HomeKarnatakaBIG NEWS : ರಾಜ್ಯದ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ;...

BIG NEWS : ರಾಜ್ಯದ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ; ಶಿಕ್ಷಣ ಇಲಾಖೆ ಮಹತ್ವದ ಆದೇಶ

ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು 2026-27ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯಶಿಕ್ಷಕರಿಗೆ ಹಿರಿಯ ಮುಖ್ಯಶಿಕ್ಷಕರ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಿಂದ ಆಗಸ್ಟ್ 21ರಂದು ಅಧಿಸೂಚನೆ ಹೊರಡಿಸಲಾಗಿದೆ.

ಬಡ್ತಿ ಪ್ರಕ್ರಿಯೆಯನ್ನು ಆಯಾ ಜಿಲ್ಲೆಯ ಉಪನಿರ್ದೇಶಕರು (ಆಡಳಿತ) ಅವರ ಹಂತದಲ್ಲಿ ನಿಯಮಾನುಸಾರ ನಡೆಸಲು ಸೂಚಿಸಲಾಗಿದೆ. ಜೇಷ್ಠತಾ ನಿಯಮಗಳ ಆಧಾರದಲ್ಲಿ 2026ರ ಜನವರಿ 1ರಂದು ಇದ್ದಂತೆ ವೃಂದವಾರು ತಾತ್ಕಾಲಿಕ ಜೇಷ್ಠತಾ ಪಟ್ಟಿ ಸಿದ್ಧಪಡಿಸಿ, ಆಕ್ಷೇಪಣೆ ಮತ್ತು ಮನವಿಗಳಿಗೆ ಅವಕಾಶ ನೀಡಿದ ಬಳಿಕ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಖಾಲಿ ಹುದ್ದೆಗಳ ಆಧಾರದಲ್ಲಿ ಬಡ್ತಿ

2024-25ನೇ ಸಾಲಿನ ಹೆಚ್ಚುವರಿ ಶಿಕ್ಷಕರ ಮರುಹೊಂದಾಣಿಕೆ ಹಾಗೂ ಮುಖ್ಯಶಿಕ್ಷಕರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಪ್ರಸ್ತುತ ಲಭ್ಯವಿರುವ ಖಾಲಿ ಹುದ್ದೆಗಳ ಆಧಾರದ ಮೇಲೆ ಮಾತ್ರ ಬಡ್ತಿ ನೀಡಲಾಗುತ್ತದೆ. ಜಿಲ್ಲೆಗೆ ಮಂಜೂರಾಗಿರುವ ಹಿರಿಯ ಮುಖ್ಯಶಿಕ್ಷಕರ ಹುದ್ದೆಗಳ ಸಂಖ್ಯೆಯನ್ನು ಯಾವುದೇ ಕಾರಣಕ್ಕೂ ಮೀರುವಂತಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಂಗವಿಕಲರಿಗೆ ಶೇ.4ರಷ್ಟು ಮೀಸಲಾತಿ

ಬಡ್ತಿ ಪ್ರಕ್ರಿಯೆಯಲ್ಲಿ ಅರ್ಹ ಅಂಗವಿಕಲ ಶಿಕ್ಷಕರಿಗೆ ನಿಯಮಾನುಸಾರ ಶೇ.4ರಷ್ಟು ಮೀಸಲಾತಿ ಕಲ್ಪಿಸಲಾಗುತ್ತದೆ. ಅಂಗವಿಕಲ ಶಿಕ್ಷಕರು ಜಿಲ್ಲಾ ವೈದ್ಯಕೀಯ ಮಂಡಳಿಯ ತ್ರಿಸದಸ್ಯ ಸಮಿತಿಯಿಂದ ಪಡೆದ ಪ್ರಮಾಣಪತ್ರ ಅಥವಾ ಶಾಶ್ವತ ಅಂಗವಿಕಲತಾ ಪ್ರಮಾಣಪತ್ರ (UDID) ಸಲ್ಲಿಸುವುದು ಕಡ್ಡಾಯವಾಗಿದೆ.

ಅಂಗವಿಕಲ ಮೀಸಲಾತಿಯ ಬ್ಯಾಕ್‌ಲಾಗ್, ರೋಸ್ಟರ್ ಬಿಂದು ಹಾಗೂ 100 ಸೈಕಲ್ ರೋಸ್ಟರ್‌ಗಳನ್ನು ನಿಯಮಾನುಸಾರ ಪರಿಶೀಲಿಸಿ ಅನುಷ್ಠಾನಗೊಳಿಸಲು ಸೂಚಿಸಲಾಗಿದೆ. ಅರ್ಹ ಅಂಗವಿಕಲ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್‌ನಲ್ಲಿ ಜೇಷ್ಠತೆಯ ಆಧಾರದ ಮೇಲೆ ಮೊದಲ ಆದ್ಯತೆ ನೀಡಲಾಗುತ್ತದೆ.

