2026-27ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ವೃಂದದಿಂದ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
2026-27 ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯಶಿಕ್ಷಕರುಗಳಿಗೆ ಹಿರಿಯ ಮುಖ್ಯ ಶಿಕ್ಷಕರ ವೃಂದಕ್ಕೆ ಸ್ಥಾನಪನ್ನ ಬಡ್ತಿ ನೀಡಲು ಉದ್ದೇಶಿಸಿದೆ. ಈಗಾಗಲೇ 2024-25 ನೇ ಸಾಲಿನ ಹೆಚ್ಚುವರಿ ಮುಖ್ಯಶಿಕ್ಷಕರ/ಸಹಶಿಕ್ಷಕರ ಮರುಹೊಂದಾಣಿಕೆ ಪ್ರಕ್ರಿಯೆ ಮತ್ತು ಮುಖ್ಯಶಿಕ್ಷಕರುಗಳ ಸಾಮಾನ್ಯ ವರ್ಗಾವಣಾ ಪ್ರಕ್ರಿಯೆ ಮುಕ್ತಾಯಗೊಂಡಿರುವುದರಿಂದ, ಪ್ರಸ್ತುತ ಲಭ್ಯವಿರುವ ಖಾಲಿ ಹುದ್ದೆಗಳಿಗೆ ಎದುರಾಗಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರಿಗೆ ಹಿರಿಯ ಮುಖ್ಯಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಸಕ್ಷಮ ಪ್ರಾಧಿಕಾರಿಗಳಾದ ಆಯಾ ಜಿಲ್ಲಾ ಉಪನಿರ್ದೇಶಕರು(ಆಡಳಿತ) ರವರುಗಳ ಹಂತದಲ್ಲಿ ರಾಜ್ಯದಾದ್ಯಂತ ನಿಯಮಾನುಸಾರ ಬಡ್ತಿ ನೀಡುವ ಪ್ರಕ್ರಿಯೆಗೆ ಚಾಲನೆಯನ್ನು ನೀಡಬೇಕಾಗಿದೆ.
ಅದರಂತೆ, ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರುಗಳಿಗೆ ಉಲ್ಲೇಖ-1 ರ ಜೇಷ್ಟತಾ ನಿಯಮಾನುಸಾರ ದಿನಾಂಕ:01/01/2026 ರಲ್ಲಿದ್ದಂತೆ ಆಯಾ ವೃಂದವಾರು ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿ, ಸದರಿ ಪಟ್ಟಿಗೆ ಆಕ್ಷೇಪಣೆ/ ಮನವಿ ಸಲ್ಲಿಸಲು ಕಾಲಾವಕಾಶ ನೀಡಬೇಕಿರುತ್ತದೆ. ಸದರಿ ಆಕ್ಷೇಪಣೆ/ಮನವಿಯಲ್ಲಿನ ಅಂಶಗಳನ್ನು ಬಡ್ತಿ ಪ್ರಾಧಿಕಾರಿಗಳು ನಿಯಮಾನುಸಾರ ಪರಿಶೀಲಿಸಿ, ನಿಗದಿತ ಅವಧಿಯೊಳಗೆ ಅಂತಿಮ ಜೇಷ್ಟತಾ ಪ್ರಕಟಿಸಿದ ನಂತರದಲ್ಲಿ ಸದರಿ ಜೇಷ್ಟತಾ ಪಟ್ಟಿಗೆ ಅನುಗುಣವಾಗಿ ಬಡ್ತಿಯನ್ನು ನೀಡಬೇಕಾಗುತ್ತದೆ.
