HomeIndiaಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹೊಸದಾಗಿ 6 ತಿಂಗಳ 'ಬ್ರಿಡ್ಜ್ ಕೋರ್ಸ್' ಜಾರಿ: ಏನಿದರ ವಿಶೇಷತೆ?

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹೊಸದಾಗಿ 6 ತಿಂಗಳ ‘ಬ್ರಿಡ್ಜ್ ಕೋರ್ಸ್’ ಜಾರಿ: ಏನಿದರ ವಿಶೇಷತೆ?

ನವದೆಹಲಿ: ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶಿಕ್ಷಕರಿಗೆ ಮತ್ತೊಂದು ಹೊಸ ಕೋರ್ಸ್ ಆರಂಭಿಸಿದೆ. ಪ್ರಾಥಮಿಕ ಶಿಕ್ಷಕರಿಗೆ ಹೊಸದಾಗಿ 6 ತಿಂಗಳ ‘ಬ್ರಿಡ್ಜ್ ಕೋರ್ಸ್’ ಜಾರಿಗೊಳಿಸಿದೆ.

ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಅವರು ಪ್ರಾಥಮಿಕ ಶಿಕ್ಷಕರ ಶಿಕ್ಷಣದಲ್ಲಿ ಆರು ತಿಂಗಳ ಪ್ರಮಾಣಪತ್ರ ಬ್ರಿಡ್ಜ್ ಕೋರ್ಸ್ ಗೆ ಚಾಲನೆ ನೀಡಿದ್ದಾರೆ. ಅಲ್ಲದೆ, ಶೈಕ್ಷಣಿಕ ಗುಣಮಟ್ಟ ಉತ್ತೇಜಿಸಲೆಂದು ಈಗಾಗಲೇ ಸೇವೆಯಲ್ಲಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬ್ರಿಡ್ಜ್ ಕೋರ್ಸ್ ಸಮಗ್ರ ತರಬೇತಿ ಒದಗಿಸಲಿದೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಾಥಮಿಕ ಶಿಕ್ಷಕರ ಶಿಕ್ಷಣದಲ್ಲಿ (PTE) ಆರು ತಿಂಗಳ ಅವಧಿಯ ಈ ಪ್ರಮಾಣಪತ್ರ (ಬ್ರಿಡ್ಜ್) ಕೋರ್ಸ್ ಅನ್ನು ಬಿ.ಇಡಿ. ಪದವಿಧರರು ಮತ್ತು ಸೇವಾನಿರತ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ವಿಶೇಷವಾಗಿ ರೂಪಿಸಲಾಗಿದೆ.

ಪ್ರಾಥಮಿಕ ಹಂತದಲ್ಲಿ ಬೋಧನೆಗೆ ಅನುವಾಗುವಂತೆ ಶಿಕ್ಷಕರು ಅಗತ್ಯ ಪ್ರಮಾಣಪತ್ರ ಪಡೆಯಲು ಈ ಹೊಸ ಕೋರ್ಸ್ ಸಹಾಯಕವಾಗಿದೆ. 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧಿಸಲು ಅಗತ್ಯವಾದ ಕೌಶಲ್ಯ ಮತ್ತು ಸಾಮರ್ಥ್ಯ ಬೆಳೆಸಿಕೊಳ್ಳಲು ನಿಟ್ಟಿನಲ್ಲಿ ಶಿಕ್ಷಕರಿಗೆ ಸಮಗ್ರ ತರಬೇತಿ ನೀಡಲಿದೆ.

‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್’ (NIOS) ಮೂಲಕ ಶಿಕ್ಷಕರಿಗಾಗಿ ಈ ಬ್ರಿಡ್ಜ್ ಕೋರ್ಸ್ ಜಾರಿಗೊಳಿಸುತ್ತಿದ್ದು, ಮಕ್ಕಳ ವಿಕಾಸಕ್ಕೆ ಸೂಕ್ತವ ಬೋಧನಾ ಪದ್ಧತಿ ಅಳವಡಿಕೆಗೆ ಶಿಕ್ಷಕರನ್ನು ಸಜ್ಜುಗೊಳಿಸುವುದು ಹಾಗೂ ತಳಹದಿಯಿಂದಲೇ ಶೈಕ್ಷಣಿಕ ಗುಣಮಟ್ಟವನ್ನು ಮತ್ತಷ್ಟು ಬಲಪಡಿಸುವ ಗುರಿ ಹೊಂದಿದೆ.