ಸೇವಾ ದಾಖಲೆಗಳ ಪರಿಶೀಲನೆ ಕಡ್ಡಾಯ

ಬಡ್ತಿಗೆ ಪರಿಗಣಿಸುವ ಮುನ್ನ ಶಿಕ್ಷಕರ ಮೂಲ ಸೇವಾ ಪುಸ್ತಕ ಹಾಗೂ ಇಡಿಐಎಸ್ ತಂತ್ರಾಂಶದಲ್ಲಿರುವ ಸೇವಾ ಮಾಹಿತಿಯನ್ನು ಪರಿಶೀಲಿಸಬೇಕು. ಗೈರುಹಾಜರಿ, ಅಮಾನತು, ಶಿಕ್ಷಾ ಕ್ರಮ ಅಥವಾ ಇತರೆ ವ್ಯತಿರಿಕ್ತ ದಾಖಲೆಗಳಿದ್ದರೆ ಅವುಗಳನ್ನು ಪರಿಶೀಲಿಸಿದ ನಂತರವೇ ಬಡ್ತಿ ನೀಡಬೇಕು.

ಸುಳ್ಳು ದಾಖಲೆಗಳನ್ನು ಸಲ್ಲಿಸಿ ಬಡ್ತಿ ಪಡೆದಿರುವುದು ಪತ್ತೆಯಾದರೆ, ಸಂಬಂಧಪಟ್ಟ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ನೀಡಿರುವ ಬಡ್ತಿಯನ್ನು ರದ್ದುಪಡಿಸಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.

ಬಡ್ತಿ ಪ್ರಕ್ರಿಯೆಯ ವೇಳಾಪಟ್ಟಿ

  • ಆಗಸ್ಟ್ 25: ವಲಯ ವರ್ಗಾವಣೆಯ ನಂತರ ಲಭ್ಯವಾಗುವ ಹಿರಿಯ ಮುಖ್ಯಶಿಕ್ಷಕರ ಖಾಲಿ ಹುದ್ದೆಗಳ ಪರಿಗಣನೆ.

  • ಆಗಸ್ಟ್ 27: ಬಡ್ತಿಗೆ ಪರಿಗಣಿಸಬೇಕಾದ ಅಂತಿಮ ಖಾಲಿ ಹುದ್ದೆಗಳ ಪ್ರಕಟಣೆ.

  • ಆಗಸ್ಟ್ 28: ಅಂಗವಿಕಲ ಶಿಕ್ಷಕರ ವೈದ್ಯಕೀಯ ಪರೀಕ್ಷೆ.

  • ಆಗಸ್ಟ್ 31: ಮೀಸಲಾತಿ, ರೋಸ್ಟರ್ ಹಾಗೂ ಡಿಪಿಸಿ ಪಟ್ಟಿಗೆ ಜಿಲ್ಲಾ ಹಂತದಲ್ಲಿ ಅನುಮೋದನೆ.

  • ಸೆಪ್ಟೆಂಬರ್ 1: ಬಡ್ತಿಗೆ ಅರ್ಹ ಮುಖ್ಯಶಿಕ್ಷಕರ 1:1.25 ಅಂತಿಮ ತಾತ್ಕಾಲಿಕ ಪಟ್ಟಿ ಪ್ರಕಟಣೆ.

  • ಸೆಪ್ಟೆಂಬರ್ 2ರಿಂದ 5ರವರೆಗೆ: ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ.

  • ಸೆಪ್ಟೆಂಬರ್ 7: ಆಕ್ಷೇಪಣೆಗಳ ಪರಿಶೀಲನೆ ಹಾಗೂ ಇತ್ಯರ್ಥ.

  • ಸೆಪ್ಟೆಂಬರ್ 8: ಬಡ್ತಿ ಕೌನ್ಸೆಲಿಂಗ್‌ಗೆ ಅರ್ಹರ ಅಂತಿಮ 1:1 ಜೇಷ್ಠತಾ ಪಟ್ಟಿ ಪ್ರಕಟಣೆ.

  • ಸೆಪ್ಟೆಂಬರ್ 9: ಹಿರಿಯ ಮುಖ್ಯಶಿಕ್ಷಕರ ಹುದ್ದೆಗೆ ಬಡ್ತಿ ಕೌನ್ಸೆಲಿಂಗ್ ನಡೆಸಿ, ಅಂದೇ ಬಡ್ತಿ ಆದೇಶ ನೀಡಲು ನಿರ್ಧಾರ.

ಬಡ್ತಿ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗದಂತೆ ಜಿಲ್ಲಾ ಉಪನಿರ್ದೇಶಕರು ಮುನ್ನೆಚ್ಚರಿಕೆ ವಹಿಸಬೇಕು. ಆಕ್ಷೇಪಣೆ, ಮನವಿ ಅಥವಾ ಕುಂದುಕೊರತೆಗಳನ್ನು ಜಿಲ್ಲಾ ಹಂತದಲ್ಲೇ ಇತ್ಯರ್ಥಪಡಿಸಬೇಕು. ಪ್ರಕ್ರಿಯೆಯಲ್ಲಿ ಲೋಪ ಕಂಡುಬಂದರೆ ಸಂಬಂಧಪಟ್ಟ ಉಪನಿರ್ದೇಶಕರು (ಆಡಳಿತ) ಅವರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular