮತ್ತು ಆ ಭಾಗಗಳ ಜನ-ಜನಪ್ರತಿನಿಧಿಗಳು ಮಾಧವ ಗಾಡ್ಗೀಳ್ ಸಮಿತಿಯ ವರದಿಯ ಕುರಿತು ವಿರೋಧಗಳನ್ನು ವ್ಯಕ್ತಪಡಿಸಿದ ಕಾರಣದಿಂದ ರಾಜ್ಯಗಳ ಅಭಿಪ್ರಾಯಗಳನ್ನು ಆಲಿಸಿ, ಗಾಡ್ಗೀಳ್ ಸಮಿತಿಯ ವರದಿಯನ್ನು ಸಮಗ್ರವಾಗಿ ಪರಿಶೀಲಿಸಿ ವರದಿ ಸಲ್ಲಿಸಲು ಕೇಂದ್ರ ಸರ್ಕಾರವು ಡಾ| ಕೆ. ಕಸ್ತೂರಿರಂಗನ್ ರವರ ಅಧ್ಯಕ್ಷತೆಯಲ್ಲಿ 2012ರ ಆಗಸ್ಟ್ ತಿಂಗಳಲ್ಲಿ ಉನ್ನತ ಮಟ್ಟದ ಕಾರ್ಯಪಡೆಯನ್ನು [ High level working group] ರಚಿಸಿತು.
ಡಾ. ಕಸ್ತೂರಿ ರಂಗನ್ ಅವರ ಅಧ್ಯಕ್ಷತೆಯ 11 ಜನರ ಈ ಕಾರ್ಯಪಡೆಯು (Working Group) ಗುಜರಾತಿನ ತಪತಿ ನದಿಯಿಂದ ತಮಿಳುನಾಡಿನ ಕನ್ಯಾಕುಮಾರಿಯವರೆಗೆ ಸುಮಾರು 1,500 ಕಿ.ಮೀ ಉದ್ದವನ್ನು ಒಳಗೊಂಡ ಪಶ್ಚಿಮ ಘಟ್ಟಗಳ ಭೂ ಪ್ರದೇಶಗಳನ್ನು ಅಧ್ಯಯನ ಮಾಡಿ “Report of the High level Working Group on Western Ghats” ಎಂಬ ಹೆಸರಿನಲ್ಲಿ ದಿನಾಂಕ 15-4-2013 ರಂದು ಸಲ್ಲಿಸಿದೆ. ಆ ವರದಿಯಲ್ಲಿ “We the Members of the High level Working Group constituted to study the preservation of ecology. environmental integrity and holistic development of the Western Ghats in view of their rich and unique biodiversity after due deliberation have adopted the report for submission” ಎಂದು ಹೇಳಲಾಗಿದೆ.
ಈ ಕಾರ್ಯಪಡೆಯು 15.04.2013 ರಂದು ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಸದರಿ ವರದಿಯಲ್ಲಿ ಭಾರತದ ಆರು ರಾಜ್ಯಗಳ ಅಂದಾಜು 59,940 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (Eco-Sensitive Area) ಗಳೆಂದು ವಿಭಾಗಿಸಿ ಶಿಫಾರಸ್ಸು ಮಾಡಿತ್ತು.
ಆದರೆ, ಕೇರಳ ಸರ್ಕಾರವು ಆ ವೇಳೆಗೆ ವಿಸ್ತ್ರತ ಅಧ್ಯಯನ ನಡೆಸಿ ಪರಿಸರ ಸೂಕ್ಷ್ಮ ಪ್ರದೇಶವೆಂದು 9,993.7 ಚದರ ಕಿ.ಮೀಗಳನ್ನು ಗುರುತಿಸಿತ್ತು. ಹಾಗಾಗಿ ಕಸ್ತೂರಿ ರಂಗನ್ ವರದಿಯು ಗುರ್ತಿಸಿದ್ದ 13,108 ಚದರ ಕಿ.ಮೀ.ಗಳಿಗೆ ಬದಲಾಗಿ 9,993.7 ಚ.ಕಿ.ಮೀಗಳನ್ನ ಕರಡು ಅಧಿಸೂಚನೆಗಳಲ್ಲಿ ಪ್ರಸ್ತಾಪಿಸಲಾಗುತ್ತಿದೆ. ಆದ್ದರಿಂದಲೇ 59,940 ಚ. ಕಿಮೀಗಳ ಬದಲಿಗೆ 56,825.7 ಕಿಮೀ ಪ್ರದೇಶವನ್ನು ಉಳಿಸಿಕೊಳ್ಳಲಾಗಿದೆ.
