ಇಲ್ಲಿಯವರೆಗೆ ಸಾಫ್ಟ್ವೇರ್ ಉದ್ಯೋಗಿಗಳಿಗೆ ಲಕ್ಷಾಂತರ ರೂಪಾಯಿ ಸಂಬಳ ಸಿಗುತ್ತದೆ ಎಂದು ಕೇಳಿದ್ದೇವೆ. ಉದ್ಯಮಿಗಳಿಗೆ ಕೋಟ್ಯಂತರ ರೂಪಾಯಿ ಆದಾಯ ಬರುತ್ತದೆ ಎಂಬುದೂ ಗೊತ್ತಿದೆ. ಆದರೆ ಕೈಯಲ್ಲಿ ಕ್ಯಾಮೆರಾ ಹಿಡಿದು, ಬೆಟ್ಟದ ಮೇಲೆ ಕುಳಿತು ಮೋಡಗಳ ವಿಡಿಯೋ ಚಿತ್ರೀಕರಿಸಿದರೆ ತಿಂಗಳಿಗೆ ₹8.5 ಲಕ್ಷ ಸಂಬಳ ಸಿಗುತ್ತದೆ ಎಂದರೆ ಅಚ್ಚರಿಯಾಗುವುದು ಸಹಜ.
ಹೌದು. ಕೈಯಲ್ಲಿ ಕ್ಯಾಮೆರಾ ಹಿಡಿದು ಪರ್ವತದ ಮೇಲೆ ಕುಳಿತು ಮೋಡಗಳ ಚಲನವಲನವನ್ನು ವಿಡಿಯೋ ಮಾಡಿದರೆ ಸಾಕು, ತಿಂಗಳಿಗೆ ಬರೋಬ್ಬರಿ ₹8.5 ಲಕ್ಷ ಸಂಬಳ! ಚೀನಾದ ಲಾವೋಜುನ್ ಪರ್ವತ ಪ್ರದೇಶದಲ್ಲಿ ನೀಡಲಾಗುತ್ತಿರುವ ಈ ವಿಶಿಷ್ಟ ‘ಕ್ಲೌಡ್ ಅಬ್ಸರ್ವರ್’ ಉದ್ಯೋಗ ಇದೀಗ ಭಾರೀ ಕುತೂಹಲ ಮೂಡಿಸಿದ್ದು, ಈ ಕೆಲಸಕ್ಕಾಗಿ 3,500ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಇಂತಹ ವಿಶಿಷ್ಟ ಉದ್ಯೋಗವೊಂದಕ್ಕೆ 3,500ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದು, ಅವರಲ್ಲಿ ಒಬ್ಬರು ಆಯ್ಕೆಯಾಗಿದ್ದಾರೆ. ಹಾಗಾದರೆ ಈ ಉದ್ಯೋಗ ಯಾರಿಗೆ ಸಿಕ್ಕಿದೆ? ಇಷ್ಟೊಂದು ಸಂಬಳ ನೀಡುತ್ತಿರುವವರು ಯಾರು?
ಚೀನಾದ ಹೆನಾನ್ ಪ್ರಾಂತ್ಯದಲ್ಲಿರುವ ಲಾವೋಜುನ್ ಮೌಂಟನ್ ಸೀನಿಕ್ ಪ್ರದೇಶದಲ್ಲಿ ಈ ಉದ್ಯೋಗ ಮಾಡಬೇಕಿದೆ. ‘ಸೀ ಆಫ್ ಕ್ಲೌಡ್ಸ್ ಅಬ್ಸರ್ವರ್’ ಅಥವಾ ‘ಕ್ಲೌಡ್ಸ್ಕೇಪ್ ಅಬ್ಸರ್ವರ್’ ಎಂದು ಕರೆಯಲಾಗುವ ಈ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.
ಆಯ್ಕೆಯಾದವರು 30 ದಿನಗಳ ಕಾಲ ಪರ್ವತದ ಶಿಖರದಲ್ಲಿ ವಾಸಿಸಬೇಕು. ಅಲ್ಲಿನ ಮೋಡಗಳು ಹಾಗೂ ಅವುಗಳಲ್ಲಿ ಉಂಟಾಗುವ ಬದಲಾವಣೆಗಳನ್ನು ಪ್ರತಿದಿನ ವಿಡಿಯೋ ಮತ್ತು ಫೋಟೋಗಳ ಮೂಲಕ ದಾಖಲಿಸಿ, ಆನ್ಲೈನ್ನಲ್ಲಿ ಅಪ್ಲೋಡ್ ಮಾಡಬೇಕು. ಈ ಅವಧಿಯಲ್ಲಿ ಉದ್ಯೋಗಿಗೆ ವಸತಿ ವ್ಯವಸ್ಥೆಯನ್ನು ಉಚಿತವಾಗಿ ಒದಗಿಸಲಾಗುತ್ತದೆ.
ಉದ್ಯೋಗದ ಪ್ರಕಟಣೆ ಹೊರಬಂದ ತಕ್ಷಣವೇ 3,500ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದರು. ತಮ್ಮ ಅರ್ಹತೆಯನ್ನು ತೋರಿಸಲು ಅಭ್ಯರ್ಥಿಗಳು ಈ ಹಿಂದೆ ಮೋಡಗಳಿಗೆ ಸಂಬಂಧಿಸಿದಂತೆ ಚಿತ್ರೀಕರಿಸಿದ್ದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಬೇಕಿತ್ತು. ಹೆಚ್ಚಿನ ಲೈಕ್ಸ್ ಹಾಗೂ ಜನಪ್ರಿಯತೆ ಗಳಿಸಿದ ವಿಡಿಯೋಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು.
ಈ ಪ್ರಕ್ರಿಯೆಯಲ್ಲಿ 23 ವರ್ಷದ ಲಿ ಸಿಂಚೆನ್ ಆಯ್ಕೆಯಾಗಿದ್ದಾರೆ. ಅವರು ಚಿತ್ರೀಕರಿಸಿದ್ದ ವಿಡಿಯೋಗೆ ಭಾರೀ ಪ್ರತಿಕ್ರಿಯೆ ದೊರೆತಿದ್ದು, 80 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದವು. ಇದರಿಂದ ಅವರು ಆಯ್ಕೆಯಲ್ಲಿ ಮುನ್ನಡೆ ಸಾಧಿಸಿದರು.
ಈ ಉದ್ಯೋಗ ನೋಡಲು ಸುಲಭವಾಗಿ ಕಂಡರೂ, ವಾಸ್ತವದಲ್ಲಿ ಸಾಕಷ್ಟು ಸವಾಲುಗಳಿವೆ ಎಂದು ಸಿಂಚೆನ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಪ್ರತಿದಿನ ಬೆಳಗ್ಗೆ 5 ಗಂಟೆಗೆ ಎದ್ದು, ಸೂರ್ಯೋದಯದ ಸಮಯದಲ್ಲಿ ಮೋಡಗಳ ಚಲನವಲನವನ್ನು ಚಿತ್ರೀಕರಿಸಬೇಕು. ಬಳಿಕ ಪ್ರಕೃತಿ ದೃಶ್ಯಗಳನ್ನು ಸೆರೆಹಿಡಿಯಬೇಕು. ಸಂಜೆ ಸೂರ್ಯಾಸ್ತದವರೆಗೂ ವಿಡಿಯೋ ಚಿತ್ರೀಕರಣ ಮುಂದುವರಿಸಬೇಕಾಗುತ್ತದೆ.
ಇದರ ಜೊತೆಗೆ ಪ್ರತಿದಿನ ಒಂದು ಶಾರ್ಟ್ ವಿಡಿಯೋ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದು ಕೂಡ ಉದ್ಯೋಗದ ಭಾಗವಾಗಿದೆ. ಪ್ರವಾಸಿಗರನ್ನು ಆಕರ್ಷಿಸುವುದು ಹಾಗೂ ಲಾವೋಜುನ್ ಮೌಂಟನ್ ಪ್ರದೇಶದ ಪ್ರಕೃತಿ ಸೌಂದರ್ಯ ಮತ್ತು ಹವಾಮಾನದ ಬಗ್ಗೆ ಜನರಿಗೆ ತಿಳಿಸುವ ಉದ್ದೇಶದಿಂದ ಈ ಉದ್ಯೋಗವನ್ನು ರೂಪಿಸಲಾಗಿದೆ ಎಂದು ವರದಿಯಾಗಿದೆ.
ಒಂದು ತಿಂಗಳ ಕಾಲ ಕೆಲಸ ಮಾಡುವ ಸಿಂಚೆನ್ಗೆ 60 ಸಾವಿರ ಯುವಾನ್ ಸಂಬಳ ದೊರೆಯಲಿದೆ. ಭಾರತೀಯ ರೂಪಾಯಿಗಳಲ್ಲಿ ಇದರ ಮೌಲ್ಯ ಸುಮಾರು ₹8.5 ಲಕ್ಷ.

