ಗಣೇಶ ಎಂದಾಕ್ಷಣ ಪ್ರತಿಯೊಬ್ಬರಿಗೂ ನೆನಪಾಗುವುದು ಆನೆಯ ಮುಖ, ದೊಡ್ಡ ಕಿವಿಗಳು ಮತ್ತು ಅಂಕುಡೊಂಕಾದ ಸೊಂಡಿಲು. ಆದರೆ ದಕ್ಷಿಣ ಭಾರತದ ತಮಿಳುನಾಡಿನಲ್ಲಿ ಗಣೇಶನ ಸಂಪೂರ್ಣ ವಿಭಿನ್ನ ಹಾಗೂ ಅಪರೂಪದ ವಿಗ್ರಹವಿರುವ ದೇವಾಲಯವೊಂದಿದೆ. ಇಲ್ಲಿ ಗಣೇಶನಿಗೆ ಗಜಮುಖವಿಲ್ಲ, ಬದಲಾಗಿ ಸಂಪೂರ್ಣ ಮಾನವ ಮುಖವಿದೆ. ತಮಿಳುನಾಡಿನ ತಿರುವಾರೂರು ಜಿಲ್ಲೆಯ ಕೂತನೂರು ಸಮೀಪದ ತಿಲತರ್ಪಣಪುರಿಯಲ್ಲಿರುವ ಈ ಪುಣ್ಯಕ್ಷೇತ್ರವನ್ನು ಆದಿ ವಿನಾಯಕ ದೇವಾಲಯ ಅಥವಾ ನರಮುಖ ವಿನಾಯಕ ಎಂದು ಕರೆಯಲಾಗುತ್ತದೆ.
ಆದಿ ಎಂದರೆ ಪ್ರಾಚೀನ ಅಥವಾ ಮೊದಲಿನ ಎಂದರ್ಥ ಹಾಗೂ ನರಮುಖ ಎಂದರೆ ಮನುಷ್ಯನ ಮುಖ. ಗಣೇಶನಿಗೆ ಆನೆಯ ಶಿರ ಬರುವುದಕ್ಕಿಂತ ಮುಂಚೆ ಆತ ಮೂಲತಃ ಹೇಗಿದ್ದನೋ ಅದೇ ರೂಪದಲ್ಲಿ ಇಲ್ಲಿ ಪೂಜಿಸಲಾಗುತ್ತದೆ. ಪುರಾಣಗಳ ಪ್ರಕಾರ, ಪಾರ್ವತಿ ದೇವಿಯು ತನ್ನ ಮೈಯಿಂದ ಸೃಷ್ಟಿಸಿದ ಬಾಲಕನಿಗೆ ಶಿವನು ಶಿರಚ್ಛೇದನ ಮಾಡುವ ಮುನ್ನ ಆತ ಹೊಂದಿದ್ದ ಮುಗ್ಧ ರೂಪವನ್ನೇ ಈ ವಿಗ್ರಹ ಬಿಂಬಿಸುತ್ತದೆ. ತನ್ನ ಸಹೋದರರಾದ ಮುರುಗನ್ (ಸುಬ್ರಹ್ಮಣ್ಯ) ಮತ್ತು ಅಯ್ಯಪ್ಪನಂತೆಯೇ ಸಂಪೂರ್ಣ ಮಾನವ ರೂಪದಲ್ಲಿರುವ ಈ ಬಾಲ ಗಣಪತಿಯ ವಿಗ್ರಹ ಭಕ್ತರಲ್ಲಿ ಪರಮ ವಿಸ್ಮಯ ಮೂಡಿಸುತ್ತದೆ.
ವಿಶ್ವಾದ್ಯಂತ ಇಂತಹ ಅಪರೂಪದ ರೂಪವನ್ನು ಹೊಂದಿರುವ ದೇವಾಲಯಗಳು ಬೆರಳೆಣಿಕೆಯಷ್ಟೇ ಇವೆ. ಉತ್ತರಾಖಂಡದ ರುದ್ರನಾಥದಲ್ಲಿರುವ ಶಿರವಿಲ್ಲದ ಮುಂಕಟಿಯಾ ಗಣೇಶನ ಕ್ಷೇತ್ರವನ್ನು ಹೊರತುಪಡಿಸಿದರೆ, ಪೂರ್ಣಪ್ರಮಾಣದ ಮಾನವ ಮುಖ ಹೊಂದಿರುವ ಗಣೇಶನ ಎರಡನೇ ಪ್ರಮುಖ ಸನ್ನಿಧಿ ಇದಾಗಿದೆ.
ಮಾಯಾವರಂ ಮತ್ತು ತಿರುವಾರೂರು ರಸ್ತೆಯಲ್ಲಿರುವ ಮುಕ್ತೀಶ್ವರರ್ ದೇವಾಲಯದ ಆವರಣದಲ್ಲಿ ಈ ಆದಿ ವಿನಾಯಕನ ಸನ್ನಿಧಿ ನೆಲೆಸಿದೆ. ಪಶ್ಚಿಮಾಭಿಮುಖವಾಗಿರುವ ಗರ್ಭಗುಡಿಯಲ್ಲಿ ಈ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದ್ದು, ಇಕ್ಕೆಲಗಳಲ್ಲಿ ಬೃಹತ್ ದ್ವಾರಪಾಲಕರ ಮೂರ್ತಿಗಳಿವೆ. ದೇವಾಲಯದ ಗೋಪುರದಲ್ಲಿ ಹಲವು ಕಲಾತ್ಮಕ ಶಿಲ್ಪಗಳಿದ್ದರೂ, ಎಲ್ಲಿಯೂ ನರಮುಖದ ಶಿಲ್ಪಗಳಿಲ್ಲದಿರುವುದು ಮತ್ತೊಂದು ವಿಶೇಷ. ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿರುವ ಮುಖ್ಯ ವಿಗ್ರಹದ ಛಾಯಾಗ್ರಹಣವನ್ನು ಇಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಭಕ್ತರ ವೀಕ್ಷಣೆಗಾಗಿ ಗರ್ಭಗುಡಿಯ ಹೊರಭಾಗದಲ್ಲಿ ಈ ಮಾನವ ಮುಖದ ಗಣಪತಿಯ ಮುದ್ರಿತ ಭಾವಚಿತ್ರವನ್ನು ಇರಿಸಲಾಗಿದೆ.
ನಾವು ನಿತ್ಯವೂ ಕಾಣುವ ಗಜಮುಖ ಗಣೇಶನ ಕಲ್ಪನೆಗಿಂತ ಭಿನ್ನವಾಗಿ, ಪುರಾಣ ಕಾಲದ ಮೂಲ ಆದಿ ರೂಪವನ್ನು ಕಣ್ಣುಂಬಿಕೊಳ್ಳಲು ದೇಶಾದ್ಯಂತ ಅಪಾರ ಸಂಖ್ಯೆಯ ಪ್ರವಾಸಿಗರು ಮತ್ತು ಭಕ್ತರು ಈ ದೇಗುಲಕ್ಕೆ ನಿರಂತರವಾಗಿ ಭೇಟಿ ನೀಡುತ್ತಾರೆ.

