ತುಮಕೂರು: ರಾಜ್ಯದಲ್ಲಿ ಬರದಿಂದ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾಕ್ಕೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ತುಮಕೂರು ಜಿಲ್ಲಾಡಳಿತ ಹಾಗೂ ಪ್ರಜಾಸೇವಾ ಇಲಾಖೆಯ ವತಿಯಿಂದ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗದ ಎಸ್‌ಎಲ್‌ವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಸಭೆಗೆ ಚಾಲನೆ ನೀಡಿ, ಬಳಿಕ ಮಾತನಾಡಿದೆ.
ರೈತರ ಸಾಲಮನ್ನಾಕ್ಕೆ ಕೇಂದ್ರಕ್ಕೆ ಮನವಿ : ಬರದಿಂದಾಗಿ ರೈತರು ಸಂಕಷ್ಟದಲ್ಲಿದ್ದು, ಅವರಿಗೆ ಪರಿಹಾರ ನೀಡುವ ಅಗತ್ಯವಿದೆ. ರಾಜ್ಯ ಸರ್ಕಾರ ಈಗಾಗಲೇ ರೈತರ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿದೆ. ಆದರೆ, ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂಬ ಬೇಡಿಕೆ ರೈತ ಸಮುದಾಯದಿಂದ ಬರುತ್ತಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸಲಾಗಿದೆ ಎಂದರು.
ಬರ ಪರಿಸ್ಥಿತಿಯಲ್ಲಿ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಆದ್ಯತೆ ನೀಡಿದ್ದು, ರೈತರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ನಮ್ಮ ಸರ್ಕಾರ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುತ್ತಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಒಂದೊಂದು ಕೋಟಿ ರೂಪಾಯಿ, ಜಿಲ್ಲೆಗಳಿಗೆ 3 ಮತ್ತು 4 ಕೋಟಿ ರೂಪಾಯಿಗಳವರೆಗೆ ಹಣ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಆ ಹಣವನ್ನು ಜಿಲ್ಲಾ ಪಂಚಾಯಿತಿಯಿಂದ ಕುಡಿಯುವ ನೀರಿಗಾಗಿ ಖರ್ಚು ಮಾಡಲಾಗಿದೆ. ಇನ್ನೂ ಹಣದ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಬಳಿ ಸುಮಾರು 15 ಕೋಟಿ ರೂಪಾಯಿ ಹಣ ಇರಿಸಲಾಗಿದ್ದು, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾದ ಕಡೆ ಆ ಹಣವನ್ನು ಬಳಸಿಕೊಳ್ಳುವಂತೆ ಸರ್ಕಾರದಿಂದ ಸೂಚನೆ ನೀಡಲಾಗಿದೆ ಎಂದರು.
ರೈತರ ಸಾಲಮನ್ನಾಕ್ಕೆ ಕೇಂದ್ರಕ್ಕೆ ಮನವಿ : ಬರದಿಂದಾಗಿ ರೈತರು ಸಂಕಷ್ಟದಲ್ಲಿದ್ದು, ಅವರಿಗೆ ಪರಿಹಾರ ನೀಡುವ ಅಗತ್ಯವಿದೆ. ರಾಜ್ಯ ಸರ್ಕಾರ ಈಗಾಗಲೇ ರೈತರ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿದೆ. ಆದರೆ, ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂಬ ಬೇಡಿಕೆ ರೈತ ಸಮುದಾಯದಿಂದ ಬರುತ್ತಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸಲಾಗಿದೆ.
ಹಿಂದೆ ಡಾ. ಮನಮೋಹನ್ ಸಿಂಗ್ ಅವರು ದೇಶದ ರೈತರ 72 ಸಾವಿರ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡುವ ತೀರ್ಮಾನ ಕೈಗೊಂಡಿದ್ದರು. ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲಿನ ಹಣ ಸರಿಯಾಗಿ ಬರುತ್ತಿಲ್ಲ. ಜಲಜೀವನ್ ಮಿಷನ್‌ನಲ್ಲಿ ರಾಜ್ಯಕ್ಕೆ ಬರಬೇಕಾದ ಸುಮಾರು 15ರಿಂದ 17 ಸಾವಿರ ಕೋಟಿ ರೂಪಾಯಿ ಹಣವೂ ಬರುತ್ತಿಲ್ಲ. ಹೀಗಾಗಿ ಇಡೀ ದೇಶದ ರೈತರ ಸಾಲವನ್ನು ಕೇಂದ್ರ ಸರ್ಕಾರವೇ ಮನ್ನಾ ಮಾಡಲಿ. ಅದರ ಸಂಪೂರ್ಣ ಕ್ರೆಡಿಟ್ ಅನ್ನು ಕೇಂದ್ರ ಸರ್ಕಾರವೇ ತೆಗೆದುಕೊಳ್ಳಲಿ. ಅದರ ಪಾಲನ್ನು ನಾವು ಕೇಳುವುದಿಲ್ಲ ಎಂದರು.
