HomeIndiaಲಗೇಜ್‌ನಲ್ಲಿ ಸಿಕ್ತು ರೈಲ್ವೆ ಇಲಾಖೆ ಬೆಡ್‌ಶೀಟ್: ನಗು ತರಿಸುತ್ತೆ ಸಿಬ್ಬಂದಿ ಪ್ರಶ್ನಿಸಿದ್ದಕ್ಕೆ ಮಹಿಳೆ ಕೊಟ್ಟ ಉತ್ತರ...

ಲಗೇಜ್‌ನಲ್ಲಿ ಸಿಕ್ತು ರೈಲ್ವೆ ಇಲಾಖೆ ಬೆಡ್‌ಶೀಟ್: ನಗು ತರಿಸುತ್ತೆ ಸಿಬ್ಬಂದಿ ಪ್ರಶ್ನಿಸಿದ್ದಕ್ಕೆ ಮಹಿಳೆ ಕೊಟ್ಟ ಉತ್ತರ | Watch

ರೈಲು ಪ್ರಯಾಣದ ವೇಳೆ ಪ್ರಯಾಣಿಕರಿಗೆ ನೀಡಲಾಗುವ ಇಲಾಖೆಯ ಬೆಡ್‌ಶೀಟ್ ಅನ್ನು ತಮ್ಮ ಲಗೇಜ್ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದ ದಂಪತಿಯನ್ನು ರೈಲ್ವೆ ಸಿಬ್ಬಂದಿ ತರಾಟೆಗೆ ತೆಗೆದುಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಸಿಬ್ಬಂದಿ ಪ್ರಶ್ನಿಸಿದಾಗ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಮಹಿಳೆಯೊಬ್ಬರು ಟಿಕೆಟ್ ತಪಾಸಣಾ ಅಧಿಕಾರಿಯ (ಟಿಟಿಇ) ಮೇಲೆ ಆಧಾರರಹಿತ ಆರೋಪ ಮಾಡಿ ವಾಗ್ವಾದಕ್ಕಿಳಿದ ಪ್ರಸಂಗ ನೆಟ್ಟಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಜಾಲತಾಣಗಳಲ್ಲಿ ವೈರಲ್ ಆಗಿರುವ ದೃಶ್ಯಾವಳಿಗಳ ಪ್ರಕಾರ, ಹವಾನಿಯಂತ್ರಿತ ಬೋಗಿಯ ಅಟೆಂಡರ್ ಒಬ್ಬರು ಪ್ರಯಾಣಿಕರ ಲಗೇಜ್‌ನಲ್ಲಿ ರೈಲ್ವೆಗೆ ಸೇರಿದ ಬೆಡ್‌ಶೀಟ್ ಇರುವುದನ್ನು ಕಂಡು ಪ್ರಶ್ನಿಸಿದ್ದಾರೆ. ಈ ವೇಳೆ ಮಹಿಳೆ ಸಿಬ್ಬಂದಿಯ ಜತೆ ನೇರವಾಗಿ ಜಗಳಕ್ಕೆ ನಿಂತು, ತಾವು ಬೆಡ್‌ಶೀಟ್ ಇಟ್ಟುಕೊಂಡಿದ್ದನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಟಿಕೆಟ್ ಪರಿಶೀಲನಾಧಿಕಾರಿ ತಮ್ಮಿಂದ ಹೆಚ್ಚುವರಿಯಾಗಿ ಹಣ ಪಡೆದಿದ್ದಾರೆ ಎಂದು ಆರೋಪಿಸಿ ದರ್ಪ ತೋರಿದ್ದಾರೆ. ಮಾತಿನ ಚಕಮಕಿ ಮುಂದುವರಿಯುತ್ತಿದ್ದಂತೆ, ಆಕೆಯ ಜತೆಗಿದ್ದ ವ್ಯಕ್ತಿ ಬ್ಯಾಗ್ ತೆರೆದು ಒಳಗಿದ್ದ ಬೆಡ್‌ಶೀಟ್ ಹೊರತೆಗೆದು ಸಿಬ್ಬಂದಿಗೆ ವಾಪಸ್ ನೀಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಯಾತ್ರಾವಾಲಾವಿಶಾಲ್ ಎಂಬ ಖಾತೆಯಿಂದ ಹಂಚಿಕೊಳ್ಳಲಾದ ಈ ವಿಡಿಯೋ ಸೆಪ್ಟೆಂಬರ್ 17 ರ ವೇಳೆಗೆ ಬರೋಬ್ಬರಿ 11 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ತಪ್ಪು ಮಾಡಿದ್ದಲ್ಲದೆ ಸಮರ್ಥಿಸಿಕೊಳ್ಳಲು ಮುಂದಾದ ಮಹಿಳೆಯ ವರ್ತನೆಯನ್ನು ಹಲವು ಬಳಕೆದಾರರು ಕಟುವಾಗಿ ಟೀಕಿಸಿದ್ದು, ತಪ್ಪು ಮಾಡಿ ಸಾರ್ವಜನಿಕವಾಗಿ ದರ್ಪ ತೋರುವುದು ಅಕ್ಷಮ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಘಟನೆ ನಡೆದ ರೈಲು, ನಿಲ್ದಾಣ ಮತ್ತು ಪ್ರಯಾಣಿಕರ ಗುರುತಿನ ಬಗ್ಗೆ ರೈಲ್ವೆ ಇಲಾಖೆಯಿಂದ ಇನ್ನೂ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಅಲ್ಲದೆ ಟಿಟಿಇ ಹೆಚ್ಚುವರಿ ಹಣ ಪಡೆದಿದ್ದರು ಎಂಬ ಮಹಿಳೆಯ ಮಾತಿಗೆ ಯಾವುದೇ ಅಧಿಕೃತ ಸಾಕ್ಷ್ಯಗಳಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತೀಯ ರೈಲ್ವೆಯ ನಿಯಮಗಳ ಪ್ರಕಾರ ಎಸಿ ಬೋಗಿಗಳಲ್ಲಿ ನೀಡಲಾಗುವ ಬೆಡ್‌ಶೀಟ್, ದಿಂಬು, ಹೊದಿಕೆ ಮತ್ತು ಟವೆಲ್‌ಗಳು ಕೇವಲ ಪ್ರಯಾಣದ ಅವಧಿಯ ಬಳಕೆಗೆ ಮಾತ್ರ ಸೀಮಿತವಾಗಿದ್ದು, ಅವುಗಳನ್ನು ಮನೆಗೆ ಕೊಂಡೊಯ್ಯುವುದು ಕಾನೂನುಬಾಹಿರ ಕೃತ್ಯವಾಗಿದೆ. ಪ್ರತಿವರ್ಷ ರೈಲುಗಳಿಂದ ಲಕ್ಷಾಂತರ ಮೌಲ್ಯದ ಬೆಡ್‌ಶೀಟ್‌ಗಳು ಹಾಗೂ ಹೊದಿಕೆಗಳು ನಾಪತ್ತೆಯಾಗುತ್ತಿರುವ ವರದಿಗಳ ನಡುವೆಯೇ ಈ ಘಟನೆ ಬೆಳಕಿಗೆ ಬಂದಿದ್ದು, ಸಾರ್ವಜನಿಕ ಆಸ್ತಿಯ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular