HomeKarnatakaಕನಿಷ್ಠ ವೇತನ ಜಾರಿಗೆ ಸರ್ಕಾರದ ಅಧಿಸೂಚನೆ ನಿರಾಕರಿಸಿದ್ದ ಮೂರು ಇಲಾಖೆಗಳ ಸುತ್ತೋಲೆಗಳಿಗೆ ಹೈಕೋರ್ಟ್​ ಮಧ್ಯಂತರ ತಡೆ

ಕನಿಷ್ಠ ವೇತನ ಜಾರಿಗೆ ಸರ್ಕಾರದ ಅಧಿಸೂಚನೆ ನಿರಾಕರಿಸಿದ್ದ ಮೂರು ಇಲಾಖೆಗಳ ಸುತ್ತೋಲೆಗಳಿಗೆ ಹೈಕೋರ್ಟ್​ ಮಧ್ಯಂತರ ತಡೆ

ಬೆಂಗಳೂರು: ಕನಿಷ್ಠ ವೇತನ ಜಾರಿಗೆ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಜಾರಿಗೆ ನಿರಾಕರಿಸಿ ಮೂರು ಇಲಾಖೆಗಳು ಹೊರಡಿಸಿದ್ದ ಮೂರು ಪ್ರತ್ಯೇಕ ಸುತ್ತೋಲೆಗಳಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಕನಿಷ್ಠ ವೇತನ ಜಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಜಾರಿಗೆ ನಿರಾಕರಿಸಿ ಲೆಕ್ಕ ಪರಿಶೋಧನಾ ಇಲಾಖೆ, ಪೌರಾಡಳಿತ ಇಲಾಖೆ ಮತ್ತು ಪಂಚಾಯತ್​ ರಾಜ್​ ಇಲಾಖೆಗೆ ಹೊರಡಿಸಿದ್ದ ಪ್ರತ್ಯೇಕ 3 ಸುತ್ತೋಲೆಗಳಿಗೆ ಹೈಕೋರ್ಟ್​ ಮಧ್ಯಂತರ ತಡೆ ನೀಡಿದೆ.ಈ ಆದೇಶದಿಂದ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಜಾರಿ ಮಾಡಬೇಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೋರಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಅಧೀನದ ವಿವಿಧ ಕಾರ್ಮಿಕ ಸಂಘಟನೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಅವರ ಪೀಠವು, ಪರಿಷ್ಕೃತ ಕನಿಷ್ಠ ವೇತನ ಪಾವತಿಯನ್ನು ಸ್ಥಗಿತಗೊಳಿಸಿದ್ದ ಮೂರು ಸುತ್ತೋಲೆಗಳಿಗೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ನೀಡಿದೆ. ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 21ಕ್ಕೆ ಮುಂದೂಡಿದೆ.

2026ರ ಮೇ 22ರಂದು ರಾಜ್ಯ ಸರ್ಕಾರ ರಾಜ್ಯದ 83 ನಿಗದಿತ ಉದ್ಯೋಗಗಳಿಗೆ ಕನಿಷ್ಠ ವೇತನ ಪರಿಷ್ಕರಣೆ ಮಾಡಿ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆಯನ್ನು ಸರ್ಕಾರದ ಹಲವು ಇಲಾಖೆಗಳು ತಕ್ಷಣವೇ ಜಾರಿಗೆ ತಂದಿದ್ದವು. ಆದರೆ, 2026ರ ಜುಲೈ 15ರಂದು ಹಣಕಾಸು ಇಲಾಖೆ ಅಧಿಕೃತ ಆದೇಶವೊಂದನ್ನು ಹೊರಡಿಸಿ, ಕನಿಷ್ಠ ವೇತನ ಪರಿಷ್ಕರಿಸುವ ಅಧಿಸೂಚನೆಗೆ ತನ್ನ ಆಕ್ಷೇಪವೆತ್ತಿತ್ತು. ಅಲ್ಲದೇ, ಹಣಕಾಸಿನ ಹೊರೆ ಮತ್ತು ಹಣಕಾಸು ಹೂಡಿಕೆಯ ಮೇಲಿನ ಪರಿಣಾಮವನ್ನು ಪರಿಗಣಿಸಿ, ಪರಿಷ್ಕೃತ ಕನಿಷ್ಠ ವೇತನದ ಜಾರಿ ಸ್ಥಗಿತಗೊಳಿಸಲು ಶಿಫಾರಸು ಮಾಡಿತು.

