ಮೃಣಾಲ್ ಠಾಕೂರ್ ಮತ್ತು ಹುಮಾ ಖುರೇಷಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಪೂಜಾ ಮೇರಿ ಜಾನ್’ ಬಾಲಿವುಡ್ ಥ್ರಿಲ್ಲರ್ ಸಿನಿಮಾ ಕೊನೆಗೂ ನೇರವಾಗಿ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಸುಮಾರು ನಾಲ್ಕು ವರ್ಷಗಳ ಕಾಲ ತಡೆಹಿಡಿಯಲ್ಪಟ್ಟಿದ್ದ ಈ ಚಿತ್ರವು ಮುಂಬರುವ ಅಕ್ಟೋಬರ್ 2, 2026 ರಂದು ಜೀ5 (ZEE5) ಒಟಿಟಿಯಲ್ಲಿ ನೇರವಾಗಿ ಪ್ರಸಾರವಾಗಲಿದೆ.
ನವಜೋತ್ ಗುಲಾಟಿ ನಿರ್ದೇಶನದ ಹಾಗೂ ದಿನೇಶ್ ವಿಜನ್ ಅವರ ‘ಮ್ಯಾಡಾಕ್ ಫಿಲ್ಮ್ಸ್’ ನಿರ್ಮಿಸಿರುವ ಈ ಸಿನಿಮಾ 2022 ರಲ್ಲೇ ಚಿತ್ರೀಕರಣ ಪೂರ್ಣಗೊಳಿಸಿತ್ತು. ಆದರೆ ಕಾರಣಾಂತರಗಳಿಂದ ಬಿಡುಗಡೆಯಾಗದೆ ಉಳಿದುಕೊಂಡಿತ್ತು. ಇದೀಗ ದಸರಾ ಹಬ್ಬದ ಸಮಯದಲ್ಲಿ ನೇರವಾಗಿ ಒಟಿಟಿಗೆ ತರಲು ನಿರ್ಮಾಪಕರು ನಿರ್ಧರಿಸಿದ್ದಾರೆ.
ಚಿತ್ರದಲ್ಲಿ ಮೃಣಾಲ್ ಠಾಕೂರ್ ‘ಪೂಜಾ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಆಕೆಯ ಪ್ರಿಯಕರ ಅನಿಕೇತ್ ಸಾವಿನ ನಂತರ ಆಕೆಯ ಜೀವನದಲ್ಲಿ ಎದುರಾಗುವ ತಿರುವುಗಳ ಸುತ್ತ ಕಥೆ ಸಾಗುತ್ತದೆ. ಹುಮಾ ಖುರೇಷಿ ‘ಸನಾ’ ಎಂಬ ವಕೀಲೆ ಹಾಗೂ ಪೂಜಾಳ ಆಪ್ತ ಸ್ನೇಹಿತೆಯಾಗಿ ಅಭಿನಯಿಸಿದ್ದು, ಈ ಪ್ರಕರಣದ ತೊಡಕುಗಳನ್ನು ಬಿಡಿಸಲು ನೆರವಾಗುತ್ತಾರೆ.
ಅತಿಯಾದ ಹಠ, ಅನುಮಾನ, ಆರೋಪ ಹಾಗೂ ಪೂರ್ವಾಗ್ರಹ ಪೀಡಿತ ನಿರ್ಧಾರಗಳ ಪರಿಣಾಮಗಳ ಕುರಿತು ಬೆಳಕು ಚೆಲ್ಲುವ ಈ ಥ್ರಿಲ್ಲರ್ ಚಿತ್ರದಲ್ಲಿ ವಿಕ್ರಮ್ ಸಿಂಗ್ ಚೌಹಾಣ್ ಮತ್ತು ಹಿರಿಯ ನಟ ವಿಜಯ್ ರಾಜ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