ಬ್ರಿಡ್ಜ್ ಕೋರ್ಸ್ ನ ವಿಶೇಷತೆ:

‘ನ್ಯಾಷನಲ್ ಕೌನ್ಸಿಲ್ ಫಾರ್ ಟೀಚರ್ ಎಜುಕೇಶನ್’ (NCTE) ಚೌಕಟ್ಟಿನಡಿ ಬ್ರಿಡ್ಜ್ ಕೋರ್ಸ್ ವಿನ್ಯಾಸಗೊಳಿಸಿದ್ದು, ಶೈಕ್ಷಣಿಕ ಕಲಿಕೆ, ಕನಿಷ್ಠ 10 ದಿನಗಳ ಆನ್‌ಲೈನ್ ಸಂಪರ್ಕ ತರಗತಿಗಳು ಹಾಗೂ ಕನಿಷ್ಠ 20 ದಿನಗಳ ಶಾಲಾ-ಆಧಾರಿತ ಅನುಭವದೊಂದಿಗೆ ಶಿಕ್ಷಕರಿಗೆ ಬೋಧನಾ ಸಾಮರ್ಥ್ಯವನ್ನು ವೃದ್ಧಿಸಲಿದೆ ಬ್ರಿಡ್ಜ್ ಕೋರ್ಸ್. ಶಿಕ್ಷಕರಿಗೆ ಚಿಕ್ಕ ಮಕ್ಕಳ ವೈವಿಧ್ಯಮಯ ಕಲಿಕಾ ಅಗತ್ಯಗಳನ್ನು ಪೂರೈಸುವುದಲ್ಲದೆ, 6 ಸೈದ್ಧಾಂತಿಕ ಕೋರ್ಸ್‌ಗಳು ಮತ್ತು ಶಾಲಾ-ಆಧಾರಿತ ಪ್ರಾಯೋಗಿಕ ತರಬೇತಿ ಸಹ ಒಳಗೊಂಡಿದೆ.

ಪ್ರಾಥಮಿಕ ತರಗತಿಗಳಲ್ಲಿನ ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಕೌಶಲ್ಯ ಮತ್ತು ವಿಮರ್ಶಾತ್ಮಕ ಚಿಂತನಾ ಸಾಮರ್ಥ್ಯ ಬೆಳೆಸುವಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸಬಲೀಕರಣಗೊಳಿಸುವುದು ಈ ‘ಬ್ರಿಡ್ಜ್ ಕೋರ್ಸ್’ನ ಪ್ರಮುಖ ಉದ್ದೇಶವಾಗಿದೆ.