ಬಡವರು, ಕಾರ್ಮಿಕರು, ಮೀನುಗಾರರಿಗೆ ಅನುಕೂಲ ಕಲ್ಪಿಸಲು ಕ್ರಮ : ಮುಖ್ಯಮಂತ್ರಿ ಹಾಗೂ ಸಂಪುಟದ ಸಚಿವರು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿದ್ದೇವೆ. ಬಡವರು, ಮೀನುಗಾರರು ಹಾಗೂ ಸಾಮಾನ್ಯ ಕಾರ್ಮಿಕ ವರ್ಗದವರಿಗೆ ಅನುಕೂಲವಾಗುವಂತೆ ಸುಮಾರು 32 ಸಾವಿರ ಕೋಟಿ ರೂಪಾಯಿಗಳ ಕಾರ್ಯಕ್ರಮಗಳನ್ನು ಪ್ರಕಟಿಸಿ ಬಂದಿದ್ದೇವೆ ಎಂದರು.
ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ : ತುಮಕೂರು ಜಿಲ್ಲೆಯ ಶಾಸಕರು ಹಾಗೂ ನಾನು ಮುಖ್ಯಮಂತ್ರಿಗಳಿಗೆ ಜಿಲ್ಲೆಯ ಹಲವು ಜ್ವಲಂತ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದ್ದೇವೆ. ಬೆಂಗಳೂರಿಗೆ ಕೇವಲ 65 ಕಿಲೋಮೀಟರ್ ದೂರದಲ್ಲಿರುವ ತುಮಕೂರು ಜಿಲ್ಲೆಯೂ ಅಭಿವೃದ್ಧಿಯಾಗಬೇಕು. ಈ ಭಾಗಕ್ಕೆ ವಿಮಾನ ನಿಲ್ದಾಣ ತರಲು ಪ್ರಯತ್ನಿಸುತ್ತಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಅದು ಮಂಜೂರಾದರೆ ಈ ಭಾಗದ ಯುವಕರು ಹಾಗೂ ಜನರಿಗೆ ಅನುಕೂಲವಾಗಲಿದೆ. ಆದರೆ, ವಿಮಾನ ನಿಲ್ದಾಣಕ್ಕಾಗಿ ರೈತರು ಜಮೀನು ಕಳೆದುಕೊಳ್ಳಬಾರದು. ಸರ್ಕಾರಿ ಜಮೀನು ಹಾಗೂ ಸ್ವಯಂಪ್ರೇರಣೆಯಿಂದ ಜಮೀನು ನೀಡಲು ಮುಂದಾಗುವವರ ಜಮೀನನ್ನು ಬಳಸಿಕೊಂಡು ವಿಮಾನ ನಿಲ್ದಾಣ ನಿರ್ಮಿಸಬಹುದು ಎಂದರು.
ಬಡವರಿಗೆ 15 ಲಕ್ಷ ನಿವೇಶನ : ಪ್ರಜಾಸೇವಾ ಆಂದೋಲನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮನೆ ಹಾಗೂ ನಿವೇಶನಕ್ಕಾಗಿ ಅರ್ಜಿಗಳು ಬಂದಿವೆ. ರಾಜ್ಯದಲ್ಲಿ ಬಡವರಿಗೆ ಸುಮಾರು 15 ಲಕ್ಷ ನಿವೇಶನಗಳನ್ನು ನೀಡಲು ಮುಖ್ಯಮಂತ್ರಿ ಹಾಗೂ ನಾನು ತೀರ್ಮಾನಿಸಿದ್ದೇವೆ. ಕಳೆದ 30-40 ವರ್ಷಗಳಿಂದ ಈ ರೀತಿಯ ಕಾರ್ಯಕ್ರಮವನ್ನು ಹೆಚ್ಚಿನ ಪ್ರಮಾಣದಲ್ಲಿ ಮುಂದುವರಿಸಿರಲಿಲ್ಲ. ಈ ಬಾರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಸುಮಾರು 15 ಲಕ್ಷ ನಿವೇಶನಗಳನ್ನು ನೀಡಲು ತೀರ್ಮಾನಿಸಿದೆ. 30×40 ಅಡಿ ಅಳತೆಯ ನಿವೇಶನಗಳನ್ನೇ ನೀಡಲಾಗುವುದು ಎಂದರು.