ರಾಜ್ಯದಲ್ಲಿ ಕಸ್ತೂರಿ ರಂಗನ್ ಅವರ ವರದಿಯಲ್ಲಿ 1,576 ಗ್ರಾಮಗಳೆಂದು ತಿಳಿಸಲಾಗಿತ್ತು. ಕೇಂದ್ರ ಸರ್ಕಾರದ ಇತ್ತೀಚಿನ ಕರಡು ಅಧಿಸೂಚನೆಯಲ್ಲಿ 1,449 ಗ್ರಾಮಗಳೆಂದು ಪ್ರಸ್ತಾಪಿಸಲಾಗಿದೆ. ಮಾಧವ್ ಗಾಡ್ಲೀಳ್ ಅವರ ಆಯೋಗವು ಇಡೀ ಪಶ್ಚಿಮ ಘಟ್ಟವನ್ನು ಮೂರು ಹಂತದ ಪರಿಸರ ಸೂಕ್ಷ್ಮ ವಲಯ ( ESZ 1,2,3] ಎಂದು ಗುರ್ತಿಸಿ ವಿಭಾಗಿಸಿತ್ತು. 1.29 ಲಕ್ಷ ಚದರ ಕಿ. ಮೀಗಳಷ್ಟು ಪ್ರದೇಶವನ್ನು ಗಾಡ್ಲೀಳ್ ಅವರು ಗುರ್ತಿಸಿದ್ದರು. ಆದರೆ, ಡಾ. ಕಸ್ತೂರಿ ರಂಗನ್ ಅವರ ಕಾರ್ಯಪಡೆಯು ಅದನ್ನು 56,825.7 ಚ. ಕಿ.ಮೀಗೆ ಇಳಿಸಿತು.
ಈ 56,825.7 ಕಿ.ಮೀ.ಗಳಲ್ಲಿ ಕರ್ನಾಟಕವೊಂದರಲ್ಲಿ 20,668 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರ್ತಿಸಲಾಗಿರುತ್ತದೆ. ಈ ಪ್ರದೇಶವು ರಾಜ್ಯದ 10 ಜಿಲ್ಲೆಗಳ 33 ತಾಲ್ಲೂಕುಗಳ 1,576 ಗ್ರಾಮಗಳೆಂದು ಗುರುತಿಸಲಾಗಿತ್ತು. ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳು ಈ ಪಟ್ಟಿಯಲ್ಲಿವೆ..
ಈ ವರದಿಯನುಸಾರ ಗ್ರಾಮವನ್ನು ಒಂದು ಸಣ್ಣ ಘಟಕವಾಗಿ ಪರಿಸರ ಸೂಕ್ಷ್ಮ ಪ್ರದೇಶದ ನಿರ್ಧರಣೆಗೆ ಪರಿಗಣಿಸಲಾಗಿದ್ದು, ಒಂದು ಗ್ರಾಮದ 1/5 ನೇ ಭಾಗ ಅಥವಾ ಅದಕ್ಕಿಂತ ಹೆಚ್ಚಿನ ಭೂ ಪ್ರದೇಶವು ಪಶ್ಚಿಮ ಘಟ್ಟದ ವ್ಯಾಪ್ತಿಯ ಪ್ರದೇಶಗಳ ವ್ಯಾಪ್ತಿಗೆ ಒಳಪಟ್ಟರೆ, ಅಂತಹ ಗ್ರಾಮವನ್ನು ಸಂಪೂರ್ಣವಾಗಿ ಪರಿಸರ ಸೂಕ್ಷ್ಮ ಪ್ರದೇಶವೆಂದು ನಿಗದಿಪಡಿಸಲಾಗಿದೆ.
ಸದರಿ ವರದಿಯಲ್ಲಿ 2 ಭಾಗಗಳಾಗಿ ವಿಂಗಡಣೆ ಮಾಡಲಾಗಿದ್ದು, ಅವುಗಳಲ್ಲಿ ಮೊದಲನೆಯದು ಪರಿಸರಕ್ಕೆ ಹಾನಿಕಾರಕವಾದ ಚಟುವಟಿಕೆಗಳನ್ನು ನಿರ್ಬಂಧಿಸುವುದು. & ಎರಡನೇಯದಾಗಿ ನಿರ್ಬಂಧದಿಂದ ಕಷ್ಟಕ್ಕೊಳಗಾಗುವ ಸ್ಥಳಗಳ ಬದಲಿಗೆ ಪ್ರೋತ್ಸಾಹಕಗಳನ್ನು ನೀಡುವ ವಿಚಾರಗಳು ಅದರಲ್ಲಿ ಅಡಕವಾಗಿವೆ.
ಡಾ.ಕಸ್ತೂರಿ ರಂಗನ್ ಅವರ ಕಾರ್ಯಪಡೆಯ ಶಿಫಾರಸುಗಳನ್ನು ಕೇಂದ್ರ ಸರ್ಕಾರವು 2014ರ ಆಗಸ್ಟ್ 27ರಂದು ಸುಪ್ರೀಂಕೋರ್ಟಿಗೆ ಅಫಿಡವಿಟ್ ಮೂಲಕ ಸಲ್ಲಿಸಿದೆ. ಆ ಅಫಿಡವಿಟ್‌ನಲ್ಲಿ ಕೇಂದ್ರ ಸರ್ಕಾರವು ಪ್ರೊ. ಮಾಧವ್ ಗಾಡ್ಗೀಳ್ ವರದಿಯನ್ನು ತಿರಸ್ಕರಿಸಿ ಡಾ. ಕಸ್ತೂರಿ ರಂಗನ್ ಅವರ ನೇತೃತ್ವದ ಕಾರ್ಯಪಡೆಯು ಸಲ್ಲಿಸಿರುವ ವರದಿಯನ್ನು ಒಪ್ಪಿಕೊಳ್ಳುವುದಾಗಿ ಹೇಳಿದೆ. ಪಶ್ಚಿಮ ಘಟ್ಟಗಳ ಶೇ.37 ರಷ್ಟು ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಿ ಡಾ. ಕಸ್ತೂರಿ ರಂಗನ್ ಸಮಿತಿ ನೀಡಿದ್ದ ಶಿಫಾರಸ್ಸಿನಂತೆ ಮುಂದಿನ ಪ್ರಕ್ರಿಯೆ ನಡೆಸುವುದಾಗಿ ಅಫಿಡವಿಟ್ ನಲ್ಲಿ ಹೇಳಿತ್ತು.