ಸದರಿ ಬಡ್ತಿ ಪ್ರಕ್ರಿಯೆಯನ್ನು 2024-25 ನೇ ಸಾಲಿನಲ್ಲಿ ನಡೆಸಲಾದ ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹೊಂದಾಣಿಕೆಯಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹುದ್ದೆಗಳನ್ನು ನೀಡಲಾಗಿರುತ್ತದೆ. ಅದರಂತೆ ಜಿಲ್ಲಾವಾರು ಮಂಜೂರಾದ ಹುದ್ದೆಗಳು ಹಾಗೂ ಮಂಜೂರಾದ ಹುದ್ದೆಗಳ ಪೈಕಿ ಬಡ್ತಿ ನೀಡುವ ಸಂದರ್ಭದಲ್ಲಿ ಖಾಲಿ/ಭರ್ತಿಯಾಗಿರುವ ಬಗ್ಗೆ ಪರಿಶೀಲಿಸಿಕೊಂಡು ಲಭ್ಯವಾಗುವ ಹುದ್ದೆಗಳನ್ನು ಬಡ್ತಿಗೆ ಪರಿಗಣಿಸಬೇಕಾಗುತ್ತದೆ.
ಪ್ರಸ್ತುತ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯಶಿಕ್ಷಕರುಗಳಿಗೆ ಹಿರಿಯ ಮುಖ್ಯಶಿಕ್ಷಕರ ವೃಂದಕ್ಕೆ ಸ್ಥಾನಪನ್ನ ಬಡ್ತಿ ನೀಡುವ ಸಂಬಂಧ ಉಲ್ಲೇಖ-07 ರಲ್ಲಿನ ಮಾನದಂಡಗಳನ್ವಯ ಅರ್ಹ ಶಿಕ್ಷಕರ ಬಡ್ತಿ ಪ್ರಸ್ತಾವನೆಯನ್ನು ಪರಿಶೀಲಿಸಿ ನಿಯಮಾನುಸಾರ ಕೆಳಗೆ ಸೂಚಿಸಲಾದ ನಿಯಮ/ಷರತ್ತುಗಳಂತೆ ಕ್ರಮವಹಿಸಲು ಸೂಚಿಸಿದೆ.
1. ಹಿರಿಯ ಮುಖ್ಯ ಶಿಕ್ಷಕರ ಬಡ್ತಿಗಾಗಿ ಜಿಲ್ಲಾ ಹಂತದಲ್ಲಿ ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳತಕ್ಕದ್ದು, ಆದರೆ ಅಂಗವಿಕಲ ಅಭ್ಯರ್ಥಿಗಳ ಮೀಸಲಾತಿ ಪ್ರಕ್ರಿಯೆ ಇತ್ಯರ್ಥದ ನಂತರ ಹಾಗೂ ಜೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಿದ ನಂತರದಲ್ಲಿಯೇ ಬಡ್ತಿ ಪ್ರಕ್ರಿಯೆ ಪ್ರಾರಂಭಿಸತಕ್ಕದ್ದು.
2. ಪ್ರಸ್ತುತ 2024-25 ನೇ ಸಾಲಿನಲ್ಲಿ ನಡೆಸಲಾದ ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹೊಂದಾಣಿಕೆ ನಂತರದಲ್ಲಿ ವರ್ಗಾವಣಾ ತಂತ್ರಾಂಶದಲ್ಲಿ ಲಭ್ಯವಿರುವ ಖಾಲಿಹುದ್ದೆಗಳ ಮಾಹಿತಿಯಂತೆ ಯಾವುದೇ ಕಾರಣಕ್ಕೂ ಜಿಲ್ಲೆಗೆ ಮಂಜೂರಾದ ಹಿರಿಯ ಮುಖ್ಯಶಿಕ್ಷಕರ ವೃಂದಬಲದ ಸಂಖ್ಯೆಯ ಮಿತಿಯನ್ನು ಮೀರತಕ್ಕದ್ದಲ್ಲ ಎಂದು ಸ್ಪಷ್ಟಪಡಿಸಿದೆ.
3. ಬಡ್ತಿ ಪ್ರಕ್ರಿಯೆಗೆ ಲಭ್ಯವಾಗುವ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ 2020 ದಿನಾಂಕ:27-03-2020 ರ ನಿಯಮ 3 ರ ಉಪನಿಯಮ-2 ರಲ್ಲಿ ಸೂಚನೆಗಳನ್ನು ಅನುಸರಿಸತಕ್ಕದ್ದು.
