ಬೆಂಗಳೂರು: ಬೆಂಗಳೂರು ವೈಟ್ ಫೀಲ್ಡ್ ನ KTPO ಗೆ ಹೊಸ ರೂಪ ನೀಡಲಿದ್ದು, ಜಾಗತಿಕ ಮಟ್ಟದ ವಾಣಿಜ್ಯ ಮತ್ತು ಸಮಾವೇಶ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು.
ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ 48.35 ಎಕರೆ KTPO ಆವರಣವನ್ನು ಕೇವಲ ಪ್ರದರ್ಶನಗಳಿಗೆ ಸೀಮಿತಗೊಳಿಸದೆ, ಜಾಗತಿಕ ಮಟ್ಟದ ವಾಣಿಜ್ಯ, ಪ್ರದರ್ಶನ ಮತ್ತು ಸಮಾವೇಶ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.
ಈ ನಿಟ್ಟಿನಲ್ಲಿ ಮಂಗಳವಾರ ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ್ ಅವರು ITPO ಅಧ್ಯಕ್ಷ ಜಾವೇದ್ ಅಶ್ರಫ್, ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ನೀರಜ್ ಖರ್ವಾಲ್ ಅವರೊಂದಿಗೆ KTPO ಆವರಣ ಪರಿಶೀಲಿಸಿ, ಅದರ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ.
ಆಧುನಿಕ ಪ್ರದರ್ಶನ ಹಾಲ್ ಗಳು, ಅತ್ಯಾಧುನಿಕ ಸಮಾವೇಶ ಸೌಲಭ್ಯಗಳು, ಬೃಹತ್ ಈವೆಂಟ್ ಸ್ಥಳಗಳು ಹಾಗೂ ಸೂಕ್ತ ಪಾರ್ಕಿಂಗ್ ವ್ಯವಸ್ಥೆಯೊಂದಿಗೆ ಸಮಗ್ರ ಅಭಿವೃದ್ಧಿ ಕೈಗೊಳ್ಳಲಾಗುವುದು. ಪ್ರಸ್ತಾವಿತ ಸಮಾವೇಶ ಕೇಂದ್ರವು ಸುಮಾರು 20,000 ಚದರ ಮೀಟರ್ ಬಿಲ್ಟ್-ಅಪ್ ಪ್ರದೇಶ ಹೊಂದಿರಲಿದೆ.
ಮುಂಬೈನ ಜಿಯೋ ವರ್ಲ್ಡ್ ಕನ್ವೆಷನ್ ಸೆಂಟರ್, ನವದೆಹಲಿಯ ಭಾರತ್ ಮಂಟಪಮ್ ಮತ್ತು ಯಶೋಧಾಭೂಮಿ ಯಂತಹ ವಿಶ್ವದರ್ಜೆಯ ತಾಣಗಳ ಅತ್ಯುತ್ತಮ ಅಂಶಗಳನ್ನು ಅಧ್ಯಯನ ಮಾಡಿ, ಬೆಂಗಳೂರಿಗೆ ಇನ್ನಷ್ಟು ಅತ್ಯುತ್ತಮ ಸೌಲಭ್ಯವನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಇದು ಕೇವಲ ಕಟ್ಟಡ ನಿರ್ಮಾಣವಲ್ಲ; ಬೆಂಗಳೂರಿನ ಜಾಗತಿಕ ವಾಣಿಜ್ಯ ಸಾಮರ್ಥ್ಯವನ್ನು ವಿಸ್ತರಿಸುವ ಹಾಗೂ ಕರ್ನಾಟಕವನ್ನು ಅಂತರರಾಷ್ಟ್ರೀಯ ವ್ಯಾಪಾರ, ಹೂಡಿಕೆ ಮತ್ತು ಉದ್ಯಮಗಳ ಪ್ರಮುಖ ತಾಣವಾಗಿ ಮತ್ತಷ್ಟು ಬಲಪಡಿಸುವ ದೂರದೃಷ್ಟಿಯ ಹೆಜ್ಜೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಹಣಕಾಸು ಸಲಹೆಗಾರ ಎಲ್.ಕೆ. ಅತೀಕ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆ: 9000 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಶೀಘ್ರ
ಕೊಪ್ಪಳ: ತಾಲೂಕಿನ ಬಹುನಿರೀಕ್ಷಿತ ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಒಟ್ಟು 9000 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.