ಕಸ್ತೂರಿ ರಂಗನ್ ವರದಿ ಪಶ್ಚಿಮ ಘಟ್ಟ ಪ್ರದೇಶದ ಪರಿಸರ ಸಂರಕ್ಷಣೆಯ ಜೊತೆಗೆ ಅಲ್ಲಿನ ಜನರ ಜೀವನ, ಕೃಷಿ, ತೋಟಗಾರಿಕೆ, ಮೂಲಸೌಕರ್ಯ ಹಾಗೂ ಅಭಿವೃದ್ಧಿಗೆ ನೇರವಾಗಿ ಸಂಬಂಧಿಸಿದ ವಿಷಯವಾಗಿದೆ. ಮತ್ತೊಂದೆಡೆ, ಮಳೆಯ ಕೊರತೆಯಿಂದ ರಾಜ್ಯದ ಅನೇಕ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ರೈತರು ಮತ್ತು ಗ್ರಾಮೀಣ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಕೃಷಿ ಚಟುವಟಿಕೆಗಳು ಹಾಗೂ ಉದ್ಯೋಗ ಸೇರಿದಂತೆ ಹಲವು ವಿಷಯಗಳ ಕುರಿತು ಸದನದಲ್ಲಿ ಸಮಗ್ರ ಚರ್ಚೆ ನಡೆಯಬೇಕಾಗಿದೆ ಎಂದು ತಿಳಿಸಿದ್ದಾರೆ.
ಇಂತಹ ಮಹತ್ವದ ವಿಷಯಗಳನ್ನು ಮುಂದಿಟ್ಟುಕೊಂಡು ಕರೆಯಲಾದ ವಿಶೇಷ ಅಧಿವೇಶನದಲ್ಲಿ ಪ್ರತಿಯೊಂದು ಪಕ್ಷವೂ ತನ್ನ ಅಭಿಪ್ರಾಯ, ಸಲಹೆ ಹಾಗೂ ಆಕ್ಷೇಪಗಳನ್ನು ಸದನದ ಮುಂದೆ ಮಂಡಿಸುವ ಅವಕಾಶವಿದೆ. ಆದರೆ ಚರ್ಚೆಯ ಬದಲು ನಿರಂತರ ಗದ್ದಲ ಮತ್ತು ಕಲಾಪಕ್ಕೆ ಅಡ್ಡಿಪಡಿಸುವ ಪರಿಸ್ಥಿತಿ ಉಂಟಾದರೆ, ರಾಜ್ಯದ ಜನತೆಗೆ ಸಂಬಂಧಿಸಿದ ಗಂಭೀರ ವಿಚಾರಗಳ ಚರ್ಚೆಯೇ ಹಿಂದೆ ಸರಿಯುತ್ತದೆ ಎಂದಿದ್ದಾರೆ.
ರಾಜ್ಯದ ಜನರ ಬದುಕು ಮತ್ತು ಭವಿಷ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಸದನದಲ್ಲಿ ಅರ್ಥಪೂರ್ಣ ಚರ್ಚೆ ನಡೆಯಬೇಕು. ಭಿನ್ನಾಭಿಪ್ರಾಯಗಳಿದ್ದರೆ ಅವುಗಳನ್ನು ಸದನದಲ್ಲಿ ಮಂಡಿಸಿ, ರಾಜ್ಯದ ಹಿತಾಸಕ್ತಿಗೆ ಪೂರಕವಾಗುವ ರೀತಿಯಲ್ಲಿ ಪರಿಹಾರ ಹುಡುಕುವುದು ನಮ್ಮೆಲ್ಲರ ಜವಾಬ್ದಾರಿ. ಸುಖಾಸುಮ್ಮನೆ ಗದ್ದಲ ಮಾಡಿ ಕಲಾಪಕ್ಕೆ ಅಡ್ಡಿಪಡಿಸುವ ಬದಲು, ರಾಜ್ಯದ ಜನರ ಹಿತಾಸಕ್ತಿಯ ವಿಚಾರಗಳ ಚರ್ಚೆಯಲ್ಲಿ ವಿಪಕ್ಷಗಳು ಆಸಕ್ತಿ ವಹಿಸಿ ಎಂದು ಸಲಹೆ ನೀಡಿದ್ದಾರೆ.

