ಬೆಂಗಳೂರು: ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಎರಡು ಕಡೆ ರಾಜಧನ ಸಂಗ್ರಹಿಸುತ್ತಿರುವ ಕ್ರಮ ಕೈಬಿಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಪ್ಟೆಂಬರ್ 18ರಿಂದ ರಾಜ್ಯಾದ್ಯಂತ ಕಲ್ಲು ಕ್ವಾರಿ, ಜಲ್ಲಿ ಕ್ರಷರ್ ಹಾಗೂ ಎಂ ಸ್ಯಾಂಡ್ ಘಟಕಗಳನ್ನು ಬಂದ್ ಮಾಡಿ ಹೋರಾಟ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಕಲ್ಲು ಮತ್ತು ಸ್ಟೋನ್ ಕ್ರಷರ್ ಮಾಲೀಕರ ಒಕ್ಕೂಟ ತಿಳಿಸಿದೆ.
ಹೀಗಾಗಿ ಇಂದಿನಿಂದ ರಾಜ್ಯದಲ್ಲಿ ಕಟ್ಟಡ ಸೇರಿ ಇತರೆ ನಿರ್ಮಾಣ ಕಾಮಗಾರಿಗಳಿಗೆ ಅಗತ್ಯ ಸಾಮಗ್ರಿಗಳ ಅಭಾವ ಸೃಷ್ಟಿಯಾಗುವ ಸಾಧ್ಯತೆ ಇದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಒಕ್ಕೂಟದ ಅಧ್ಯಕ್ಷ ಡಿ. ಸಿದ್ದರಾಜು, ಎರಡು ಕಡೆ ರಾಜಧನ ಸಂಗ್ರಹಿಸಲಾಗುತ್ತಿದೆ. ಜಲ್ಲಿ ಉತ್ಪಾದಿಸುವಾಗ ಮತ್ತು ಸಾಗಣೆ ಮಾಡುವಾಗ ವಿಧಿಸುತ್ತಿರುವ ರಾಜಧನ ಕೈಬಿಡಲು ಅನೇಕ ಬಾರಿ ಮನವಿ ಮಾಡಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಇದರಿಂದ ಕಲ್ಲು ಗಣಿಗಾರಿಕೆ ನಡೆಸುವುದು ಕಷ್ಟವಾಗುತ್ತಿದೆ. ಸರ್ಕಾರದ ಧೋರಣೆಯಿಂದ ಕ್ರಷರ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.
ಎಲ್ಲಾ ಜಿಲ್ಲಾ ಘಟಕಗಳು ಸೇರಿದಂತೆ ಕರ್ನಾಟಕ ಪಟ್ಟಾ ಲ್ಯಾಂಡ್ ಕ್ವಾರಿ ಅಂಡ್ ಜಲ್ಲಿ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಬಂದ್ ಬೆಂಬಲಿಸಿದೆ. ಎರಡು ಕಡೆ ರಾಜಧನ ವಾಪಸ್ ಪಡೆಯುವ ಜೊತೆಗೆ ಕೆಎಂಎಂಸಿಆರ್ 1994 ನಿಯಮಗಳಿಗೆ ಮಾಡಿರುವ ತಿದ್ದುಪಡಿ ಅಸಮರ್ಪಕವಾಗಿದ್ದು, ಇವುಗಳನ್ನು ಸಮಗ್ರವಾಗಿ ಪರಿಷ್ಕರಿಸಬೇಕು ಎಂದು ಒತ್ತಾಯಿಸಲಾಗಿದೆ.
ಯಾವ ಪ್ರಮಾಣದಲ್ಲಿ ಕಲ್ಲು ಗಣಿ ಸಂಪತ್ತು ತೆಗೆಯಲಾಗಿದೆ ಎಂಬುದನ್ನು ನಿರ್ಧರಿಸಲು ದೂರ ಸಂವೇದಿ ತಂತ್ರಜ್ಞಾನದಲ್ಲಿ ನಡೆಸುತ್ತಿರುವ ಸಮೀಕ್ಷೆಯು ಅವೈಜ್ಞಾನಿಕವಾಗಿದೆ. ಇದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಲಾಗಿದೆ.