4. ಉಲ್ಲೇಖ-3ರ ಸರ್ಕಾರದ ಆದೇಶದಲ್ಲಿ ತಿಳಿಸಿರುವಂತೆ ಜೇಷ್ಠತೆಯಲ್ಲಿ ಪರಿಗಣಿಸಬಹುದಾದ ಎದ್ದುಕಾಣುವ ಅಂಗವೈಕಲ್ಯತೆಯನ್ನು ಉಳ್ಳ ನೌಕರರಿಗೆ ಗ್ರೂಪ್ “ಡಿ’ ಮತ್ತು “ಸಿ’ ವೃಂದಗಳಿಗೆ ನೀಡುವ ಬಡ್ತಿಯಲ್ಲಿ ಶೇಕಡಾ 4ರಷ್ಟು ಮೀಸಲಾತಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಅದರಂತೆ ಅಂತಿಮ ಜೇಷ್ಟತಾ ಪಟ್ಟಿಯಲ್ಲಿ ಅರ್ಹರಿರುವ ಎಲ್ಲಾ ಅಂಗವಿಕಲ ಶಿಕ್ಷಕರು ಸಕ್ಷಮ ಪ್ರಾಧಿಕಾರದಿಂದ ‘ಜಿಲ್ಲಾ ವೈದ್ಯಕೀಯ ಮಂಡಳಿಯ ತ್ರಿಪಸದಸ್ಯ ಸಮಿತಿಯಯಿಂದ ಪಡೆದ ಪ್ರಮಾಣ ಪತ್ರ’ವನ್ನು ಅಥವಾ Permanent disability certificate UDID ಕಡ್ಡಾಯವಾಗಿ ಸಲ್ಲಿಸತಕ್ಕದ್ದು. ನಿಯಮಾನುಸಾರ ಕಡ್ಡಾಯವಾಗಿ ಎದ್ದು ಕಾಣುವ ಅಂಗವೈಕಲ್ಯತೆಯ ಪ್ರಮಾಣದ(ಶೇಕಡಾವಾರು) ಬಗ್ಗೆ ಖಚಿತಪಡಿಸಿಕೊಳ್ಳತಕ್ಕದ್ದು.
5. ಬಡ್ತಿ ಪ್ರಕ್ರಿಯೆಗೆ ಪರಿಗಣಿಸಲಾಗುವ ಶಿಕ್ಷಕರ ಮೂಲ ಸೇವಾಪುಸ್ತಕ/ ಇಇಡಿಎಸ್ ತಂತ್ರಾಂಶದಲ್ಲಿನ ಸೇವಾ ಮಾಹಿತಿಯನ್ವಯ ಗೈರುಹಾಜರಿ/ಅಮಾನತ್ತು/ಶಿಸ್ತುಕ್ರಮ ಹಾಗೂ ಇತರೆ ವ್ಯತಿರಿಕ್ತ ಷರಾ ಇರುವ ಬಗ್ಗೆ ಬಡ್ತಿ ಪ್ರಾಧಿಕಾರಿಗಳು ಕಡ್ಡಾಯವಾಗಿ ಪರಿಶೀಲಿಸತಕ್ಕದ್ದು.
6. ಒಂದು ವೇಳೆ ಸುಳ್ಳು ದಾಖಲಾತಿ ನೀಡಿ ಬಡ್ತಿ ಪಡೆದಿದಲ್ಲಿ ಅಂತಹಾ ಶಿಕ್ಷಕರನ್ನು ಶಿಸ್ತು ಕ್ರಮಕ್ಕೆ ಒಳಪಡಿಸಿ ಅಂತಹಾ ಶಿಕ್ಷಕರಿಗೆ ನೀಡಿರುವ ಬಡ್ತಿಯನ್ನು ರದ್ದುಪಡಿಸಿ ಶಿಸ್ತುಕ್ರಮ ಜರುಗಿಸಲಾಗುವುದು.
7. ಉಲ್ಲೇಖ:2-6 ರಲ್ಲಿನ ಅಂಗವೈಕಲ್ಯ ಮೀಸಲಾತಿ ಅನುಷ್ಟಾನ ಕ್ರಮ ಬ್ಯಾಕ್ ಲಾಗ್, ಮೀಸಲಾತಿಯ ಬಿಂದು, ರೋಸ್ಟರ್ ಗುರುತಿಸುವಿಕೆ ಬಗ್ಗೆ ಖಚಿತಪಡಿಸಿಕೊಳ್ಳತಕ್ಕದ್ದು.
