ತನ್ನ ಗೇಮಿಂಗ್ ವಿಡಿಯೋಗಳಿಗೆ ಹೆಚ್ಚಿನ ವೀಕ್ಷಣೆಗಳನ್ನು (Views) ಪಡೆದುಕೊಳ್ಳುವ ಹುಚ್ಚಿನಲ್ಲಿ ಒಂಬತ್ತು ವರ್ಷದ ಬಾಲಕನೊಬ್ಬ ತನ್ನ ತಂದೆಯ ಕಚೇರಿಯ ಅಧಿಕೃತ ಕ್ರೆಡಿಟ್ ಕಾರ್ಡ್ ಬಳಸಿ ಬರೋಬ್ಬರಿ 1.13 ಕೋಟಿ ರೂಪಾಯಿಗಳನ್ನು (ಸುಮಾರು 1,18,000 ಅಮೆರಿಕನ್ ಡಾಲರ್) ಯೂಟ್ಯೂಬ್ ಜಾಹೀರಾತು ಪ್ರಚಾರಕ್ಕೆ ಖರ್ಚು ಮಾಡಿರುವ ವಿಚಿತ್ರ ಹಾಗೂ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಅನಿರೀಕ್ಷಿತ ಅವಾಂತರದ ಬಗ್ಗೆ ಬಾಲಕನ ತಂದೆ ಡೇವ್ ಎಂಬುವವರು ಯೂಟ್ಯೂಬ್ನಲ್ಲಿ ವಿಡಿಯೋ ಹಂಚಿಕೊಂಡು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.
ಡೇವ್ ಅವರ ಪುತ್ರ ಮೈಕ್, ಎಂಟನೇ ವಯಸ್ಸಿನಲ್ಲೇ ಗೇಮಿಂಗ್ ವಿಡಿಯೋಗಳನ್ನು ಅಪ್ಲೋಡ್ ಮಾಡಲು ಆರಂಭಿಸಿದ್ದ. ಆದರೆ ತನ್ನ ವಿಡಿಯೋಗಳನ್ನು ಯಾರೂ ವೀಕ್ಷಿಸುತ್ತಿಲ್ಲ ಎಂಬ ಬೇಸರದಲ್ಲಿದ್ದ ಮಗನಿಗೆ, ಆರಂಭದಲ್ಲಿ ತಂದೆಯೇ ಪ್ರೋತ್ಸಾಹಿಸಲು ಕೇವಲ 20 ಡಾಲರ್ ಖರ್ಚು ಮಾಡಿ ಸಣ್ಣ ಮಟ್ಟದ ಪ್ರಚಾರ ಜಾಹೀರಾತನ್ನು ನೀಡಲು ಕಲಿಸಿಕೊಟ್ಟಿದ್ದರು. ಆ ಸಂದರ್ಭದಲ್ಲಿ ತಂದೆಯ ಕಚೇರಿಯ ಇಮೇಲ್, ಕ್ಯಾಲೆಂಡರ್ ಹಾಗೂ ಫೈಲ್ಗಳ ಜತೆಗೆ ಕಂಪನಿಯ ಅಧಿಕೃತ ಕ್ರೆಡಿಟ್ ಕಾರ್ಡ್ ವಿವರಗಳೂ ಅದೇ ಗೂಗಲ್ ಖಾತೆಯಲ್ಲಿ ಉಳಿದುಕೊಂಡಿದ್ದವು.
ಇದೇ ಅವಕಾಶವನ್ನು ಬಳಸಿಕೊಂಡ ಬಾಲಕ, ಹೆಚ್ಚು ಹಣ ವ್ಯಯಿಸಿದಷ್ಟೂ ತನ್ನ ವಿಡಿಯೋಗಳಿಗೆ ಲಕ್ಷಾಂತರ ವೀಕ್ಷಣೆಗಳು ಬರುತ್ತವೆ ಎಂದು ಮುಗ್ಧವಾಗಿ ನಂಬಿ ಸತತ ಮೂರು ವಾರಗಳ ಕಾಲ ದೊಡ್ಡ ಮೊತ್ತದ ಜಾಹೀರಾತು ಅಭಿಯಾನಗಳನ್ನು ತಾನೇ ಚಾಲನೆ ಮಾಡಿದ್ದಾನೆ. ಬಾಲಕನ ಕೆಲವು ವಿಡಿಯೋಗಳು ಸುಮಾರು 2 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದ್ದವು. ಆದರೆ ಕಚೇರಿಯ ಕ್ರೆಡಿಟ್ ಕಾರ್ಡ್ನಿಂದ ನಿರಂತರವಾಗಿ ಹಣ ಕಡಿತಗೊಳ್ಳುತ್ತಿರುವುದನ್ನು ಗಮನಿಸಿದ ಕಂಪನಿಯ ಹಣಕಾಸು ವಿಭಾಗ ಹಾಗೂ ಹಿರಿಯ ಅಧಿಕಾರಿಗಳು, ಡೇವ್ ಅವರನ್ನು ಸಭೆಗೆ ಕರೆದು 118,000 ಡಾಲರ್ ನಷ್ಟವಾಗಿರುವ ಬಗ್ಗೆ ಲೆಕ್ಕ ಕೇಳಿದಾಗ ಇಡೀ ಪ್ರಕರಣ ಬಯಲಾಗಿದೆ.
ಕಚೇರಿಯ ಗೌಪ್ಯ ಪಾವತಿ ವಿವರಗಳನ್ನು ವೈಯಕ್ತಿಕ ಗೂಗಲ್ ಖಾತೆಯಲ್ಲಿ ಉಳಿಸಿಕೊಂಡಿದ್ದು ನನ್ನದೇ ದೊಡ್ಡ ತಪ್ಪು ಎಂದು ಡೇವ್ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ. ಒಂಬತ್ತು ವರ್ಷದ ಬಾಲಕನಿಗೆ ಕಾರ್ಡ್ ಎಂದರೇನು ಅಥವಾ ಕಂಪ್ಯೂಟರ್ ಪರದೆಯ ಮೇಲಿರುವ ಅಂಕಿಗಳು ನಿಜವಾದ ಹಣವನ್ನು ಪ್ರತಿನಿಧಿಸುತ್ತವೆ ಎಂಬುದರ ಸಂಪೂರ್ಣ ಅರಿವು ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ಘಟನೆಯ ಬಳಿಕ ಬಾಲಕನ ಆಟದ ಚಾನೆಲ್ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕಂಪ್ಯೂಟರ್ ಮತ್ತು ಮೊಬೈಲ್ ಬಳಸುವ ಮಕ್ಕಳ ಕೈಗೆ ಪಾವತಿ ವಿವರಗಳು ಸಿಗದಂತೆ ಪೋಷಕರು ಎಷ್ಟು ಎಚ್ಚರಿಕೆ ವಹಿಸಬೇಕು ಎಂಬುದಕ್ಕೆ ಈ ಘಟನೆ ಪ್ರಮುಖ ಎಚ್ಚರಿಕೆಯಾಗಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

