ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಹಾಗೂ ರುಚಿಕರ ಉಪಹಾರಗಳಲ್ಲಿ ‘ಘೀ ಪೋಡಿ ಇಡ್ಲಿ’ ಪ್ರಮುಖವಾದದ್ದು. ಬೆಳಗಿನ ತಿಂಡಿಗೆ ಅಥವಾ ಸಂಜೆಯ ಸ್ನ್ಯಾಕ್ಸ್ ಆಗಿ ಸೇವಿಸಲು ಇದು ಸೂಕ್ತವಾಗಿದೆ. ಮನೆಯಲ್ಲಿಯೇ ಸುಲಭವಾಗಿ ಹಾಗೂ ಅತ್ಯಂತ ರುಚಿಕರವಾಗಿ ಘೀ ಪೋಡಿ ಇಡ್ಲಿ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು
ಬೇಯಿಸಿದ ಇಡ್ಲಿ – 8 ರಿಂದ 10 ತುಪ್ಪ – 2 ರಿಂದ 3 ಚಮಚ ಕಡಲೆಕಾಯಿ (ಶೇಂಗಾ) – 2 ಚಮಚ ಕಡಲೆ ಬೇಳೆ – 1 ಚಮಚ ಉದ್ದಿನ ಬೇಳೆ – 1 ಚಮಚ ಒಣ ಮೆಣಸಿನಕಾಯಿ – 3 ಎಳ್ಳು – 1 ಚಮಚ ಜೀರಿಗೆ – ಅರ್ಧ ಚಮಚ ಹುಣಸೆಹಣ್ಣು – ಕಾಲು ಚಮಚ ಬೆಲ್ಲ – 2 ಚಿಟಿಕೆ ಸಾಸಿವೆ – 1 ಚಿಟಿಕೆ ಕರಿಬೇವು – 1 ಎಸಳು ಉಪ್ಪು – ರುಚಿಗೆ ತಕ್ಕಷ್ಟು
ಪೋಡಿ ಪುಡಿ ತಯಾರಿಸುವ ವಿಧಾನ
ಮೊದಲು ಬಾಣಲೆಯಲ್ಲಿ ಕಡಲೆಕಾಯಿ, ಕಡಲೆ ಬೇಳೆ, ಉದ್ದಿನ ಬೇಳೆ, ಒಣ ಮೆಣಸಿನಕಾಯಿ, ಎಳ್ಳು ಮತ್ತು ಜೀರಿಗೆಯನ್ನು ಹಾಕಿ ಸಣ್ಣ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಹುರಿದುಕೊಳ್ಳಿ. ಹುರಿದ ಸಾಮಗ್ರಿಗಳು ತಣ್ಣಗಾದ ನಂತರ, ಅವುಗಳೊಂದಿಗೆ ಹುಣಸೆಹಣ್ಣು, ಬೆಲ್ಲ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸಿ ಜಾರ್ನಲ್ಲಿ ನುಣ್ಣಗೆ ರುಬ್ಬಿಕೊಂಡು ಪೋಡಿ ಪುಡಿಯನ್ನು ಸಿದ್ಧಪಡಿಸಿಕೊಳ್ಳಿ.
ಘೀ ಪೋಡಿ ಇಡ್ಲಿ ಮಾಡುವ ಹಂತಗಳು
ಮೊದಲೇ ಬೇಯಿಸಿಟ್ಟುಕೊಂಡ ಇಡ್ಲಿಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ.
ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಸಾಸಿವೆ ಮತ್ತು ಕರಿಬೇವು ಹಾಕಿ ಒಗ್ಗರಣೆ ಕೊಡಿ. ನಂತರ ಕತ್ತರಿಸಿದ ಇಡ್ಲಿ ತುಂಡುಗಳನ್ನು ಸೇರಿಸಿ, ಇಡ್ಲಿಯ ಹೊರಭಾಗ ಸ್ವಲ್ಪ ಗರಿಗರಿಯಾಗುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ.
ಈಗ ತಯಾರಿಸಿಟ್ಟುಕೊಂಡ ಪೋಡಿ ಪುಡಿಯನ್ನು ಇಡ್ಲಿಯ ಮೇಲೆ ಉದುರಿಸಿ, ಎಲ್ಲಾ ಇಡ್ಲಿ ತುಂಡುಗಳಿಗೆ ಪುಡಿ ಚೆನ್ನಾಗಿ ಆವರಿಸಿಕೊಳ್ಳುವಂತೆ ಹದವಾಗಿ ಮಿಕ್ಸ್ ಮಾಡಿ.
ಈಗ ಬಿಸಿಯಾದ ಮತ್ತು ಸುವಾಸನಾಯುಕ್ತ ಘೀ ಪೋಡಿ ಇಡ್ಲಿ ಸವಿಯಲು ಸಿದ್ಧ. ಇದನ್ನು ಚಟ್ನಿಯೊಂದಿಗೆ ಅಥವಾ ಹಾಗೆಯೇ ಬಿಸಿಯಾಗಿ ಸೇವಿಸಬಹುದು.

