ವಯಸ್ಕ ವ್ಯಕ್ತಿಗೆ ತಾನು ಯಾವ ಧರ್ಮವನ್ನು ಪಾಲಿಸಬೇಕು ಮತ್ತು ಯಾರನ್ನು ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ನಿರ್ಧರಿಸುವ ಸಂಪೂರ್ಣ ಹಕ್ಕಿದೆ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಮುಸ್ಲಿಂ ಯುವತಿಯನ್ನು ವಿವಾಹವಾಗಿದ್ದ ಉತ್ತರ ಪ್ರದೇಶದ ಶಾಮ್ಲಿ ನಿವಾಸಿ ಆಯುಷ್ ಮಲಿಕ್ ಎಂಬುವವರಿಗೆ ತಮ್ಮಿಷ್ಟದ ಧರ್ಮವನ್ನು ಆಚರಿಸಲು ಮತ್ತು ವೈವಾಹಿಕ ಬದುಕಿನ ತೀರ್ಮಾನ ಕೈಗೊಳ್ಳಲು ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಕುಟುಂಬದ ಸಂಬಂಧದ ದೃಷ್ಟಿಯಿಂದ ಮಗನ ಹಿತಾಸಕ್ತಿಯ ಕುರಿತು ತಂದೆ ವ್ಯಕ್ತಪಡಿಸಿರುವ ಕಾಳಜಿ ಅರ್ಥವಾಗುವಂತಹದ್ದೇ ಆಗಿದೆ. ಆದರೆ ಅಂತಹ ಕಾಳಜಿಯು ಸಂವಿಧಾನಾತ್ಮಕವಾಗಿ ರಕ್ಷಿಸಲ್ಪಟ್ಟ ವಯಸ್ಕ ವ್ಯಕ್ತಿಯ ಸ್ವಾಯತ್ತತೆ, ಆತನ ಧರ್ಮ, ವಾಸ್ತವ್ಯ ಮತ್ತು ಜೀವನ ಸಂಗಾತಿಯ ಆಯ್ಕೆಯ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಸಂದೀಪ್ ಜೈನ್ ಅವರಿದ್ದ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
ಆಯುಷ್ ಮಲಿಕ್ ಅವರನ್ನು ಅವರ ತಂದೆ ದೇವ್ರಾಜ್ ಸಿಂಗ್ ಮಲಿಕ್ ಅಕ್ರಮವಾಗಿ ಮನೆಯಲ್ಲಿ ಬಂಧನದಲ್ಲಿಟ್ಟಿದ್ದಾರೆ ಎಂದು ಆರೋಪಿಸಿ ಆಯುಷ್ ಅವರ ಆಪ್ತ ಸುಲ್ತಾನ್ ಎಂಬುವವರು ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಆಯುಷ್ ಇಸ್ಲಾಂ ಧರ್ಮ ಸ್ವೀಕರಿಸಿ ಚಾಂದಿನಿ ಖುರೇಷಿ ಎಂಬ ಯುವತಿಯನ್ನು ಮದುವೆಯಾಗಿದ್ದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಆಯುಷ್ ತಂದೆ, ಅಕ್ರಮ ಮತಾಂತರ ನಿಷೇಧ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಚಾಂದಿನಿ ಮತ್ತು ಅವರ ತಂದೆಯ ವಿರುದ್ಧ ಜೂನ್ ತಿಂಗಳಿನಲ್ಲಿ ದೂರು ದಾಖಲಿಸಿ ಇಬ್ಬರನ್ನೂ ಜೈಲಿಗೆ ಕಳುಹಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು ಆಯುಷ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ಆದೇಶಿಸಿತ್ತು. ಅದರಂತೆ ಶಾಮ್ಲಿ ಪೊಲೀಸರು ಆಯುಷ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ವಿಚಾರಣೆ ವೇಳೆ ನ್ಯಾಯಾಧೀಶರೊಂದಿಗೆ ಮಾತನಾಡಿದ 31 ವರ್ಷದ ಆಯುಷ್, ತಾವು ಬಿ.ಫಾರ್ಮಾ ಪದವೀಧರರಾಗಿದ್ದು, 2014 ರಲ್ಲಿ ಯಾವುದೇ ಬೆದರಿಕೆ, ಒತ್ತಡ ಅಥವಾ ಆಮಿಷವಿಲ್ಲದೆ ಸ್ವಂತ ಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾಗಿ ತಿಳಿಸಿದರು. ತಾವು ಚಾಂದಿನಿ ಖುರೇಷಿ ಅವರನ್ನು ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದು, ಇದು ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಚಾಂದಿನಿ ಮತ್ತು ಆಕೆಯ ಕುಟುಂಬದ ವಿರುದ್ಧ ಜೂನ್ 6 ರಂದು ಸುಳ್ಳು ದೂರು ದಾಖಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು. ಅಲ್ಲದೆ ಜೂನ್ 4 ರಿಂದ ತಮ್ಮನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು ಎಂದು ಆಯುಷ್ ಆರೋಪಿಸಿದರು.