8. ಪ್ರಸ್ತುತ ದಿನಾಂಕಕ್ಕೆ ಚಾಲ್ತಿಯಲ್ಲಿರುವ ಉಲ್ಲೇಖ-09 ಮತ್ತು 10 ರ ಸರ್ಕಾರದ ಆದೇಶದಲ್ಲಿ ಸೂಚಿಸಲಾಗಿರುವ 100 ಸೈಕಲ್ ರೋಸ್ಟರ್ ನ್ನು ಪಾಲಿಸತಕ್ಕದ್ದು.
9. ಬಡ್ತಿ ಪ್ರಕ್ರಿಯೆಯಲ್ಲಿ ಪರಿಗಣಿಸಲಾದ ಅರ್ಹ ಅಂಗವಿಕಲ ಅಭ್ಯರ್ಥಿಗಳಿಗೆ ಜೇಷ್ಟತೆಯ ಆಧಾರದ ಮೇಲೆ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಮೊದಲ ಆಧ್ಯತೆ ನೀಡುವುದು.
10. ಬಡ್ತಿ ಹಾಗೂ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಬಡ್ತಿ ಮುಂದೂಡಲು/ನಿರಾಕರಿಸಲು ಇಚ್ಚಿಸುವ ಶಿಕ್ಷಕರಿಂದ ಕಡ್ಡಾಯವಾಗಿ ಮುಚ್ಚಳಿಕೆ ಪತ್ರ ಪಡೆದುಕೊಳ್ಳುವುದು.
11. ಹಿರಿಯ ಮುಖ್ಯ ಶಿಕ್ಷಕರಿಗೆ ಬಡ್ತಿ ನೀಡುವ ಪ್ರಾಧಿಕಾರಿ ಜಿಲ್ಲಾ ಉಪನಿರ್ದೇಶಕರೇ ಆಗಿರುವುದರಿಂದ ಜಿಲ್ಲಾ ಹಂತದಲ್ಲಿ ಬಡ್ತಿ ಪ್ರಕ್ರಿಯೆಗೆ ಅಗತ್ಯ ಪೂರ್ವಭಾವಿ ತಯಾರಿಗಳನ್ನು ಮಾಡಿಕೊಂಡು ಯಾವುದೇ ಲೋಪಗಳಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ತಿಳಿಸಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಲೋಪಗಳಾದಲ್ಲಿ ಬಡ್ತಿ ಪ್ರಾಧಿಕಾರಿಯಾದ ಉಪನಿರ್ದೆಶಕರು(ಆಡಳಿತ) ರವರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.
ಮೇಲೆ ಸೂಚಿಸಲಾಗಿರುವ ನಿಯಮಗಳು/ ಷರತ್ತುಗಳಂತೆ ಹಾಗೂ ಈ ಕೆಳಕಂಡ ವೇಳಾ ಪಟ್ಟಿಯನುಸಾರ ಯಾವುದೇ ಲೋಪದೋಷಗಳು ಉಂಟಾಗದಂತೆ ಬಡ್ತಿ ಪ್ರಾಧಿಕಾರಗಳಾದ ಉಪನಿರ್ದೇಶಕರು ತಮ್ಮ ಹಂತದಲ್ಲೇ ಜೇಷ್ಟತಾ ಪಟ್ಟಿಯನ್ನು, ಬಡ್ತಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳನ್ನು, ಸ್ವೀಕೃತವಾಗುವ ಬಡ್ತಿ ಪ್ರಸ್ತಾವನೆಗಳನ್ನು, ಅಂಗವಿಕಲತೆಯ ನೈಜತೆ ಕುರಿತು ನಿಯಮಾನುಸಾರ ಪರಿಶೀಲಿಸಿ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯಶಿಕ್ಷಕರುಗಳಿಗೆ ಹಿರಿಯ ಮುಖ್ಯಶಿಕ್ಷಕರ ವೃಂದಕ್ಕೆ ಸ್ಥಾನಪನ್ನ ಬಡ್ತಿ ನೀಡುವ ಪ್ರಕ್ರಿಯೆಯನ್ನು ರಾಜ್ಯದಾಧ್ಯಂತ ಏಕಕಾಲದಲ್ಲಿ ಕೈಗೊಳ್ಳಲು ತೀರ್ಮಾನಿಸಿರುವುದರಿಂದ, ಯಾವುದೇ ತೊಂದರೆಯುಂಟಾಗದಂತೆ ಹೆಚ್ಚಿನ ಗಮನಹರಿಸಿ ಸುಗಮವಾಗಿ ನಡೆಸಲು ಸೂಚಿಸಿದೆ.