ಕಂದಾಯ ಸಚಿವನಾಗಿ ಈ ವರ್ಷದ ಡಿಸೆಂಬರ್ ಒಳಗಾಗಿ ಐದು ಲಕ್ಷ ನಿವೇಶನಗಳನ್ನು ನೀಡಲೇಬೇಕು ಎಂದು ತೀರ್ಮಾನಿಸಿದ್ದೇನೆ. ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯಲ್ಲಿ ಹೆಚ್ಚಿನ ನಿವೇಶನಗಳನ್ನು ಗುರುತಿಸುವಂತೆ ಸೂಚಿಸಲಾಗಿದೆ. ಈಗಾಗಲೇ ಸುಮಾರು 20 ಸಾವಿರ ನಿವೇಶನಗಳನ್ನು ಸಿದ್ಧಪಡಿಸಲು ಜಿಲ್ಲೆಯಲ್ಲಿ ತಯಾರಿ ನಡೆದಿದೆ. ಡಿಸೆಂಬರ್ ಒಳಗೆ ಈ 20 ಸಾವಿರ ನಿವೇಶನಗಳನ್ನೂ ಜಿಲ್ಲೆಯಲ್ಲಿ ನೀಡಲು ಸಾಧ್ಯವಾಗಲಿದೆ ಎಂದರು.
ಕುಣಿಗಲ್‌ಗೆ ಇಂಜಿನಿಯರಿಂಗ್ ಕಾಲೇಜು ಮಂಜೂರು : ಕುಣಿಗಲ್‌ನಲ್ಲಿ ಸ್ಟೇಡಿಯಂ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಇಂಜಿನಿಯರಿಂಗ್ ಕಾಲೇಜು ಕೂಡ ಕುಣಿಗಲ್‌ಗೆ ಮಂಜೂರಾಗಿದ್ದು, ಮುಂದಿನ ವರ್ಷದಿಂದ ಪ್ರಾರಂಭವಾಗಲಿದೆ. ಸರ್ಕಾರದಿಂದ ಮಂಜೂರಾಗಬೇಕಾದ ಮೆಡಿಕಲ್ ಕಾಲೇಜನ್ನು ತುಮಕೂರು ಜಿಲ್ಲೆಗೆ ನೀಡಬೇಕು ಎಂದು ನಾನು ಮನವಿ ಮಾಡಿದ್ದೇನೆ ಎಂದರು.
ರೈತರ ಸಮಸ್ಯೆಗಳ ಚರ್ಚೆಗೆ ಮೂರು ದಿನಗಳ ವಿಶೇಷ ಅಧಿವೇಶನ : ರಾಜ್ಯದಲ್ಲಿ 21, 22 ಮತ್ತು 23ರಂದು ಮೂರು ದಿನಗಳ ವಿಶೇಷ ಅಧಿವೇಶನ ಕರೆಯಲಾಗಿದೆ. ಈ ವಿಶೇಷ ಅಧಿವೇಶನವನ್ನು ರಾಜ್ಯದ ರೈತರಿಗಾಗಿ ಕರೆಯಲಾಗಿದೆ. ಎರಡು ದಿನಗಳ ಕಾಲ ರೈತರ ಸಮಸ್ಯೆಗಳ ಕುರಿತು ಸತತವಾಗಿ ಚರ್ಚೆ ನಡೆಸಬೇಕು ಎಂದು ವಿರೋಧ ಪಕ್ಷದ ಶಾಸಕರು ಸೇರಿದಂತೆ ಎಲ್ಲರಿಗೂ ತಿಳಿಸಲಾಗಿದೆ. ಸಾಮಾನ್ಯವಾಗಿ ಕೃಷಿ, ತೋಟಗಾರಿಕೆ ಅಥವಾ ರೇಷ್ಮೆ ಇಲಾಖೆಗಳ ಚರ್ಚೆಗಳು ನಡೆಯುತ್ತವೆ. ಆದರೆ ರೈತರ ಸಮಸ್ಯೆಗಳ ಕುರಿತು ಇಷ್ಟೊಂದು ಪ್ರಮಾಣದಲ್ಲಿ ಚರ್ಚೆಯಾಗುವುದಿಲ್ಲ. ಬರ ಪರಿಸ್ಥಿತಿಯಲ್ಲಿ ರೈತರ ಜೀವನ ಹಾಳಾಗಬಾರದು ಎಂಬ ದೃಷ್ಟಿಯಿಂದ ರೈತರ ಸಮಸ್ಯೆಗಳನ್ನೇ ಚರ್ಚಿಸಲು ವಿಶೇಷ ಅಧಿವೇಶನ ಕರೆಯಲಾಗಿದೆ ಎಂದರು.
