ಮಕ್ಕಳಿಗೆ ಅಕ್ಷರ ಕಲಿಸಬೇಕು ಎನ್ನುವ ಅದಮ್ಯ ಹಂಬಲಕ್ಕೆ ಪ್ರಕೃತಿಯ ವಿಕೋಪವಾಗಲಿ, ಅಪಾಯಕಾರಿ ಪ್ರವಾಹವಾಗಲಿ ಅಡ್ಡಿಯಾಗುವುದಿಲ್ಲ ಎಂಬುದನ್ನು ಛತ್ತೀಸ್‌ಗಢದ ಇಬ್ಬರು ಶಿಕ್ಷಕಿಯರು ಸಾಬೀತುಪಡಿಸಿದ್ದಾರೆ. ಮಳೆಗಾಲ ಬಂತೆಂದರೆ ಸಂಪರ್ಕ ಕಡಿದುಕೊಳ್ಳುವ ಕುಗ್ರಾಮದ ಶಾಲೆಗೆ ತೆರಳಲು, 9 ತಿಂಗಳ ಹಸುಗೂಸನ್ನು ಕೈಯಲ್ಲಿ ಹಿಡಿದುಕೊಂಡೇ ತುಂಬಿ ಹರಿಯುವ ನದಿಯನ್ನು ದಾಟುತ್ತಿರುವ ಶಿಕ್ಷಕಿಯ ಕರ್ತವ್ಯ ಪ್ರಜ್ಞೆ ಎಲ್ಲರ ಕಣ್ಣು ತೇವಗೊಳಿಸುವಂತಿದೆ.
ಬಲರಾಮಪುರ ಜಿಲ್ಲೆಯ ವಾಡ್ರಫ್‌ನಗರ ತಾಲೂಕಿನ ಧೌರ್‌ಪುರ ಎನ್ನುವ ಕುಗ್ರಾಮದಲ್ಲಿ ಈ ಅಚ್ಚರಿಯ ಹಾಗೂ ಸ್ಫೂರ್ತಿದಾಯಕ ಘಟನೆ ನಡೆಯುತ್ತಿದೆ. ಸಂಧ್ಯಾ ಹಾಲ್ದಾರ್ ಮತ್ತು ಕರ್ಮಿಲಾ ಟೊಪ್ಪೊ ಎಂಬ ಇಬ್ಬರು ಶಿಕ್ಷಕಿಯರು ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಗ್ರಾಮವು ಮೊರಾನ್ ಮತ್ತು ಇರಿಯಾ ನದಿಗಳ ಸಂಗಮದ ಆಚೆಗಿದೆ. ಮಳೆಗಾಲದಲ್ಲಿ ಈ ಮಾರ್ಗ ಸಂಪೂರ್ಣವಾಗಿ ಮುಳುಗಿಹೋಗುವುದರಿಂದ ಇಡೀ ಗ್ರಾಮವೇ ಬಾಹ್ಯ ಜಗತ್ತಿನ ಸಂಪರ್ಕ ಕಳೆದುಕೊಳ್ಳುತ್ತದೆ.
ಶಿಕ್ಷಕಿಯರು ಮಾರ್ನಾ ಗ್ರಾಮದವರೆಗೆ ಮಾತ್ರ ತಮ್ಮ ದ್ವಿಚಕ್ರ ವಾಹನದಲ್ಲಿ ಬರಲು ಸಾಧ್ಯವಾಗುತ್ತದೆ. ಅಲ್ಲಿಂದ ಮುಂದಕ್ಕೆ ರಸ್ತೆಗಳೇ ಇಲ್ಲದ ಕಾರಣ ವಾಹನಗಳನ್ನು ಅಲ್ಲಿಯೇ ನಿಲ್ಲಿಸಿ, ಕಲ್ಲುಬಂಡೆಗಳಿಂದ ಕೂಡಿದ ಬೆಟ್ಟಗುಡ್ಡಗಳ ಮಾರ್ಗದಲ್ಲಿ ಕನಿಷ್ಠ 3 ಕಿಲೋಮೀಟರ್ ಕಾಲ್ನಡಿಗೆಯಲ್ಲೇ ಸಾಗಬೇಕು. ನಂತರ ರಭಸವಾಗಿ ಹರಿಯುವ ನದಿಯನ್ನು ದಾಟಿಯೇ ಶಾಲೆ ತಲುಪಬೇಕಾದ ಅನಿವಾರ್ಯತೆ ಇದೆ.