25-08-2026
ಬಿ ವಲಯದಿಂದ ಎ ವಲಯಕ್ಕೆ ಹಾಗೂ ಸಿ ವಲಯದಿಂದ ಬಿ ವಲಯಕ್ಕೆ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು 21- (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ 2020 ದಿನಾಂಕ: 27-03-2020 ರ ಅನುಚ್ಚೇಧ 3 ರ ಸೂಚನೆಗಳಂತೆ ಖಾಲಿ ಹುದ್ದೆಗಳನ್ನು ಪರಿಗಣಿಸುವುದು. ಮುಂದುವರೆದು, ವಲಯ ವರ್ಗಾವಣೆಯ ನಂತರದಲ್ಲಿ ಸಿ, ಬಿ ಮತ್ತು ಎ ವಲಯಗಳಲ್ಲಿ ಮಂಜೂರಾದ ಹಿರಿಯ ಮುಖ್ಯಶಿಕ್ಷಕರ ಹುದೆಗಳ ಪೈಕಿ ಲಭ್ಯವಾಗುವ ಖಾಲಿ ಹುದ್ದೆಗಳನ್ನು ಪರಿಗಣಿಸಿ ಅಂತಿಮಗೊಳಿಸತಕ್ಕದ್ದು.
27-08-2026
ಹಿರಿಯ ಮುಖ್ಯಶಿಕ್ಷಕರ ಬಡ್ತಿಗೆ ಅಗತ್ಯವಿರುವ ಖಾಲಿ ಹುದ್ದೆಗಳನ್ನು, ಕರ್ತವ್ಯನಿರತ ಹಿರಿಯ ಮುಖ್ಯಶಿಕ್ಷಕರ ಹುದ್ದೆಗಳನ್ನು ಹೊರತುಪಡಿಸಿ ಅಂತಿಮವಾಗಿ ಬಡ್ತಿಗೆ ಪರಿಗಣಿಸಬೇಕಾದ ಖಾಲಿ ಹುದ್ದೆಗಳ ಪ್ರಕಟಣೆ.
28-08-2026
ಅಂಗವಿಕಲ ಶಿಕ್ಷಕರು ಸಲ್ಲಿಸುವ ಅಂಗವಿಕಲ ಪ್ರಮಾಣ ಪತ್ರದನುಸಾರ ಅಂಗವಿಕಲ ಶಿಕ್ಷಕರನ್ನು ವೈದ್ಯಕೀಯ ಮಂಡಳಿಯ ಮುಂದೆ ವೈದ್ಯಕೀಯ ಪರೀಕ್ಷೆಗೆ ಶಿಕ್ಷಕರನ್ನು ಪರೀಕ್ಷೆಗೆ ಒಳಪಡಿಸುವುದು. ಚಾಲ್ತಿಯಲ್ಲಿರುವ ಆದೇಶಗಳನುಸಾರ.
