ಬೆಂಗಳೂರು: ನೀವು ಹೋಟೆಲ್ನಲ್ಲಿ ಆರ್ಡರ್ ಮಾಡಿ ಸವಿಯುವ ಪನೀರ್ ಬಟರ್ ಮಸಾಲಾ ಅಥವಾ ಅಂಗಡಿಯಿಂದ ತರುವ ಪನೀರ್ ನಿಜಕ್ಕೂ ಹಾಲಿನಿಂದ ಮಾಡಿದ್ದಾ? ಅಥವಾ ಅಗ್ಗದ ಸಸ್ಯಜನ್ಯ ಎಣ್ಣೆ ಬಳಸಿ ಮಾಡಿದ ನಕಲಿ ಪನೀರಾ? ಇನ್ಮುಂದೆ ಇಂತಹ ನಕಲಿ ಆಟ ಕರ್ನಾಟಕದಲ್ಲಿ ನಡೆಯಲ್ಲ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಅನಲಾಗ್ ಪನೀರ್ ಉತ್ಪಾದನೆ, ಮಾರಾಟ ಮತ್ತು ಹೋಟೆಲ್ಗಳಲ್ಲಿ ಬಳಸುವುದರ ಮೇಲೆ ಬರೋಬ್ಬರಿ 1 ವರ್ಷಗಳ ಕಾಲ ಸಂಪೂರ್ಣ ನಿಷೇಧ ಹೇರಿ ಆದೇಶ ಹೊರಡಿಸಿದೆ.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತ ಕೆ. ಶ್ರೀನಿವಾಸ್ ಅವರು ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಆದೇಶ ಉಲ್ಲಂಘಿಸುವವರ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆ-2006 ರ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.
ಏನಿದು ಅನಲಾಗ್ ಪನೀರ್? ಅಸಲಿ-ನಕಲಿ ವ್ಯತ್ಯಾಸವೇನು?
ಅಸಲಿ ಪನೀರ್: FSSAI ನಿಯಮಗಳ ಪ್ರಕಾರ, ಶುದ್ಧ ಹಾಲಿನಿಂದ ಮಾತ್ರ ತಯಾರಾಗುವ ಉತ್ಪನ್ನವೇ ಪನೀರ್. ಇದರಲ್ಲಿ ಹಾಲಿನ ನೈಸರ್ಗಿಕ ಕೊಬ್ಬಿನಂಶವೇ ಪ್ರಮುಖ.
ಅನಲಾಗ್ (ನಕಲಿ) ಪನೀರ್: ವೆಚ್ಚ ಕಡಿಮೆ ಮಾಡಲು ಹಾಲಿನ ಕೊಬ್ಬಿನ ಬದಲು ತರಕಾರಿ ಎಣ್ಣೆ (Vegetable Oil), ವನಸ್ಪತಿ ಅಥವಾ ಹಾಲೇತರ ರಾಸಾಯನಿಕ ವಸ್ತುಗಳನ್ನು ಬೆರೆಸಿ ಕೃತಕವಾಗಿ ಪನೀರ್ ನಂತೆ ರೂಪಿಸಲಾಗುತ್ತದೆ. ಇದನ್ನು ಪನೀರ್ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಅಥವಾ ಹೋಟೆಲ್ಗಳಲ್ಲಿ ಗ್ರಾಹಕರಿಗೆ ನೀಡುವುದು ಸಂಪೂರ್ಣ ಕಾನೂನುಬಾಹಿರ.
ಸರ್ಕಾರದ ಹೊಸ ಆದೇಶದಲ್ಲಿ ಏನಿದೆ?
ಸಂಪೂರ್ಣ ನಿಷೇಧ: ಪನೀರ್ ಹೆಸರಿನಲ್ಲಿ ಅನಲಾಗ್ ಪನೀರ್ ತಯಾರಿಸುವುದು, ಪ್ಯಾಕ್ ಮಾಡುವುದು, ಸಾಗಾಟ ಮಾಡುವುದು, ಹೋಲ್ಸೇಲ್ ಅಥವಾ ಚಿಲ್ಲರೆ ಮಾರಾಟ ಮಾಡುವುದನ್ನು ರಾಜ್ಯಾದ್ಯಂತ 1 ವರ್ಷ ನಿಷೇಧಿಸಲಾಗಿದೆ.
ಹೋಟೆಲ್ ಮತ್ತು ರೆಸ್ಟೋರೆಂಟ್ಗಳಿಗೂ ನಿರ್ಬಂಧ: ಯಾವುದೇ ಹೋಟೆಲ್, ಬೇಕರಿ ಅಥವಾ ಆಹಾರ ತಯಾರಕರು ತಮ್ಮ ತಿಂಡಿ-ತಿನಿಸುಗಳಲ್ಲಿ ಈ ಅನಲಾಗ್ ಪನೀರ್ ಅನ್ನು ಬಳಸುವಂತಿಲ್ಲ, ಸಂಗ್ರಹಿಸುವಂತಿಲ್ಲ ಅಥವಾ ಸರಬರಾಜು ಮಾಡುವಂತಿಲ್ಲ.
ಯಾವುದಕ್ಕೆ ವಿನಾಯಿತಿ?: FSSAI ನಿಂದ ಈಗಾಗಲೇ ನಿರ್ದಿಷ್ಟ ನಿಯಮಾವಳಿ ಹೊಂದಿರುವ ಫ್ರೋಜನ್ ಡೆಸರ್ಟ್, ಪ್ರೊಸೆಸ್ಡ್ ಚೀಸ್ ಮತ್ತು ಮಿಕ್ಸೆಡ್ ಫ್ಯಾಟ್ ಸ್ಪ್ರೆಡ್ಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ. ಕೇವಲ ಪನೀರ್ ಹೆಸರಿನಲ್ಲಿ ಮೋಸದಿಂದ ಮಾರಾಟವಾಗುವ ಅನಲಾಗ್ ಪನೀರ್ಗೆ ಮಾತ್ರ ಈ ಬ್ಯಾನ್ ಅನ್ವಯಿಸುತ್ತದೆ.
ರಾಜ್ಯಾದ್ಯಂತ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಆಹಾರ ಸುರಕ್ಷತಾ ಅಧಿಕಾರಿಗಳ ವಿಶೇಷ ತಂಡವು ಹೋಟೆಲ್ಗಳು ಮತ್ತು ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಿದೆ.

