ಸೆಪ್ಟೆಂಬರ್ 11 ರಂದು ಚಿತ್ರಮಂದಿರಗಳಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹನುಮಾನ್ ಅಂಶ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ತನ್ನ ಭರ್ಜರಿ ಕಲೆಕ್ಷನ್ ಮುಂದುವರಿಸಿದೆ. ಆರಂಭದಲ್ಲಿ ಸಾಧಾರಣ ಗಳಿಕೆ ಕಂಡಿದ್ದ ಈ ಆಧ್ಯಾತ್ಮಿಕ ಹಿನ್ನೆಲೆಯ ಚಿತ್ರಕ್ಕೆ, ನಂತರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಜನರ ಮೆಚ್ಚುಗೆಯಿಂದಾಗಿ ಚಿತ್ರಮಂದಿರಗಳಲ್ಲಿ ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ ಆರನೇ ವಾರದಲ್ಲೂ ಸಿನಿಮಾ ಬಲವಾದ ಪ್ರದರ್ಶನ ನೀಡುತ್ತಿದೆ.
ಚಿತ್ರ ಬಿಡುಗಡೆಯಾಗಿ 40 ದಿನಗಳು ಪೂರ್ಣಗೊಂಡಿದ್ದು, ವಿಶ್ವಾದ್ಯಂತ ಸುಮಾರು 291.40 ಕೋಟಿ ರೂಪಾಯಿ ಗಳಿಸುವ ಮೂಲಕ ಶೀಘ್ರದಲ್ಲೇ 300 ಕೋಟಿ ರೂಪಾಯಿ ಕ್ಲಬ್ ಸೇರಲು ಸಜ್ಜಾಗಿದೆ. ಆರನೇ ವಾರದ ಮಂಗಳವಾರ ಅಂದರೆ 40ನೇ ದಿನದಂದು ಈ ಸಿನಿಮಾ ದೇಶಾದ್ಯಂತ ಒಟ್ಟು 9,175 ಶೋಗಳಿಂದ 8.25 ಕೋಟಿ ರೂಪಾಯಿ ನಿವ್ವಳ ಆದಾಯ ಗಳಿಸಿದೆ. ವಿಶೇಷವೆಂದರೆ ಆರನೇ ವಾರದ ಸೋಮವಾರ ಕೂಡ ಸಿನಿಮಾ ಅಷ್ಟೇ ಪ್ರಮಾಣದ ಗಳಿಕೆ ದಾಖಲಿಸಿತ್ತು.
ಪ್ರಸ್ತುತ ಮಾಹಿತಿಯ ಪ್ರಕಾರ, ಭಾರತದಲ್ಲಿ ಈವರೆಗೆ ಚಿತ್ರದ ಒಟ್ಟು ನಿವ್ವಳ ಗಳಿಕೆ 231.13 ಕೋಟಿ ರೂಪಾಯಿಗೆ ತಲುಪಿದ್ದು, ಭಾರತದ ಒಟ್ಟು ಗ್ರಾಸ್ ಕಲೆಕ್ಷನ್ 272.90 ಕೋಟಿ ರೂಪಾಯಿಯಾಗಿದೆ. ಇನ್ನು ವಿದೇಶಿ ಮಾರುಕಟ್ಟೆಯಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿರುವ ಈ ಚಿತ್ರ, 40ನೇ ದಿನದಂದು 2 ಕೋಟಿ ರೂಪಾಯಿ ಸೇರ್ಪಡೆಗೊಳಿಸುವುದರೊಂದಿಗೆ ವಿದೇಶದಲ್ಲಿ ಒಟ್ಟು 18.50 ಕೋಟಿ ರೂಪಾಯಿ ಗಳಿಸಿದೆ.
ವಾರದಿಂದ ವಾರಕ್ಕೆ ಈ ಸಿನಿಮಾದ ಗಳಿಕೆ ಗಣನೀಯವಾಗಿ ಏರಿಕೆಯಾಗಿರುವುದು ಗಮನಾರ್ಹ. ಮೊದಲ ವಾರದಲ್ಲಿ 1.08 ಕೋಟಿ ರೂಪಾಯಿ ಮತ್ತು ಎರಡನೇ ವಾರದಲ್ಲಿ 40 ಲಕ್ಷ ರೂಪಾಯಿ ಗಳಿಸಿದ್ದ ಸಿನಿಮಾ, ಮೂರನೇ ವಾರದಲ್ಲಿ 10.40 ಕೋಟಿ ರೂಪಾಯಿಗೆ ಜಂಪ್ ಆಗಿತ್ತು. ನಾಲ್ಕನೇ ವಾರದಲ್ಲಿ 61 ಕೋಟಿ ರೂಪಾಯಿ ಹಾಗೂ ಐದನೇ ವಾರದಲ್ಲಿ ಭರ್ಜರಿ 90.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ಪಂಡಿತರನ್ನೇ ಬೆರಗುಗೊಳಿಸಿತು.
ಆರನೇ ವಾರದ ವಾರಾಂತ್ಯದಲ್ಲೂ ಈ ಚಿತ್ರದ ಗಳಿಕೆಯ ಅಲೆ ಮುಂದುವರಿದಿತ್ತು. ಶುಕ್ರವಾರ 10.50 ಕೋಟಿ, ಶನಿವಾರ 18.50 ಕೋಟಿ ಹಾಗೂ ಭಾನುವಾರ 22.50 ಕೋಟಿ ರೂಪಾಯಿ ಗಳಿಸಿತ್ತು. ಮಂಗಳವಾರ ಚಿತ್ರಮಂದಿರಗಳಲ್ಲಿ ಶೇಕಡಾ 28.65 ರಷ್ಟು ಪ್ರೇಕ್ಷಕರ ಹಾಜರಾತಿ ಕಂಡುಬಂದಿದ್ದು, ಸೋಮವಾರಕ್ಕಿಂತಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಚಿತ್ರವು ವಿಶಾಲ್ ಚತುರ್ವೇದಿ ಬರೆದಿರುವ ಡಿವೈನ್ ಡಿಟೂರ್ ದಟ್ ಚೇಂಜ್ಡ್ ಮೈ ಲೈಫ್ ಪುಸ್ತಕವನ್ನು ಆಧರಿಸಿದೆ. ನೀಮ್ ಕರೋಲಿ ಬಾಬಾ ಅವರ ಜೀವನಾಧಾರಿತ ಕಥೆಯನ್ನು ಹೊಂದಿರುವ ಈ ಭಕ್ತಿಪ್ರಧಾನ ಸಿನಿಮಾವನ್ನು ಸ್ವತಃ ವಿಶಾಲ್ ಚತುರ್ವೇದಿ ಅವರೇ ನಿರ್ದೇಶಿಸಿ, ನಿರ್ಮಿಸಿದ್ದಾರೆ. ಇದು ಮೂರು ಭಾಗಗಳಲ್ಲಿ ಬರಲಿರುವ ಸರಣಿ ಸಿನಿಮಾದ ಮೊದಲ ಭಾಗವಾಗಿದೆ.