31-08-2026
ವೈದ್ಯಕೀಯ ಮಂಡಳಿಯು ನೀಡುವ ಅಂಗವಿಕಲ ಶಿಕ್ಷಕರ ವೈದ್ಯಕೀಯ ಪ್ರಮಾಣ ಪತ್ರದ ಆಧಾರದಲ್ಲಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳು ಸಲ್ಲಿಸುವ ಪ್ರಮಾಣ ಪತ್ರದ ಆಧಾರದಲ್ಲಿ ಬಡ್ತಿ ಮೀಸಲಾತಿಗೆ ಆರ್ಹತೆ ಇದೆಯೇ? ಅಥವಾ ಇಲ್ಲವೇ? ಎಂಬ ಬಗ್ಗೆ ತೀರ್ಮಾನಿಸಿ ಅಂತಿಮ ಆಧ್ಯತಾಪಟ್ಟಿಯಲ್ಲಿ ಬಡ್ತಿ ಮೀಸಲಾತಿಗೆ ಬಿಂದು ಮತ್ತು ರೋಸ್ಟರ್ ಗುರುತಿಸುವಿಕೆಯ ಕ್ರಮವನ್ನು ಅಂತಿಮಗೊಳಿಸುವುದು ಹಾಗೂ ಜಿಲ್ಲಾ ಹಂತದಲ್ಲಿ Departmental Promotion Committee (D.P.C) ಕೈಗೊಳ್ಳುವುದು.
01-09-2026
ಬಡ್ತಿಗೆ ಅರ್ಹರಿರುವ ಮುಖ್ಯಶಿಕ್ಷಕರ ಕನಿಷ್ಟ 1 : 1.25 ಅಂತಿಮ ತಾತ್ಕಾಲಿಕ ಪಟ್ಟಿ ಪ್ರಕಟಣೆ.
2-09-2026 ರಿಂದ ಬಡ್ತಿಗೆ ಅರ್ಹರಿರುವ 1 : 1 ಅಂತಿಮ ತಾತ್ಕಾಲಿಕ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಮುಖ್ಯಶಿಕ್ಷಕರಿಗೆ ಅವಕಾಶ ಕಲ್ಪಿಸುವುದು.
7-09-2026
ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮಗೊಳಿಸಿ ಇತ್ಯರ್ಥಪಡಿಸಲು ನಿಗಧಿಪಡಿಸಿದ ದಿನಾಂಕ.
8-09-2026
ಬಡ್ತಿ ಕೌನ್ಸಿಲಿಂಗ್ ಗೆ ಅರ್ಹರಿರುವ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ 1:1 ಅಂತಿಮ ಜೇಷ್ಠತಾ ಪಟ್ಟಿ ಪ್ರಕಟಣೆ.
9-09-2026
ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ವೃಂದದಿಂದ ಹಿರಿಯ ಮುಖ್ಯ ಶಿಕ್ಷಕರ ವೃಂದಕ್ಕೆ ಬಡ್ತಿ ಕೌನ್ಸಿಲಿಂಗ್ ನಡೆಸಿ, ಅಂದೇ ಆದೇಶಗಳನ್ನು ನೀಡುವುದು.
ಮುಂದುವರೆದು, ಸದರಿ ಪ್ರಕ್ರಿಯೆಯ ಸಂಬಂಧ, ಸಲ್ಲಿಕೆಯಾಗುವ ಯಾವುದೇ ಆಕ್ಷೇಪಣೆ/ಮನವಿ/ಕುಂದುಕೊರತೆಗಳನ್ನು ಬಡ್ತಿ ಪ್ರಾಧಿಕಾರಿಗಳಾದ ಜಿಲ್ಲಾ ಉಪನಿರ್ದೇಶಕರ ಹಂತದಲ್ಲಿಯೇ ಇರ್ತಥ್ರಪಡಿಸತಕ್ಕದ್ದು ಹಾಗೂ ಈ ಕುರಿತಂತೆ ಸೂಚನೆ/ ಮಾರ್ಗದರ್ಶನಗಳನ್ನು ಆಯಾ ವ್ಯಾಪ್ತಿಯ ಸಹನಿರ್ದೇಶಕರಿಂದ ಪಡೆಯಬಹುದಾಗಿರುತ್ತದೆ. ಅನಗತ್ಯವಾಗಿ ಈ ಕಛೇರಿಗೆ ಪತ್ರ ವ್ಯವಹರಿಸಿ ವಿಳಂಬ ನೀತಿ ಅನುಸರಿಸತಕ್ಕದ್ದಲ್ಲ ಎಂದು ತಿಳಿಸಿದೆ.

