ಅಹಮದಾಬಾದ್: ಪತಿಯ ಕಣ್ಣೆದುರೇ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದು ಸುಮಾರು 10 ಅಡಿ ಎಳೆದೊಯ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಅಹಮದಾಬಾದ್‌ನ ಶೀಲಜ್‌ನಲ್ಲಿ ನಡೆದಿದೆ. ಘಟನೆ ನಡೆದ ನಾಲ್ಕು ದಿನಗಳ ಬಳಿಕ ಸುಮಾರು 400 ಕಿಲೋಮೀಟರ್ ದೂರದ ರಾಜಸ್ಥಾನದಲ್ಲಿ ಆರೋಪಿಯನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.
ಅಪಘಾತ ಹೇಗೆ ಸಂಭವಿಸಿತು?
ಸೆಪ್ಟೆಂಬರ್ 12ರ ರಾತ್ರಿ ನೃತ್ಯ ಸಂಯೋಜಕ ಹಾರ್ದಿಕ್ ದರ್ಜೀ ಹಾಗೂ ಅವರ ಪತ್ನಿ ನಿಶಿ ಗರ್ಬಾ ತರಗತಿಯಿಂದ ಗಣೇಶೋತ್ಸವಕ್ಕೆ ಬೇಕಾದ ಸಾಮಗ್ರಿಗಳೊಂದಿಗೆ ಮನೆಗೆ ಮರಳುತ್ತಿದ್ದರು.
ಈ ವೇಳೆ ಶೀಲಜ್ ಕೆನಾಲ್ ರಸ್ತೆಗೆ ತಿರುಗುತ್ತಿದ್ದಾಗ ವೇಗವಾಗಿ ಬಂದ ಪಲ್ಸರ್ ಬೈಕ್ ನಿಶಿ ಅವರ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಿಶಿ ಸುಮಾರು 10 ಅಡಿ ದೂರದವರೆಗೆ ಎಳೆದೊಯ್ಯಲ್ಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.ಅಪಘಾತದ ಬಳಿಕ ಆರೋಪಿ ಬೈಕ್ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ಆಸ್ಪತ್ರೆಯಿಂದಲೇ ಪರಾರಿಯಾಗಿದ್ದ ಆರೋಪಿ
ಆರೋಪಿಯನ್ನು ಸುನಿಲ್ ಪರ್ಮಾರ್ ಎಂದು ಗುರುತಿಸಲಾಗಿದೆ. ಈತ ಥಲ್ತೇಜ್ ಪ್ರದೇಶದಲ್ಲಿ ಮನೆ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಅಪಘಾತದಲ್ಲಿ ಸುನಿಲ್ ತಲೆ ಹಾಗೂ ಬೆನ್ನಿಗೆ ಗಂಭೀರ ಗಾಯಗಳಾಗಿದ್ದು, ಆಂಬ್ಯುಲೆನ್ಸ್ ಮೂಲಕ ಸೋಲಾ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಜ್ಞೆ ಬಂದ ಬಳಿಕ ಬಂಧನದ ಭಯದಿಂದ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಬಳಿಕ ಸ್ನೇಹಿತನ ಮನೆಗೆ ತೆರಳಿದ ಆತ ಅಲ್ಲಿಂದ ಬಸ್‌ನಲ್ಲಿ ತನ್ನ ತವರು ರಾಜಸ್ಥಾನದ ಡುಂಗರ್‌ಪುರಕ್ಕೆ ತೆರಳಿದ್ದಾನೆ ಎಂದು ಬೋಪಾಲ್ ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ಮೂಲಕ ಆರೋಪಿಯ ಪತ್ತೆ
ಅಪಘಾತದ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಸ್ಥಳದಲ್ಲೇ ಪತ್ತೆಯಾಗಿದ್ದ ಬೈಕ್‌ನ ನೋಂದಣಿ ವಿವರಗಳನ್ನು ಪರಿಶೀಲಿಸಿದಾಗ ಅದು ರಾಜಸ್ಥಾನದಲ್ಲಿ ನೋಂದಣಿಯಾಗಿರುವುದು ಗೊತ್ತಾಗಿದೆ.
ಇದರ ಜೊತೆಗೆ ಸುನಿಲ್ ಕೆಲಸ ಮಾಡುತ್ತಿದ್ದ ಮಾಲೀಕರ ಹೇಳಿಕೆಯನ್ನೂ ಪಡೆದುಕೊಂಡ ಪೊಲೀಸರು ಆತನ ತವರು ವಿಳಾಸವನ್ನು ಪತ್ತೆಹಚ್ಚಿದ್ದಾರೆ. ಬಳಿಕ ರಾಜಸ್ಥಾನದ ಡುಂಗರ್‌ಪುರಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.
ಪತ್ನಿಯ ಸಾವಿಗೆ ನ್ಯಾಯಕ್ಕಾಗಿ ಪತಿ ಮನವಿ
ಆರೋಪಿ ಎರಡು ದಿನಗಳಾದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಹಾರ್ದಿಕ್ ಸಾಮಾಜಿಕ ಜಾಲತಾಣದಲ್ಲಿ ಭಾವುಕ ವಿಡಿಯೋ ಹಂಚಿಕೊಂಡು, ತನ್ನ ಪತ್ನಿಯ ಸಾವಿಗೆ ಕಾರಣನಾದ ವ್ಯಕ್ತಿಯನ್ನು ಬಂಧಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದರು.
ಈ ವಿಡಿಯೋ ಬಳಿಕ ಪ್ರಕರಣದ ಬಗ್ಗೆ ಸಾರ್ವಜನಿಕ ಗಮನ ಮತ್ತಷ್ಟು ಹೆಚ್ಚಾಗಿದ್ದು, ತನಿಖೆಗೆ ಒತ್ತಡವೂ ಹೆಚ್ಚಾಯಿತು ಎನ್ನಲಾಗಿದೆ. ಇದರ ಬೆನ್ನಲ್ಲೇ ಪೊಲೀಸರು ಆರೋಪಿಯ ಸುಳಿವು ಪತ್ತೆಹಚ್ಚಿ ಡುಂಗರ್‌ಪುರಕ್ಕೆ ತೆರಳಿದ್ದಾರೆ.
ಅಪಘಾತ ಒಪ್ಪಿಕೊಂಡ ಆರೋಪಿ
ಪೊಲೀಸರು ವಿಚಾರಣೆ ನಡೆಸಿದಾಗ ಸುನಿಲ್ ಅಪಘಾತ ಸಂಭವಿಸಿರುವುದನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ ನಿಶಿ ಮೃತಪಟ್ಟಿರುವ ವಿಚಾರ ಆತನಿಗೆ ತಿಳಿದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನಿಶಿ ಸಾವನ್ನಪ್ಪಿರುವ ವಿಚಾರ ತಿಳಿಸಿದಾಗ ಸುನಿಲ್ ಭಾವುಕನಾಗಿ ಕುಸಿದುಬಿದ್ದಿದ್ದಾನೆ ಎನ್ನಲಾಗಿದೆ. ಬಳಿಕ ಆತನನ್ನು ಅಹಮದಾಬಾದ್‌ಗೆ ಕರೆತಂದು, ಆತನಿಗೂ ಅಗತ್ಯ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮಗಳು ನಡೆಯುತ್ತಿವೆ.

