ಬಾಲಿವುಡ್ನ ಖ್ಯಾತ ನಟಿ ಕರೀನಾ ಕಪೂರ್ ತಮ್ಮ 46ನೇ ಜನ್ಮದಿನದ ಸಂಭ್ರಮದಲ್ಲಿದ್ದು, ಈ ವಯಸ್ಸಿನಲ್ಲೂ ತಮ್ಮ ಸೌಂದರ್ಯ ಮತ್ತು ಫಿಟ್ನೆಸ್ನಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ತಮ್ಮ ದೇಹದ ತೂಕ, ತಾಯ್ತನದ ನಂತರವಾದ ಬದಲಾವಣೆಗಳು ಹಾಗೂ ಆಹಾರ ಪದ್ಧತಿಯ ಬಗ್ಗೆ ಕರೀನಾ ಮುಕ್ತವಾಗಿ ಮಾತನಾಡಿದ್ದು, ಮಹಿಳೆಯರಿಗೆ ದೊಡ್ಡ ಪ್ರೇರಣೆಯಾಗಿದ್ದಾರೆ. 2016ರಲ್ಲಿ ತಮ್ಮ ಮೊದಲ ಮಗ ತೈಮೂರ್ ಜನಿಸಿದಾಗ ಕರೀನಾ ಸುಮಾರು 25 ಕೆಜಿ ತೂಕ ಹೆಚ್ಚಿಸಿಕೊಂಡು 90 ಕೆಜಿ ತಲುಪಿದ್ದರು. ಆದರೆ ಯಾವುದೇ ಕಠಿಣ ನಿಯಮಗಳಿಲ್ಲದೆ, ನೈಸರ್ಗಿಕ ಹಾದಿಯಲ್ಲಿ ತೂಕ ಇಳಿಸಿಕೊಂಡು ಹಳೆಯ ಫಿಟ್ನೆಸ್ಗೆ ಮರಳಿದ್ದರು.
ಗರ್ಭಿಣಿಯಾಗಿದ್ದಾಗ ತೂಕ ಹೆಚ್ಚಾಗುವ ಬಗ್ಗೆ ತಮಗೊತ್ತಿದ್ದರೂ, ಆ ಸಮಯವನ್ನು ಸಂಭ್ರಮದಿಂದ ಆನಂದಿಸಿದ್ದಾಗಿ ಕರೀನಾ ಹೇಳಿಕೊಂಡಿದ್ದಾರೆ. ಹೆರಿಗೆಯ ನಂತರ ಸುಮಾರು 19 ತಿಂಗಳುಗಳಲ್ಲಿ ಅವರು 32 ಕೆಜಿ ತೂಕ ಇಳಿಸಿಕೊಂಡರು. ಆದರೆ ಈ ಪ್ರಕ್ರಿಯೆಯಲ್ಲಿ ಅವರು ಎಂದಿಗೂ ಉಪವಾಸವಿರಲಿಲ್ಲ. ಪಂಜಾಬಿ ಹಿನ್ನೆಲೆಯ ಕರೀನಾ, ಊಟ ಬಿಟ್ಟು ತೆಳ್ಳಗಾಗುವ ಸಂಸ್ಕೃತಿಯನ್ನು ಎಂದಿಗೂ ಬೆಂಬಲಿಸುವುದಿಲ್ಲ. ತಮಗೆ ಬೇಕಾದ ಪೌಷ್ಟಿಕ ಆಹಾರವನ್ನು ಸೇವಿಸುತ್ತಲೇ ಆರೋಗ್ಯಕರವಾಗಿ ದೇಹದ ತೂಕವನ್ನು ಹದಕ್ಕೆ ತಂದರು.
ಖ್ಯಾತ ಪೋಷಕಾಂಶ ತಜ್ಞೆ ಋಜುತಾ ದಿವೇಕರ್ ಅವರ ಮಾರ್ಗದರ್ಶನದಲ್ಲಿ ತುಪ್ಪ ಸವರಿದ ಪರಾಠದಂತಹ ದೇಸಿ ಅಡುಗೆಗಳನ್ನು ಸೇವಿಸುತ್ತಲೇ ಅವರು ಫಿಟ್ನೆಸ್ ಕಾಯ್ದುಕೊಂಡರು. ಇದರ ಜೊತೆಗೆ ಫಿಟ್ನೆಸ್ ತರಬೇತುದಾರೆ ನಮ್ರತಾ ಪುರೋಹಿತ್ ಅವರ ಸೂಚನೆಯಂತೆ ಆರಂಭದಲ್ಲಿ ಸರಳ ಹಾಗೂ ನಂತರದ ದಿನಗಳಲ್ಲಿ ತೀವ್ರ ಸ್ವರೂಪದ ಪೈಲೇಟ್ಸ್ ವ್ಯಾಯಾಮಗಳನ್ನು ಅಭ್ಯಾಸ ಮಾಡಿದರು. ಕೇವಲ ತೆಳ್ಳಗಾಗುವ ಗುರಿಗಿಂತಲೂ, ತಮ್ಮ ದೇಹವನ್ನು ಗೌರವಿಸುವುದು ಮತ್ತು ಕರುಣೆಯಿಂದ ನಡೆದುಕೊಳ್ಳುವುದು ಮುಖ್ಯ ಎಂದು ಪ್ರತಿಪಾದಿಸುವ ಕರೀನಾ ಕಪೂರ್, ಇಂದಿನ ಮಹಿಳೆಯರಿಗೆ ಬಾಡಿ ಪಾಸಿಟಿವಿಟಿ ಕುರಿತು ದೊಡ್ಡ ಸಂದೇಶ ನೀಡಿದ್ದಾರೆ.