ನಗರದ ಎಸ್.ಎಫ್. ಶಾಲೆಯ ಎದುರುಗಡೆಯಿರುವ ತಮ್ಮ ಕಾರ್ಯಾಲಯದಲ್ಲಿ ಮಂಗಳವಾರ (ಸೆ. 15) ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಳವಂಡಿ ಬೇಟಗೇರಿ ಏತ ನೀರಾವರಿ ಯೋಜನೆಯು ಕೊಪ್ಪಳ ತಾಲ್ಲೂಕಿನ ಹನಕುಂಟಿ ಗ್ರಾಮದಿಂದ 2 ಕಿ.ಮೀ. ಹತ್ತಿರದಲ್ಲಿರುತ್ತದೆ. ಸದರಿ ಯೋಜನೆಗೆ ಮೂಲತಃ ಕೃಷ್ಣ ಕೊಳ್ಳದ ವ್ಯಾಪ್ತಿಯಲ್ಲಿ ಬರುವ ತುಂಗಭದ್ರಾ ನದಿಯಿಂದ 0.50 ಟಿ.ಎಂ.ಸಿ ನೀರನ್ನು ಹಂಚಿಕೆ ಮಾಡಲಾಗಿದೆ. ಈ ಯೋಜನೆಯಿಂದ ಕೊಪ್ಪಳ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಒಟ್ಟು 9000 ಏಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಬಹುದಾಗಿರುತ್ತದೆ. ಈ ಯೋಜನೆಗೆ ಈ ಹಿಂದೆ 87.10 ಕೋಟಿಗಳಿಗೆ ಡಿ.ಪಿ.ಆರ್. ಅನ್ನು ಸರ್ಕಾರಕ್ಕೆ ಸಲ್ಲಿಸಿ ದಿನಾಂಕ: 30.12.2014 ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ ಎಂದರು.
ಜಾಕ್ ವೆಲ್, ಇನ್ ಟೇಕ್ ಕಾಲುವೆ. ರೈಸಿಂಗ್ ಮೇನ್, ಡೆಲಿವರಿ ಚೇಂಬರ್ ಹಾಗೂ ಟ್ರಾನ್ಸ್ಮಿಷನ್ ಲೈನ್, 33 ಕೆವಿ ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿಗಳನ್ನು ಗುತ್ತಿಗೆದಾರರಾದ ಜಿ.ಶಂಕರ್ ರವರಿಗೆ ಟೆಂಡರ್ ಆಧಾರದ ಮೇಲೆ 61.30 ಕೋಟಿಗಳಿಗೆ 21.02.2016 ರಂದು ವಹಿಸಲಾಗಿತ್ತು. ಈ ಯೋಜನೆಯಡಿ ಜಾಕ್ ವೆಲ್, ಇನ್ ಟೇಕ್ ಕಾಲುವೆ ಉದ್ದ 1.02 ಕಿ.ಮೀ. 16.50ಕಿ.ಮೀ ಉದ್ದ ಎಂಎಸ್ ರೈಸಿಂಗ್ ಮೇನ್, 1760 ಹೆಚ್.ಪಿ ಸಾಮರ್ಥ್ಯದ 2+1 ಪಂಪ್ ಮತ್ತು ಮೋಟಾರಗಳು, 2 ಡೆಲವರಿ ಚೇಂಬರ್ ಗಳು. ಜಾಕ್ ವೆಲ್ ಪಕ್ಕದಲ್ಲಿ 33/6.6 ಕೆವಿ ಸಬ್ ಸ್ಟೇಷನ್, 6.10 ಕಿ.ಮೀ ಉದ್ದ ಟ್ರಾನ್ಸ್ಮಿಷನ್ ಲೈನ್ ಹಾಗೂ ಟರ್ಮಿನಲ್ ಬೇ ನಿರ್ಮಿಸಲಾಗಿರುತ್ತದೆ. ದಿನಾಂಕ 10.09.2026 ರಂದು ಸಬ್ ಸ್ಟೇಷನ್ ಚಾರ್ಜ್ ಮಾಡಲಾಗಿರುತ್ತದೆ ಎಂದು ಹೇಳಿದರು.
