ಐದು ಮಕ್ಕಳ ತಾಯಿಯೊಬ್ಬರು ತನ್ನ ಅಳಿಯನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಮತ್ತು ಇಬ್ಬರೂ ಒಟ್ಟಿಗೆ ವಾಸಿಸಲು ನಿರ್ಧರಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರ ನಡುವೆ ಭಾರಿ ಗಲಾಟೆ ನಡೆದಿರುವ ಘಟನೆ ಉತ್ತರ ಪ್ರದೇಶದ ಮೈನ್‌ಪುರಿ ಕೊತ್ವಾಲಿ ವ್ಯಾಪ್ತಿಯ ಖಾರ್ಗ್‌ಜಿತ್ ನಗರದಲ್ಲಿ ಬೆಳಕಿಗೆ ಬಂದಿದೆ. ಈ ವಿವಾದವು ಸಾರ್ವಜನಿಕರ ಗಮನ ಸೆಳೆದಿದ್ದು, ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ಮಹಿಳೆಯು ಉತ್ತರ ಪ್ರದೇಶದ ಘಿರೂರ್ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದವರಾಗಿದ್ದು, ಆಕೆಯ ಅಳಿಯ ಕುರಾವಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸೊನೈ ಅಶೋಕ್‌ಪುರ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಇಬ್ಬರೂ ಖಾರ್ಗ್‌ಜಿತ್ ನಗರದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಭೇಟಿ ನೀಡಲು ಬಂದಿದ್ದ ಸಂದರ್ಭದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಈ ಹಿಂದೆ ಇಬ್ಬರ ನಡುವೆ ಅನೈತಿಕ ಸಂಬಂಧವಿದೆ ಹಾಗೂ ಇಬ್ಬರೂ ಜತೆಯಾಗಿ ನೆಲೆಸಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.
ಸಂಬಂಧಿಕರ ಮನೆಯಲ್ಲಿ ಈ ವಿಚಾರ ಚರ್ಚೆಗೆ ಬರುತ್ತಿದ್ದಂತೆ ಕೌಟುಂಬಿಕ ಕಲಹ ಭುಗಿಲೆದ್ದಿದೆ. ತಾಯಿಯ ನಡತೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಆಕೆಯ ಮಕ್ಕಳು ಸ್ಥಳಕ್ಕೆ ಧಾವಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಯಿಯ ವರ್ತನೆಯನ್ನು ವಿರೋಧಿಸಿ ಮಕ್ಕಳು ಗಲಾಟೆ ಆರಂಭಿಸಿದ್ದು, ನೋಡನೋಡುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಮತ್ತು ದಾರಿಹೋಕರು ಸ್ಥಳದಲ್ಲಿ ಜಮಾಯಿಸಿದ ಪರಿಣಾಮ ರಸ್ತೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
ವಿಷಯ ತಿಳಿದ ತಕ್ಷಣ ಕೊತ್ವಾಲಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಅತ್ತೆ ಮತ್ತು ಅಳಿಯನ ನಡುವಿನ ಸಂಬಂಧದ ಆರೋಪಗಳು ಹಾಗೂ ಕುಟುಂಬದ ಆಕ್ರೋಶಕ್ಕೆ ಸಂಬಂಧಿಸಿದಂತೆ ಪೊಲೀಸರು ಎರಡೂ ಕಡೆಯವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಇಡೀ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತಿದ್ದು, ಸಂಬಂಧಪಟ್ಟ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅತ್ತೆ ಮತ್ತು ಅಳಿಯ ಒಟ್ಟಿಗೆ ವಾಸಿಸಲು ತೀರ್ಮಾನಿಸಿದ್ದಾರೆ ಎನ್ನಲಾದ ವಿಚಾರವು ಸದ್ಯಕ್ಕೆ ಕುಟುಂಬಸ್ಥರ ಆರೋಪ ಮಾತ್ರವಾಗಿದ್ದು, ಇದುವರೆಗೆ ಅಧಿಕೃತವಾಗಿ ದೃಢಪಟ್ಟಿಲ್ಲ. ತನಿಖೆ ಪೂರ್ಣಗೊಂಡ ನಂತರವೇ ಘಟನೆಯ ಹಿಂದಿನ ಅಸಲಿ ಸತ್ಯಾಂಶ ಹೊರಬರಬೇಕಿದೆ.