ಬೇಡಿಕೆಗಳನ್ನು ಈಡೇರಿಸಿದಿದ್ದರೆ ಸರ್ಕಾರವಿದ ವಿರುದ್ಧ ಕಾನೂನು ಹೋರಾಟ ಕೂಡ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ನಿರ್ಮಾಣ ಕಾಮಗಾರಿಗಳಿಗೆ ಅಗತ್ಯವಾದ ಜಲ್ಲಿ ಮತ್ತು ಎಂ ಸ್ಯಾಂಡ್ ಪೂರೈಕೆ ಸ್ಥಗಿತಗೊಳಿಸಲಾಗುವುದು. ಹೊರ ರಾಜ್ಯಗಳಿಂದ ಕಲ್ಲು ಗಣಿ ಸಂಪನ್ಮೂಲ ರಾಜ್ಯಕ್ಕೆ ಬರದಂತೆ ತಡೆಯಲು ಚೆಕ್ ಪೋಸ್ಟ್ ಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಒಕ್ಕೂಟದ ಅಧ್ಯಕ್ಷರು ತಿಳಿಸಿದ್ದಾರೆ.
ನಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ಕೈ ಬಿಡುವುದಿಲ್ಲ. ರಾಜಧನ ಸಂಗ್ರಹದ ಬಗ್ಗೆ ಸರ್ಕಾರ ಆದೇಶ ಹೊರಡಿಸಿ ರಾಜ್ಯಪತ್ರದಲ್ಲಿ ಪ್ರಕಟಿಸುವವರೆಗೆ ಹೋರಾಟ ಹಿಂಪಡೆಯುವುದಿಲ್ಲ. ಎರಡು ಕಡೆ ರಾಜಧನ ವಸೂಲಿ ಮಾಡುವ ಕ್ರಮವನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಎಲ್ಲಾ ಜಿಲ್ಲಾ ಘಟಕಗಳು ಬಂದ್ ಗೆ ಬೆಂಬಲ ನೀಡಿವೆ. ಕರ್ನಾಟಕ ಪಟ್ಟಾ ಲ್ಯಾಂಡ್ ಕ್ವಾರಿ ಅಂಡ್ ಜಲ್ಲಿ ಸ್ಟೋನ್ ಸ್ಟೋನ್ ಕ್ರಷರ್ ಅಸೋಸಿಯೇಷನ್ ಕೂಡ ಬಂದ್ ಗೆ ಬೆಂಬಲ ನೀಡಿದೆ ಎಂದು ತಿಳಿಸಿದ್ದಾರೆ. ನಿರ್ಮಾಣ ಕಾಮಗಾರಿಗಳಿಗೆ ಅಗತ್ಯವಿರುವ ಜಲ್ಲಿ ಮತ್ತು ಎಂ ಸ್ಯಾಂಡ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಇದುವರೆಗೆ ಕಲ್ಲು ಗಣಿಗಾರಿಕೆ ವಲಯದಿಂದ ಸರ್ಕಾರಕ್ಕೆ ಸಂದಾಯವಾಗಿರುವ ಒಟ್ಟು ರಾಜಧನ ಮೊತ್ತದ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು. ಸರ್ಕಾರದ ಮೃದು ಧೋರಣೆಯಿಂದ ಕ್ರಷರ್ ಮಾಲೀಕರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ವಾಗೀಶ್, ಅಬ್ದುಲ್ ಮಜಿದ್, ಮನೋಜ್ ಶೆಟ್ಟರ್, ಪಂಚಮಿ ಶ್ರೀನಿವಾಸ್, ಸಿ.ಎಸ್. ಭಾಸ್ಕರ್, ಡಿ.ಆರ್. ಮಹೇಶ್, ಕೆ.ವಿ. ಚೌಧರಿ, ಉಮಾಶಂಕರಯ್ಯ, ವಿ.ಎಸ್. ಪಾಟೀಲ್ ಮೊದಲಾದವರು ಇದ್ದರು.

