ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಯ ಒಂದರಿಂದ 10ನೇ ತರಗತಿ ಮಕ್ಕಳಿಗೆ 2026- 27 ನೇ ಸಾಲಿನಲ್ಲಿ ವಿತರಿಸಿದ ಶೂ ಮತ್ತು ಸಾಕ್ಸ್ ಗಳ ಗುಣಮಟ್ಟದ ಬಗ್ಗೆ ಆರೋಪಗಳು ಕೇಳಿ ಬಂದ ಹಿನ್ನೆಲೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಸರ್ಕಾರಿ ಶಾಲೆಗಳ ಒಂದರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿತರಿಸಿದ ಶೂ ಮತ್ತು ಸಾಕ್ಸ್ ಗಳು ಒಂದು ವಾರದಲ್ಲಿಯೇ ಕಿತ್ತುಕೊಂಡು ಹೋಗುತ್ತಿವೆ. ಈ ಹಿನ್ನೆಲೆಯಲ್ಲಿ ದೂರುಗಳು ಸಲ್ಲಿಕೆಯಾಗಿದ್ದವು. ಭ್ರಷ್ಟಾಚಾರ ಆರೋಪ ಕೂಡ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತರು ವರದಿ ಕೇಳಿದ್ದಾರೆ.
ಉಪ ಲೋಕಾಯುಕ್ತರ ಸೂಚನೆ ಬೆನ್ನಲ್ಲೇ ಉಪ ಲೋಕಾಯುಕ್ತ-2ರ ವ್ಯಾಪ್ತಿಯ 16 ಜಿಲ್ಲೆಗಳಿಗೆ ಸಂಬಂಧಿಸಿದಂತೆ ಉಪ ನಿರ್ದೇಶಕರು ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ದೂರು ದಾಖಲಿಸಿದೆ. ಆಯಾ ಜಿಲ್ಲೆಯ ಪೊಲೀಸ್ ಅಧೀಕ್ಷಕರು ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ ಸಂಬಂಧಿತ ದಾಖಲೆಗಳ ಜೊತೆಗೆ ಎರಡು ವಾರದೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಎಲ್ಲ ಜಿಲ್ಲೆಗಳ ಉಸ್ತುವಾರಿ ಸಚಿವರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು, ಮುಖ್ಯಮಂತ್ರಿಗಳಿಗೂ ಈ ಕುರಿತಂತೆ ಸೂಕ್ತ ನಿರ್ದೇಶನ ನೀಡಲು ಸೂಚಿಸಲಾಗಿದೆ. ಮಕ್ಕಳಿಗೆ ವಿತರಿಸಲಾದ ಶೂ ಮತ್ತು ಸಾಕ್ಸ್ ಗಳು ಕಳಪೆ ಗುಣಮಟ್ಟದಿಂದ ಕೂಡಿದ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಶಿಕ್ಷಣ ಇಲಾಖೆ ಕೂಡ ಆಯಾ ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದೆ.
ಮೀನುಗಾರಿಕೆ ಸಲಕರಣೆ ವಿತರಣೆ: ಅರ್ಜಿ ಆಹ್ವಾನ
ಮಡಿಕೇರಿ: ಕೊಡಗು ಜಿಲ್ಲೆಯ ಮೀನುಗಾರಿಕೆ ಇಲಾಖೆ ವತಿಯಿಂದ ಜಿಲ್ಲಾ ವಲಯ ಒಳನಾಡು ಮೀನುಗಾರಿಕೆ ಅಭಿವೃದ್ಧಿ ಸಹಾಯ ಕಾರ್ಯಕ್ರಮದಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮತ್ತು ಸಮಗ್ರ ಮೀನುಗಾರಿಕೆ ಅಭಿವೃದ್ಧಿ ಯೋಜನೆಯಡಿ ಸಾಮಾನ್ಯ ವರ್ಗದ ಮೀನು ಕೃಷಿಕರಿಗೆ ಮೀನು ಹಿಡಿಯುವ ಸಲಕರಣೆಗಳನ್ನು ಉಚಿತವಾಗಿ ವಿತರಿಸಲು ಸೇವಾ ಸಿಂಧು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಮೀನುಗಾರರಿಗೆ/ ಮೀನು ಕೃಷಿಕರಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್, 05 ರ ಸಂಜೆ 5.30 ಗಂಟೆ ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸುವವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ಪೂರ್ಣ/ ಅರೆಕಾಲಿಕ ಮೀನುಗಾರರಾಗಿರಬೇಕು. ಕೊಡಗು ಜಿಲ್ಲೆಯಲ್ಲಿ ನೆಲೆಸಿರಬೇಕು. ಅರ್ಜಿಯೊಂದಿಗೆ ಭಾವಚಿತ್ರ-2, ವಿಳಾಸ ಪುರಾವೆ ಮತ್ತು ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ನೂತನ ಆರ್ಡಿ ಸಂಖ್ಯೆ ಒಳಗೊಂಡಿರಬೇಕು). ಮೀನುಗಾರಿಕೆಯಲ್ಲಿ ತೊಡಗಿರುವ ಕುರಿತು ದೃಢೀಕರಣ ಪ್ರಮಾಣ ಪತ್ರ/ಪರವಾನಗಿ ಪ್ರತಿ, ಪಡಿತರ ಚೀಟಿ ಅಥವಾ ಇತರೆ ದಾಖಲಾತಿಗಳ ಪ್ರತಿ ಸಲ್ಲಿಸಬೇಕು.
ಆಯ್ಕೆ ಪ್ರಕ್ರಿಯೆ ಪ್ರಕಾರದ ನಿಯಮಾನುಸಾರ ನಿಗದಿಪಡಿಸಿರುವ ಗುರಿ ರೀತ್ಯಾ ಮಾಡಲಾಗುವುದು. ನಿಗದಿಪಡಿಸಿರುವ ಗುರಿಗಿಂತ ಹೆಚ್ಚಿನ ಅರ್ಜಿಗಳು ಸ್ವೀಕೃತವಾಗಿದ್ದಲ್ಲಿ ಜಿಲ್ಲಾ ಪಂಚಾಯತ್ ಫಲಾನುಭವಿ ಆಧಾರಿತ ಕಾರ್ಯಕ್ರಮಗಳ ಆಯ್ಕೆ ಸಮಿತಿಯಿಂದ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ಕಚೇರಿಯ ಸಮಯದಲ್ಲಿ ತಾಲ್ಲೂಕು ಕಚೇರಿಗೆ ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಸಚಿನ್ ತಿಳಿಸಿದ್ದಾರೆ.