ಪ್ರತಿ ಪಂಪ್‌ನಿಂದ 28.28 ಕ್ಯೂಸೆಕ್ಸ್ ರಂತೆ ಒಟ್ಟು 56.56 ಕ್ಯೂಸೆಕ್ಸ್ ನೀರನ್ನು ಹರಿಸಲಾಗುವುದು ಹಾಗೂ ಜಲಾಶಯದ ನೀರಿನ ಮಟ್ಟ 1605.00 ಅಡಿ (ಜಲಾಶಯದ ಸಾಮರ್ಥ್ಯ 28.70 ಟಿ.ಎಂ.ಸಿ ವರೆಗು) ತಲುಪುವವರೆಗೆ ಲಭ್ಯವಿರುವ ನೀರನ್ನು ಪಡೆಯಬಹುದು. ಈ ಯೋಜನೆಯ ಹೆಚ್ಚುವರಿ 3000 ಎಕರೆ ಕ್ಷೇತ್ರದ ನೀರಾವರಿ ಕಲ್ಪಿಸುವ ಕಾಮಗಾರಿಯನ್ನು ಎ ವಿಆರ್ ಕನ್ಸಟ್ರಕ್ಷನ್ಸ್ ಇವರಿಗೆ ರೂ:4.59 ಕೋಟಿಗಳಿಗೆ ದಿನಾಂಕ: 30/03/2021 ರಂದು (9 ತಿಂಗಳ ಅವಧಿಗೆ) ಟರ್ನಕೀ ಆಧಾರದ ಮೇಲೆ ವಹಿಸಿದ್ದು, ಈ ಕಾಮಗಾರಿಯಲ್ಲಿ ರೈಸಿಂಗ್ ಮೇನ್ ಪೂರ್ಣಗೊಂಡಿದೆ ಮತ್ತು ಪಂಪುಗಳನ್ನು ಅಳವಡಿಸುವುದು ಹಾಗೂ ಸಬ್‌ಸ್ಟೇಷನ್ ಕಾಮಗಾರಿಗಳು ಬಾಕಿ ಉಳಿದಿರುತ್ತದೆ ಎಂದರು.
ಪ್ರಸ್ತುತ ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯ ಪರಿಷ್ಕೃತ ಡಿ.ಪಿ.ಆರ್ ಅನ್ನು ಕರ್ನಾಟಕ ನೀರಾವರಿ ನಿಗಮದ ನಿರ್ದೇಶಕರ ಮಂಡಳಿಯ 105ನೇ ಸಭೆಯಲ್ಲಿ ಮಂಡಿಸಿದ್ದು. ರೂ. 211.00 ಕೋಟಿಗಳಿಗೆ ಅನುಮೋದನೆ ನೀಡಿರುತ್ತಾರೆ. ಯೋಜನೆಯಡಿ 6000 ಎಕರೆ ಜಮೀನುಗಳಗೆ ಈಗಾಗಲೇ ಒಟ್ಟಾರೆ 39.78 ಕಿ.ಮೀ ಉದ್ದದ ಮುಖ್ಯ ಕಾಲುವೆ ಹಾಗೂ ಉಪ ಕಾಲುವೆಗಳ ನಿರ್ಮಾಣ ಪೂರ್ಣಗೊಂಡಿರುತ್ತದೆ ಎಂದು ತಿಳಿಸಿದರು.
