ಧಾರವಾಡ: ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಸೌಜನ್ಯ ಭೇಟಿಗೆ ಬರುವ ಸಂದರ್ಭದಲ್ಲಿ ಹಲವಾರು ಸಾರ್ವಜನಿಕರು, ಗಣ್ಯವ್ಯಕ್ತಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೂಗುಚ್ಛಗಳನ್ನು ನೀಡಿ ಗೌರವಿಸುವುದು ವಾಡಿಕೆಯಾಗಿದೆ.
ಆದರೆ, ಹೂಗುಚ್ಛಗಳು ಅಲ್ಪಕಾಲಿಕವಾಗಿದ್ದು, ಪುನರ್ ಬಳಕೆಗೆ ಯೋಗ್ಯವಿರುವುದಿಲ್ಲ. ಈ ಹಿನ್ನೆಲೆಯಲ್ಲಿ “ಲೇಖನಿ-A gift for learning” ಎಂಬ ಉದ್ದೇಶದಿಂದ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ಬರುವ ಸಂದರ್ಭದಲ್ಲಿ ಶಾಲು, ಹಾರ, ನೆನಪಿನ ಕಾಣಿಕೆ, ಹಾಗೂ ಹೂಗುಚ್ಚಗಳನ್ನು ನೀಡುವ ಬದಲಿಗೆ ನೋಟ್ ಬುಕ್, ಪೆನ್ನುಗಳನ್ನು(Blue ball pen/gel pen) ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಈ ರೀತಿಯಾಗಿ ಸಂಗ್ರಹವಾಗುವ ನೋಟ್‍ಬುಕ್ ಹಾಗೂ ಬರವಣಿಕೆ ಪರಿಕರಗಳನ್ನು ಸರ್ಕಾರಿ ಶಾಲೆಗಳ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿತರಿಸುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು ಸಹಕಾರಿಯಾಗುವುದು. ಈ ಸದುದ್ದೇಶಕ್ಕೆ ಎಲ್ಲಾ ಇಲಾಖಾ ಅಧಿಕಾರಿಗಳು, ಸಿಬ್ಬಂದಿ, ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು. ಈ ಸೂಚನೆಗಳನ್ನು ಎಲ್ಲಾ ಇಲಾಖಾ ಮುಖ್ಯಸ್ಥರು, ಸಂಘ-ಸಂಸ್ಥೆಯವರು ಹಾಗೂ ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಡಳಿತದಿಂದ ಸುತ್ತೋಲೆ ಹೊರಡಿಸಲಾಗಿದೆ.

