ಮದುವೆಯ ನಂತರ ಸುಂದರ ನೆನಪುಗಳನ್ನು ಹೊತ್ತು ತರಬೇಕಿದ್ದ ಮಧುಚಂದ್ರದ (Honeymoon) ಪ್ರವಾಸವೊಂದು ನವದಂಪತಿಗೆ ಅತ್ಯಂತ ಕರಾಳ ದುರಂತವಾಗಿ ಪರಿಣಮಿಸಿದೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ಸಿತ್ತಾಂಗ್‌ನಲ್ಲಿರುವ ಖಾಸಗಿ ಹೋಮ್‌ಸ್ಟೇ ಒಂದರಲ್ಲಿ ಕ್ಯಾಂಪ್‌ಫೈರ್ ಆನಂದಿಸುತ್ತಿದ್ದ ವೇಳೆ, ಸಿಬ್ಬಂದಿಯೊಬ್ಬ ಬೆಂಕಿಗೆ ಅಪರಿಚಿತ ದ್ರವ ರಾಸಾಯನಿಕವನ್ನು ಸುರಿದ ಪರಿಣಾಮ ಬೆಂಕಿ ಏಕಾಏಕಿ ಭುಗಿಲೆದ್ದು ನವವಿವಾಹಿತೆ ಗಂಭೀರವಾಗಿ ಸುಟ್ಟು ಕರಕಲಾಗಿರುವ ಆಘಾತಕಾರಿ ಘಟನೆ ನಡೆದಿದೆ.
ಉತ್ತರ ದಿನಾಜ್‌ಪುರ ಜಿಲ್ಲೆಯ ನಿವಾಸಿ ಸೌವಿಕ್ ದಾಸ್ ಮತ್ತು ಅವರ ಪತ್ನಿ ನಿಕಿತಾ ಸಾಹಾ ಇತ್ತೀಚೆಗಷ್ಟೇ ವಿವಾಹವಾಗಿದ್ದು, ಮಧುಚಂದ್ರಕ್ಕಾಗಿ ಆನ್‌ಲೈನ್ ಮೂಲಕ ‘ಸಿತ್ತಾಂಗ್ ಔರಾ ಹೋಮ್‌ಸ್ಟೇ’ ಬುಕ್ ಮಾಡಿದ್ದರು. ಸೆಪ್ಟೆಂಬರ್ 13 ರಂದು ಬೆಳಗ್ಗೆ ಸುಮಾರು 11 ಗಂಟೆಗೆ ದಂಪತಿ ಹೋಮ್‌ಸ್ಟೇ ತಲುಪಿದ್ದರು. ಅದೇ ದಿನ ರಾತ್ರಿ ಸುಮಾರು 8:22 ರ ವೇಳೆಗೆ ಇಬ್ಬರೂ ಆವರಣದಲ್ಲಿ ಬಾನ್‌ಫೈರ್ ಎದುರು ಕುಳಿತಿದ್ದರು. ಆ ಸಮಯದಲ್ಲಿ ಅಲ್ಲಿಗೆ ಬಂದ ಹೋಮ್‌ಸ್ಟೇ ಸಿಬ್ಬಂದಿಯೊಬ್ಬ, ಸಣ್ಣದಾಗಿ ಉರಿಯುತ್ತಿದ್ದ ಬೆಂಕಿಗೆ ಅಪರಿಚಿತ ದ್ರವರೂಪದ ರಾಸಾಯನಿಕವನ್ನು ಏಕಾಏಕಿ ಸುರಿದಿದ್ದಾನೆ. ಕ್ಷಣಾರ್ಧದಲ್ಲಿ ಬೆಂಕಿಯ ಜ್ವಾಲೆಗಳು ಆಕಾಶಕ್ಕೆ ಚಿಮ್ಮಿ, ಪಕ್ಕದಲ್ಲೇ ಕುಳಿತಿದ್ದ ನಿಕಿತಾ ಅವರ ಸಂಪೂರ್ಣ ದೇಹವನ್ನು ಆವರಿಸಿಕೊಂಡಿವೆ.
ಪತ್ನಿಯನ್ನು ಬೆಂಕಿಯಿಂದ ರಕ್ಷಿಸಲು ಯತ್ನಿಸಿದ ಸೌವಿಕ್ ದಾಸ್ ಅವರ ಕೈಗಳಿಗೂ ಸುಟ್ಟ ಗಾಯಗಳಾಗಿವೆ. ಘಟನೆ ನಡೆದ ಸಂದರ್ಭದಲ್ಲಿ ಬೆಂಕಿ ನಂದಿಸಲು ಹೋಮ್‌ಸ್ಟೇನಲ್ಲಿ ಯಾವುದೇ ಅಗ್ನಿಶಾಮಕ ಉಪಕರಣಗಳಾಗಲಿ ಅಥವಾ ತುರ್ತು ಪ್ರಥಮ ಚಿಕಿತ್ಸಾ ವ್ಯವಸ್ಥೆಯಾಗಲಿ ಇರಲಿಲ್ಲ. ಯಾವುದೇ ಸಿಬ್ಬಂದಿಯೂ ನೆರವಿಗೆ ಧಾವಿಸದೆ ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಂತ್ರಸ್ತೆಯ ಪತಿ ಗಂಭೀರ ಆರೋಪ ಮಾಡಿದ್ದಾರೆ. ಅವಘಡದ ನಂತರ ಸುಮಾರು ಒಂದು ಗಂಟೆ ಕಾಲ ಅಲ್ಲೇ ಅಸಹಾಯಕರಾಗಿ ಕಳೆದ ದಂಪತಿ, ನಂತರ ಮೂರು ಗಂಟೆಗಳ ಕಾಲ ಪ್ರಯಾಣಿಸಿ ಸಿಲಿಗುರಿಯ ಆನಂದಲೋಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಂತರ ಪರಿಸ್ಥಿತಿ ಬಿಗಡಾಯಿಸಿದ ಕಾರಣ ನಿಕಿತಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದೇಸುನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರ ಸ್ಥಿತಿ ಅತ್ಯಂತ ಗಂಭೀರವಾಗಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಸೆಪ್ಟೆಂಬರ್ 16 ರಂದು ಕರ್ಸಿಯಾಂಗ್ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ನೀಡಿರುವ ಸೌವಿಕ್ ದಾಸ್, ಹೋಮ್‌ಸ್ಟೇ ಆಡಳಿತ ಮಂಡಳಿ ಮತ್ತು ಬೆಂಕಿಗೆ ರಾಸಾಯನಿಕ ಸುರಿದ ಸಿಬ್ಬಂದಿ ವಿರುದ್ಧ ಕೊಲೆ ಯತ್ನ ಹಾಗೂ ತೀವ್ರ ನಿರ್ಲಕ್ಷ್ಯದ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ಪೊಲೀಸರಿಗೆ ಸಲ್ಲಿಸಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

