ಬೆಂಗಳೂರು: ಸೆಪ್ಟೆಂಬರ್ 30 ರಿಂದ ಸಿನಿಮಾ ಟಿಕೆಟ್ ಮೇಲೆ ಶೇಕಡ 2ರಷ್ಟು ಹೆಚ್ಚುವರಿ ಸೆಸ್(ಉಪಕರ) ವಿಧಿಸಲು ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಕಾಯ್ದೆ 2024ರ ಅಡಿಯಲ್ಲಿ ಸೆಪ್ಟೆಂಬರ್ 30 ರಿಂದ ಅನ್ವಯವಾಗುವಂತೆ ರಾಜ್ಯದಲ್ಲಿ ಸಿನಿಮಾ ಟಿಕೆಟ್ ಗಳ ಮೇಲೆ ಶೇಕಡ 2ರಷ್ಟು ಹೆಚ್ಚುವರಿ ಉಪ ಕರ ವಿಧಿಸುವ ಸಂಬಂಧ ರಾಜ್ಯ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಇದರಿಂದಾಗಿ ಸಿನಿಪ್ರಿಯರಿಗೆ ಮುಂದಿನ ದಿನಗಳಲ್ಲಿ ಮಲ್ಟಿಪ್ಲೆಕ್ಸ್ ಗಳು ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಏರಿಕೆಯ ಬಿಸಿ ತಟ್ಟಲಿದೆ.
ಶೇ. 2ರಷ್ಟು ಹೆಚ್ಚವರಿ ಸೆಸ್ ವಿಧಿಸುವ ಬಗ್ಗೆ ಈ ಹಿಂದೆ ಅಧಿಕೃತ ಅಧಿಸೂಚನೆ ಹೊರಡಿಸದೆ ಸರ್ಕಾರ ಸಿನಿಮಾ ಟಿಕೆಟ್ ಮೇಲೆ ಶೇಕಡ 2ರಷ್ಟು ಹೆಚ್ಚುವರಿ ಸೆಸ್ ಸಂಗ್ರಹಿಸುವ ಬಗ್ಗೆ ಚಿತ್ರಮಂದಿರ ಗಳಿಗೆ ಸುತ್ತೋಲೆ ಮೂಲಕ ನೋಟಿಸ್ ನೀಡಿತ್ತು. ಇದನ್ನು ಪ್ರಶ್ನಿಸಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತಿತರರು ಹೈಕೋರ್ಟ್ ಮೊರೆ ಹೋಗಿದ್ದರು. ನಂತರ ಸರ್ಕಾರ ಆದೇಶ ವಾಪಸ್ ಪಡೆದುಕೊಂಡಿತ್ತು.
ಇದೀಗ ಕಾಯ್ದೆಯ ಅಡಿಯಲ್ಲಿ ಅಧಿಕೃತ ಆದೇಶ ಹೊರಡಿಸಿ ಸೆಪ್ಟೆಂಬರ್ 30 ರಿಂದ ಮಲ್ಟಿಪ್ಲೆಕ್ಸ್ ಗಳು ಸೇರಿದಂತೆ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಸಿನಿಮಾ ಟಿಕೆಟ್ ಗಳ ಮೇಲೆ ಶೇಕಡ 2ರಷ್ಟು ಹೆಚ್ಚುವರಿ ಸೆಸ್ ಸಂಗ್ರಹಿಸಲು ಆದೇಶಿಸಲಾಗಿದೆ. ಇದರಿಂದ ಬರುವ ಹಣವನ್ನು ಕನ್ನಡ ಚಿತ್ರರಂಗದ ಕಾರ್ಮಿಕರು, ತಂತ್ರಜ್ಞರು ಮತ್ತು ಸಾಂಸ್ಕೃತಿಕ ಕಲಾವಿದರ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ನೆರವಿಗೆ ಪ್ರತ್ಯೇಕ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.
ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಸೆಪ್ಟೆಂಬರ್ 30 ರಿಂದ ಅನ್ವಯವಾಗುವಂತೆ ರಾಜ್ಯದಲ್ಲಿ ಸಿನಿಮಾ ಟಿಕೆಟ್ ಗಳ ಮೇಲೆ ಶೇಕಡ 2ರಷ್ಟು ಹೆಚ್ಚುವರಿ ಸೆಸ್ ವಿಧಿಸುವ ಸಂಬಂಧ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.
ತೆರಿಗೆ ಬಾಕಿ ಉಳಿಸಿಕೊಂಡಿರುವ ವಾಹನಗಳ ಬಹಿರಂಗ ಹರಾಜು
ಶಿವಮೊಗ್ಗ: ಸರ್ಕಾರಕ್ಕೆ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಒಟ್ಟು 9 ವಾಹನಗಳನ್ನು ವಿಲೇವಾರಿ ಮಾಡಲು ಪ್ರಾದೇಶಿಕ ಸಾರಿಗೆ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಸೆಪ್ಟೆಂಬರ್ 25 ರಂದು ಮಧ್ಯಾಹ್ನ 3 ಗಂಟೆಗೆ ಬಹಿರಂಗ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹರಾಜು ನಡೆಯುವ ಸ್ಥಳ ಮತ್ತು ಸಮಯ: ಸೆಪ್ಟೆಂಬರ್ 25 ರ ಮಧ್ಯಾಹ್ನ 3:00 ಗಂಟೆಗೆ ಮಲವಗೊಪ್ಪದಲ್ಲಿರುವ ಚಾಲನಾ ತರಬೇತಿ ಟ್ರ್ಯಾಕ್, ಶಿವಮೊಗ್ಗ ಇಲ್ಲಿ ನಡೆಯಲಿದೆ.
ಆಸಕ್ತ ಸಾರ್ವಜನಿಕರು ಹಾಗೂ ಬಿಡ್‌ದಾರರು ನಿಗದಿತ ಸಮಯಕ್ಕೆ ಸರಿಯಾಗಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಇಲಾಖೆ ಮನವಿ ಮಾಡಿದೆ.
ವೈದ್ಯಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ
ಶಿವಮೊಗ್ಗ: ಜಿಲ್ಲಾ ಸರ್ಕಾರಿ ಮೆಗ್ಗಾನ್ ಬೋಧನಾ ಆಸ್ಪತ್ರೆಯ ಎ.ಆರ್.ಟಿ. ವಿಭಾಗದಲ್ಲಿ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಒಂದು ವೈದ್ಯಾಧಿಕಾರಿ ಹುದ್ದೆಯ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಎಂಬಿಬಿಎಸ್ ವಿದ್ಯಾರ್ಹತೆ ಹಾಗೂ ಅನುಭವ ಹೊಂದಿರುವ, 70 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ರೂ.72,000 ಗೌರವ ಧನ ನೀಡಲಾಗುತ್ತದೆ.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ತಮ್ಮ ಬಯೋಡೇಟಾ, ವಿದ್ಯಾರ್ಹತೆ ಮತ್ತು ಅನುಭವ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿಗಳೊಂದಿಗೆ ದಿನಾಂಕ 23-09-2026 ರ ಸಂಜೆ 4:00 ಗಂಟೆಯೊಳಗೆ ‘ಜಿಲ್ಲಾ ಸರ್ಜನ್ನರು, ಮೆಗ್ಗಾನ್ ಬೋಧನಾ ಆಸ್ಪತ್ರೆ, ಶಿವಮೊಗ್ಗ’ ಇವರ ಕೊಠಡಿಗೆ ನೇರವಾಗಿ ಸಲ್ಲಿಸಬೇಕೆಂದು ಜಿಲ್ಲಾ ಸರ್ಜನರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