ಮಗನ ಹೇಳಿಕೆಯನ್ನು ನಿರಾಕರಿಸಿದ ತಂದೆ ದೇವ್ರಾಜ್ ಸಿಂಗ್, ಆತನ ತಲೆಕೆಡಿಸಿ ಮತಾಂತರ ಮಾಡಲಾಗಿದೆ ಎಂದು ವಾದಿಸಿದರು. ಆದರೆ ಮಗ ವಯಸ್ಕನಾಗಿದ್ದು, ತನ್ನ ಜೀವನದ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾನೆ ಎಂಬುದನ್ನು ನ್ಯಾಯಾಲಯ ಪುಷ್ಟೀಕರಿಸಿತು.
ಸಂವಿಧಾನದ 25 ನೇ ವಿಧಿಯ ಪ್ರಕಾರ ಪ್ರತಿಯೊಬ್ಬರಿಗೂ ತಮ್ಮ ಅಂತಃಸಾಕ್ಷಿಗೆ ಅನುಗುಣವಾಗಿ ಧರ್ಮವನ್ನು ಆಚರಿಸುವ ಹಕ್ಕಿದೆ. ವಯಸ್ಕ ವ್ಯಕ್ತಿಯೊಬ್ಬರು ತನ್ನ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವುದು ಆತನ ವೈಯಕ್ತಿಕ ಸ್ವಾತಂತ್ರ್ಯವಾಗಿದ್ದು, ಕುಟುಂಬದ ಸದಸ್ಯರಿಗೆ ಅದು ಸಮ್ಮತವಿಲ್ಲ ಎಂಬ ಕಾರಣಕ್ಕೆ ಆ ಹಕ್ಕನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಅದೇ ರೀತಿ ಸಂವಿಧಾನದ 21 ನೇ ವಿಧಿಯಡಿ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಭಾಗವಾಗಿ ಯಾರನ್ನು ಮದುವೆಯಾಗಬೇಕು ಎಂದು ನಿರ್ಧರಿಸುವ ಹಕ್ಕು ಕೂಡ ವಯಸ್ಕರಿಗೆ ಸೇರಿದೆ. ಕುಟುಂಬದ ಇಷ್ಟ ಅಥವಾ ನಿರೀಕ್ಷೆಗೆ ವಿರುದ್ಧವಾಗಿದೆ ಎಂಬ ಕಾರಣಕ್ಕೆ ಈ ಹಕ್ಕನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿತು.
ವ್ಯಕ್ತಿಯೊಬ್ಬರು ಸ್ವತಂತ್ರವಾಗಿ ತಮ್ಮ ನಿರ್ಧಾರವನ್ನು ನ್ಯಾಯಾಲಯದ ಮುಂದೆ ಸ್ಪಷ್ಟಪಡಿಸಿದ ನಂತರ ಅವರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಯಾವುದೇ ಅಡ್ಡಿಪಡಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೇಳಿದ ಹೈಕೋರ್ಟ್, ಆಯುಷ್ ಮೇಲಿದ್ದ ಎಲ್ಲಾ ನಿರ್ಬಂಧಗಳನ್ನು ತೆರವುಗೊಳಿಸಿ ಆದೇಶ ಹೊರಡಿಸಿತು.