ಇದೇ ಅಂಶವನ್ನು ಪರಿಗಣಿಸಿ ರಾಜ್ಯ ಲೆಕ್ಕಪರಿಶೋಧನೆ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಮತ್ತು ಪಂಚಾಯತ್ ರಾಜ್ ಇಲಾಖೆಗಳು ಪ್ರತ್ಯೇಕ ಸುತ್ತೋಲೆಗಳನ್ನು ಹೊರಡಿಸಿ ಸರ್ಕಾರ ಹೊರಡಿಸಿದ್ದ ಕನಿಷ್ಟ ವೇತನ ಪರಿಷ್ಕರಣೆ ಅಧಿಸೂಚನೆಯನ್ನು ಸ್ಥಗಿತಗೊಳಿಸಿ ಸುತ್ತೋಲೆಗಳನ್ನು ಹೊರಡಿಸಿದ್ದವು.

ಈ ಮೂರು ಇಲಾಖೆಗಳು ಹೊರಡಿಸಿರುವ ಸುತ್ತೋಲೆಗಳು ಕಾನೂನು ಬಾಹಿರವಾಗಿದ್ದು, ಕಾರ್ಮಿಕರಿಂದ ಪರಿಷ್ಕೃತ ಹೊಸ ಕನಿಷ್ಠ ವೇತನವನ್ನು ಕಸಿದುಕೊಳ್ಳುವ ಉದ್ದೇಶ ಹೊಂದಿವೆ. ಆದ್ದರಿಂದ ತಕ್ಷಣ ಸರ್ಕಾರದ ಅಧಿಸೂಚನೆ ಜಾರಿ ಮಾಡಲು ನಿರ್ದೇಶನ ನೀಡಬೇಕು ಎಂದು ಕೋರಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ರಾಜ್ಯ ಸಮಿತಿಯು, ಅದರ ಅಂಗ ಸಂಘಟನೆಗಳಾದ ಕರ್ನಾಟಕ ರಾಜ್ಯ ಸರ್ಕಾರಿ ಖಾಯಂಮೇತರ ನೌಕರರ ಒಕ್ಕೂಟ, ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘ, ತುಮಕೂರು ಜಿಲ್ಲಾ ನೀರು ಸರಬರಾಜು ನೌಕರರ ಸಂಘ, ತುಮಕೂರು ನಗರ ಪಾಲಿಕೆ ಕಸದ ಆಟೋ ಚಾಲಕರು ಮತ್ತು ಸಹಾಯಕರ ಸಂಘಗಳು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದವು.

ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲ ಎಲ್. ಮುರಳೀಧರ ಪೇಶ್ವಾ, ಮೂರು ಇಲಾಖೆಯ ಸುತ್ತೋಲೆಗಳು ಸಂವಿಧಾನದ ವಿಧಿ 14 (ಸಮಾನತೆ), ವಿಧಿ 21 (ಜೀವಿಸುವ ಹಕ್ಕು) ಮತ್ತು ವಿಧಿ 23 (ಬಲವಂತದ ದುಡಿಮೆ ನಿಷೇಧ) ರ ಅಡಿಯಲ್ಲಿ ನೀಡಲಾಗಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಿವೆ. ಆದ್ದರಿಂದ ಈ ಸುತ್ತೋಲೆಗಳನ್ನು ಕಾನೂನುಬಾಹಿರ ಎಂದು ಘೋಷಿಸಿ ರದ್ದುಗೊಳಿಸಬೇಕು, ಮತ್ತು ತಕ್ಷಣ ಎಲ್ಲ ಇಲಾಖೆಗಳು ಕನಿಷ್ಠ ವೇತನ ಜಾರಿಗೆ ಆದೇಶ ನೀಡಬೇಕು ಎಂದು ಮನವಿ ಮಾಡಿದ್ದರು. ವಾದ ಆಲಿಸಿದ ಹೈಕೋರ್ಟ್, ಮೂರು ಇಲಾಖೆಗಳ ಸುತ್ತೋಲೆಗೆ ಮಧ್ಯಂತರ ತಡೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಕನಿಷ್ಟ ವೇತನ ಜಾರಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular