HomeKarnatakaಕೆಪಿಎಸ್‌ಸಿ ಅಕ್ರಮ: ಮತ್ತೊಂದು ಚಿನ್ನದ ಜಾಲ ಬಯಲು; ಲೂಟಿ ಮಾಡಿದ್ದ ಹಣದಲ್ಲಿ ಗೆಳತಿಗೆ 30 ಲಕ್ಷ...

ಕೆಪಿಎಸ್‌ಸಿ ಅಕ್ರಮ: ಮತ್ತೊಂದು ಚಿನ್ನದ ಜಾಲ ಬಯಲು; ಲೂಟಿ ಮಾಡಿದ್ದ ಹಣದಲ್ಲಿ ಗೆಳತಿಗೆ 30 ಲಕ್ಷ ಮೌಲ್ಯದ ಆಭರಣ ಗಿಫ್ಟ್ ಕೊಟ್ಟಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್

ಬೆಂಗಳೂರು: ಕೆಪಿಎಸ್‌ಸಿಯ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಬಗೆದಷ್ಟು ಸ್ಫೋಟಕ ಮಾಹಿತಿಗಳು ಬಯಲಾಗುತ್ತಿವೆ. ಕೆಪಿಎಸ್ ಸಿ ನೇಮಕಾತಿ ಹಗರಣದಲ್ಲಿ ಕೋಟಿ ಕೋಟಿ ಲೂಟಿ ಆರೋಪ ಎದುರಿಸುತ್ತಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರ ಮತ್ತೊಂದು ಚಿನ್ನದ ಜಾಲವನ್ನು ಸಿಐಡಿ ಅಧಿಕಾರಿಗಳು ಬಯಲು ಮಾಡಿದ್ದಾರೆ.

ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಲೂಟಿ ಮಾಡಿದ್ದ ಹಣದಲ್ಲಿ ನಿವೇಶನ ಖರೀದಿ, ಗೆಳತಿಗೆ 26 ಲಕ್ಷ ರೂಪಾಯಿ ಹಣ ನೀಡಿದ್ದ ಎಂಬುದು ಈ ಹಿಂದೆ ತನಿಖೆ ವೇಳೆ ತಿಳಿದುಬಂದಿತ್ತು. ಇದೀಗ ಜ್ಞಾನೇಂದ್ರ ಕುಮಾರ್ ನ ಮತ್ತೊಂದು ಅಕ್ರಮವನ್ನು ಸಿಐಡಿ ಅಧಿಕಾರಿಗಳು ಬಯಲಿಗೆಳೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜ್ಞಾನೇಂದ್ರ ಕುಮಾರ್ ಕೆಪಿಎಸ್ ಸಿಯಲ್ಲಿ ಲೂಟಿ ಮಾಡಿದ ಹಣದಲ್ಲಿ ಗೆಳತಿಗೆ ಬರೋಬ್ಬರಿ 30 ಲಕ್ಷ ಮೌಲ್ಯದ ಚಿನ್ನಾಭರಣ ಕೊಡಿಸಿರುವುದು ಹಾಗೂ ಆಪ್ತರಿಂದ ವಿದೇಶ ಪ್ರವಾಸದ ಆಫರ್ ಪಡೆದುಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ಹಿಂದೆ ಜುಲೈ ತಿಂಗಳಲ್ಲಿ ಬೆಂಗಳೂರಿನ ಪ್ರತಿಷ್ಠಿತ ಜ್ಯುವೆಲ್ಲರಿಯೊಂದರಲ್ಲಿ ಖರೀದಿಸಿದ್ದ 26 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಸಿಐಡಿ ಅಧಿಕಾರಿಗಳು ಈಗಾಗಲೇ ಜಪ್ತಿ ಮಾಡಿದ್ದರು.. ಈಗ ಓಂ ಲಕ್ಷ್ಮಿ ಕೋ-ಆಪರೇಟಿವ್ ಸೊಸೈಟಿಯ ಅನುಮಾನಾಸ್ಪದ ಹಣ ವರ್ಗಾವಣೆ ಪರಿಶೀಲನೆ ನಡೆಸುವಾಗ, ಅದೇ ಗೆಳತಿಗೆ ಮತ್ತೆ 30 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಖರೀದಿಸಿಕೊಟ್ಟಿರುವುದು ಬೆಳಕಿಗೆ ಬಂದಿದೆ.

ಆ ಚಿನ್ನಾಭರಣಗಳನ್ನು ತಕ್ಷಣವೇ ತನಿಖಾ ಸಂಸ್ಥೆಗೆ ಮರಳಿಸುವಂತೆ ಜ್ಞಾನೇಂದ್ರ ಕುಮಾರ್ ಗೆಳತಿಗೆ ಅಧಿಕೃತ ನೋಟಿಸ್ ಜಾರಿ ಮಾಡಿದೆ. ಮತ್ತೊಂದೆಡೆ ಕೆಪಿಎಸ್ ಸಿ ನೇಮಕಾತಿ ಹಗರಣದ ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆ ಜ್ಞಾನೇಂದ್ರ ಕುಮಾರ್ ಗೆ ವಿದೇಶಿ ಪ್ರವಾಸಕ್ಕೂ ಟಿಕೆಟ್ ಬುಕ್ ಮಾಡಿದ್ದ ಎಂಬುದು ತಿಳಿದುಬಂದಿದೆ.

ಬಸವರಾಜ್ ಕನ್ನಾಳೆ ಜ್ಞಾನೇಂದ್ರ ಕುಮಾರ್ ಹಾಗೂ ಅವರ ಕುಟುಂಬದ ವಿದೇಶ ಪ್ರವಾಸಗಳಿಗೆ ಬೇಕಾದ ವ್ಯವಸ್ಥೆ ಮಾಡುತ್ತಿದ್ದ. ಸಂಪೂರ್ಣ ಫಾರಿನ್ ಟ್ರಿಪ್ ಪ್ಯಾಕೇಜ್, ದುಬಾರಿ ಏರ್ ಟಿಕೆಟ್‌ಗಳ ಖರ್ಚು-ವೆಚ್ಚವನ್ನು ಕನ್ನಾಳೆಯೇ ಭರಿಸುತ್ತಿದ್ದ ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗಗೊಂಡಿದೆ.

ಇನ್ನೊಂದೆಡೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಕೆಪಿಎಸ್‌ಸಿ ಹಗರಣದಲ್ಲಿ ಜ್ಞಾನೇಂದ್ರ ಕುಮಾರ್ ಹಿಂದಿರುವ ಪ್ರಭಾವಿಗಳು ಯಾರೆಲ್ಲ ಇದ್ದಾರೆ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದು, ಅವರ ವಿಚಾರಣೆಗೂ ಯೋಜನೆ ರೂಪಿಸಿದೆ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular