HomeKarnataka80ರ ದಶಕದ ಫೋಟೋ ಎಡಿಟ್ ಮಾಡಲು ಹೋಗಿ ಎಡವಟ್ಟು: ನಕಲಿ ಆಪ್ ಬಳಸಿ ಸೈಬರ್ ವಂಚನೆಗೊಳಗಾದ...

80ರ ದಶಕದ ಫೋಟೋ ಎಡಿಟ್ ಮಾಡಲು ಹೋಗಿ ಎಡವಟ್ಟು: ನಕಲಿ ಆಪ್ ಬಳಸಿ ಸೈಬರ್ ವಂಚನೆಗೊಳಗಾದ ವ್ಯಕ್ತಿ: ಹಣ ಕೊಟ್ಟಿಲ್ಲ ಎಂದು ಬೆತ್ತಲೆ ಫೋಟೋ ಹರಿಬಿಟ್ಟ ಕಿರಾತಕರು

ಬೆಂಗಳೂರು: 80ರ ದಶಕದ ಫೋಟೋ ಟ್ರೆಂಡ್ ಗೆ ಮಾರು ಹೋಗಿ ಸೈಬರ್ ವಂಚನೆಗೆ ಒಳಗಾಗುವ ಸಾಧ್ಯತೆ ಇರುವುದರಿಂದ ಇಂತಹ ಆಪ್ ಗಳನ್ನು ಬಳಸದಂತೆ ಪೊಲಿಸರು ಎಚ್ಚರಿಕೆ ನೀಡಿದ ಹೊರತಾಗಿಯೂ ಇಲ್ಲೋರ್ವ ವ್ಯಕ್ತಿ 80ರ ದಶಕದ ಫೋಟೋ ಹಿಂದೆ ಬಿದ್ದು, ನಕಲಿ ಆಪ್ ಕ್ಲಿಕ್ ಮಾಡಿ ಸೈಬರ್ ವಂಚನೆಗೆ ಒಳಗಾಗಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಇತ್ತೀಚಿನ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ 80ರ ದಶಕದ ಫೋಟೋಗಳು ಹೆಚ್ಚು ಸುದ್ದಿಯಲ್ಲಿವೆ. ಈ ರೀತಿಯ 80ರ ದಶಕದ ಹಳೆಯ ಶೈಲಿಯ ಫೋಟೋ ಕ್ರೇಜ್ ಅನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರು ನಕಲಿ ಆಪ್ ಗಳ ಮೂಲಕ ಬ್ಲ್ಯಾಅಕ್ ಮೇಲ್ ಮಾಡಿ ಹಣ ದೋಚುವ ಕೆಲಸ ಆರಂಭಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವ್ಯಕ್ತಿಯೋರ್ವ ತನ್ನ ಫೋಟೋವನ್ನು 80ರ ದಶಕದ ಲುಕ್‌ನಲ್ಲಿ ಫೋಟೋ ಎಡಿಟ್ ಮಾಡಲು ಹೋಗಿ ಆತನ ಮೊಬೈಲ್ ಹ್ಯಾಕ್ ಆಗಿದೆ. ಸೈಬರ್ ವಂಚಕರ ನಕಲಿ ಆಪ್ ಕ್ಲಿಕ್ಕಿಸಿ ಎಡವಟ್ಟು ಮಾಡಿಕೊಂಡಿದ್ದಾನೆ. ಸೈಬರ್ ವಂಚಕರು ಆತನ ಮೊಬೈಲ್ ಹ್ಯಾಕ್ ಮಾಡಿ ಅಶ್ಲೀಲ ಫೋಟೋ ಕಳುಹಿಸಿ 50 ಸಾವಿರ ರೂ ಬೇಡಿಕೆಯಿಟ್ಟಿದ್ದಾರೆ. ಆತ ಹಣ ನೀಡಲು ಒಪ್ಪದಿದ್ದಾಗ ಬೆತ್ತಲೆ ಫೋಟೋ ಹರಿಬಿಟ್ಟಿದ್ದಾರೆ.

ವಿನೋದ್ (45) ಸೈಬರ್ ವಂಚನೆಗೊಳಗಾದ ವ್ಯಕ್ತಿ. ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆ ನಿವಾಸಿ. ವಿನೋದ್ ಅವರು ಮೂರು ದಿನಗಳ ಹಿಂದೆ ಚಾಟ್‌ ಜಿಪಿಟಿ ಮಾದರಿಯ ತಂತ್ರಜ್ಞಾನದ ಮೂಲಕ ತಮ್ಮ ಫೋಟೋವನ್ನು 80ರ ದಶಕದ ಶೈಲಿಗೆ ಬದಲಾಯಿಸಲು ಹೋಗಿ ನಕಲಿ ಆ್ಯಪ್ ಒಂದನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ. ಆ್ಯಪ್ ಇನ್‌ಸ್ಟಾಲ್ ಆಗುತ್ತಿದ್ದಂತೆ ಅವರ ಮೊಬೈಲ್ ಹಾಗೂ ಖಾತೆ ಹ್ಯಾಕ್ ಆಗಿದೆ.

ಕೇವಲ ಐದು ನಿಮಿಷಗಳಲ್ಲಿ ವಿನೋದ್ ಅವರಿ​​ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ 50 ಸಾವಿರ ರೂ ನೀಡುವಂತೆ ನೇರವಾಗಿ ಬೇಡಿಕೆ ಇಟ್ಟಿದ್ದಾನೆ. ಈ ವೇಳೆ ವಿನೋದ್ ಹಣ ನೀಡಲು ನಿರಾಕರಿಸಿದ್ದಾರೆ. ಹಣ ಕೊಡದಿದ್ದರೆ ನಿನ್ನ ಫೋಟೋವನ್ನು ಬೆತ್ತಲೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇನೆ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಆಸಾಮಿ. ಆದರೂ ಹೆದರದ ವಿನೋದ್ ಕರೆಯನ್ನು ಕಟ್​ ಮಾಡಿದ್ದಾರೆ. ಆದರೆ, ಕಾಲ್ ಕಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ವಂಚಕರು ವಿನೋದ್ ಫೋಟೋವನ್ನು ಬೆತ್ತಲೆಯಾಗಿ ಎಡಿಟ್ ಮಾಡಿ, ಅವರ ಸ್ನೇಹಿತರ ವಾಟ್ಸಾಪ್ ಗ್ರೂಪ್‌ಗಳಿಗೆ ಕಳುಹಿಸಿದ್ದಾರೆ.

ಇದರಿಂದ ಕುಪಿತರಾದ ವಿನೋದ್​​ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಬೆಂಗಳೂರು ಪೊಲೀಸರು ಇಂತಹ 80ರ ದಶಕದ ಫೋಟೋಗಳಿಗೆ ಮಾರು ಹೋಗುವ ಮುನ್ನ ಎಚ್ಚರವಿರಲಿ. ಸೈಬರ್ ವಂಚಕರು ನಕಲಿ ಆಪ್ ಗಳ ಮೂಲಕ ವಂಚನೆಯೆಸಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ 80ರ ದಶಕದ ಫೋಟೋ ಎಡಿಟ್ ಮಾಡಲು ಅಪರಿಚಿತ ನಕಲಿ ಆಪ್ ಡೌನ್ ಲೋಡ್ ಮಾಡುವ ಮುನ್ನ ಎಚ್ಚರವಹಿಸುವುದು ಒಳಿತು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular