ಸುಮಾರು 4 ದಶಕಗಳಿಂದ ನಡೆಯುತ್ತಿದ್ದ ಮದ್ಯದ ಮಾರಾಟ ಪರವಾನಗಿ ವಿವಾದಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಾಲಯದ ಹಿಂದಿನ ನಿರ್ದೇಶನಗಳಿದ್ದರೂ ಹಿರಿಯ ನಾಗರಿಕರೊಬ್ಬರನ್ನು ಪದೇ ಪದೇ ವಿಚಾರಣೆ ಹಾಗೂ ಮೊಕದ್ದಮೆಗಳಿಗೆ ಎಳೆದು ತಂದಿದ್ದಕ್ಕಾಗಿ ಮಹಾರಾಷ್ಟ್ರ ಸರ್ಕಾರವು 91 ವರ್ಷದ ಸೂರ್ಯಕಾಂತ್ ಖಾಲಡ್ಕರ್ ಅವರಿಗೆ 2.5 ಲಕ್ಷ ರೂಪಾಯಿ ವೆಚ್ಚವನ್ನು ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ತಮ್ಮ ಜೀವಿತಾವಧಿಯ ಕಾಲು ಶತಮಾನಕ್ಕೂ ಹೆಚ್ಚು ಕಾಲವನ್ನು ಕಾನೂನು ಹೋರಾಟದಲ್ಲೇ ಕಳೆಯುವಂತೆ ಮಾಡಿದ್ದಲ್ಲದೆ, ತಮ್ಮ ನ್ಯಾಯಯುತ ಹಕ್ಕುಗಳನ್ನು ಸ್ಥಾಪಿಸಲು ಜಿಲ್ಲಾಧಿಕಾರಿ, ಅಬಕಾರಿ ಆಯುಕ್ತರು ಮತ್ತು ಸಚಿವರ ಮುಂದೆ ಪದೇ ಪದೇ ಅಲೆದಾಡುವಂತೆ ಮಾಡಿದ್ದಕ್ಕಾಗಿ ಈ ವೆಚ್ಚವನ್ನು ನೀಡಲಾಗಿದೆ ಎಂದು ನ್ಯಾಯಮೂರ್ತಿ ಸೋಮಶೇಖರ್ ಸುಂದರೇಶನ್ ಅವರಿದ್ದ ಪೀಠ ಸ್ಪಷ್ಟಪಡಿಸಿದೆ.
ಈ ಸುದೀರ್ಘ ವಿವಾದದ ಬೇರುಗಳು 1973 ಕ್ಕೆ ಹೋಗಿ ಮುಟ್ಟುತ್ತವೆ. ಆ ಸಮಯದಲ್ಲಿ ಬಾಲಕೃಷ್ಣ ವಾಡ್ಕರ್ ಎಂಬುವವರಿಗೆ ವಿದೇಶಿ ಮದ್ಯ ಮಾರಾಟದ ಪರವಾನಗಿ ಮಂಜೂರಾಗಿತ್ತು. ನಂತರ 1979 ರಲ್ಲಿ ವಾಡ್ಕರ್ ಅವರು ಸೂರ್ಯಕಾಂತ್ ಖಾಲಡ್ಕರ್ ಮತ್ತು ಅವರ ತಂದೆಯೊಂದಿಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದ್ದರು. ಇದರಲ್ಲಿ ಖಾಲಡ್ಕರ್ ಕುಟುಂಬವು 90 ಪ್ರತಿಶತ ಪಾಲನ್ನು ಹೊಂದಿದ್ದರೆ, ವಾಡ್ಕರ್ ಕೇವಲ 10 ಪ್ರತಿಶತ ಪಾಲನ್ನು ಹೊಂದಿದ್ದರು.
ಆದರೆ 1985 ರಲ್ಲಿ ವಾಡ್ಕರ್ ನಿಧನರಾದ ನಂತರ, ಅವರ ಪತ್ನಿ ಶೋಭಾ ಹಾಗೂ ಸೂರ್ಯಕಾಂತ್ ಖಾಲಡ್ಕರ್ ನಡುವೆ ಪರವಾನಗಿಗಾಗಿ ತಿಕ್ಕಾಟ ಆರಂಭವಾಯಿತು. 2002 ರಲ್ಲಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಪಾಲುದಾರರ ಸಾವಿನೊಂದಿಗೆ ಆ ಹಳೆಯ ಪಾಲುದಾರಿಕೆ ಮತ್ತು ಪರವಾನಗಿ ಅಂತ್ಯಗೊಂಡಿದೆ ಎಂದು ಸ್ಪಷ್ಟಪಡಿಸಿತ್ತು. ಜತೆಗೆ ಇಬ್ಬರೂ ಸಲ್ಲಿಸಿರುವ ಕೋರಿಕೆಯನ್ನು ಹೊಸ ಅರ್ಜಿಗಳೆಂದು ಪರಿಗಣಿಸಿ ವಿದೇಶಿ ಮದ್ಯ ನಿಯಮಾವಳಿಗಳ ಅನ್ವಯ ನಿರ್ಧರಿಸುವಂತೆ ಅಬಕಾರಿ ಇಲಾಖೆಗೆ ನಿರ್ದೇಶನ ನೀಡಿತ್ತು.
ಆದರೆ ಸರ್ಕಾರದ ಅಧಿಕಾರಿಗಳು ನ್ಯಾಯಾಲಯದ ಈ ಆದೇಶವನ್ನು ಸರಿಯಾಗಿ ಜಾರಿಗೊಳಿಸದ ಕಾರಣ ಪ್ರಕರಣವು 2016 ರಲ್ಲಿ ಮತ್ತೊಮ್ಮೆ ಹೈಕೋರ್ಟ್ ಮೆಟ್ಟಿಲೇರಿತು. ಆಗಲೂ ನ್ಯಾಯಾಲಯವು ಹಳೆಯ ಪರವಾನಗಿಯನ್ನು ವರ್ಗಾವಣೆ ಮಾಡುವ ಬದಲು ಹೊಸದಾಗಿ ಪರಿಶೀಲಿಸಬೇಕು ಎಂದು ಪುನರುಚ್ಚರಿಸಿತ್ತು. ಸರ್ಕಾರದ ಕಡೆಯಿಂದ ಈ ಆದೇಶಗಳ ವಿರುದ್ಧ ಯಾವುದೇ ಮೇಲ್ಮನವಿ ಸಲ್ಲಿಸಿರಲಿಲ್ಲ.
ಇಷ್ಟೆಲ್ಲಾ ಆದರೂ, 2017 ರಲ್ಲಿ ಜಿಲ್ಲಾಧಿಕಾರಿಗಳು ಹಳೆಯ ಪರವಾನಗಿಯನ್ನು ನೇರವಾಗಿ ವಾಡ್ಕರ್ ಅವರ ಪತ್ನಿ ಶೋಭಾ ಅವರ ಹೆಸರಿಗೆ ವರ್ಗಾಯಿಸಿ ಆದೇಶಿಸಿದರು. ಇದನ್ನು 2022 ರಲ್ಲಿ ರದ್ದುಗೊಳಿಸಿದ ಅಬಕಾರಿ ಆಯುಕ್ತರು, ಹಿಂದಿನ 90 ಮತ್ತು 10 ಅನುಪಾತದ ಪಾಲುದಾರಿಕೆಯನ್ನು ಪರಿಗಣಿಸಲು ಸೂಚಿಸಿದರು. ಆದರೆ 2023 ರ ಅಕ್ಟೋಬರ್ನಲ್ಲಿ ಅಬಕಾರಿ ಸಚಿವರು ಆಯುಕ್ತರ ಆದೇಶವನ್ನು ಬದಿಗೊತ್ತಿ, ಜಿಲ್ಲಾಧಿಕಾರಿಗಳ ಪರವಾನಗಿ ವರ್ಗಾವಣೆ ಆದೇಶವನ್ನೇ ಪುನಃ ಎತ್ತಿಹಿಡಿದರು. ಇದರಿಂದಾಗಿ 91 ವರ್ಷದ ವೃದ್ಧ ಸೂರ್ಯಕಾಂತ್ ಅವರು ಅನಿವಾರ್ಯವಾಗಿ ಮೂರನೇ ಬಾರಿಗೆ ಹೈಕೋರ್ಟ್ ಕದ ತಟ್ಟಬೇಕಾಯಿತು.
ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ಆಕ್ಷೇಪಿಸಿದ ನ್ಯಾಯಾಲಯ, ಹೊಸ ಪರವಾನಗಿ ನೀಡಲು ನೀತಿಯಲ್ಲಿ ಅವಕಾಶವಿಲ್ಲದಿದ್ದರೆ ಎರಡೂ ಅರ್ಜಿಗಳನ್ನು ತಿರಸ್ಕರಿಸಬಹುದಿತ್ತು. ಆದರೆ ಮೂಲ ಪರವಾನಗಿದಾರರ ವಾರಸುದಾರರು ಎಂಬ ಏಕೈಕ ಕಾರಣಕ್ಕೆ ಶೋಭಾ ಅವರಿಗೆ ಮಣೆ ಹಾಕಿರುವುದು ನ್ಯಾಯಾಲಯದ ಹಿಂದಿನ ತೀರ್ಪುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದೆ. ಅದೇ ನಿರ್ಧಾರವನ್ನು ಮರುಹಂಚಿಕೆ ಅಥವಾ ಮರುಮಂಜೂರಾತಿ ಎಂದು ಕರೆಯುವುದು ಕೇವಲ ಹಳೆಯ ವೈನ್ ಅನ್ನು ಹೊಸ ಬಾಟಲಿಯಲ್ಲಿ ನೀಡಿದಂತೆ, ಇದು ಸಂಪೂರ್ಣವಾಗಿ ಅಸಮರ್ಥನೀಯ ಎಂದು ಪೀಠ ತರಾಟೆಗೆ ತೆಗೆದುಕೊಂಡಿದೆ.
ಹಿಂದಿನ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿರುವ ಸರ್ಕಾರವು, ಈಗಲಾದರೂ 90 ಮತ್ತು 10 ಅನುಪಾತದ ಆಧಾರದಲ್ಲಿ ಎರಡೂ ಕಡೆಯವರಿಗೂ ಅನುಕೂಲವಾಗುವಂತೆ ನೀತಿ ರೂಪಿಸಿ ತನ್ನ ತಪ್ಪನ್ನು ತಿದ್ದಿಕೊಳ್ಳಬಹುದು ಎಂದು ನ್ಯಾಯಾಲಯ ಸಲಹೆ ನೀಡಿದೆ. ಅಲ್ಲದೆ ತನ್ನ ತೀರ್ಪಿನ ಜಾರಿಗೆ ತಡೆ ನೀಡಲು ನಿರಾಕರಿಸಿದ ನ್ಯಾಯಪೀಠ, ಹಿರಿಯ ನಾಗರಿಕರಿಗೆ ನಿಗದಿತ ವೆಚ್ಚವನ್ನು ಪಾವತಿಸಿ ಆದೇಶದಂತೆ ನಡೆದುಕೊಳ್ಳಲು ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