ಮೂರು ದಿನಗಳ ಅಧಿವೇಶನದಲ್ಲಿ ಕಸ್ತೂರಿ ರಂಗನ್ ಸಮಿತಿಯ ವರದಿಯ ಬಗ್ಗೆಯೂ ಚರ್ಚೆಯಾಗಲಿದೆ. ರಾಜ್ಯದ ಏಳು ಜಿಲ್ಲೆಗಳಲ್ಲಿರುವ ಹಸಿರು ಪ್ರದೇಶ, ಮರ-ಗಿಡಗಳನ್ನು ರಕ್ಷಿಸುವ ಉದ್ದೇಶದಿಂದ ಈ ವಿಚಾರದ ಕುರಿತು ಚರ್ಚೆ ನಡೆಸಲಾಗುವುದು ಎಂದರು.
ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚನೆ : ಪ್ರಜಾಸೇವಾ ಸಭೆಯಲ್ಲಿ ಸ್ವೀಕರಿಸಲಾಗಿರುವ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತ್ವರಿತವಾಗಿ ವಿಲೇವಾರಿ ಮಾಡಬೇಕು. ಅರ್ಜಿಗಳನ್ನು ಮುಂದೂಡುತ್ತಾ ಹೋಗಬಾರದು. ಸ್ವತಃ ನಾನೇ ಅರ್ಜಿಗಳ ವಿಲೇವಾರಿ ಕುರಿತು ಪರಿಶೀಲನೆ ನಡೆಸುತ್ತೇನೆ. ಜೊತೆಗೆ ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕೂಡ ಪರಿಶೀಲನೆ ನಡೆಸಲಿದ್ದಾರೆ ಎಂದರು.
ಯಾವ ಅಧಿಕಾರಿ ತೀರ್ಮಾನ ಕೈಗೊಳ್ಳದೆ ಅರ್ಜಿಗಳನ್ನು ಹಾಗೆಯೇ ಇಟ್ಟುಕೊಳ್ಳುತ್ತಾರೋ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ನೀವು ಜನರಿಗಾಗಿ ಇರುವವರು. ಜನರ ಕೆಲಸ ಮಾಡದೆ ಇದ್ದರೆ ನಿಮ್ಮ ಅಸ್ತಿತ್ವಕ್ಕೂ ಅರ್ಥವಿಲ್ಲ. ಆದ್ದರಿಂದ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು ಎಂದರು.
ಶಾಸಕ ರಂಗನಾಥ್ ಅವರಿಗೆ ಮೆಚ್ಚುಗೆ : ಕುಣಿಗಲ್ ಶಾಸಕ ಡಾ. ರಂಗನಾಥ್ ಅವರು ಬಹಳ ಕ್ರಿಯಾಶೀಲ ಹಾಗೂ ವಿದ್ಯಾವಂತ ಶಾಸಕರಾಗಿದ್ದಾರೆ. ವೈದ್ಯರು ರಾಜಕೀಯಕ್ಕೆ ಬರುವುದು ವಿರಳ. ಎಂಬಿಬಿಎಸ್ ಹಾಗೂ ಎಂಎಸ್‌ಸಿ ಶಿಕ್ಷಣ ಪಡೆದ ಅವರು ರಾಜಕೀಯಕ್ಕೆ ಬಂದು ಜನಸೇವೆ ಮಾಡುತ್ತಿದ್ದಾರೆ. ಅವರಿಗೆ ಯಾವಾಗಲೂ ತಮ್ಮ ಕ್ಷೇತ್ರದ ಅಭಿವೃದ್ಧಿಯೇ ಮುಖ್ಯವಾಗಿದ್ದು, ‘ನನ್ನ ಕ್ಷೇತ್ರ ಕುಣಿಗಲ್ ಕ್ಷೇತ್ರ’ ಎಂದು ಯಾವಾಗಲು ಹೇಳುತ್ತಿರುತ್ತಾರೆ. ಒಬ್ಬ ಶಾಸಕರಿಗೆ ಇಂತಹ ಕಲ್ಪನೆ ಹಾಗೂ ಬದ್ಧತೆ ಇದ್ದಾಗ ಮಾತ್ರ ಜನಸೇವೆಯ ಮನೋಭಾವವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಪ್ರಜಾಸೇವಾ ಆಂದೋಲನವನ್ನು ಹೋಬಳಿ ಮಟ್ಟಕ್ಕೂ ಕೊಂಡೊಯ್ಯಬೇಕು. ಜನರ ಅರ್ಜಿಗಳು ಹೋಬಳಿ ಮಟ್ಟದಲ್ಲಿಯೇ ಇತ್ಯರ್ಥವಾಗಬೇಕು. ಅಲ್ಲಿಯೂ ಇದೇ ರೀತಿಯ ಕಾರ್ಯಕ್ರಮಗಳನ್ನು ಮುಂದುವರಿಸಬೇಕು ಎಂದರು.

