ಕ್ಯಾಬ್ ಪ್ರಯಾಣದ ವೇಳೆ ಚಾಲಕನ ಮೇಲೆ ಮಹಿಳಾ ಪ್ರಯಾಣಿಕರೊಬ್ಬರು ಹೊರಿಸಿದ್ದ ಲೈಂಗಿಕ ಕಿರುಕುಳದ ಆರೋಪವೊಂದು ಸುಳ್ಳು ಎಂದು ಸಾಬೀತುಪಡಿಸಲು ಉಬರ್ ಸಂಸ್ಥೆಯ ಮೊಬೈಲ್ ತಂತ್ರಾಂಶದಲ್ಲಿರುವ ಇನ್-ಆ್ಯಪ್ ವಿಡಿಯೋ ಚಿತ್ರೀಕರಣ ಸೌಲಭ್ಯ ಪ್ರಮುಖ ಸಾಕ್ಷಿಯಾಗಿ ನೆರವಾಗಿದೆ. ಮುಂಬೈನಲ್ಲಿ ನಡೆದ ಈ ಘಟನೆಯಲ್ಲಿ, ಚಾಲಕನ ಪರವಾಗಿ ಸತ್ಯಾಂಶ ಬೆಳಕಿಗೆ ಬರಲು ಕಾರಣವಾದ ಈ ತಂತ್ರಜ್ಞಾನವು ಇದೀಗ ಸಾರ್ವಜನಿಕರು ಹಾಗೂ ಆನ್‌ಲೈನ್ ಟ್ಯಾಕ್ಸಿ ಬಳಕೆದಾರರ ಗಮನ ಸೆಳೆದಿದೆ.
ಮುಂಬೈ ಮೂಲದ ಘಟನೆಯೊಂದರಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಚಾಲಕನ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದರು. ಆದರೆ ಆರೋಪವನ್ನು ಸಾರಾಸಗಟಾಗಿ ನಿರಾಕರಿಸಿದ ಚಾಲಕ, ತಾನು ಪ್ರಯಾಣದ ಆರಂಭದಿಂದಲೂ ಕಂಪನಿಯ ಆ್ಯಪ್ ಮೂಲಕ ಸಂಪೂರ್ಣ ದೃಶ್ಯ ಮತ್ತು ಧ್ವನಿಯನ್ನು ಚಿತ್ರೀಕರಿಸಿಕೊಂಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದನು. ತನಿಖಾಧಿಕಾರಿಗಳು ನೀಡಿದ ಅಧಿಕೃತ ಕೋರಿಕೆಯ ಮೇರೆಗೆ ಸಂಸ್ಥೆಯು ಆ ದೃಶ್ಯಾವಳಿಗಳನ್ನು ಪೊಲೀಸರಿಗೆ ಹಸ್ತಾಂತರಿಸಿತು. ಆ ವಿಡಿಯೋ ಮತ್ತು ಧ್ವನಿಮುದ್ರಿಕೆಯನ್ನು ಪರಿಶೀಲಿಸಿದಾಗ, ಇಬ್ಬರ ನಡುವೆ ಕೇವಲ ಮಾತಿನ ಚಕಮಕಿ ನಡೆದಿರುವುದು ಹಾಗೂ ಪ್ರಯಾಣಿಕರೇ ಚಾಲಕನಿಗೆ ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿರುವುದು ಸ್ಪಷ್ಟವಾಗಿ ದಾಖಲಾಗಿತ್ತು. ಇದರಿಂದಾಗಿ ಚಾಲಕನ ಮೇಲಿನ ಆರೋಪಗಳು ಸಂಪೂರ್ಣ ಆಧಾರರಹಿತ ಎಂಬುದು ದೃಢಪಟ್ಟಿತು.
ಈ ಹಿನ್ನೆಲೆಯಲ್ಲಿ ಈ ಸುರಕ್ಷತಾ ಸೌಲಭ್ಯ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಬಗ್ಗೆ ಸಂಸ್ಥೆಯ ದಕ್ಷಿಣ ಏಷ್ಯಾ ಸುರಕ್ಷತಾ ಕಾರ್ಯಾಚರಣೆಯ ನಿರ್ದೇಶಕ ಸೂರಜ್ ನಾಯರ್ ವಿವರಣೆ ನೀಡಿದ್ದಾರೆ. ಈ ವ್ಯವಸ್ಥೆಯು ಚಾಲಕನ ಮೊಬೈಲ್ ಕ್ಯಾಮೆರಾ ಮತ್ತು ಮೈಕ್ರೋಫೋನ್ ಬಳಸಿ ಕ್ಯಾಬ್‌ನ ಒಳಗಿನ ದೃಶ್ಯಗಳನ್ನು ಸಂಪೂರ್ಣವಾಗಿ ಭದ್ರಪಡಿಸಿದ ರೂಪದಲ್ಲಿ (ಎನ್‌ಕ್ರಿಪ್ಟೆಡ್) ದಾಖಲಿಸಿಕೊಳ್ಳುತ್ತದೆ. ಇಂತಹ ವಾಹನ ಬುಕ್ ಆದಾಗ ಪ್ರಯಾಣಿಕರಿಗೂ ಈ ಬಗ್ಗೆ ಆ್ಯಪ್‌ನಲ್ಲಿ ಮುನ್ಸೂಚನೆ ಸಿಗಲಿದ್ದು, ಇಷ್ಟವಿಲ್ಲದಿದ್ದರೆ ಯಾವುದೇ ರದ್ದತಿ ಶುಲ್ಕವಿಲ್ಲದೆ ಪ್ರಯಾಣವನ್ನು ರದ್ದುಗೊಳಿಸಲು ಅವಕಾಶವಿದೆ.
ಈ ದೃಶ್ಯಾವಳಿಗಳು ಅತ್ಯಂತ ಗೌಪ್ಯವಾಗಿ ಚಾಲಕನ ಫೋನ್‌ನಲ್ಲೇ ಭದ್ರವಾಗಿರುತ್ತವೆ. ಇದನ್ನು ಚಾಲಕ ತಾನಾಗಿಯೇ ವೀಕ್ಷಿಸಲು ಅಥವಾ ಯಾವುದೇ ರೀತಿಯ ಕತ್ತರಿ ಪ್ರಯೋಗ (ಎಡಿಟಿಂಗ್) ಮಾಡಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೆ, ಚಾಲಕನೇ ಅಧಿಕೃತವಾಗಿ ಸುರಕ್ಷತಾ ದೂರು ನೀಡಿ ಆ ವಿಡಿಯೋವನ್ನು ಸಲ್ಲಿಕೆ ಮಾಡದ ಹೊರತು ಸ್ವತಃ ಸಂಸ್ಥೆಯ ಅಧಿಕಾರಿಗಳಿಗೂ ಅದನ್ನು ನೋಡುವ ಅಧಿಕಾರವಿರುವುದಿಲ್ಲ. ಯಾವುದೇ ಅಹಿತಕರ ಘಟನೆಗಳು ವರದಿಯಾಗದಿದ್ದರೆ, 14 ದಿನಗಳ ನಂತರ ಈ ರೆಕಾರ್ಡಿಂಗ್‌ಗಳು ಮೊಬೈಲ್‌ನಿಂದ ಸ್ವಯಂಚಾಲಿತವಾಗಿ ಅಳಿಸಿಹೋಗುತ್ತವೆ.
ಕಾನೂನುಬದ್ಧ ತನಿಖೆಯ ಸಂದರ್ಭದಲ್ಲಿ ಪೊಲೀಸರು ಅಧಿಕೃತವಾಗಿ ಮನವಿ ಸಲ್ಲಿಸಿದಾಗ ಮಾತ್ರ ಪರಿಶೀಲನೆ ನಡೆಸಿ ದೃಶ್ಯಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸಲಾಗುತ್ತದೆ. ಇದು ಕೇವಲ ಚಾಲಕರ ರಕ್ಷಣೆಗೆ ಮಾತ್ರವಲ್ಲದೆ, ಇಬ್ಬರ ನಡುವಿನ ಸತ್ಯಾಸತ್ಯತೆಯನ್ನು ನಿಷ್ಪಕ್ಷಪಾತವಾಗಿ ಸಾಬೀತುಪಡಿಸಲು ಸಹಕಾರಿಯಾಗಿದೆ. ಭಾರತದಲ್ಲಿ ಮೊದಲು ಪ್ರಮುಖ 10 ನಗರಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದ ಈ ವೀಡಿಯೊ ಸೌಲಭ್ಯವನ್ನು 2026 ರ ಜೂನ್‌ನಿಂದ ದೇಶಾದ್ಯಂತ ಎಲ್ಲಾ ಕಾರು ಮತ್ತು ಆಟೋ ಪ್ರಯಾಣಗಳಿಗೂ ವಿಸ್ತರಿಸಲಾಗಿದ್ದು, ಸುಳ್ಳು ದೂರುಗಳು ಹಾಗೂ ಅಪರಾಧ ಕೃತ್ಯಗಳನ್ನು ತಡೆಯಲು ಡಿಜಿಟಲ್ ಕವಚವಾಗಿ ಬಳಕೆಯಾಗುತ್ತಿದೆ.

