ಆದಿಲಾಬಾದ್: ತೆಲಂಗಾಣದ ಆದಿಲಾಬಾದ್ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಹುಣಸೆ ಹಣ್ಣು ತಿನ್ನುತ್ತಿದ್ದ ವೇಳೆ ಹುಣಸೆ ಬೀಜಗಳು ಗಂಟಲಿನಲ್ಲಿ ಸಿಲುಕಿ ಉಸಿರಾಟಕ್ಕೆ ತೊಂದರೆಯಾಗಿ ಏಳು ವರ್ಷದ ಬಾಲಕ ಮೃತಪಟ್ಟಿದ್ದಾನೆ.
ತೆಲಂಗಾಣದ ಆದಿಲಾಬಾದ್ನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಹುಣಸೆ ಹಣ್ಣು ತಿನ್ನುತ್ತಿದ್ದ ವೇಳೆ ಬೀಜಗಳು ಗಂಟಲಿನಲ್ಲಿ ಸಿಲುಕಿ ಉಸಿರಾಟಕ್ಕೆ ತೊಂದರೆಯಾದ ಪರಿಣಾಮ ಏಳು ವರ್ಷದ ಬಾಲಕ ಮೃತಪಟ್ಟಿದ್ದಾನೆ. ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಸಿಪಿಆರ್ ಸೇರಿದಂತೆ ತುರ್ತು ಚಿಕಿತ್ಸೆ ಕೊಡಿಸಿದರೂ ಬಾಲಕನ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ಪಟ್ಟಣದ ಹೊರವಲಯದಲ್ಲಿರುವ ಕೆಆರ್ಕೆ ಕಾಲನಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕೆಆರ್ಕೆ ಕಾಲನಿ ನಿವಾಸಿ ಮಂಗೇಶ್ (7) ಮನೆಯಲ್ಲಿ ಆಟವಾಡುತ್ತಾ ಹುಣಸೆ ಹಣ್ಣು ತಿನ್ನುತ್ತಿದ್ದ. ಈ ವೇಳೆ ಹುಣಸೆ ಹಣ್ಣಿನ ಬೀಜಗಳನ್ನು ಅಗಿಯುತ್ತಿದ್ದಾಗ, ಆಕಸ್ಮಿಕವಾಗಿ ಬೀಜಗಳು ಒಂದೇ ಬಾರಿಗೆ ಗಂಟಲಿನಲ್ಲಿ ಸಿಲುಕಿಕೊಂಡಿವೆ. ಇದರಿಂದ ಬಾಲಕನಿಗೆ ಉಸಿರಾಡಲು ತೀವ್ರ ತೊಂದರೆ ಉಂಟಾಗಿದೆ.
ಬಾಲಕನ ಪರಿಸ್ಥಿತಿಯನ್ನು ಗಮನಿಸಿದ ಕುಟುಂಬಸ್ಥರು ತಕ್ಷಣವೇ ಆತನನ್ನು ಆದಿಲಾಬಾದ್ನ ರಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ತುರ್ತು ಚಿಕಿತ್ಸೆ ನೀಡಲು ಪ್ರಯತ್ನಿಸಿದ್ದು, ಸಿಪಿಆರ್ ಕೂಡ ಮಾಡಿದ್ದಾರೆ. ಆದರೆ ಬಾಲಕನ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬರಲಿಲ್ಲ. ಕೊನೆಗೆ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಆಟವಾಡುತ್ತಾ ಇದ್ದ ಬಾಲಕ ಹೀಗೆ ದಿಢೀರ್ ಮೃತಪಟ್ಟಿರುವುದು ಸ್ಥಳೀಯರಲ್ಲೂ ದುಃಖ ಮೂಡಿಸಿದೆ.
ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಘಟನೆಯ ವಿವರಗಳನ್ನು ಸಂಗ್ರಹಿಸಿದ್ದಾರೆ. ಬಾಲಕನ ಸಾವಿಗೆ ಕಾರಣವಾದ ಪರಿಸ್ಥಿತಿಗಳ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