ಶಿಕ್ಷಕಿ ಕರ್ಮಿಲಾ ಟೊಪ್ಪೊ ಅವರು ತಮ್ಮ 9 ತಿಂಗಳ ಹಸುಗೂಸನ್ನು ಎತ್ತಿಕೊಂಡೇ ಈ ದುರ್ಗಮ ಮಾರ್ಗದಲ್ಲಿ ಸಾಗುತ್ತಾರೆ. ಮಳೆಗಾಲದಲ್ಲಿ ನದಿಯಲ್ಲಿ ಸೊಂಟದಿಂದ ಹೊಟ್ಟೆಯ ಮಟ್ಟಕ್ಕೆ ನೀರು ಹರಿಯುತ್ತದೆ. ನದಿಯ ನೀರಿನ ಮಟ್ಟ ಕೊಂಚ ಕಡಿಮೆಯಿದ್ದಾಗ ಮಾತ್ರ ಇವರು ನದಿಗಿಳಿದು ಮಗುವಿನೊಂದಿಗೆ ಮೈತುಂಬಾ ಹರಿಯುವ ನೀರನ್ನು ದಾಟಿ ಶಾಲೆ ಮುಟ್ಟುತ್ತಾರೆ. ಪ್ರವಾಹ ತೀರಾ ಹೆಚ್ಚಾದ ದಿನಗಳಲ್ಲಿ ಅನಿವಾರ್ಯವಾಗಿ ನದಿಯ ದಂಡೆಯಿಂದಲೇ ನಿರಾಶೆಯಿಂದ ಮನೆಗೆ ಮರಳಬೇಕಾಗುತ್ತದೆ.
2014 ರಿಂದಲೂ ಇದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕರ್ಮಿಲಾ ಟೊಪ್ಪೊ, ಪ್ರತಿ ವರ್ಷದ ಮಳೆಗಾಲದಲ್ಲೂ ಇದೇ ರೀತಿಯ ನರಕಯಾತನೆ ಇರುತ್ತದೆ ಎಂದು ಹೇಳಿದ್ದಾರೆ. ಶಾಲೆಯಲ್ಲಿ ಓದುತ್ತಿರುವ ಮಕ್ಕಳು ತೀರಾ ಚಿಕ್ಕವರಾಗಿದ್ದು, ಶಿಕ್ಷಕಿಯರು ಶಾಲೆಗೆ ಬಾರದಿದ್ದರೆ ಅವರ ವಿದ್ಯಾಭ್ಯಾಸ ಹಾಳಾಗುತ್ತದೆ. ಶಿಕ್ಷಕಿಯರು ಶಾಲೆಗೆ ಕಾಲಿಡುತ್ತಿದ್ದಂತೆ ಪುಟ್ಟ ಕಂದಮ್ಮಗಳ ಮುಖದಲ್ಲಿ ಮೂಡುವ ನಗು ಮತ್ತು ಸಂತೋಷವೇ ತಮ್ಮ ಎಲ್ಲಾ ಕಷ್ಟಗಳನ್ನು ಮರೆಸುತ್ತದೆ ಎಂದು ಶಿಕ್ಷಕಿ ಸಂಧ್ಯಾ ಹಾಲ್ದಾರ್ ತಿಳಿಸಿದ್ದಾರೆ.
ಶಿಕ್ಷಕಿಯೊಬ್ಬರು ತನ್ನ ಪುಟ್ಟ ಕಂದಮ್ಮನನ್ನು ಎತ್ತಿಕೊಂಡು ಅಪಾಯಕಾರಿ ನದಿಯನ್ನು ದಾಟಿ ಶಾಲೆಗೆ ತೆರಳುತ್ತಿರುವ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ, ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಬಲರಾಮಪುರ ಜಿಲ್ಲಾಧಿಕಾರಿ ಚಂದನ್ ಸಂಜಯ್ ತ್ರಿಪಾಠಿ ಅವರು ಈ ವಿಷಯ ತಿಳಿದು ಶಿಕ್ಷಕಿಯ ಕರ್ತವ್ಯ ನಿಷ್ಠೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇಂತಹ ದುರ್ಗಮ ಪರಿಸ್ಥಿತಿಯಲ್ಲೂ ಮಕ್ಕಳಿಗೆ ವಿದ್ಯೆ ನೀಡಲು ಶ್ರಮಿಸುತ್ತಿರುವ ಇವರ ಕಾರ್ಯ ಇಡೀ ಜಿಲ್ಲೆಯ ಶಿಕ್ಷಕ ವರ್ಗಕ್ಕೆ ಅನುಕರಣೀಯ ಹಾಗೂ ಗೌರವ ತರುವಂತಹದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