2024ರ ಸುಪ್ರೀಂ ಕೋರ್ಟ್ ನ ತೀರ್ಪೊಂದರಲ್ಲಿ D.El.Ed ಅರ್ಹತೆ ಹೊಂದಿಲ್ಲದಿದ್ದರೂ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕಗೊಂಡವರಿಗೆ ‘ಬ್ರಿಡ್ಜ್ ಕೋರ್ಸ್’ ರೂಪಿಸಲು NCTE ಗೆ ಅಧಿಕಾರ ನೀಡಿತ್ತು. ಅದರಂತೆ 28 ಜೂನ್ 2018 ಮತ್ತು 11 ಆಗಸ್ಟ್ 2023ರ ನಡುವೆ B.Ed. ಪದವಿಯೊಂದಿಗೆ ಪ್ರಾಥಮಿಕ ಹಂತದಲ್ಲಿ (1 ರಿಂದ 5 ನೇ ತರಗತಿ) ಬೋಧಿಸಲು ನೇಮಕಗೊಂಡ ಸೇವೆಯಲ್ಲಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ಈ ಬ್ರಿಡ್ಜ್ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಹಿಂದಿ, ಇಂಗ್ಲಿಷ್ ಬೋಧನಾ ಮಾಧ್ಯಮ: NCTE ಗೆಜೆಟ್ ಅಧಿಸೂಚನೆ F.No. NCTE-Reg. 012/2018ರ ಅಡಿ ನೇಮಕಾತಿ ರಕ್ಷಣೆ ಪಡೆದ ಶಿಕ್ಷಕರಿಗಾಗಿ ಈ ಕೋರ್ಸ್ ಅನ್ನು ನಿರ್ದಿಷ್ಟವಾಗಿ ರೂಪಿಸಲಾಗಿದೆ. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬೋಧನಾ ಮಾಧ್ಯಮವಿರುತ್ತದೆ. ಆದಾಗ್ಯೂ, ಶಿಕ್ಷಕರು ಸಂವಿಧಾನದ 8ನೇ ಅನುಸೂಚಿಯಲ್ಲಿ ಪಟ್ಟಿ ಮಾಡಲಾದ 22 ಅಧಿಕೃತ ಭಾಷೆಗಳ ಪೈಕಿ ಯಾವುದಾದರೂ ಒಂದರಲ್ಲಿ ಬರೆಯಲು ಅವಕಾಶವಿರುತ್ತದೆ.

ಮುಕ್ತ ಮತ್ತು ದೂರಶಿಕ್ಷಣ ವಿಧಾನದ ಮೂಲಕವೂ ಈ ಬ್ರಿಡ್ಜ್ ಕೋರ್ಸ್ ನಡೆಸಲಾಗುತ್ತಿದ್ದು, ಸಂಪರ್ಕ ಕಾರ್ಯಕ್ರಮ, ಶಾಲಾ-ಆಧಾರಿತ ಪ್ರಾಯೋಗಿಕ ತರಬೇತಿ, ವೀಡಿಯೊ ಟ್ಯುಟೋರಿಯಲ್‌ಗಳು, ಇ-ಕಲಿಕಾ ಸಾಮಗ್ರಿ ಮತ್ತು ಡಿಜಿಟಲ್ ವೇದಿಕೆಗಳನ್ನು ಒಳಗೊಂಡಿರುತ್ತದೆ. ಸೇವೆಯಲ್ಲಿರುವ ಶಿಕ್ಷಕರು ವೃತ್ತಿಪರ ಜವಾಬ್ದಾರಿ ನಿರ್ವಹಿಸುತ್ತಲೇ ಕೋರ್ಸ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಬ್ರಿಡ್ಜ್ ಕೋರ್ಸ್‌ಗೆ ಪ್ರವೇಶ: NIOS ನ ಅಧಿಕೃತ ಪೋರ್ಟಲ್ (https://bridge.nios.ac.in) ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಅವಕಾಶವಿದ್ದು, ಅರ್ಹ ಶಿಕ್ಷಕರು ಅಗತ್ಯ ದಾಖಲೆ ಅಪ್‌ಲೋಡ್, ನೋಂದಣಿ ಮಾಡಬಹುದಾಗಿದೆ.

ಡಿಜಿಟಲ್ ರೂಪದಲ್ಲಿ ಕಲಿಕಾ ಸಾಮಗ್ರಿ:

ಕೋರ್ಸ್ ಗೆ ಸಂಬಂಧಪಟ್ಟಂತೆ ಎಲ್ಲಾ ಸಾಮಗ್ರಿಗಳನ್ನು ಡಿಜಿಟಲ್ ರೂಪದಲ್ಲಿ ಒದಗಿಸಲಾಗುತ್ತದೆ. ಶಿಕ್ಷಕರು ಕಲಿಕೆ ಅನುಭವ ಉತ್ತಮಪಡಿಸಿಕೊಳ್ಳಲು ಆಡಿಯೋ, ವೀಡಿಯೋ ಮತ್ತು ಸಂವಾದಾತ್ಮಕವಾದಂತಹ ಪೂರಕ ಸಂಪನ್ಮೂಲಗಳನ್ನು ಆನ್‌ಲೈನ್‌ನಲ್ಲೇ ಪಡೆಯಲು ಸಾಧ್ಯವಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular