ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸುವಂತೆ ರಾಜ್ಯ ಸಚಿವ ಸಂಪುಟ ಸಭೆ ರಾಜ್ಯಪಾಲರಿಗೆ ಅಧಿಕೃತವಾಗಿ ಶಿಫಾರಸು ಮಾಡಿದೆ.
ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೆಪಿಎಸ್ ಸಿ ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೊರಡಿಸಿದ್ದ ಆದೇಶವನ್ನು ಆ.20ರಂದು ಹೈಕೋರ್ಟ್ ರದ್ದುಗಿಳಿಸಿ ಆದೇಶ ಹೊರಡಿಸಿತ್ತು. ಶಿವಶಂಕರಪ್ಪವರನ್ನು ಕೆಪಿಎಸ್ ಸಿ ಅಧ್ಯಕ್ಷರನ್ನಾಗಿ ಮರು ನೇಮಕ ಮಾಡುವಂತೆ ಸೂಚಿಸಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಇಂದು ನಡೆದ ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಿ ಶಿಫಾರಸು ಹೊರಡಿಸಲಾಗಿದೆ.
ರಾಜ್ಯಪಾಲರ ಅಮಾನತು ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಪೀಠವು, ಶಿವಶಂಕರಪ್ಪ ಸಾಹುಕಾರ್ ಅವರ ಅಮಾನತು ಪ್ರಕ್ರಿಯೆಯಲ್ಲಿ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆದೇಶಿಸಿತ್ತು. ಕೆಪಿಎಸ್‌ಸಿ ಅಧ್ಯಕ್ಷರನ್ನು ಅಮಾನತುಗೊಳಿಸುವಂತೆ ರಾಜ್ಯ ಸಚಿವ ಸಂಪುಟವು ಈ ಹಿಂದೆ ಯಾವುದೇ ಸಲಹೆ ಅಥವಾ ಶಿಫಾರಸು ನೀಡಿರಲಿಲ್ಲ. ಸಾಂವಿಧಾನಿಕ ನಿಯಮಗಳ ಪ್ರಕಾರ ರಾಜ್ಯಪಾಲರು ಸಚಿವ ಸಂಪುಟದ ತೀರ್ಮಾನವನ್ನು ಆಧರಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಆದರೆ ಸಚಿವ ಸಂಪುಟ ಶಿಫಾರಸು ಮಾಡದೇ ರಾಜ್ಯಪಾಲರು ಅಮಾನತುಗೊಳಿದ್ದು ನಿಯಮ ಉಲ್ಲಂಘನೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಇದೀಗ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಲು ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿದೆ.