3000 ಏಕರೆ ಜಮೀನುಗಳಗೆ ಮಧ್ಯ ಪ್ರದೇಶ ಮಾದರಿಯ ಮುಖ್ಯ ಪೈಪ್ ಲೈನ್ ಹಾಗೂ ವಿತರಣಾ ಕಾಲುವೆ ಪೈಪ್‌ಲೈನ್ ಕಾಮಗಾರಿಯನ್ನು ರೂ. 11.50 ಕೋಟಿಗಳಿಗೆ ಟೆಂಡರ್ ಕರೆಯಲಾಗಿದ್ದು, ಚಿದು ಇನ್ಫ್ರಾಟೆಕ್ ಪ್ರೈ.ಲಿ (CHIDU INFRATECH PRIVATE LIMITED) ಇವರಿಗೆ ರೂ:11.80 ಕೋಟಿಗಳಿಗೆ ದಿನಾಂಕ: 22/08/2025 ರಂದು (9 ತಿಂಗಳ ಅವಧಿಗೆ) ಟರ್ನಕೀ ಆಧಾರದ ಮೇಲೆ ವಹಿಸಲಾಗಿರುತ್ತದೆ. ಈ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿರುತ್ತದೆ ಎಂದರು.
ಡೆಲಿವರಿ ಚೇಂಬರ್ ನಿಂದ ಬ್ಲಾಕ್-1 ಗೆ ಹೆ.ಡಿ.ಪಿ.ಇ ಪೈಪ್ (Dia-355 To 125) ನ ಒಟ್ಟು ಉದ್ದ 8.7 ಕಿ.ಮೀ, ಪೈಪ್ ನೆಟ್‌ವರ್ಕ್ ನಿಂದ 1243 ಎಕರೆ ಬ್ಲಾಕ್-2 ಗೆ ಎಂಎಸ್ ಪೈಪ್ (Dia-380, 360, 330) ಹಾಗೂ ಹೆ.ಡಿ.ಪಿ.ಇ ಪೈಪ್ (Dia-355 To 125)ನ ಒಟ್ಟು ಉದ್ದ 16.82 ಕಿ.ಮೀ ಪೈಪ್ ನೆಟ್ ವರ್ಕ್ ನಿಂದ 1757 ಎಕರೆ ಒಟ್ಟಾರೆ 3000 ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಸಲು ಯೋಜಿಸಲಾಗಿರುತ್ತದೆ. ಪ್ರತಿ 20 ಹೆಕ್ಟೇರ್ ಜಮೀನುಗಳಗೆ ಪೈಪ್ ಗಳಿಂದ ಚೆಕ್ ಔಟ್ ಲೆಟ್ ನಿಂದ ನೀರನ್ನು ಒದಗಿಸಲಾಗುವುದು ಎಂದು ಹೇಳಿದರು.
ಒಟ್ಟು 9 ಹಳ್ಳಿಗಳಿಗೆ ಅನುಕೂಲ: ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯಿಂದ ಕೊಪ್ಪಳ ತಾಲೂಕಿನ ಮೈನಾಳ್ಳಿ, ಹಂದ್ರಾಳ, ಅಳವಂಡಿ, ಕವಲೂರು, ಹಿರೇಸಿಂದೋಗಿ, ಬಿಕ್ಕನಹಳ್ಳಿ, ಬೆಟ್ಟಗೇರಿ ಹಾಗೂ ಕುಕನೂರು ತಾಲೂಕಿನ ತಳಕಲ್ಲು, ಕೋಮಲಾಪುರ ಸೇರಿದಂತೆ ಒಟ್ಟು 9 ಗ್ರಾಮಗಳ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಅಲ್ಲದೆ, 9000 ಎಕರೆ ಹೊಲಗಾಲುವೆಗಳ ನಿರ್ಮಾಣಕ್ಕಾಗಿ 47 ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಶಾಸಕರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ ಕರಡಿ ಸಂಗಣ್ಣ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ಜಿ.ಪಂ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ಮುಖಂಡರಾದ ಗಾಳೆಪ್ಪ ಪೂಜಾರ್, ಹಟ್ಟಿ ಭರಮಪ್ಪ, ರಾಮಣ್ಣ ಚೌಡ್ಕಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

